ADVERTISEMENT

ಗೋಕರ್ಣ: ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 16:33 IST
Last Updated 19 ಆಗಸ್ಟ್ 2022, 16:33 IST
ಗೋಕರ್ಣದ ರಥಬೀದಿಯ ರಸ್ತೆಯಲ್ಲಿ ಭಜನಾಧಾರಿಗಳು ದೇವರಿಗೆ ನಮನ ಸಲ್ಲಿಸಿದರು
ಗೋಕರ್ಣದ ರಥಬೀದಿಯ ರಸ್ತೆಯಲ್ಲಿ ಭಜನಾಧಾರಿಗಳು ದೇವರಿಗೆ ನಮನ ಸಲ್ಲಿಸಿದರು   

ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗುರುವಾರ ರಾತ್ರಿ ಮತ್ತು ಶುಕ್ರವಾರ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜನರು ಪೂಜೆ ಸಲ್ಲಿಸಿದರು. ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ಮಧ್ಯರಾತ್ರಿ 12 ಗಂಟೆಗೆ ಬಾಲಕೃಷ್ಣನ ಬೆಳ್ಳಿಯ ಮೂರ್ತಿಯನ್ನು ಬೆಳ್ಳಿಯ ತೊಟ್ಟಿಲಲ್ಲಿ ಇಟ್ಟು ತೂಗಲಾಯಿತು. ಒಂದು ವಾರದಿಂದ ನಡೆಯುತ್ತಿರುವ ಭಜನಾ ಸಪ್ತಾಹ ಮುಕ್ತಾಯ ಗೊಳಿಸಲಾಯಿತು.

ಅದರ ಅಂಗವಾಗಿ ದೇವಸ್ಥಾನದ ಎದುರುಗಡೆ ಮೊಸರು ಕುಡಿಕೆಯನ್ನು ಒಡೆಯಲಾಯಿತು. ಭಜನಾಧಾರಿಗಳು ದೇವಸ್ಥಾನದ ಎದುರುಗಡೆ ಮಂಡಿ ಊರಿ ಕುಳಿತು, ದೇವರಿಗೆ 108 ನಮನ ಸಲ್ಲಿಸಿದ್ದು ಆಕರ್ಷಕವಾಗಿ ಕಂಡು ಬಂತು. ನಂತರ ಭಕ್ತಾಧಿಗಳು ಊರಿನ ಮುಖ್ಯ ರಸ್ತೆಗಳಲೆಲ್ಲಾ ಭಜನೆ ಮಾಡುತ್ತಾ ಸಂಚರಿಸಿ ಕೃತಾರ್ಥರಾದರು. ಈ ಭಜನಾ ಸಪ್ತಾಹದಲ್ಲಿ ಎಲ್ಲಾ ಜಾತಿಯ ಜನಾಂಗದವರೂ ಪಾಲ್ಗೊಳ್ಳುತ್ತಾರೆ. ಈ ಪದ್ಧತಿ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದ್ದು ಇಂದಿಗೂ ಆಚರಣೆ ಮಾಡುತ್ತಿರುವುದು ಬಹಳ ವಿಶೇಷವಾಗಿದೆ. ಮಹಾಬಲೇಶ್ವರ ದೇವರ ಉತ್ಸವ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನ ತಲುಪಿ ಬಂತು. ಈ ವೇಳೆ ದಾರಿಯುದ್ದಕ್ಕೂ ಮೊಸರುಕುಡಿಕೆ ಒಡೆಯಲಾಯಿತು.

ಕೇಳದ ಪೆಟ್ಲೆ ಶಬ್ದ: ಕೃಷ್ಣಾಷ್ಟಮಿ ಹಬ್ಬದ ದಿವಸ ಪೆಟ್ಲೆ ಹೊಡೆಯುವುದು ಅನಾದಿ ಕಾಲದಿಂದ ನಡೆದು ಬಂದ ಪದ್ಧತಿ. ಆದರೆ ಈ ವರ್ಷ ಪೆಟ್ಲೆ ಅಂಡೆಗೆ ಉಪಯೋಗಿಸುವ ಜುಮ್ಮನ ಕಾಳು ಇನ್ನೂ ಆಗದಿರುವುದರಿಂದ ಮಕ್ಕಳು ಈ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.