ADVERTISEMENT

ಬೀನ್ಸ್, ಗೆಡ್ಡೆಕೋಸು, ಸೌತೆ ದುಬಾರಿ

ಹಾಗಲ, ಹಸಿರು ಮೆಣಸಿನಕಾಯಿ ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 3:39 IST
Last Updated 12 ಸೆಪ್ಟೆಂಬರ್ 2021, 3:39 IST
ಬೀನ್ಸ್‌ (ಸಾಂದರ್ಭಿಕ ಚಿತ್ರ)
ಬೀನ್ಸ್‌ (ಸಾಂದರ್ಭಿಕ ಚಿತ್ರ)   

ತುಮಕೂರು: ತರಕಾರಿ ಬೆಲೆ ಬಹುತೇಕ ಸ್ಥಿರವಾಗಿದ್ದು, ಬೀನ್ಸ್, ಗೆಡ್ಡೆಕೋಸು, ಹೂಕೋಸು, ಸೌತೆಕಾಯಿ ದುಬಾರಿಯಾಗಿದ್ದರೆ, ಹಸಿರು ಮೆಣಸಿನಕಾಯಿ ಕೇಳುವವರೇ ಇಲ್ಲವಾಗಿದ್ದಾರೆ. ಸದಾ ದುಬಾರಿಯಾಗಿರುತ್ತಿದ್ದ ಹಾಗಲಕಾಯಿ ಬೆಲೆ ಇಳಿಕೆಯಾಗಿದೆ. ಒಣ ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಬೀನ್ಸ್ ಕೆ.ಜಿ ₹50ಕ್ಕೆ, ಗೆಡ್ಡೆಕೋಸು ಕೆ.ಜಿ ₹40, ಹೂ ಕೋಸು ಒಂದಕ್ಕೆ ₹40, ಸೌತೆಕಾಯಿ ಒಂದಕ್ಕೆ ₹10–15ಕ್ಕೆ ಏರಿಕೆಯಾಗಿದ್ದರೆ, ಹಾಗಲಕಾಯಿ ಕೆ.ಜಿ ₹10–₹15, ಹಸಿರು ಮೆಣಸಿನಕಾಯಿ ₹10–₹15ಕ್ಕೆ ಇಳಿಕೆಯಾಗಿದೆ. ಉಳಿದಂತೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಸೊಪ್ಪಿನ ಬೆಲೆಗಳು ತೀವ್ರವಾಗಿ ಇಳಿಕೆ ಕಂಡಿದ್ದು, ಕೊತ್ತಂಬರಿ ಸೊಪ್ಪು ಕೆ.ಜಿ ₹70–80ರಿಂದ ₹20ಕ್ಕೆ ತಗ್ಗಿದೆ. ಮೆಂತ್ಯ ಸೊಪ್ಪು ಕೆ.ಜಿ ₹20, ಸಬ್ಬಕ್ಕಿ ಕೆ.ಜಿ ₹20ಕ್ಕೆ ಕಡಿಮೆಯಾಗಿದೆ. ಆದರೆ ಪಾಲಕ್ ಸೊಪ್ಪಿನ ಬೆಲೆ ದುಬಾರಿಯಾಗಿದ್ದು, ಕೆ.ಜಿ ₹40ಕ್ಕೆ ಹೆಚ್ಚಳವಾಗಿದೆ.

ADVERTISEMENT

ಗೌರಿ, ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಮುಂದಿನ ಒಂದು ತಿಂಗಳು ಯಾವುದೇ ಹಬ್ಬ, ಇತರ ಪ್ರಮುಖ ಕಾರ್ಯಕ್ರಮಗಳು ಇಲ್ಲ. ಹಾಗಾಗಿ ಧಾನ್ಯಗಳ ಬೆಲೆಯಲ್ಲಿ ಸ್ಥಿರತೆ ಮುಂದುವರಿದಿದೆ. ಉದ್ದಿನ ಬೇಳೆ, ಬಟಾಣಿ, ಸಕ್ಕರೆ ಧಾರಣೆ ಅಲ್ಪ ಏರಿಕೆಯಾಗಿದ್ದರೆ, ಹೆಸರು ಕಾಳು, ಕಡಲೆ ಕಾಳು ಬೆಲೆ ಕೊಂಚ ಕುಸಿದಿದೆ.

ಬಾದಾಮಿ ಕೆ.ಜಿ ₹900, ಗೋಡಂಬಿ ಕೆ.ಜಿ ₹700 ಬೆಲೆ ಇದ್ದರೆ, ಸಾಸಿವೆ ಕೆ.ಜಿ ₹100ಕ್ಕೆ ಜಿಗಿದಿದೆ. ಜೀರಿಗೆ ಕೆ.ಜಿ ₹170–200ಕ್ಕೆ ಹೆಚ್ಚಳವಾಗಿದೆ. ಗಸಗಸೆ (ಗುಣಮಟ್ಟದ್ದು) ಕೆ.ಜಿ ₹1,800ಕ್ಕೆ (ಕಳಪೆ ಮಾಲು ಕೆ.ಜಿ ₹1,200ಕ್ಕೆ ಸಿಗುತ್ತಿದೆ) ಮಂಡಿಪೇಟೆಯಲ್ಲಿ ಮಾರಾಟವಾಗುತ್ತಿದೆ.

ಇಳಿಯದ ಹಣ್ಣು: ಹಬ್ಬದ ಸಮಯಕ್ಕೆ ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಈಗ ಅದೇ ಸ್ಥಿತಿ ಮುಂದುವರಿದಿದೆ. ಸೇಬು, ದಾಳಿಂಬೆ, ಕಿತ್ತಳೆ, ಏಲಕ್ಕಿ ಬಾಳೆ, ಪೈನಾಪಲ್ ಹಣ್ಣಿನ ಬೆಲೆ ಸ್ವಲ್ಪ ಏರಿಕೆ ಕಂಡಿದೆ.

ಕೋಳಿ ದುಬಾರಿ: ಶ್ರಾವಣ ಮಾಸದಲ್ಲಿ ದುಬಾರಿಯಾಗಿದ್ದ ಕೋಳಿ ಬೆಲೆ, ಶ್ರಾವಣ ಮುಗಿದ ನಂತರ ಮತ್ತಷ್ಟು ದುಬಾರಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹175ಕ್ಕೆ, ರೆಡಿ ಚಿಕನ್ ₹250ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.