ADVERTISEMENT

ಬಿಜೆಪಿ ಸರ್ಕಾರದಲ್ಲಿ ಹೆಚ್ಚಿದ ಭ್ರಷ್ಟಾಚಾರ: ರವಿಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 3:45 IST
Last Updated 9 ಸೆಪ್ಟೆಂಬರ್ 2021, 3:45 IST
ತುಮಕೂರಿನಲ್ಲಿ ಬುಧವಾರ ಮುಕ್ತಾಯ ಕಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭ್ರಷ್ಟಾಚಾರ ವಿರೋಧಿ ಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಕುಮಾರಗೌಡ, ಮುಖಂಡರಾದ ದೀಪಕ್, ಲಿಂಗೇಗೌಡ, ರಘು ಜಾಣಗೆರೆ, ಮಲ್ಲಿಕಾರ್ಜುನ್ ಭಟ್ರಳ್ಳಿ ಇದ್ದರು
ತುಮಕೂರಿನಲ್ಲಿ ಬುಧವಾರ ಮುಕ್ತಾಯ ಕಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭ್ರಷ್ಟಾಚಾರ ವಿರೋಧಿ ಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಕುಮಾರಗೌಡ, ಮುಖಂಡರಾದ ದೀಪಕ್, ಲಿಂಗೇಗೌಡ, ರಘು ಜಾಣಗೆರೆ, ಮಲ್ಲಿಕಾರ್ಜುನ್ ಭಟ್ರಳ್ಳಿ ಇದ್ದರು   

ತುಮಕೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಇಲ್ಲಿ ಆರೋಪಿಸಿದರು.

ಶಿವಮೊಗ್ಗದ ಈಸೂರಿನಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ‘ಭ್ರಷ್ಟರೇ, ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ, ನಾಡ ಪ್ರೇಮಿಗಳೇ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ’ ಎಂಬ ಘೋಷಣೆಯೊಂದಿಗೆ ಆರಂಭವಾದ ಭ್ರಷ್ಟಾಚಾರ ವಿರೋಧಿ ಯಾತ್ರೆಯು ನಗರದಲ್ಲಿ ಬುಧವಾರ ಕೊನೆಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಆಡಳಿತಾರೂಢ ಪಕ್ಷದ ಅಧಿಕೃತ ವಕ್ತಾರರೇ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಧಿಕಾರಿಗಳು ರಾಜಕಾರಣಿಗಳಿಗೆ ಲಂಚ ಕೊಟ್ಟು ಆಯಕಟ್ಟಿನ ಸ್ಥಳಕ್ಕೆ ವರ್ಗ ಮಾಡಿಸಿಕೊಳ್ಳುತ್ತಿದ್ದಾರೆ. ಸಂಬಳ ನನ್ನ ಹಕ್ಕು, ಗಿಂಬಳ ನನ್ನ ತಾಕತ್ತು, ಕೆಲಸ ನನ್ನ ಮರ್ಜಿ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಅಧಿಕಾರಿಗಳ ಲಂಚಗುಳಿತನಕ್ಕೆ ರಾಜಕಾರಣಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಹಣ ಕೊಡದೆ ಯಾವ ಕಚೇರಿ, ಇಲಾಖೆಯಲ್ಲೂ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ. ಹಾಗಾಗಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಅಭಿಯಾನ ನಡೆಸಲಾಯಿತು. ಆಗಸ್ಟ್ 8ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈಸೂರಿನಿಂದ ಜಾಗೃತಿ ಅಭಿಯಾನ ಪ್ರಾರಂಭಿಸಲಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ನಡೆಸಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಕುಮಾರಗೌಡ, ಮುಖಂಡರಾದ ದೀಪಕ್, ಲಿಂಗೇಗೌಡ, ರಘು ಜಾಣಗೆರೆ, ಮಲ್ಲಿಕಾರ್ಜುನ್ ಭಟ್ರಳ್ಳಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.