ADVERTISEMENT

ಹೇಮೆ ಹಿನ್ನೀರಲ್ಲಿ ತೇಲುವ ರೋಸರಿ ಚರ್ಚ್‌

ಅಭಿವೃದ್ಧಿ ಮರೀಚಿಕೆ, ಹದಗೆಟ್ಟ ರಸ್ತೆ, ತ್ಯಾಜ್ಯದ ರಾಶಿ: ನಿಷೇಧವಿದ್ದರೂ ಈಜಲು ಮುಂದಾಗುವ ಯುವಕರು

ಕೆ.ಎಸ್.ಸುನಿಲ್
Published 22 ಸೆಪ್ಟೆಂಬರ್ 2021, 3:24 IST
Last Updated 22 ಸೆಪ್ಟೆಂಬರ್ 2021, 3:24 IST
ಲೋಗೊ
ಲೋಗೊ   

ಹಾಸನ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.

ಹಲವು ವರ್ಷಗಳಿಂದ ಮಳೆಗಾಲದ ಎರಡು ತಿಂಗಳು ಹಿನ್ನೀರು ಹೆಚ್ಚಾಗುವ ಕಾರಣ ಈ ಚರ್ಚ್‌ ನೀರಲ್ಲೇ ತೇಲುವ ಹಾಗೆ ಕಾಣಿಸುತ್ತದೆ. ಇದು ‘ಮುಳುಗದ ಟೈಟಾನಿಕ್‌’ ಎಂಬ ಹೆಸರಿನಿಂದಲೂ ಪ್ರಸಿದ್ಧಿಪಡೆದಿದೆ.

ಹಾಸನ ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿ ಇದೆ. ಚರ್ಚ್‌ ಮಳೆಗಾಲದಲ್ಲಿ ಮುಳುಗುತ್ತದೆ. ಬೇಸಿಗೆಯಲ್ಲಿ ಸಂಪೂರ್ಣವಾಗಿ ನೋಡಲು ಸಿಗುತ್ತದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಅನೇಕ ಸಿನಿಮಾಗಳ ಚಿತ್ರೀಕರಣ ಸಹ ನಡೆದಿದೆ. ಪ್ರೇಮಿಗಳು, ನವವಿವಾಹಿತ ಜೋಡಿಗಳ ಫೋಟೊ ಶೂಟ್‌ಗಳು ನಡೆಯುತ್ತವೆ.

ADVERTISEMENT

ಶೆಟ್ಟಿಹಳ್ಳಿ ಸುತ್ತಲೂ ಅಂದಾಜು ಎರಡು ಸಾವಿರ ಕುಟುಂಬಗಳು ವಾಸಿಸುತ್ತಿದ್ದವು. ಹೇಮಾವತಿ ಜಲಾಶಯ ನಿರ್ಮಾಣದ ಬಳಿಕ ಗ್ರಾಮ ಸಂಪೂರ್ಣ ಮುಳುಗಡೆಯಾಯಿತು. ರೆವರೆಂಡ್‌ ಎಫ್‌ ಕಿಟಲ್‌ ಶೆಟ್ಟಿಹಳ್ಳಿ ಚರ್ಚ್‌ನಲ್ಲಿದ್ದರು.

1860ರಲ್ಲಿ ನಿರ್ಮಾಣಗೊಂಡಿರುವ ಶೆಟ್ಟಿಹಳ್ಳಿ ರೋಸರಿ ಚರ್ಚ್‌ (ಜಪಮಾಲೆ ರಾಣಿ) ವೀಕ್ಷಣೆಗೆಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ಹೆಚ್ಚು. ಸಮೀಪದ ಸೇತುವೆ ಮೇಲೆ ನಿಂತು ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಇನ್ನೂ ಕೆಲವರು ಸೇತುವೆಯಿಂದ ಕೆಳಗಿಳಿದು ಹಿನ್ನೀರಿನಲ್ಲಿ ಆಟವಾಡುತ್ತಾರೆ.

ಯುವ ಜನರಿಗೆ ಮೋಜು ಮಸ್ತಿಯ ತಾಣವಾದರೆ, ಪರಿಸರ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಹಿನ್ನೀರಿನ ಅಲೆಗಳ ಅಬ್ಬರ, ಹಕ್ಕಿಗಳ ಗಾನಕ್ಕೆ ಎಂತಹವರೂ ಮನಸೋಲುವ ವಾತಾವರಣ ಇದೆ. ಕುಟುಂಬಸಮೇತ ಬಂದು ಇಲ್ಲಿ ಕೆಲ ಹೊತ್ತು ಕಾಲ ಕಳೆಯುತ್ತಾರೆ. ಇಲ್ಲಿ ಯಾವುದೇ ಉಪಾಹಾರ ಗೃಹ ಇಲ್ಲ. ಹೀಗಾಗಿ ಪ್ರವಾಸಿಗರು ಜೊತೆಯಲ್ಲೇ ಆಹಾರ, ಕುಡಿಯಲು ನೀರು ಕೊಂಡೊಯ್ಯಬೇಕು. ಇಲ್ಲಿಗೆ ಸಾರಿಗೆ ಬಸ್‌ ವ್ಯವಸ್ಥೆ ಇದೆ.

ಹಾಸನ ತಾಲ್ಲೂಕಿಗೆ ಈ ಗ್ರಾಮ ಸೇರಿದ್ದರೂ, ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಹೇಮಾವತಿ ಹಿನ್ನೀರಿನ ಪ್ರವಾಸಿ ತಾಣ ನೋಡುಗರನ್ನು ಎಷ್ಟು ಆಕರ್ಷಿಸುತ್ತದೆಯೋ ಅಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿವೆ.

ಚರ್ಚ್‌ ಬಳಿ ತೆರಳಿದರೆ, ಮದ್ಯದ ಬಾಟಲ್‌ಗಳು, ತ್ಯಾಜ್ಯ ಪ್ರವಾಸಿಗರನ್ನು ಸ್ವಾಗಿಸುತ್ತವೆ. ಸಂಪರ್ಕ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಹೋಟೆಲ್‌ಗಳು ಇಲ್ಲ. ಈಜುವುದನ್ನು ನಿಷೇಧಿಸಿದ್ದರೂ ಕೆಲ ಯುವಕರು ಈಜುವ ಸಾಹಸಕ್ಕೆಮುಂದಾಗುತ್ತಿದ್ದಾರೆ. ಅನುಮತಿ ಇಲ್ಲದಿದ್ದರೂ ಹಣ ಪಡೆದು ತೆಪ್ಪದಲ್ಲಿ ಕರೆದೊಯ್ಯಲಾಗುತ್ತದೆ.

ಪ್ರತಿವರ್ಷ ಮಳೆಗಾಲದಲ್ಲಿ ಹೇಮಾವತಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಅಧಿಕ ನೀರಿನಿಂದ ಮುಳುಗಡೆಯಾಗುವ ಚರ್ಚ್‌ ಇಂದು ಶಿಥಿಲಾವಸ್ಥೆಗೆ ತಲುಪಿದೆ.

‘ಚರ್ಚ್ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಮೈಸೂರಿನ ಸೆಂಟ್‌ ಫಿಲೋಮಿನಾ ಚರ್ಚ್‌ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ತಂಡವೇ ಚರ್ಚ್‌ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ’ ಎಂದುಪುರಾತತ್ವ ಇಲಾಖೆ ಸಂರಕ್ಷಣಾ ಸಹಾಯಕ ಸತೀಶ್ ತಿಳಿಸಿದರು.

‘ಚರ್ಚ್‌ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಹಿಂಭಾಗದಗೋಪುರದ ಹವಾನಿಯಂತ್ರಣ ಪದರ ಹಾಗೂ ಮದ್ರಾಸ್‌ ತಾರಸಿ ತೆಗೆಯಲು ನಿರ್ಧರಿಸಲಾಗಿದೆ.ಚರ್ಚ್‌ನ ಗೋಡೆ, ಮಿನಾರ್‌, ಆರ್ಚ್‌ ಸಂರಕ್ಷಿಸಲು ಗೋಡೆಗೆ ಸುಣ್ಣದ ಗಾರೆಯಿಂದ ಮಡ್ಡಿ ಮಾಡಿ ನಂತರಹಿಂದಿನ ಶೈಲಿಯಲ್ಲಿಯೇ ಮಿನಾರ್‌ ಹಾಗೂ ಆರ್ಚ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ‌’ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಸಂಜಯ್‌ ತಿಳಿಸಿದರು.

‘ತಳಪಾಯ ಹಾಳಾಗದಂತೆ ಸುತ್ತಲೂ 5 ಕಿ.ಮೀ. ಎತ್ತರದಲ್ಲಿ ತಡೆಗೋಡೆ ನಿರ್ಮಿಸಿ, ಒಳಭಾಗದ ಸುತ್ತಲೂ ಗ್ರಾವೆಲ್‌ ಹಾಕಿ ಸಮತಟ್ಟು ಮಾಡಿ ಗಟ್ಟಿಗೊಳಿಸುವುದು ಹಾಗೂ ಹಿಂಭಾಗದ ಗೋಪುರಕ್ಕೆಮದ್ರಾಸ್‌ ತಾರಸಿ ಹಾಕಿ ಮಿನಾರ್‌ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.