ADVERTISEMENT

ಪಿಯು ಪರೀಕ್ಷೆ ರದ್ದು: ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಬಯ್ಯಾಪುರ ಅಸಮಾಧಾನ

ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಶಾಸಕ ಬಯ್ಯಾಪುರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 11:03 IST
Last Updated 4 ಜೂನ್ 2021, 11:03 IST

ಕುಷ್ಟಗಿ: ದ್ವಿತೀಯ ಪಿಯು ಪರೀಕ್ಷೆ ರದ್ದುಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲಿ ಒಂದೆರಡು ವಾರಗಳ ಅಂತರದಲ್ಲಿ ಪಿಯು ಪರೀಕ್ಷೆ ನಡೆಸಬಹುದಾಗಿದೆ. ಆದರೆ ಮುಖ್ಯಮಂತ್ರಿ, ಇತರ ಸಚಿವರು ಹಾಗೂ ಬಿಜೆಪಿ ಪ್ರಮುಖರು ಶಿಕ್ಷಣ ಸಚಿವ ಎಸ್‌.ಸುರೇಶಕುಮಾರ ಅವರ ಮೇಲೆ ಒತ್ತಡ ಹೇರಿ ಪಿಯು ಪರೀಕ್ಷೆ ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಆರೋಪಿಸಿದರು.

ಅಲ್ಲದೇ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಒತ್ತಾಯಿಸಿದರು.

ADVERTISEMENT

ವಾಸ್ತವದಲ್ಲಿ ಎಸ್ಸೆಸ್ಸೆಲ್ಸಿಗಿಂತ ಪಿಯು ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ಕಳೆದ ವರ್ಷ ಕೋವಿಡ್‌ ನಿಯಮಗಳ ಅನುಸಾರ ಎರಡೂ ಪರೀಕ್ಷೆಗಳನ್ನು ಅರ್ಥಪೂರ್ಣವಾಗಿ ನಡೆಸುವಲ್ಲಿ ಶಿಕ್ಷಣ ಸಚಿವರು ಮುತುವರ್ಜಿ ವಹಿಸಿದ್ದರು. ಈ ಬಾರಿಯೂ ಅದೇ ರೀತಿ ನಡೆಸಬಹುದು ಎಂಬ ವಿಶ್ವಾಸ ಇತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಕ್ಕೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ಕೊಠಡಿಯಲ್ಲಿ ತಲಾ 18 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಅದೇ ಶಾಲಾ ಕಾಲೇಜು ಕೊಠಡಿಗಳು, ಪರೀಕ್ಷಾ ಮೇಲ್ವಿಚಾರಕರೂ ಶಿಕ್ಷಕರೇ ಆಗಿರುತ್ತಾರೆ. ಹೀಗಿರುವಾಗ ಪಿಯು ಪರೀಕ್ಷೆ ರದ್ದುಪಡಿಸುವುದಕ್ಕೆ ಅಡ್ಡಿಯಾಗಿರುವ ಗಂಭೀರ ಕಾರಣಗಳು ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

ಮೂಲಗಳ ಪ್ರಕಾರ ಪಿಯು ಪರೀಕ್ಷೆಯನ್ನು ಸುಗಮ ರೀತಿಯಲ್ಲಿ ನಡೆಸುವುದಕ್ಕೆ ಸಾಧ್ಯವಿದೆ ಎಂಬ ವಿಶ್ವಾಸ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರಿಗೂ ಇದೆ. ಈ ಮಧ್ಯೆ ಕೇಂದ್ರ ಸರ್ಕಾರ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಪಡಿಸಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಪಿಯು ಪರೀಕ್ಷೆ ನಡೆಸಿದರೆ ಕೇಂದ್ರಕ್ಕೆ ಸೆಡ್ಡು ಹೊಡೆದಂತಾಗುತ್ತದೆ. ಪಕ್ಷಕ್ಕೆ ಮುಜುಗರವಾಗಬಹುದು ಎಂಬ ಭಯದಿಂದ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ಮೇಲೆ ಬಹಳಷ್ಟು ಒತ್ತಡ ಹೇರಿರುವುದು ಸ್ಪಷ್ಟ ಎಂದು ಬಯ್ಯಾಪುರ ವಿವರಿಸಿದರು.

ರಾಜ್ಯದಲ್ಲಿನ ಶಿಕ್ಷಣ ತಜ್ಞರು, ಪಾಲಕರು, ಮಕ್ಕಳು ಪರೀಕ್ಷೆ ನಡೆಸುವುದು ಸೂಕ್ತ ಎನ್ನುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಉದಾಹರಣೆ ತೆಗೆದುಕೊಂಡರೆ ಶೇಕಡ 80 ರಷ್ಟು ಪಾಲಕರು, ಮಕ್ಕಳು ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಇತರ ಜಿಲ್ಲೆಗಳ ಜನರದ್ದೂ ಆಗಿರುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಪಿಯು ಪರೀಕ್ಷೆ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.