ADVERTISEMENT

ಜೆಡಿಎಸ್‌ಗೆ ಪೂರ್ಣಪ್ರಮಾಣದ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ ಮನವಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 13:59 IST
Last Updated 19 ಆಗಸ್ಟ್ 2022, 13:59 IST
ಮಾನ್ವಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಜನ್ಮದಿನಾಚರಣೆ ಮತ್ತು ಜೆಡಿಎಸ್‌ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.
ಮಾನ್ವಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಜನ್ಮದಿನಾಚರಣೆ ಮತ್ತು ಜೆಡಿಎಸ್‌ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.   

ರಾಯಚೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಒಂದು ಬಾರಿ ಐದು ವರ್ಷಗಳವರೆಗೂ ಸರ್ಕಾರ ನಡೆಸುವುದಕ್ಕೆ ಪೂರ್ಣಪ್ರಮಾಣದಲ್ಲಿ ಅಧಿಕಾರ ಕೊಡಿ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೋರಿದರು.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಜನ್ಮದಿನಾಚರಣೆ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಪಂಚರತ್ನ ಕಾರ್ಯಕ್ರಮಗಳನ್ನು ತರುವ ಯೋಜನೆ ಇಟ್ಟುಕೊಂಡಿದ್ದೇನೆ. 2017 ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಸಿಂಧನೂರಿನಲ್ಲಿ ಸುಮಾರು 70 ರೈತ ಕುಟುಂಬಗಳಿಗೆ ತಲಾ ₹50 ಸಾವಿರ ನೆರವು ನೀಡಿದ್ದೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ನಾಯಕರು ರೈತರ ಸಾಲಮನ್ನಾಗೆ ಸಂಬಂಧವಿಲ್ಲ ಎಂದು ಹೇಳಿದ್ದರು.‌ ಆದರೂ ರೈತರಿಗೆ ಕೊಟ್ಟಿರುವ ಮಾತಿನಂತೆ ರಾಜ್ಯದಲ್ಲಿ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ. ರಾಯಚೂರು ಜಿಲ್ಲೆವೊಂದಕ್ಕೆ ₹678 ಕೋಟಿ ಸಾಲ ಮನ್ನಾಗೆ 14 ತಿಂಗಳಲ್ಲಿ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.

ಭೂಮಿಯಿಲ್ಲದ ಕೃಷಿ ಕೂಲಿಕಾರ್ಮಿಕರ ಕಲ್ಯಾಣ ಮಾಡುವ ಯೋಜನೆ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಐದು ಯೋಜನೆಗಳನ್ನು ಘೋಷಿಸುತ್ತಿದ್ದೇನೆ. ಎಲ್ ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಉಚಿತ ಶಿಕ್ಷಣ ಕೋವಿಡ್ ಸಂದರ್ಭದಲ್ಲಿ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 30 ಹಾಸಿಗೆ ಸೌಲಭ್ಯದ ಆಸ್ಪತ್ರೆ ಸ್ಥಾಪಿಸಿ, ಉಚಿತ ಚಿಕಿತ್ಸೆ ನೀಡಲಾಗುವುದು. ಗ್ರಾಮೀಣ ‌ಮಹಿಳೆಯರನ್ನು ಸ್ವಾವಲಂಬನೆ ನೀಡುವ ಯೋಜನೆ ಇದೆ. ಪ್ರತಿ ಕುಟುಂಬಕ್ಕೆ ಮಾಸಿಕ ₹15 ಸಾವಿರ ಆದಾಯ ಬರುವಂತೆ ಮಾಡಲಾಗುವುದು.‌ ಪ್ರತಿ ಮಕ್ಕಳಿಗೂ ಉದ್ಯೋಗ ದೊರಕಿಸಲಾಗುವುದು. ಮಸಾಶನಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ಮನೆಯಿಲ್ಲದವರಿಗೆ ಮನೆಗಳನ್ನು ನೀಡುವುದಕ್ಕೆ ಸುವರ್ಣಗ್ರಾಮ ಯೋಜನೆ ಜಾರಿಗೊಳಿಸಲಾಗುವುದು.. ಗ್ರಾಮಗಳಲ್ಲೇ ಮಹಿಳೆಯರು ಉತ್ಪಾದಕತೆ ಆರಂಭಿಸಲು ಕ್ರಮ ವಹಿಸಲಾಗುವುದು. ಅಗತ್ಯ ಆರ್ಥಿಕ‌ ನೆರವು ಸರ್ಕಾರದಿಂದ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.