ADVERTISEMENT

ಮಹಾದೇಶ್ವರ ದೇವರ ವಾರ್ಷಿಕ ಉತ್ಸವ ಇಂದಿನಿಂದ

20ರವರೆಗೆ ನಡೆಯಲಿರುವ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:42 IST
Last Updated 15 ಮಾರ್ಚ್ 2023, 4:42 IST
ವಿರಾಜಪೇಟೆ ಪಟ್ಟಣದ ಮಲೆತಿರಿಕೆ ಬೆಟ್ಟದಲ್ಲಿನ ಶಿವನ ದೇವಾಲಯ
ವಿರಾಜಪೇಟೆ ಪಟ್ಟಣದ ಮಲೆತಿರಿಕೆ ಬೆಟ್ಟದಲ್ಲಿನ ಶಿವನ ದೇವಾಲಯ   

ವಿರಾಜಪೇಟೆ: ಸಮೀಪದ ಮಲೆತಿರಿಕೆ ಬೆಟ್ಟದ ಮಹಾದೇಶ್ವರ ದೇವರ ವಾರ್ಷಿಕ ಉತ್ಸವವು ಮಾರ್ಚ್ 15 ರಿಂದ 20ರವರೆಗೆ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯಲಿದೆ.

ಪಟ್ಟಣದ ಅಂಚಿನಲ್ಲಿರುವ ಮಲೆತಿರಿಕೆ ಬೆಟ್ಟದ ಮೇಲೆ ನಿಂತು ನೋಡಿದರೆ ವಿರಾಜಪೇಟೆ ಪಟ್ಟಣದ ವಿಹಂಗಮ ನೋಟ ನೋಡುಗರ ಕಣ್ಮನ ಸೆಳೆಯುತ್ತದೆ. ಇದೇ ಬೆಟ್ಟದ ನೆತ್ತಿಯ ಮೇಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾದೇಶ್ವರ ದೇವಾಲಯವು ಇಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶಿವನ ದೇವಸ್ಥಾನ ಬೆಟ್ಟದ ನೆತ್ತಿಯ ಮೇಲಿರುವುದರಿಂದ ಇದನ್ನು ಮಹಾದೇಶ್ವರ ಬೆಟ್ಟವೆಂತಲೂ ಕರೆಯುತ್ತಾರೆ. ಶಿವ, ಗೌರಿ ಹಾಗೂ ಗಣೇಶ ಈ ಮೂರು ದೇವಾಲಯವನ್ನು ಪಟ್ಟಣದಲ್ಲಿಯೇ ಹೊಂದಿರುವುದು ವಿರಾಜಪೇಟೆ ಪಟ್ಟಣದ ಹೆಗ್ಗಳಿಕೆ.

ಅಗಸ್ತ್ಯ ಮುನಿಗಳು ತಾವು ತಂಡ 2 ಶಿವಲಿಂಗಗಳಲ್ಲಿ ಒಂದನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದರೆ, ಮತ್ತೊಂದನ್ನು ಸಮೀಪದಲ್ಲಿನ ಬಾವಿಯೊಳಗೆ ಇಟ್ಟಿದ್ದಾರೆ ಎನ್ನುವ ನಂಬಿಕೆ ಇಲ್ಲಿದೆ. ಕಾಲಕ್ರಮೇಣ ಗ್ರಾಮಸ್ಥರ ಸಹಕಾರದಿಂದ ದೇವಾಲಯ ಅಭಿವೃದ್ಧಿ ಹೊಂದುತ್ತಾ ಬಂದಿದೆ.

ADVERTISEMENT

ದೇವಾಲಯದ ಸಮೀಪ ಚಾಮುಂಡಿ, ಬ್ರಹ್ಮರಾಕ್ಷಸ ಹಾಗೂ ಹಿಂಭಾಗದಲ್ಲಿ ಕಾಡು ಅಯ್ಯಪ್ಪ ದೇವರ ಸ್ಥಾನವಿದೆ. ಪ್ರತಿ ವರ್ಷವೂ ಮಾರ್ಚ್ 15ರಿಂದ 20ರವರೆಗೆ ದೇವಾಲಯದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರುತ್ತದೆ. ಮಾರ್ಚ್ 15ರಂದು ಕೊಡಿಮರ ನಿಲ್ಲಿಸುವುದು ಹಾಗೂ ಭಂಡಾರ ತರುವ ಕಾರ್ಯಕ್ರಮವಿರುತ್ತದೆ. 18ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆದರೆ, 19ರಂದು ಆವಾಮೃತ ಸ್ನಾನ, 20ರಂದು ಕೊಡಿಮರ ಇಳಿಸುವುದು ಹಾಗೂ ಭಂಡಾರ ತೆಗೆಯುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಪ್ರತಿನಿತ್ಯ ವಿಶೇಷವಾಗಿ ಸೋಮವಾರದಂದು ನಡೆಯುವ ಪೂಜಾ ಕಾರ್ಯದಲ್ಲಿ ಸಾಕಷ್ಟು ಭಕ್ತರು ಭಾಗವಹಿಸುತ್ತಾರೆ. ಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ.

ವರ್ಷಕ್ಕೊಮ್ಮೆ ಸಮೀಪದ ಚೆಂಬೆಬೆಳ್ಳೂರಿನಲ್ಲಿನ ದೇವರ ಕೆರೆಯಲ್ಲಿ ಹಾಗೂ 12 ವರ್ಷಕ್ಕೊಮ್ಮೆ ಕಾವೇರಿ ನದಿಯಲ್ಲಿ ದೇವರಿಗೆ ಆವಾಮೃತ ಸ್ನಾನ ಮಾಡಿಸಲಾಗುವುದು. ಈ ದೇವಾಲಯಕ್ಕೆ ಏಳು ಗ್ರಾಮಸ್ಥರು ಪೂಜೆಯನ್ನು ನಡೆಸುತ್ತಾರೆ. ದೇವಾಲಯದಲ್ಲಿ ಅಭಿಷೇಕ, ನೈವೇದ್ಯ ಬಿಲ್ವಾರ್ಚನೆ ಹಾಗೂ ಮೃತ್ಯುಂಜಯ ಪೂಜೆ ಸೇರಿದಂತೆ ಬೇರೆ ಬೇರೆ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತಿದೆ.

ಪೂಜಾ ಕೈಂಕರ್ಯಗಳ ವಿವರ

‘ವಿರಾಜಪೇಟೆ ಸಮೀಪದ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವವು ಮಾರ್ಚ್ 15 ರಿಂದ 20ರವರೆಗೆ ನಡೆಯಲಿದ್ದು, ಮಾರ್ಚ್ 18ರಂದು ದೊಡ್ಡಹಬ್ಬ ನಡೆಯಲಿದೆ’ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಾಟೆರೀರ ಪೂವಯ್ಯ ತಿಳಿಸಿದರು.

ಮಾರ್ಚ್ 15ರಂದು ಸಂಜೆ 4ಕ್ಕೆ ಕುಂದಿರ ಐನ್ಮನೆಯಿಂದ ಭಂಡಾರ ಬರುವುದು. ಬಳಿಕ ಸಂಜೆ 7ಕ್ಕೆ ಕೊಡಿಮರ ನಿಲ್ಲಿಸಲಾಗುವುದು. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. 16 ರಂದು ಬೆಳಿಗ್ಗೆ 11ಕ್ಕೆ ನಾಗದೇವಾಲಯದಲ್ಲಿ ವಿಶೇಷ ಪೂಜೆ ನಡೆದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. 17 ರಂದು 11ಕ್ಕೆ ಮಕ್ಕಾಟ್ ಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಇರ್ಬೊಳಕ್, ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

18 ರಂದು ದೊಡ್ಡ ಹಬ್ಬ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ನೆರಪು ಎತ್ತ್ ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ದೇವರು ಹೊರಗೆ ಬರುವುದು, ಸಂಜೆ 6ಕ್ಕೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ಉತ್ಸವ ಮೂರ್ತಿಯು ರಾತ್ರಿ 10 ದೇವಾಲಯಕ್ಕೆ ಹಿಂದಿರುಗಿದ ಬಳಿಕ ಪೂಜೆ ನಡೆಯಲಿದೆ. 19ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆದು ಅನ್ನ ಸಂತರ್ಪಣೆ, ಸಂಜೆ 6ಕ್ಕೆ ದೇವರ ಜಳಕ ಅವಭೃತ ಸ್ನಾನ ನಡೆದು, ರಾತ್ರಿ 8ಕ್ಕೆ ದೇವರ ನೃತ್ಯದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. 20ರಂದು ಬೆಳಿಗ್ಗೆ 11ಕ್ಕೆ ಕೊಡಿಮರ ಇಳಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.