ADVERTISEMENT

ನಿರಂಜನ ಮಠ, ಶಾಲೆ ಉಳಿಸಲು ಕರೆ

ಮಠದಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 8:54 IST
Last Updated 20 ಸೆಪ್ಟೆಂಬರ್ 2021, 8:54 IST
ನಗರದ ನಿರಂಜನ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಂತೇಶ್ ಪಾಟೀಲ ಬಸವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ವರುಣ ಮಹೇಶ್, ಗಂಗಾಧರ ಆರ್. ಗುರುಮಠ, ಹಿನಕಲ್ ಬಸವರಾಜು, ಶರಣ ಮಹದೇವಪ್ಪ ಇದ್ದಾರೆ
ನಗರದ ನಿರಂಜನ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಂತೇಶ್ ಪಾಟೀಲ ಬಸವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ವರುಣ ಮಹೇಶ್, ಗಂಗಾಧರ ಆರ್. ಗುರುಮಠ, ಹಿನಕಲ್ ಬಸವರಾಜು, ಶರಣ ಮಹದೇವಪ್ಪ ಇದ್ದಾರೆ   

ಮೈಸೂರು: ನಿರಂಜನ ಮಠ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಯಬೇಕು ಎಂಬ ಒತ್ತಾಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ, ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಮಠದ ಆವರಣದಲ್ಲಿ ಭಾನುವಾರ ನಡೆದ ‘ಶ್ರೀ ನಿರಂಜನಮಠ– ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಸ್ವಾಮಿ ವಿವೇಕಾನಂದರು ಬಂದಿದ್ದರು ಎಂಬ ಸ್ಮರಣೆಗಾಗಿ ವಿವೇಕ ಸ್ಮಾರಕವನ್ನೂ ಮಹಾಸಭಾದಿಂದ ನಿರ್ಮಿಸಲಾಗುವುದು. ಈ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಮುಖಂಡರು ರವಾನಿಸಿದರು.

‘ರಾಮಕೃಷ್ಣ ಆಶ್ರಮವು ನಿರಂಜನ ಮಠದ ವಿಷಯದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಂತೆ ವರ್ತಿಸುವುದನ್ನು ಬಿಡ ಬೇಕು’ ಎಂದು ಹೈಕೋರ್ಟ್ ವಕೀಲ ಗಂಗಾಧರ ಆರ್‌.ಗುರುಮಠ ಎಂದರು.

ADVERTISEMENT

‘ನಿರಂಜನ ಮಠ, ಎನ್‌ಟಿಎಂ ಶಾಲೆ ಉಳಿಯಬೇಕು ಹಾಗೂ ವಿವೇಕ ಸ್ಮಾರಕವೂ ನಿರ್ಮಾಣವಾಗಬೇಕು’ ಎಂದು ಪ್ರತಿಪಾದಿಸಿದರು.

‘ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಮುಖ್ಯಮಂತ್ರಿಯಾಗಿರು ವಾಗ ವೀರಶೈವ ಲಿಂಗಾಯತ ಪರಂಪರೆಗೆ ಸೇರಿದ ಮಠವನ್ನು ಉಳಿಸಿ ಎಂದು ಪ್ರಾರ್ಥಿಸುವಂತಹ ಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದು ಸಮುದಾಯದ ಮಠವನ್ನು ಮತ್ತೊಂದು ಸಮುದಾಯಕ್ಕೆ ಹಸ್ತಾಂತರಿಸುವ ಸರ್ಕಾರದ ಆದೇಶವೇ ಸರಿಯಲ್ಲ. ಈ ರೀತಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ’ ಎಂದು ತಿಳಿಸಿದರು.

ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಾಂತೇಶ್ ಪಾಟೀಲ ಮಾತನಾಡಿ, ‘ವೀರಶೈವ ಲಿಂಗಾಯತ ಸಮುದಾಯದವರು ‘ಹೋಗಲಿ ಬಿಡು’ ಎನ್ನುವ ಮನೋಭಾವ ಬಿಡಬೇಕು. ಇದರಿಂದಾಗಿಯೇ ಶಾಸನ ಸಭೆಗಳಲ್ಲಿ ಶೇ 60ರಷ್ಟಿದ್ದ ಶಾಸಕರ ಸಂಖ್ಯೆ ಈಗ ಶೇ 28ಕ್ಕೆ ಇಳಿದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಸಮುದಾಯ ಅಪಾಯದಲ್ಲಿ ಸಿಲುಕಲಿದೆ’ ಎಂದು ಎಚ್ಚರಿಕೆ ನೀಡಿದರು.

ಆಹ್ವಾನ ನೀಡಿದ್ದರೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಉಪಾಧ್ಯಕ್ಷ ಶಂಕರ ಬಿದರಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಲೋಕೇಶ್ ತುಂಬುಲ, ನಟರಾಜು, ರಾಜ್ಯ ಕಾರ್ಯಕಾರಿಣಿ ಸದಸ್ಯ ಹಿನಕಲ್ ಬಸವರಾಜು, ಕೋಶಾಧ್ಯಕ್ಷ ವರುಣ ಮಹೇಶ್, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.