ADVERTISEMENT

ಉತ್ತರ ಕನ್ನಡ | ಚೆಂಡೆಗೂ ‘ತಾರಾ ಮೌಲ್ಯ’ ನೀಡಿದ ವಾದಕ

ಯಕ್ಷಗಾನದ ವಿವಿಧ ವಿಭಾಗಗಳ ಸಾಧಕ

ಎಂ.ಜಿ.ಹೆಗಡೆ
Published 25 ಏಪ್ರಿಲ್ 2020, 19:45 IST
Last Updated 25 ಏಪ್ರಿಲ್ 2020, 19:45 IST
ಕೃಷ್ಣ ಯಾಜಿ ಮಾವಿನಕೆರೆ
ಕೃಷ್ಣ ಯಾಜಿ ಮಾವಿನಕೆರೆ   

ಹೊನ್ನಾವರ: ಕಿವಿಗಡಚಿಕ್ಕುವ ಯಕ್ಷಗಾನದ ಚೆಂಡೆಯ ಶಬ್ದಕ್ಕೆ ಲಾಲಿತ್ಯ ತುಂಬಿದ ಶ್ರೇಯಸ್ಸು, ಕೃಷ್ಣ ಯಾಜಿ ಅವರಿಗೆ ಸಲ್ಲುತ್ತದೆ. ಪುರುಷ ವೇಷದ ಹೆಜ್ಜೆಗೆ ಮಾತ್ರ ಸೀಮಿತವಾಗಿದ್ದ ಚೆಂಡೆಯನ್ನು ಸ್ತ್ರೀವೇಷದ ಕುಣಿತಕ್ಕೂ ಅಳವಡಿಸಿದ ಹೆಗ್ಗಳಿಕೆ ಅವರದ್ದು.

ಇದೇ ಕಾರಣಕ್ಕೆ ಕೃಷ್ಣ ಯಾಜಿ ಅವರ ಚೆಂಡೆ, ಪ್ರಸಿದ್ಧ ಸ್ತ್ರೀ ವೇಷಧಾರಿ ಮಂಟಪ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಕಲಾ ಪ್ರದರ್ಶನದ ಅವಿಭಾಜ್ಯ ಅಂಗವಾಯಿತು. ಪ್ರೊ.ಗೋಪಾಲಕೃಷ್ಣ ಹೆಗಡೆ ನೇತೃತ್ವದ ಹಿಂದುಸ್ಥಾನಿ ಸಂಗೀತವನ್ನು ಒಳಗೊಂಡ ವಿವಿಧ ಕಲಾಪ್ರಕಾರಗಳ ಸಮ್ಮಿಳನದ ಲಯ– ಲಾಸ್ಯ ಪ್ರದರ್ಶನದಲ್ಲಿ ಯಾಜಿ ಅವರ ಚಂಡೆ ವಾದನ ಪ್ರಧಾನ ಆಕರ್ಷಣೆಯಾಗಿ ಮೂಡಿ ಬಂದಿತು.

ಚೆಂಡೆ ವಾದನಕ್ಕೆ ಹೊಸ ರೂಪ ಕೊಟ್ಟಅವರು, ಕಲೆಯ ಸಾಂಪ್ರದಾಯಿಕತೆಗೆ ಅಪಚಾರ ಎಸಗಿದವರಲ್ಲ. ಯಾಜಿ ಕಲಾವಿದರ ಮಾತಿನ ನಡುವಿನ ಹೆಜ್ಜೆಗೆ ತಮ್ಮ ಚಂಡೆಯ ಪೆಟ್ಟಿನ ಮೂಲಕ ಇನ್ನಷ್ಟು ಜೀವ ತುಂಬಬಲ್ಲವರಾಗಿದ್ದರು. ತಾಳಮದ್ದಲೆಯಲ್ಲೂ ಚೆಂಡೆಗೆ ಬೇಡಿಕೆ ಬರುವಂತೆ ಮಾಡಿದರು.

ADVERTISEMENT

ಇಡಗುಂಜಿ ಸಮೀಪದ ಮಾವಿನಕೆರೆಯಲ್ಲಿ ಗೋವಿಂದ ಹಾಗೂ ಹೊನ್ನಮ್ಮ ಯಾಜಿ ಮಗನಾಗಿ 1946ರಲ್ಲಿ ಜನಿಸಿದಕೃಷ್ಣ, ಶಾಲಾ ವಿದ್ಯಾಭ್ಯಾಸ ಕಲಿತದ್ದು ಏಳನೇ ತರಗತಿ ಮಾತ್ರ. ಯಕ್ಷಗಾನ ಕಲಾವಿದರ ಕುಟುಂಬದ ಅವರು ಬಾಲ್ಯದಿಂದಲೇ ಯಕ್ಷಗಾನದ ಕಡೆಗೆ ಒಲವು ತೋರಿದರು. ಮೊದಲು ಬಣ್ಣ ಹಚ್ಚಿ ಮುಮ್ಮೇಳದಲ್ಲಿ ಕಾಣಿಸಿಕೊಂಡ ಅವರು,ಬಳಿಕಹಿಮ್ಮೇಳದತ್ತ ಆಸಕ್ತಿ ತೋರಿದರು.

ಮೊದಲು ಉತ್ತಮ ಮದ್ದಲೆ ವಾದಕರಾಗಿದ್ದರು.ಕಿನ್ನೀರು ನಾರಾಯಣ ಹೆಗಡೆ ಅವರಿಗೆ ಮದ್ದಲೆ ಗುರು. ನಂತರ ಯಾಜಿ ಅವರು ಗುಂಡ್ಮಿ ರಾಮಚಂದ್ರ ನಾವಡ ಅವರ ಶಿಷ್ಯರಾಗಿ ಮದ್ದಲೆ ಹಾಗೂ ಚೆಂಡೆ ವಾದನದಲ್ಲಿ ತರಬೇತಿ ಪಡೆದರು. ಮೃದು ಸ್ವಭಾವದವರಾಗಿದ್ದ ಕೃಷ್ಣ ಯಾಜಿ, ತಿಳಿ ಹಾಸ್ಯ ಹಾಗೂ ಮಿತ ಭಾಷೆ ರೂಢಿಸಿಕೊಂಡಿದ್ದರು. ಆಪ್ತರ ವಲಯದಲ್ಲಿ ‘ಕುಟ್ಟು ಯಾಜಿ’ ಎಂದು ಗುರುತಿಸಿಕೊಂಡಿದ್ದರು.

ಐದು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನದೊಂದಿಗೆ ಬಾಳ್ವೆ ನಡೆಸಿದ ಅವರು, ಗುಂಡಬಾಳ, ಗುಂಡಿಬೈಲ್, ಇಡಗುಂಜಿ, ಕರ್ಕಿ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮುಲ್ಕಿ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದೇಶ– ವಿದೇಶಗಳಲ್ಲಿ ಅವರ ಚೆಂಡೆ ವಾದನ ಮೊಳಗಿದೆ.

ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಸೇರಿದಂತೆ ವಿವಿಧ ಪ್ರಶಸ್ತಿಗಳು ಅವರಿಗೆ ಸಂದಿವೆ. ಇತ್ತೀಚೆಗಷ್ಟೇ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗಿತ್ತು.

ಅಂತ್ಯಕ್ರಿಯೆ:ಹೃದಯಾಘಾತದಿಂದ ಶುಕ್ರವಾರ ನಿಧನರಾದ ಕೃಷ್ಣ ಯಾಜಿ ಅವರ ಅಂತ್ಯಕ್ರಿಯೆಯು, ಮಾವಿನಕೆರೆಯಲ್ಲಿ ಶನಿವಾರ ನಡೆಯಿತು. ಲಾಕ್‌ಡೌನ್ ಕಾರಣದಿಂದ ಅವರ ಹಲವಾರು ಅಭಿಮಾನಿಗಳಿಗೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕುಟುಂಬದ ಕೆಲವೇ ಸದಸ್ಯರ ಉಪಸ್ಥಿತಿಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.