ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಭರವಸೆ

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 4:17 IST
Last Updated 8 ಸೆಪ್ಟೆಂಬರ್ 2021, 4:17 IST
ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ವೆಂಕಟರಮಣಪ್ಪ ಉದ್ಘಾಟಿಸಿದರು
ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ವೆಂಕಟರಮಣಪ್ಪ ಉದ್ಘಾಟಿಸಿದರು   

ಪಾವಗಡ: ಕೋವಿಡ್ ಸಂಕಷ್ಟದಲ್ಲಿ ಸುರಕ್ಷತೆಯೊಂದಿಗೆ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ತಾಲ್ಲೂಕಿನ ಪಳವಳ್ಳಿ ಗ್ರಾಮದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಮೊದಲನೇ, ಎರಡನೇ ಅಲೆಗಳಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ಸರ್ಕಾರದ್ದು. ವಸತಿ ಶಾಲೆಗಳಿಂದ ತಳ ಸಮುದಾಯ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದರು.

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ ಪಡೆಯಲು ಪಟ್ಟ ಕಷ್ಟ ಈಗಿನ ಮಕ್ಕಳಿಗಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ಸವಲತ್ತು ಕೊಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಇಲಾಖೆ ನೀಡಿ ಅನುಕೂಲ ಮಾಡಿದೆ. ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಕೊಡಿಸಲು ಶ್ರಮಿಸಲಾಗುವುದು. ಇಲಾಖೆ ನೀಡುವ ವಿವಿಧ ಯೋಜನೆಗಳನ್ನು ಬಳಸಿಕೊಂಡು ಸಮುದಾಯದವರು ಅಭಿವೃದ್ಧಿಯಾಗಬೇಕು. ಎಲ್ಲ ತಳ ಸಮುದಾಯದವರು ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಏಳಿಗೆ ಸಾಧಿಸಬೇಕು ಎಂದರು.

ಶಾಸಕ ವೆಂಕಟರಮಣಪ್ಪ, ತಾಲ್ಲೂಕಿನಲ್ಲಿ ವಸತಿ ಶಾಲೆಗಳು ನಿರ್ಮಾಣವಾಗಿದ್ದು, ಇದರಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಿದೆ. ಶಿಕ್ಷಣ ಕೊಡಿಸಲು ಸಾಧ್ಯವಾಗದ ಹಿಂದುಳಿದ ವರ್ಗಗಳ ಜನರಿಗೆ ವಸತಿ ಶಾಲೆಗಳು ಆಸರೆಯಾಗಿವೆ ಎಂದರು.

ವಾಲ್ಮೀಕಿ ಆಶ್ರಮದ ಸಂಜಯ ಕುಮಾರ ಸ್ವಾಮೀಜಿ ಮಾತನಾಡಿದರು. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಕಾಂತರಾಜು, ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ, ಪಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ, ಉಪಾಧ್ಯಕ್ಷೆ ಗೌರಮ್ಮ, ಪ್ರಾಂಶುಪಾಲರಾದ ಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.