ADVERTISEMENT

ಎಸ್‌ಸಿಪಿ ಟಿಎಸ್‌ಪಿ ಹಣ ದುರ್ಬಳಕೆ: ವಿಶ್ವನಾಥ್ ಪೇತ್ರಿ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 16:31 IST
Last Updated 20 ಮಾರ್ಚ್ 2023, 16:31 IST

ಉಡುಪಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರಿಸಿರುವ ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿ ಇತರ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ದಲಿತ ಸಮುದಾಯಕ್ಕೆ ಅನ್ಯಾಯ ಎಸಗಲಾಗುತ್ತಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ್ ಪೇತ್ರಿ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ಸಿ ಎಸ್‌ಟಿ ಸಮುದಾಯದ ಬಹುಪಾಲು ಜನರು ಇಂದಿಗೂ ಸ್ವಂತ ಸೂರು ಹೊಂದಿಲ್ಲ. ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಂಬೇಡ್ಕರ್ ಆವಾಸ್ ಯೋಜನೆಯಡಿ ಮನೆಯ ನಿರ್ಮಾಣಕ್ಕೆ ₹ 7 ಲಕ್ಷ ನೀಡುವುದಾಗಿ ಘೋಷಿಸಿದ್ದರೂ ಇಂದಿಗೂ ಕಾರ್ಯಗತವಾಗಿಲ್ಲ. ಎಸ್‌ಸಿ ಎಸ್‌ಟಿ ಜನರು ಮನೆ ನಿರ್ಮಾಣಕ್ಕಾಗಿ ಪಂಚಾಯಿತಿಗಳಿಗೆ ಅರ್ಜಿ ಹಾಕಿ ವರ್ಷಗಳು ಕಳೆದರೂ ಪ್ರಯೋಜನವಾಗಿಲ್ಲ. ₹ 7 ಲಕ್ಷ ಸಹಾಯಧನ ನೀಡುವ ಆದೇಶ ಅಧಿಕೃತವಾಗಿ ಅನುಷ್ಠಾನವಾಗಬೇಕು.

ADVERTISEMENT

ಇಲ್ಲವಾದರೆ ಮಾರ್ಚ್‌ 26ರಂದು ಬೆಳಿಗ್ಗೆ 10 ಗಂಟೆಗೆ ಕೋಟ ಶ್ರೀನಿವಾಸ ಪೂಜಾರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಂದು ವಿಧಾನಸಭಾ ಕ್ಷೇತ್ರಕ್ಕೆ 5 ರಿಂದ 10 ಆಟೋ ರಿಕ್ಷಾಗಳನ್ನು ಎಸ್‌ಸಿ ಎಸ್‌ಟಿ ಫಲಾನುಭವಿಗಳಿಗೆ ನೀಡಿದರೆ ಸಮುದಾಯ ದುಡಿದು ಆರ್ಥಿಕ ಸ್ವಾವಲಂಬನೆ ಸಾಧಿಸಲಿದೆ. ಇದಕ್ಕೆ ವಿರುದ್ಧವಾಗಿ ಚುನಾವಣಾ ದೃಷ್ಟಿಯಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಎಸ್‌ಸಿಪಿ ಟಿಎಸ್‌ಪಿ ಅನುದಾನ ಬಳಸಿಕೊಂಡು ಒಂದು ಕ್ಷೇತ್ರಕ್ಕೆ ನೂರು ಸ್ಕೂಟರ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೊಳವೆಬಾವಿ ಕೊರೆಸಲು ₹ 8 ಲಕ್ಷ ಸಹಾಯಧನ ನಿಗಧಿಪಡಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಂಚಿಕೆ ಮಾಡದೆ ಗುತ್ತಿಗೆದಾರರಿಗೆ ಕೊಟ್ಟು ಕಾಮಗಾರಿ ನಡೆಸಲಾಗುತ್ತಿದೆ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಮತಾ ಸೈನಿಕ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಘ್ನೇಶ್‌ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಭೀಮ್ ಆರ್ಮಿ ಅಧ್ಯಕ್ಷ ಪ್ರಕಾಶ್ ಹೆರೂರು, ಹೆಬ್ರಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.