ADVERTISEMENT

300 ವರ್ಷದ ನಂತರದ ಉತ್ಸವಕ್ಕೆ ಅದ್ಧೂರಿ ತೆರೆ

ಪೆರಾಜೆ ಕುಂಬಳಚೇರಿಯ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 7:35 IST
Last Updated 8 ಮಾರ್ಚ್ 2023, 7:35 IST
ಪೆರಾಜೆಯ ಕುಂಬಳಚೇರಿಯ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ ಅಂಗವಾಗಿ ನಡೆದ ಕೋಲ ಭಕ್ತರನ್ನು ಆಕರ್ಷಿಸಿತು
ಪೆರಾಜೆಯ ಕುಂಬಳಚೇರಿಯ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ ಅಂಗವಾಗಿ ನಡೆದ ಕೋಲ ಭಕ್ತರನ್ನು ಆಕರ್ಷಿಸಿತು   

ನಾಪೋಕ್ಲು: ಪೆರಾಜೆಯ ಕುಂಬಳಚೇರಿಯ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ ಮೂರು ದಿನ ಅದ್ಧೂರಿಯಿಂದ ನಡೆಯಿತು.

300 ವರ್ಷಗಳ ನಂತರ ₹ 50 ಲಕ್ಷ ವೆಚ್ಚದಲ್ಲಿ ಅದ್ಧೂರಿ ಮಹೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶಾಸ್ತಾವು ದೇವಸ್ಥಾನದಿಂದ ಹಸಿರು ವಾಣಿ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು. ಭಾನುವಾರ ಕಾರ್ನೋನ್ ದೈವ, ಕೋರಚ್ಚನ್ ದೈವ, ಕಂಡನಾರ್ ಕೇಳನ್ ದೈವ, ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಿತು.

ADVERTISEMENT

ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆಯಿತು. ದೈವದ ಅಪೂರ್ವ ಕ್ಷಣಗಳನ್ನು ವೀಕ್ಷಿಸಿ ಸಹಸ್ರಾರು ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.

ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ವೈಷ್ಣವಾಂಶ, ಶೈವಾಂಶ ಶಕ್ತಿಯ ವಿವಿಧ ಅವತಾರ ಶಕ್ತಿಯನ್ನು, ದೈವಗಳನ್ನು ಕೋಲ ರೂಪದಲ್ಲಿ ಆರಾಧಿಸಲಾಗುತ್ತಿದ್ದು, ಅವುಗಳಲ್ಲಿ ವಯನಾಟ್ ಕುಲವನ್ ಸಹ ಒಂದು. ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರದ ವಯನಾಟ್ ಕುಲವನ್ ದೈವವನ್ನು ಸಹಸ್ರಾರು ಭಕ್ತರು ಣ್ತುಂಬಿಕೊಂಡರು.

ಮೂರು ದಿನ ನಡೆದ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಭಕ್ತಿ ಸಂಭ್ರಮದಿಂದ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ವಿವಿಧ ದೈವಗಳು ಕೋಲ ರೂಪದಲ್ಲಿ ವಿಜೃಂಭಿಸಿ ಭಕ್ತರನ್ನು ಭಕ್ತಿ ಭಾವದಲ್ಲಿ ಪುಳಕಿತರ ನ್ನಾಗಿಸಿತು. ಶತಮಾನದ ಬಳಿಕ ನಡೆದ ಉತ್ಸವ ಗ್ರಾಮೀಣ ಭಾಗದಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಜಿಲ್ಲೆಯ ಗಡಿಭಾಗದಲ್ಲಿ ನಡೆದ ಉತ್ಸವದಲ್ಲಿ ಕೇರಳ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ, ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶಾಸ್ತಾವು ದೇವಾಲಯದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ವಯನಾಟ್ ಕುಲವನ್ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕುಂಞಕಣ್ಣ ಬೇಡಗಂ, ತೊಡಿಕಾನದ ಮಲ್ಲಿಕಾರ್ಜುನ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪಾಲ್ಗೊಂಡಿದ್ದರು. ಮೂರು ದಿನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.