ADVERTISEMENT

ಮಂಡ್ಯ: 24X7 ಕುಡಿಯುವ ನೀರಿನ ಯೋಜನೆ ಏನಾಯ್ತು?

ಎರಡು ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ, ಅರ್ಧಕ್ಕೆ ನಿಂತ ಟ್ಯಾಂಕ್‌ ಕೆಲಸ, ಅಪಾಯಕ್ಕೆ ಆಹ್ವಾನ

ಎಂ.ಎನ್.ಯೋಗೇಶ್‌
Published 14 ಅಕ್ಟೋಬರ್ 2019, 21:48 IST
Last Updated 14 ಅಕ್ಟೋಬರ್ 2019, 21:48 IST
ಅಮೃತ್‌ ಯೋಜನೆ ಅಡಿ ಕುಡಿಯುವ ನೀರಿನ  ಪೈಪ್‌ಲೈನ್‌ ಅಳವಡಿಸುತ್ತಿರುವ ಕಾಮಗಾರಿ ಕಲ್ಲಹಳ್ಳಿ ಬಳಿ ಕುಂಟುತ್ತಾ ಸಾಗುತ್ತಿದೆ
ಅಮೃತ್‌ ಯೋಜನೆ ಅಡಿ ಕುಡಿಯುವ ನೀರಿನ  ಪೈಪ್‌ಲೈನ್‌ ಅಳವಡಿಸುತ್ತಿರುವ ಕಾಮಗಾರಿ ಕಲ್ಲಹಳ್ಳಿ ಬಳಿ ಕುಂಟುತ್ತಾ ಸಾಗುತ್ತಿದೆ   

ಮಂಡ್ಯ: ನಗರಕ್ಕೆ 24X7 ಕುಡಿಯುವ ನೀರು ಪೂರೈಸುವ ಯೋಜನಾ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕೇಂದ್ರ ಪುರಸ್ಕೃತ ಅಮೃತ್‌ (ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆ ಅಡಿ 2017ರಲ್ಲೇ ಆರಂಭವಾದ ಕಾಮಗಾರಿ ಎರಡು ವರ್ಷ ಕಳೆದರೂ ಅಂತಿಮ ಹಂತಕ್ಕೆ ಬಂದಿಲ್ಲ.

ಕುಡಿಯುವ ನೀರು ಸೇರಿ ಉದ್ಯಾನ, ಒಳಚರಂಡಿ ಕಾಮಗಾರಿಗೆ 2017, ಸೆಪ್ಟೆಂಬರ್‌ 8ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಚಾಲನೆಗೂ ಆರು ತಿಂಗಳು ಮೊದಲೇ ಕಾಮಗಾರಿ ಆರಂಭಗೊಂಡಿತ್ತು. ಮುಖ್ಯಮಂತ್ರಿಗಳ ದಿನಾಂಕ ಸಿಗದ ಕಾರಣ ಅಧಿಕಾರಿಗಳು ಉದ್ಘಾಟನೆಯನ್ನೇ ಆರು ತಿಂಗಳು ಎಳೆದಾಡಿದ್ದರು. ಕೆಲಸ ಆರಂಭವಾಗಿ ಇಲ್ಲಿ 2.8 ವರ್ಷ ಕಳೆದಿದೆ. 12 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 30 ತಿಂಗಳಾದರೂ ಮುಗಿಯದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಕಾವೇರಿ ನದಿ ಸಮೀಪವಿದ್ದರೂ ನಾಲ್ಕು ದಿನಕ್ಕೆ ಒಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೆಲವು ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಬರುತ್ತಿದೆ. ಹೀಗಾಗಿ 24X7 ಕುಡಿಯುವ ನೀರು ಪಡೆಯವ ಕನಸು ಜನರಲ್ಲಿ ಸಂತಸ ಸೃಷ್ಟಿಸಿತ್ತು. ಆದರೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು ಜನರ ಕನಸು ಕನಸಾಗೇ ಉಳಿಯುವಂತಾಗಿದೆ.

ADVERTISEMENT

ಕುಡಿಯುವ ನೀರಿನ ಕಾಮಗಾರಿ ಜಲಮಂಡಳಿ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ₹ 113 ಕೋಟಿ, ಐದು ವರ್ಷಗಳ ನಿರ್ವಹಣೆಗೆ ₹ 124 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕಾವೇರಿ ನದಿಯ ವೆಲ್ಲೆಸ್ಲಿ ಸೇತುವೆ ಬಳಿಯಿಂದ, ಗಣಂಗೂರು ಬಾರೆ ನೀರು ಶುದ್ಧೀಕರಣ ಘಟಕದಿಂದ ನಗರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದ್ದು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ವರ್ಷದ ಹಿಂದೆಯೇ ತೂಬಿನಕೆರೆವರೆಗೂ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಂದಿತ್ತು. ಈಗ ಅದು ಕಲ್ಲಹಳ್ಳಿ ಬಳಿ ಕುಂಟುತ್ತಾ ಸಾಗುತ್ತಿದೆ.

ಅಮೃತ್‌ ಕಾಮಗಾರಿ ವಸತಿ ಸಚಿವರಾಗಿದ್ದ ದಿವಂಗತ ಅಂಬರೀಷ್‌ ಅವರ ಕನಸಿನ ಯೋಜನೆಯಾಗಿತ್ತು. ಅವರು ಮುಖ್ಯಮಂತ್ರಿಗಳನ್ನೇ ಕರೆದುಕೊಂಡು ಬಂದು ಕಾಮಗಾರಿಗೆ ಚಾಲನೆ ಕೊಡಿಸಿದ್ದರು. ಸಚಿವ ಸ್ಥಾನ ಕಳೆದುಕೊಂಡ ನಂತರವೂ ಅವರು 2018, ಜೂನ್‌ 5ರಂದು ಮಂಡ್ಯಕ್ಕೆ ಭೇಟಿ ನೀಡಿ, ಅಮೃತ್‌ ಯೋಜನೆ ಕಾಮಗಾರಿಗಳನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಅವರು ಸೂಚನೆ ನೀಡಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

‘ಅಂಬರೀಷ್‌ ನಿಧನರಾದ ಕಾರಣ ಅಧಿಕಾರಿಗಳಿಗೆ ನೀಡಿದ್ದ ಗಡುವಿನ ಬಗ್ಗೆ ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಅಮೃತ್‌ ಯೋಜನೆ ಕಾಮಗಾರಿ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಯೋಜನೆ ಸಾಕ್ಷಿಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಆರೋಪಿಸಿದರು.

ಓವರ್‌ಹೆಡ್‌ ಟ್ಯಾಂಕ್‌ ಕಾಮಗಾರಿ ಸ್ಥಗಿತ: ಕಾವೇರಿ ನದಿಯಿಂದ ಹರಿದು ಬಂದ ನೀರನ್ನು ಸಂಗ್ರಹಿಸಲು ನಗರದಾದ್ಯಂತ 10 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲು ಚಾಲನೆ ನೀಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆಗೆ ಒಂದು ಟ್ಯಾಂಕ್‌ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಬಹುತೇಕ ಟ್ಯಾಂಕ್‌ಗಳು ಉದ್ಯಾನದೊಳಗೆ ನಿರ್ಮಾಣಗೊಳ್ಳುತ್ತಿದ್ದು ವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಕಟ್ಟಡಕ್ಕೆ ಪೋಲು ಕಟ್ಟಿ ನಿಲ್ಲಿಸಿದ್ದು ಅದು ಬಿದ್ದರೆ ಏನು ಗತಿ ಎಂಬ ಭೀತಿ ನಿರ್ಮಾಣವಾಗಿದೆ.

‘ಬಾಲಭವನ ಉದ್ಯಾನದಲ್ಲಿ ಕಳೆದರಡು ವರ್ಷಗಳಿಂದ ಟ್ಯಾಂಕ್‌ ಕಾಮಗಾರಿ ನಡೆಯುತ್ತಿದೆ. ಸಿಮೆಂಟ್‌ ಹಾಕುವ ಹಂತಕ್ಕೆ ಬಂದು ಕಾಮಗಾರಿ ಸ್ಥಗಿತಗೊಂಡಿದೆ. ಪೋಲುಗಳು ಕಳಚಿಬೀಳುವ ಅಪಾಯದ ಹಂತಕ್ಕೆ ಬಂದಿದೆ’ ಎಂದು ಅಶೋಕ್‌ ನಗರದ ನಿವಾಸಿ ಶಿವರಾಜು ಹೇಳಿದರು.

ನಿರ್ವಹಣೆ ಕಾಣದ ಉದ್ಯಾನ: ಅಮೃತ್‌ ಯೋಜನೆ ಅಡಿ ನಗರದ ಬಾಲಭವನ ಉದ್ಯಾನ ಅಭಿವೃದ್ಧಿಗೊಳಿಸಲಾಗಿದೆ. ಕಾಮಗಾರಿ ವರ್ಷದ ಹಿಂದೆಯೇ ಮುಗಿದಿದೆ. ಅದರೆ ನಿರ್ವಹಣೆ ಕೊರತೆಯಿಂದಾಗಿ ಉದ್ಯಾನದಲ್ಲಿರುವ ಕಲ್ಲು ಬೆಂಚುಗಳು ಕಳಚಿ ಬಿದ್ದಿವೆ. ವಿದ್ಯುತ್‌ ದೀಪಗಳು ಹಾಳಾಗಿದ್ದು ರಾತ್ರಿಯ ವೇಳೆ ವಿಹಾರ ಮಾಡಡು ನಾಗರಿಕರು ಭಯಪಡಬೇಕಾದ ಸ್ಥಿತಿ ಇದೆ.

ಅಮೃತ್ ಕಾಮಗಾರಿ ಪೂರ್ಣಗೊಳಿಸುವುದಕ್ಕೂ ಮೊದಲೇ ನೀರಿನ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರು ಜಲಮಂಡಳಿ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.

2020ಕ್ಕೆ ಯೋಜನಾ ಅವಧಿ ಮುಕ್ತಾಯ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ರೂಪಿಸಲಾಗಿದ್ದ ಅಮೃತ್‌ ಯೋಜನಾ ಅವಧಿ 2020 ಮಾರ್ಚ್‌ ತಿಂಗಳಿಗೆ ಕೊನೆಗೊಳ್ಳಲಿದೆ. ಒಟ್ಟಾರೆ ಯೋಜನೆಯೇ ಮುಗಿಯುವ ಹಂತಕ್ಕೆ ಬಂದಿದ್ದರೂ ಕುಡಿಯುವ ನೀರಿನ ಕಾಮಗಾರಿ ಮುಗಿಯದಿರುವುದು ವಿಪರ್ಯಾಸವಾಗಿದೆ.

2019 ಏಪ್ರಿಲ್‌ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ 2020 ಮಾರ್ಚ್‌ ಕಡೆಗೆ ಬೆರಳು ತೋರಿಸುತ್ತಿದ್ದಾರೆ.

ದಶಪಥ ಕಾಮಗಾರಿ ಅಡ್ಡಿ
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಶಪಥ ಯೋಜನೆ ಕಾಮಗಾರಿ ನಡೆಸುತ್ತಿರುವ ಕಾರಣ ಕುಡಿಯುವ ನೀರಿನ ಕಾಮಗಾರಿ ತಡವಾಗುತ್ತಿದೆ. ಈಗ ಕಟ್ಟಡಗಳನ್ನು ಒಡೆದು ದಶಪಥ ಕಾಮಗಾರಿ ನಡೆಸಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಜೊತೆ ನಾವು ಸಂಪರ್ಕದಲ್ಲಿದ್ದು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ಆರಂಭಗೊಳ್ಳದ ಟ್ಯಾಂಕ್‌ ಕಾಮಗಾರಿ
ಒಟ್ಟು 10 ಓವರ್‌ಹೆಡ್‌ ಟ್ಯಾಂಕ್‌ಗಳಲ್ಲಿ 29ನೇ ವಾರ್ಡ್‌ ಗುತ್ತಲು ಕಾಲೊನಿಯ ಟ್ಯಾಂಕ್‌ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಯೋಜನಾ ಕಾಮಗಾರಿ ಪೂರ್ಣಗೊಂಡರೂ ಟ್ಯಾಂಕ್‌ ಇಲ್ಲದ ಕಾರಣ 29ನೇ ವಾರ್ಡ್‌ ಜನರು 24X7 ಕುಡಿಯುವ ನೀರು ಪಡೆಯಲು ಸಾಧ್ಯವಿಲ್ಲ.

‘ಉದ್ಯಾನದಲ್ಲಿ ಟ್ಯಾಂಕ್‌ ನಿರ್ಮಿಸಲು ಸ್ಥಳೀಯರು ಅವಕಾಶ ಕೊಡದ ಕಾರಣ ಅಲ್ಲಿಯ ಕಾಮಗಾರಿ ಆರಂಭಗೊಂಡಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

*
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೈಪ್‌ಲೈನ್‌ ಕಾಮಗಾರಿಗೆ ಸಂಪೂರ್ಣವಾಗಿ ಅನುಮತಿ ನೀಡಿಲ್ಲ. 2020 ಮಾರ್ಚ್‌ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು
–ಸಿ.ಎನ್‌.ಮಹದೇವು, ಕಾರ್ಯಪಾಲಕ ಎಂಜಿನಿಯರ್‌, ಜಲಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.