ADVERTISEMENT

ಹಂಪಿ ಗೈಡ್‌ಗಳಿಗೆ ಸುಧಾಮೂರ್ತಿ ನೆರವು, ಮಾರ್ಗದರ್ಶಿಗಳ ಖಾತೆಗೆ ತಲಾ ₹10 ಸಾವಿರ

ನೂರು ಜನ ಮಾರ್ಗದರ್ಶಿಗಳ ಖಾತೆಗೆ ತಲಾ ₹10,000 ಜಮೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಮೇ 2021, 20:03 IST
Last Updated 18 ಮೇ 2021, 20:03 IST
ಸುಧಾಮೂರ್ತಿ
ಸುಧಾಮೂರ್ತಿ   

ಹೊಸಪೇಟೆ (ವಿಜಯನಗರ): ಕೆಲಸವಿಲ್ಲದೆ ಸಂಕಷ್ಟದಲ್ಲಿ ದಿನ ದೂಡುತ್ತಿದ್ದ ವಿಶ್ವಪ್ರಸಿದ್ಧ ಹಂಪಿಯ ಗೈಡ್‌ಗಳಿಗೆ ಇನ್ಫೊಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ಆರ್ಥಿಕ ನೆರವು ನೀಡಿದ್ದಾರೆ.

ನೂರು ಗೈಡ್‌ಗಳ ಖಾತೆಗೆ ನೇರವಾಗಿ ತಲಾ ₹10,000 ಹಣ ವರ್ಗಾವಣೆ ಮಾಡಿದ್ದಾರೆ. ಹೋದ ವರ್ಷ ಕೋವಿಡ್‌ನಿಂದ ಹಂಪಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಾಗಲೂ ಅವರು ಪ್ರವಾಸಿ ಮಾರ್ಗದರ್ಶಿಗಳ ನೆರವಿಗೆ ಧಾವಿಸಿದ್ದರು.

ಹಿಂದಿನ ವರ್ಷ ಕೋವಿಡ್‌ ಲಾಕ್‌ಡೌನ್‌ ಘೋಷಿಸಿದಾಗ ಗೈಡ್‌ಗಳು ಕೆಲಸ ಕಳೆದುಕೊಂಡಿದ್ದರು. ಕೋವಿಡ್‌ ಪ್ರಕರಣಗಳ ಸಂಖ್ಯೆ ತಗ್ಗಿದಾಗ ಪ್ರವಾಸೋದ್ಯಮ ಚೇತರಿಕೆ ಕಾಣಲಾರಂಭಿಸಿತು. ಡಿಸೆಂಬರ್‌, ಜನವರಿಯಲ್ಲಿ ಪ್ರವಾಸಿಗರು ಹಂಪಿಗೆ ಬರಲಾರಂಭಿಸಿದರು. ಫೆಬ್ರುವರಿಯಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿತು. ನಂತರದ ದಿನಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಂಪಿಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಯಿತು. ಗೈಡ್‌ಗಳು ಕೆಲಸವಿಲ್ಲದೆ ಕೂರುವಂತಾಯಿತು.

ADVERTISEMENT

ಅನೇಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಸೇರಿದರು. ಮತ್ತೆ ಕೆಲವರು ತರಕಾರಿ, ಹಣ್ಣು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಆದರೆ, ಹೆಚ್ಚಿನವರಿಗೆ ಗೈಡ್‌ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲದೆ ಅನಿವಾರ್ಯವಾಗಿ ಮನೆಯಲ್ಲಿ ಕೂತಿದ್ದರು. ಅವರಿಗೆ ಈ ನೆರವು ಈಗ ಆಸರೆಯಾಗಿದೆ.

‘ನಮ್ಮಲ್ಲಿ ಬಹುತೇಕ ಮಂದಿ ಆಯಾ ದಿನ ಗೈಡ್‌ ಮಾಡಿ ಸಿಗುವ ಹಣದಿಂದಲೇ ಜೀವನ ಸಾಗಿಸುತ್ತಾರೆ. ಈಗ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸುಧಾಮೂರ್ತಿ ಅವರು ನೆರವು ನೀಡಿರುವುದರಿಂದ 2–3 ತಿಂಗಳು ಹೇಗೋ ಜೀವನ ನಡೆಸಬಹುದು’ ಎಂದು ಗೈಡ್‌ಗಳಾದ ಗೋಪಾಲ್‌, ವಿಶ್ವನಾಥ ಮಾಳಗಿ ತಿಳಿಸಿದ್ದಾರೆ.

‘ಸುಧಾಮೂರ್ತಿ ಅವರಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ವಿಶೇಷ ಒಲವು ಇದೆ. ಗೈಡ್‌ಗಳನ್ನು ಅದರ ಭಾಗವೆಂದು ಪರಿಗಣಿಸಿ ನೆರವು ನೀಡಿದ್ದಾರೆ. ನಮಗೆ ಕೊಟ್ಟಿರುವ ಆರ್ಥಿಕ ನೆರವಿನಲ್ಲಿ ಸ್ವಲ್ಪ ಹಣ ತೆಗೆದಿಟ್ಟು, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪಠ್ಯಪುಸ್ತಕ, ನೋಟ್‌ ಬುಕ್‌ ವಿತರಿಸಲು ಯೋಚಿಸಲಾಗಿದೆ’ ಎಂದು ಹೇಳಿದ್ದಾರೆ.

‘ಸರ್ಕಾರವು ಬೀದಿ ಬದಿ ವ್ಯಾಪಾರಿಗಳು, ಆಟೊ, ಕ್ಯಾಬ್‌ ಚಾಲಕರಿಗೆ ಆರ್ಥಿಕ ನೆರವು ನೀಡಿದೆ. ಆದರೆ, ಅವರಿಗೆ ರಾಜ್ಯದಲ್ಲಿರುವ ನೂರಾರು ಗೈಡ್‌ಗಳೇಕೆ ಕಾಣಿಸುತ್ತಿಲ್ಲ? ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಗೈಡ್‌ಗಳ ಪಾತ್ರವೂ ಮುಖ್ಯ. ಆದರೆ, ಸರ್ಕಾರ ನಮ್ಮನ್ನು ಪರಿಗಣಿಸಿಯೇ ಇಲ್ಲ’ ಎಂದು ಗೈಡ್‌ ಹುಸೇನ್‌ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಮಾಹಿತಿಗೆ ಸುಧಾಮೂರ್ತಿ ಅವರನ್ನು ಸಂಪರ್ಕಿಸಿದಾಗ ಅವರು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.