ADVERTISEMENT

80,000 ಡೋಸ್ ಲಸಿಕೆ ಲಭ್ಯ- ಜಿಲ್ಲೆಯಲ್ಲಿ ಇಂದು ಲಸಿಕಾ ಮಹಾಮೇಳ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 13:47 IST
Last Updated 15 ಸೆಪ್ಟೆಂಬರ್ 2021, 13:47 IST

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಚುರುಕು ನೀಡಲಾಗಿದ್ದು, ಸೆ. 17ರಂದು ಲಸಿಕಾ ಮಹಾಮೇಳ ನಡೆಯಲಿದೆ. ಅಂದು ಜಿಲ್ಲೆಯಲ್ಲಿ 80 ಸಾವಿರ ಡೋಸ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ 300 ಕೇಂದ್ರಗಳಲ್ಲಿ 80 ಸಾವಿರ ಡೋಸ್‌ ಲಸಿಕೆ ಹಾಕಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದುವರೆಗೂ ಲಸಿಕೆ ಪಡೆಯದವರು ನಿರ್ಲಕ್ಷ್ಯ ತೋರದೆ ಲಸಿಕೆ ಪಡೆಯಬೇಕು ಎಂದರು.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 10,02,762 ಮಂದಿಗೆ ಲಸಿಕೆ ಹಾಕುವು ಗುರಿಯಿದ್ದು, ಈಗಾಗಲೇ 8,47,940 (ಶೇ 84.6) ಮಂದಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. 18 ವರ್ಷ ಮೇಲ್ಪಟ್ಟ ಲಸಿಕೆ ಹಾಕುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ. 3,45,558 (ಶೇ 34.50) ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯಲ್ಲಿ 1,54,822 ಮಂದಿಗೆ ಮೊದಲ ಡೋಸ್ ಹಾಕುವುದು ಬಾಕಿ ಇದ್ದು, ಮೊದಲ ಡೋಸ್ ಪಡೆದು 84 ದಿನಗಳಾಗಿರುವ 33,866 ಮಂದಿಗೆ ಎರಡನೇ ಡೋಸ್ ಹಾಕುವುದು ಬಾಕಿ ಇದೆ. ಒಟ್ಟು 1,88,688 ಮಂದಿಗೆ ಲಸಿಕೆ ನೀಡಬೇಕಾಗಿದ್ದು, ಅವರಲ್ಲಿ 80,000 ಮಂದಿಗೆ ಒಂದೇ ದಿನ 17ರಂದು ನಡೆಯುವ ಮಹಾಮೇಳದಲ್ಲಿ ಲಸಿಕೆ ಹಾಕುವ ಗುರಿ ಇದೆ. ಸಂಘ-ಸಂಸ್ಥೆಗಳು ಲಸಿಕಾ ಅಭಿಯಾನಕ್ಕೆ ಕೈಜೋಡಿಸಬೇಕು. ಇದುವರೆಗೂ ಲಸಿಕೆ ಪಡೆಯದವರ ಮನವೊಲಿಸಿ ಲಸಿಕಾ ಕೇಂದ್ರಗಳಿಗೆ ಕರೆತರಬೇಕು. ಈ ಮೂಲಕ ಜಿಲ್ಲೆಯಲ್ಲಿ ಕೊವೀಡ್ 3ನೇ ಅಲೆ ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.

ಗ್ರಾಮಗಳಲ್ಲಿ ಲಸಿಕಾ ಉಸ್ತುವಾರಿ:ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಎಲ್ಲರಲ್ಲೂ ಮಾಹಿತಿ ಇಲ್ಲದ ಕಾರಣ ಲಸಿಕಾ ಕಾರ್ಯ ಪೂರ್ಣವಾಗಿಲ್ಲ. ಅನಾರೋಗ್ಯ ಪೀಡಿತರು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಅಭಿಯಾನಕ್ಕೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ100-200 ಮನೆಗಳಿಗೆ ಒಬ್ಬರಂತೆ ಲಲಿಕಾ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಲಸಿಕೆ ಪಡೆಯದವರ ಪಟ್ಟಿ ಮಾಡಿ, ಲಸಿಕೆ ನೀಡುವ ಹೊಣೆಗಾರಿಕೆಯನ್ನು ಉಸ್ತುವಾರಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಹೇಳಿದರು.

ಇಂದು ಫೋನ್ ಇನ್ ಕಾರ್ಯಕ್ರಮ

ಕೋವಿಡ್ ಲಸಿಕೆ ಸಂಬಂಧ ಸೆ. 16ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಜಿಲ್ಲಾಡಳಿತದಿಂದ ಫೋನ್‌ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಅಶ್ವಿನಿ ಕುಮಾರ್ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಗೊಂದಲಗಳು, ಸಂಶಯಗಳು ಹಾಗೂ ಪ್ರಶ್ನೆಗಳಿದ್ದರೆ ಕರೆಮಾಡಿ ನಿವಾರಿಸಿಕೊಳ್ಳಬಹುದು. 9663957222 ಕರೆ ಮಾಡಬಹುದು.

ಕುಂದಾಪುರ ತಾಲ್ಲೂಕಿನ ಕಾವ್ರಾಡಿ, ಬಳ್ಕೂರು ಹಾಗೂ ಬ್ರಹ್ಮಾವರ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೇ 100ರಷ್ಟು ಮೊದಲ ಡೋಸ್ ಲಸಿಕೆ ಗುರಿ ಸಾಧಿಸಲಾಗಿದೆ. ಪಂಚಾಯಿತಿಗಳು ಉತ್ಸುಕತೆಯಿಂದ ಲಸಿಕಾ ಅಭಿಯಾನದಲ್ಲಿ ಭಾಗವಹಿಸುತ್ತಿವೆ. ಮಹಾ ಮೇಳದಲ್ಲಿ ಗಡಿ ಗ್ರಾಮಗಳಲ್ಲಿ ಆದ್ಯತೆಯ ಮೇಲೆ ಲಸಿಕೆ ಹಾಕಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.