ADVERTISEMENT

ಅಭ್ಯರ್ಥಿಗಳ ಸಂದರ್ಶನ: ತವರಿಗೆ ಯಡಿಯೂರಪ್ಪ ಮಾಡಿದ್ದು ಏನೂ ಇಲ್ಲ

ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಂದರ್ಶನ

ಎಂ.ಎನ್.ಯೋಗೇಶ್‌
Published 3 ಡಿಸೆಂಬರ್ 2019, 8:45 IST
Last Updated 3 ಡಿಸೆಂಬರ್ 2019, 8:45 IST
ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು
ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು   

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಉಪಚುನಾವಣೆ ರಾಜ್ಯದ ಗಮನ ಸೆಳೆದಿದೆ. ಕ್ಷೇತ್ರದ ಜೆಡಿಎಸ್ ಬಿ.ಎಲ್.ದೇವರಾಜು ಸಂದರ್ಶನ ಇಲ್ಲಿದೆ.

* ಜನರು ನಿಮ್ಮನ್ನು ಏಕೆ ಗೆಲ್ಲಿಸಬೇಕು?

ವಕೀಲನಾಗಿ 30 ವರ್ಷ ಸೇವೆ ಸಲ್ಲಿಸಿದ್ದೇನೆ. ಬಡಜನರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ್ದೇನೆ. ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿ ಜನಪರ ಕೆಲಸ ಮಾಡಿದ್ದೇನೆ. ಟಿಎಪಿಸಿಎಂಎಸ್‌ ಅಧ್ಯಕ್ಷನಾಗಿ ಕೇವಲ 2 ವರ್ಷದಲ್ಲಿ ಆದಾಯವನ್ನು ₹ 2 ಲಕ್ಷದಿಂದ ₹ 40 ಲಕ್ಷಕ್ಕೇರಿಸಿದ್ದೇನೆ. ಪೆಟ್ರೋಲ್‌ ಬಂಕ್‌, ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದೇನೆ. ಕಲ್ಯಾಣ ಮಂಟಪದಲ್ಲಿ ಬಡವರು ಕೇವಲ ₹ 15 ಸಾವಿರಕ್ಕೆ ಮದುವೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ.

ADVERTISEMENT

* ಎಚ್.ಡಿ.ದೇವೇಗೌಡ ಕುಟುಂಬ ಬಿಟ್ಟರೆ ನಿಮ್ಮ ಜೊತೆ ನಿಲ್ಲುವವರು ಯಾರು?

ನಾನು ಜೆಡಿಎಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ದೇವೇಗೌಡ ಕುಟುಂಬದ ಸಹಾಯ ಇದ್ದೇ ಇದೆ. ದೇವೇಗೌಡರು ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಜನ ಮರೆತಿಲ್ಲ. ‌ಎಚ್‌.ಡಿ.ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿರುವುದು ರೈತರಿಗೆ ಜೀವ ಬಂದಂತಾಗಿದೆ. ಎಚ್‌.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ತಾಲ್ಲೂಕಿನ 320 ಕಿ.ಮೀ ಹಳ್ಳಿರಸ್ತೆಯನ್ನು ಲೋಕೋಪಯೋಗಿ ರಸ್ತೆಗಳಾಗಿ ಮೇಲ್ದರ್ಜೆಗೇರಿಸಿದ್ದಾರೆ. ನಾನು ಹಲವು ಬಾರಿ ಟಿಕೆಟ್‌ ವಂಚಿತನಾಗಿದ್ದು ಜನರ ಅನುಕಂಪವೂ ಇದೆ.

* ಜನ್ಮಭೂಮಿಯೇ ಕರ್ಮಭೂಮಿ ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರಲ್ಲ?

ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ₹ 8 ಸಾವಿರ ಕೋಟಿ ಅನುದಾನ ನೀಡಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದೊಡನೆ ಅನುದಾನ ತಡೆಹಿಡಿದ್ದಾರೆ. ಕುಮಾರಸ್ವಾಮಿ ಅವರು ಮಂಡಿಸಿದ ಜನಪರ ಆಯವ್ಯಯವನ್ನು ‘ಮಂಡ್ಯ ಬಜೆಟ್‌’ ಎಂದು ಟೀಕೆ ಮಾಡಿದ್ದ ಯಡಿಯೂರಪ್ಪ ಅವರಿಗೆ ಈಗ ಜನ್ಮಭೂಮಿ ನೆನಪಾಯಿತಾ?

* ಈ ಉಪ ಚುನಾವಣೆಯಲ್ಲಿ ನಿಮಗೆ ಎದುರಾಳಿ ಯಾರು?

ಕಾಂಗ್ರೆಸ್‌ ಪಕ್ಷವೇ ನಮ್ಮ ಎದುರಾಳಿ. ತಾಲ್ಲೂಕಿನಲ್ಲಿ ಬಿಜೆಪಿಗೆ ಸ್ಥಾನವಿಲ್ಲ. ಯಡಿಯೂರಪ್ಪ ಎರಡು ಬಾರಿ ಮುಖ್ಯಮಂತ್ರಿಯಾದರೂ ತವರು ಕ್ಷೇತ್ರಕ್ಕೆ ಮಾಡಿದ್ದೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.