ADVERTISEMENT

ಜನತಾ ಕಲ್ಯಾಣವೇ ಬಿಜೆಪಿ ಧ್ಯೇಯ- ಬಿ.ಎಸ್‌.ಯಡಿಯೂರಪ್ಪ

ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 5:36 IST
Last Updated 16 ಮಾರ್ಚ್ 2023, 5:36 IST
ಗಜೇಂದ್ರಗಡದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆದ ರೋಣ ಮತಕ್ಷೇತ್ರದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶದಲ್ಲಿ ಶಾಸಕ ಕಳಕಪ್ಪ ಬಂಡಿ ಮಾತನಾಡಿದರು
ಗಜೇಂದ್ರಗಡದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆದ ರೋಣ ಮತಕ್ಷೇತ್ರದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶದಲ್ಲಿ ಶಾಸಕ ಕಳಕಪ್ಪ ಬಂಡಿ ಮಾತನಾಡಿದರು   

ಗಜೇಂದ್ರಗಡ: ‘ರಾಜ್ಯದಲ್ಲಿನ ಬಸವರಾಜ ಬೊಮ್ಮಾಯಿ ಸರ್ಕಾರ ಬಡ ರೈತ ಮಹಿಳೆಯರಿಗೆ ಪ್ರತಿ ತಿಂಗಳು ₹1 ಸಾವಿರ, ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜಕ್ಕಾಗಿ ₹10 ಸಾವಿರ ಸಹಾಯಧನ ಹಾಗೂ ರೈತರಿಗೆ ಮೊದಲ ಬಾರಿಗೆ ಜೀವವಿಮೆ ತೀರ್ಮಾನ ಮಾಡಿದೆ. ರೈತರು, ನೇಕಾರರು, ಕೃಷಿ ಕಾರ್ಮಿಕರು ಹಾಗೂ ತಾಯಂದಿರು ಗೌರವದಿಂದ ಬದುಕಿ ಬಾಳಬೇಕೆಂಬ ಸದುದ್ದೇಶವನ್ನು ನಮ್ಮ ಪಕ್ಷ ಹೊಂದಿದ್ದು, ಅದಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಬುಧವಾರ ನಡೆದ ರೋಣ ಮತಕ್ಷೇತ್ರದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ, ಹಾಲಿಗೆ ಪ್ರೋತ್ಸಾಹ ಧನ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ತಂದಿದ್ದು ತಾಯಂದಿರು ಮರೆಯಬಾರದು. ನನಗೆ 80 ವರ್ಷ ಮುಗೀತು. ಆದರೂ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪ ಮಾಡಿದ್ದೇನೆ. ಇನ್ನೂ ಮೂರು ತಿಂಗಳು ಚುನಾವಣೆ ಮುಗಿಯುವವರೆಗೆ ಮನೆ ಸೇರುವುದಿಲ್ಲ. ತಾವೂ ಸಹ ಚುನಾವಣೆ ಮುಗಿಯುವವರೆಗೆ ಕೆಲಸ ಮಾಡಿ’ ಎಂದು ಹುರಿದುಂಬಿಸಿದರು.

ADVERTISEMENT

‘ಈಗಾಗಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಲಾಗಿದ್ದು, ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ಕುರುಬರ ಹಟ್ಟಿಯ 50 ಸಾವಿರ ಹಕ್ಕುಪತ್ರಗಳನ್ನು ಕೊಟ್ಟಿದ್ದೇವೆ. ಇನ್ನೂ 12 ಜಿಲ್ಲೆಯ 50 ಸಾವಿರ ಹಕ್ಕುಪತ್ರಗಳನ್ನು ನೀಡಲಿದ್ದೇವೆ. ನೇಕಾರರಿಗೆ ₹5 ಸಾವಿರ, 50 ಯುನಿಟ್ ಉಚಿತ ವಿದ್ಯುತ್, ₹2 ಲಕ್ಷ ಬಡ್ಡಿರಹಿತ ಸಾಲ ಹಾಗೂ 1 ಸಾವಿರ ಮನೆ ನಿರ್ಮಿಸಲು ತೀರ್ಮಾನಿಸಿದ್ದೇವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೇ ಹಗಲಿರುಳು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ. ಇಡೀ ವಿಶ್ವವೇ ಅವರನ್ನು ಹಾಡಿ ಹೊಗಳುತ್ತಿದೆ. ಹೀಗಾಗಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ನೀವೆಲ್ಲರೂ ಕೈಜೋಡಿಸಬೇಕಿದೆ’ ಎಂದು ಮನವಿ ಮಾಡಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ-ಬಂಡೂರಿಗೆ ಡಿಪಿಆರ್ ಆಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಪ್ರತಿಯೊಂದು ಮನೆಗೆ ನಮ್ಮ ಸರ್ಕಾರದ ಒಂದಿಲ್ಲ ಒಂದು ಯೋಜನೆ ತಲುಪಿವೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ನಾವಿಂದು ನಮ್ಮ ಸರ್ಕಾರಗಳ ಸಾಧನೆ ಮುಂದಿಟ್ಟು ಮತ ಕೇಳುತ್ತಿದ್ದೇವೆ. ಆದರೆ ಕಾಂಗ್ರೆಸ್‌ನವರು ಮನೆ ಮನೆಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಜನರು ಅವರನ್ನು ನಿಮ್ಮ ಸರ್ಕಾರವಿರುವ ರಾಜಸ್ಥಾನದಲ್ಲಿ ಮೊದಲು 200 ಯುನಿಟ್ ಉಚಿತ ವಿದ್ಯುತ್ ಕೊಡಿ ಎಂದು ಪ್ರಶ್ನಿಸಬೇಕಿದೆ’ ಎಂದು ಹೇಳಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಸಚಿವ ಬೈರತಿ ಬಸವರಾಜು, ಬಿಜೆಪಿ ಮುಖಂಡರಾದ ಹೇಮಗಿರೀಶ ಹಾವಿನಾಳ, ಎಂ.ಎಸ್.ಕರಿಗೌಡರ, ಬಿ.ಎಂ.ಸಜ್ಜನರ, ಭಾಸ್ಕರ್ ರಾಯಬಾಗಿ, ರಾಜೇಂದ್ರ ಘೋರ್ಪಡೆ, ಮುತ್ತಣ್ಣ ಲಿಂಗನಗೌಡರ, ಸಿದ್ದಣ್ಣ ಬಂಡಿ, ಅಂದಪ್ಪ ಸಂಕನೂರ, ರವಿ ದಂಡಿನ, ಮುತ್ತಣ್ಣ ಕಡಗದ, ರವಿ ಕರಿಗಾರ, ರವಿ ಬಿದರೂರ, ಅಶೋಕ ನವಲಗುಂದ, ಉಮೇಶ ಮಲ್ಲಾಪುರ, ನೀಲಪ್ಪ ಗುರಿಕಾರ ಇದ್ದರು.

ರಾಜ್ಯದಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ’

‘ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 125ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಆ ಚುನಾವಣೆಯಲ್ಲಿ ಮತ್ತೇ ನಾನು ಬಿಜೆಪಿ ಅಭ್ಯರ್ಥಿಯಾಗಿ ಹಿಂದಿನ ಮೂರು ಗೆಲುವಿಗಿಂತ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ. ಅದಕ್ಕೆ ನಿವೇಲ್ಲ ಶ್ರಮಿಸಬೇಕು’ ಎಂದು ಶಾಸಕ ಕಳಕಪ್ಪ ಬಂಡಿ ಮನವಿ ಮಾಡಿದರು.
‘ರೋಣ ಶಾಸಕನಾಗಿ ಐದು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸುಮಾರು ₹700 ಕೋಟಿ ಅನುದಾನ ತಂದಿದ್ದೇನೆ. ನೆಲ್ಲೂರು, ಶಾಂತಗೇರಿ, ಮುಂಡರಗಿ ಭಾಗದಲ್ಲಿ ಕೆರೆ ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ಕ್ಷೇತ್ರದಲ್ಲಿ ದುಡ್ಡು ಕೊಟ್ಟರೆ ಬಂಗಾರ ಸಿಗುತ್ತಿತ್ತು. ಆದರೆ ಮರಳು ಸಿಗುತ್ತಿರಲಿಲ್ಲ. ಇದರಿಂದ ಬಡವರು, ರೈತರು ಮನೆ ಕಟ್ಟಲು ತೊಂದರೆಯಾಗಿತ್ತು. ಹೀಗಾಗಿ 2018 ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಮರಳಿನ ಸಮಸ್ಯೆ ಬಗೆಹರಿಸಿದ್ದೇನೆ’ ಎಂದು ಹೇಳಿದರು.

ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಬೈಕ್ ಜಾಥಾ

ಗಜೇಂದ್ರಗಡ ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಿದರು.
ಶಾಸಕರ ಮನೆಯಿಂದ ಆರಂಭವಾದ ಬೈಕ್ ಜಾಥಾ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ವಿರೂಪಾಕ್ಷೇಶ್ವರ ದೇವಸ್ಥಾನ, ಶಿವಾಜಿ ಪೇಟೆ, ರಂಗಮಂದಿರ, ಕೊಳ್ಳಿಯವರ ಕತ್ರಿ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇದೇ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಆಟೋಗಳಿಗೆ ದೇಶಕ್ಕಾಗಿ ದುಡಿದ ಮಹನೀಯರ ಫೋಟೊಗಳನ್ನು ಕಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಾನು ಗಜೇಂದ್ರಗಡಕ್ಕೆ ಬರುವ ಹಾಗಿರಲಿಲ್ಲ. ಆದರೆ, ಕಳಕಪ್ಪ ಬಂಡಿ ಅವರ ಮೇಲಿನ ಪ್ರೀತಿ ವಿಶ್ವಾಸದಿಂದ ಬಂದಿದ್ದೇನೆ. ಅವರು ತಮ್ಮ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ
ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜಾತಿ ಆಧಾರಿತ ಯೋಜನೆಗಳನ್ನು ರೂಪಿಸಿದರು. ಆದರೆ ನಾವು ಸರ್ವರಿಗೂ ಯೋಜನೆಗಳನ್ನು ರೂಪಿಸಿದ್ದೇವೆ
ಸಿ.ಸಿ.ಪಾಟೀಲ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.