ADVERTISEMENT

ಅಗತ್ಯ ವಸ್ತು ಬೆಲೆ ಇಳಿಕೆಗೆ ಆಗ್ರಹ

ಸೋಮವಾರಪೇಟೆ ತಾಲ್ಲೂಕು ಕಚೇರಿ ಎದುರು ಜೆಡಿಎಸ್‌ ಜಿಲ್ಲಾ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 6:06 IST
Last Updated 29 ಜೂನ್ 2021, 6:06 IST
ಸೋಮವಾರಪೇಟೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು
ಸೋಮವಾರಪೇಟೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು   

ಸೋಮವಾರಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಮೇಲೆ ಅವೈಜ್ಞಾನಿಕ ತೆರಿಗೆಯನ್ನು ಹೇರುವ ಮೂಲಕ ಮತ್ತಷ್ಟು ಕಷ್ಟಕ್ಕೀಡು ಮಾಡುತ್ತಿದೆ. ಇಂತಹ ತೆರಿಗೆ ಪದ್ಧತಿಯನ್ನು ಕೂಡಲೇ ಹಿಂಪಡೆ ಯಬೇಕು’ ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ದೇಶದಲ್ಲಿ ಜನರು ಕೊರೊನಾದಿಂದ ತತ್ತರಿಸಿಹೋಗಿದ್ದು, ಮೂರನೇ ಅಲೆಯ ಭೀತಿಯಲ್ಲಿದ್ದಾರೆ. ಸಾಕಷ್ಟು ಜನರ ಮನೆಗಳಲ್ಲಿ ದುಡಿಯುವ ಯಜಮಾನರನ್ನೇ ಕಳೆದುಕೊಂಡು ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೆ, ಇದರ ಪರಿವೇ ಇಲ್ಲದ ಬಿಜೆಪಿ ನೇತೃತ್ವದ ಸರ್ಕಾರಗಳು ಜನವಿರೋಧಿ, ಬಡವರ, ಕಾರ್ಮಿಕರ, ದೀನದಲಿತರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ’ ಎಂದುಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಆರೋಪಿಸಿದರು.

‘ದಿನಬಳಕೆ ವಸ್ತುಗಳ ಮೇಲೆ ದುಬಾರಿ ತೆರಿಗೆ ವಿಧಿಸಲಾಗುತ್ತಿದೆ. ತೈಲ ಬೆಲೆ ಶತಕ ದಾಟಿದೆ. ದಿನಬಳಕೆಯ ವಸ್ತುಗಳನ್ನು ಕೊಳ್ಳಲು ಅಸಾಧ್ಯ ಎನ್ನುವಂತಾಗಿದೆ. ಕೂಡಲೇ ಸರ್ಕಾರ ಬೆಲೆ ಇಳಿಕೆಗೆ ಯೋಜನೆಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಸರ್ವಾಧಿಕಾರಿ ನೀತಿಯನ್ನು ಜನರ ಮೇಲೆ ಹೇರುತ್ತಾ ತೆರಿಗೆ ವಿಧಿಸಿದೆ. ಕೂಡಲೇ ತೆರಿಗೆ ಒತ್ತಡವನ್ನು ಕಡಿಮೆ ಮಾಡಬೇಕು. ತಪ್ಪಿದಲ್ಲಿ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.

ADVERTISEMENT

‘ಲಾಕ್‌ಡೌನ್‌ನಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚಿನ ಸಬ್ಸಿಡಿ ಘೋಷಿಸಬೇಕು. ಕೋವಿಡ್‌ನಿಂದ ಸತ್ತವರಿಗೆ ತಲಾ ₹5 ಲಕ್ಷ ಪರಿಹಾರ ವಿತರಿಸಬೇಕು’ ಎಂದು ಆಗ್ರಹಿಸಿ ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್ ಖಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎ.ಜಿ. ವಿಜಯ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್. ನಾಗರಾಜ್, ಮಹಿಳಾ ಘಟಕದ ಕ್ಷೇತ್ರ ಸಮಿತಿ ಅಧ್ಯಕ್ಷೆ ಎಂ.ಎ. ರುಬಿನಾ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಪ್ರಮುಖರಾದ ಜಲಾ ಹೂವಯ್ಯ, ಭರತ್ ಭೀಮಯ್ಯ, ಮಂದಣ್ಣ, ಸ್ವಾಗತ್ ಗೌಡ, ಆದರ್ಶ, ಅಜಿತ್, ವಿನಯ್, ಸಂಭ್ರಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.