ADVERTISEMENT

ಕುಣಿಗಲ್: ಶಾಸಕರ ನಿಧಿ ಬಳಕೆ – ದೇವಾಲಯ, ರಸ್ತೆ ಅಭಿವೃದ್ಧಿಗೆ ಆದ್ಯತೆ

ಎರಡು ವರ್ಷದಲ್ಲಿ 70 ದೇಗುಲಗಳ ಅಭಿವೃದ್ಧಿಗೆ ₹80 ಲಕ್ಷ ಅನುದಾನ ಬಳಕೆ

ಟಿ.ಎಚ್.ಗುರುಚರಣ್ ಸಿಂಗ್
Published 18 ಸೆಪ್ಟೆಂಬರ್ 2021, 2:56 IST
Last Updated 18 ಸೆಪ್ಟೆಂಬರ್ 2021, 2:56 IST
ಕುಣಿಗಲ್ ಶಾಸಕ ಡಾ.ರಂಗನಾಥ್
ಕುಣಿಗಲ್ ಶಾಸಕ ಡಾ.ರಂಗನಾಥ್   

ಕುಣಿಗಲ್: ಶಾಸಕರ ಕ್ಷೇತ್ರದ ಪ್ರದೇಶಾಭಿವೃದ್ಧಿ ಅನುದಾನವನ್ನು ತಾಲ್ಲೂಕಿನಲ್ಲಿ ಗ್ರಾಮಾಂತರ ಪ್ರದೇಶದ ಮಾರಮ್ಮ ಸೇರಿದಂತೆ ವಿವಿಧ ದೇವಾಲಯ ಮತ್ತು ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಬಳಸಿರುವ ಶಾಸಕಡಾ.ರಂಗನಾಥ್, ಶೇ 95ರಷ್ಟು ಅನುದಾನ ಬಳಸಿದ್ದಾರೆ.

ತಾಲ್ಲೂಕಿನಲ್ಲಿ ಜನಸಂಪರ್ಕ ಸಭೆಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಸ್ಥರಿಂದ ಬಂದ ಬೇಡಿಕೆಗಳಿಗೆ ಅನುಸಾರ ಶಾಸಕರು ಕಾಮಗಾರಿಗಳ ಪಟ್ಟಿ ಸಿದ್ಧಪಡಿಸುತ್ತಾರೆ. ಅನುಮೋದನೆ ಪಡೆದ ನಂತರ ಶಾಸಕರು ತಮ್ಮದೇ ಆದ ಸಿಬ್ಬಂದಿ ಮೇಲ್ವಿಚಾರಣೆ ಮೂಲಕ ಕಾಮಗಾರಿ ಪೂರ್ಣಗೊಳಿಸುತ್ತಾರೆ.

ತಾಲ್ಲೂಕಿನಲ್ಲಿ 2018-19 ಸಾಲಿನಲ್ಲಿ 94 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. 43 ಕಾಮಗಾರಿ ಪೂರ್ಣಗೊಂಡು ₹1.11 ಕೋಟಿ ಪಾವತಿಯಾಗಿದೆ. 33 ಕಾಮಗಾರಿಗಳು ಪ್ರಗತಿಯಲ್ಲಿವೆ. 18 ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ.

ADVERTISEMENT

2019-20ನೇ ಸಾಲಿನಲ್ಲಿ 79 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. 10 ಕಾಮಗಾರಿ ಪೂರ್ಣಗೊಂಡು ₹29.39 ಲಕ್ಷ ಪಾವತಿಯಾಗಿದೆ. 56 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. 13 ಕಾಮಗಾರಿಗಳು ಪ್ರಾರಂಭವಾಗಿಲ್ಲ ಎನ್ನುತ್ತವೆ ದಾಖಲೆಗಳು.

2018-19ರಲ್ಲಿ ಶಾಸಕ ಡಾ.ರಂಗನಾಥ್ ನೀಡಿರುವ ಪಟ್ಟಿಯಲ್ಲಿ 68 ಕಾಮಗಾರಿಗಳಿವೆ. ಮಾರಮ್ಮ ದೇವಾಲಯ ಸೇರಿದಂತೆ 47 ದೇವಾಲಯಗಳ ಅಭಿವೃದ್ಧಿಗೆ ₹55 ಲಕ್ಷ ನೀಡಿದ್ದು, ಉಳಿದಂತೆ ಶಾಲೆ ಆವರಣ ಗೋಡೆ, ಶೌಚಾಲಯ, ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಬಳಕೆಯಾಗಿದೆ.

2019-20ನೇ ಸಾಲಿನ ಅನುದಾನದಲ್ಲಿ ಶೇ 90ರಷ್ಟು ಹಣ ಗ್ರಾಮೀಣ ರಸ್ತೆ, ಚರಂಡಿ ಮತ್ತು ದೇವಾಲಯಗಳ ಅಭಿವೃದ್ಧಿ ಬಳಸಲಾಗಿದೆ.

ತಾಲ್ಲೂಕಿನಲ್ಲಿ ಎರಡು ವರ್ಷದಲ್ಲಿ ₹4 ಕೋಟಿಯಲ್ಲಿ 147 ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಬಳಕೆಯಾಗಿದೆ. ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ತಾಲ್ಲೂಕು ಪಂಚಾಯಿತಿ ಕಟ್ಟಡ ದುರಸ್ತಿಗೆ ₹3.50 ಲಕ್ಷ,
ಬಿದನಗೆರೆ ಅಂಗನವಾಡಿ ಶೌಚಾಲಯ ನಿರ್ಮಾಣಕ್ಕೆ ₹1 ಲಕ್ಷ, ಅನುದಾನಿತ ಶಾಲೆಗಳ ಕಟ್ಟಡ ದುರಸ್ತಿ ಮತ್ತು ಶೌಚಾಲಯ ನಿರ್ಮಾಣಕ್ಕೆ ಹಣ ಬಳಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.