ADVERTISEMENT

ಸಿಇಟಿ: ಅತ್ಯುನ್ನತ ರ‍್ಯಾಂಕ್‌ಗೆ ಸಿದ್ಧತೆ ಹೀಗಿರಲಿ..

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದ್ವಿತೀಯ ಪಿಯು ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ರ‍್ಯಾಂಕ್ ಗಳಿಸಬೇಕು. ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಆಸಕ್ತಿಯ ಕೋರ್ಸ್‌ಗೆ ಸೀಟು ಸಿಗಬೇಕು ಎಂದರೆ ಸಿಇಟಿ ರ‍್ಯಾಂಕ್ ಸಹ ಅತ್ಯುನ್ನತವಾಗಿರಬೇಕು. ಉನ್ನತ ಶಿಕ್ಷಣದ ಬಗೆಗಿನ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಿಇಟಿ ಒಂದು ಮಹತ್ವದ ಪರೀಕ್ಷೆ. ಸೂಕ್ತ ಪೂರ್ವಸಿದ್ಧತೆ ಮತ್ತು ನಿರಂತರ ಅಧ್ಯಯನದೊಂದಿಗೆ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಬಹುದು. ಅದಕ್ಕೆ ಪೂರಕವಾಗಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

1. ಪಠ್ಯಕ್ರಮ ತಿಳಿದುಕೊಳ್ಳಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಯುಜಿಸಿಇಟಿ-2021ಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಆಧರಿಸಿ ಸಿಇಟಿ ಪ್ರಶ್ನೆಗಳನ್ನು ಕೇಳುವುದರಿಂದ ವಿದ್ಯಾರ್ಥಿಗಳು ಈ ಪಠ್ಯಕ್ರಮವನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಸಿದ್ಧತೆ ಮಾಡಬೇಕು. ಹಿಂದಿನ ಶೈಕ್ಷಣಿಕ ವರ್ಷದ ಪ್ರಥಮ ಮತ್ತು ದ್ವಿತೀಯ ಪಿಯು ಪಠ್ಯಕ್ರಮವನ್ನು ಶೇ 30ರಷ್ಟು ಕಡಿತಗೊಳಿಸಲಾಗಿತ್ತು. ಇನ್ನುಳಿದ ಶೇ 70ರಷ್ಟು ಪಠ್ಯಕ್ರಮ ಮತ್ತು ಸಿಇಟಿ ಪಠ್ಯಕ್ರಮ ಎರಡೂ ಒಂದೇ ಆಗಿವೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.

2. ಪಠ್ಯಪುಸ್ತಕ ಜತೆಗಿರಲಿ: ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುವುದು ವಿಷಯವಾರು ಪಠ್ಯಪುಸ್ತಕಗಳು ಮತ್ತು ನೀವೇ ತಯಾರು ಮಾಡಿರುವ ಕಿರು ಟಿಪ್ಪಣಿ. ಇವುಗಳನ್ನು ಸಾಕಷ್ಟು ಬಾರಿ ಅಭ್ಯಾಸ (ಓದುವುದು, ಬರೆಯುವುದು) ಮಾಡುವುದರಿಂದ ನಿರ್ದಿಷ್ಟ ವಿಷಯದ ಬಗೆಗಿನ ಎಲ್ಲಾ ವಿವರಗಳೂ (ಉದಾ: ಗಣಿತದ ಸೂತ್ರಗಳು, ಜೀವಶಾಸ್ತ್ರದಲ್ಲಿನ ವಿವಿಧ ಚಿತ್ರಗಳು, ರಸಾಯನಶಾಸ್ತ್ರದಲ್ಲಿನ ರಾಸಾಯನಿಕ ಕ್ರಿಯೆಗಳು ಮತ್ತು ವಿವಿಧ ಹೆಸರಿನ ಕ್ರಿಯೆಗಳು) ನಿಮ್ಮ ನೆನಪಿನಲ್ಲಿ ಉಳಿಯುತ್ತವೆ. ಆರಂಭದಲ್ಲಿ ವಿವರವಾದ ನೋಟ್ಸ್ ಅನುಸರಿಸಿ. ಪರೀಕ್ಷೆ ಸಮೀಪಿಸುತ್ತಿರುವಾಗ ನೀವೇ ತಯಾರಿಸಿಕೊಂಡ ಕಿರು ಟಿಪ್ಪಣಿಗಳನ್ನು ಅಭ್ಯಸಿಸಿ.

ADVERTISEMENT

3. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು: ಹಿಂದಿನ ಕನಿಷ್ಠ ಐದು ವರ್ಷಗಳ ಸಿಇಟಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಸಿಸಿ. ಪ್ರಶ್ನೆಪತ್ರಿಕೆ ವಿನ್ಯಾಸ, ಯಾವ ಪಾಠದ ಯಾವ ವಿಷಯದಿಂದ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗಿದೆ ಮತ್ತು ಯಾವೆಲ್ಲ ಪರಿಕಲ್ಪನೆಗಳು ಅತ್ಯಂತ ಮುಖ್ಯವಾದುವು ಎಂಬುದು ಇದರಿಂದ ತಿಳಿಯುತ್ತದೆ. ಅಲ್ಲದೆ ಪ್ರತಿಯೊಂದು ಪಾಠದಿಂದ ಎಷ್ಟು ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದರ ಸ್ಥೂಲ ಚಿತ್ರಣ ದೊರೆಯುತ್ತದೆ. ನಿಮ್ಮ ಅಧ್ಯಯನದಲ್ಲಿ ಯಾವ ಪಾಠಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕು, ಎಷ್ಟು ಪರಿಶ್ರಮ ಹಾಕಬೇಕು ಎಂಬುದು ನಿಮಗೆ ಸ್ಪಷ್ಟವಾಗುತ್ತದೆ. ಇದರಿಂದ ನಿಮ್ಮ ಸಿಇಟಿ ಸಿದ್ಧತೆಗೆ ಸಾಕಷ್ಟು ಸಹಾಯವಾಗುತ್ತದೆ.

4. ಪ್ರಶ್ನೆಕೋಶ ಮರೆಯದಿರಿ: ಪ್ರತಿಯೊಂದು ಪಾಠಕ್ಕೂ ಪ್ರಶ್ನೆಕೋಶಗಳನ್ನು ತಯಾರಿಸಿಕೊಳ್ಳಿ. ಸಿಇಟಿಯ ಹಿಂದಿನ ಪ್ರಶ್ನೆಪತ್ರಿಕೆಗಳಷ್ಟೇ ಅಲ್ಲದೆ ಇನ್ನಿತರ ಪ್ರವೇಶ ಪರೀಕ್ಷೆಗಳು ಮತ್ತು ಅರ್ಹತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶಿಸಿ. ಪ್ರತಿ ಪಾಠದ ಮಾದರಿ ಪ್ರಶ್ನೆಗಳನ್ನು ಬಿಡಿಸಿ. ಒಂದೇ ಪರಿಕಲ್ಪನೆಯ ಮೇಲೆ ಯಾವ ರೀತಿ ವಿಭಿನ್ನ ಪ್ರಶ್ನೆಗಳನ್ನು (ಸರಳ, ಕಷ್ಟ, ಅತ್ಯಂತ ಕಠಿಣ) ಕೇಳಲಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ನಿಮ್ಮಲ್ಲಿ ಇರುವ ವಿಷಯ ಜ್ಞಾನವನ್ನೇ ವಿವಿಧ ಪ್ರಶ್ನೆಗಳಿಗೆ ಅನ್ವಯಿಸಬೇಕಾಗುತ್ತದೆ. ಹಾಗಾಗಿ ಅಭ್ಯಾಸದ ಸಂದರ್ಭದಲ್ಲಿ ಸಾಧ್ಯವಾದಷ್ಟು ಈ ಬಗ್ಗೆ ಒತ್ತು ನೀಡಿ.

5. ನಿರಂತರ ಅಣಕು ಪರೀಕ್ಷೆಗಳು: ಸಿಇಟಿ ತಯಾರಿಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಮತ್ತು ಸರಳ ತಂತ್ರ ಎಂದರೆ ನಿರಂತರವಾಗಿ ಅಣಕು ಪರೀಕ್ಷೆಗಳನ್ನು (ಮಾಕ್ ಟೆಸ್ಟ್) ಎದುರಿಸುವುದು. ಇದರಿಂದ ನಿಮ್ಮ ತಯಾರಿ ಯಾವ ಹಂತದಲ್ಲಿದೆ, ಯಾವ ವಿಷಯದಲ್ಲಿ ಇನ್ನಷ್ಟು ಶ್ರಮ ಹಾಕಬೇಕು, ಯಾವುದರಲ್ಲಿ ಪರಿಣತಿ ಸಾಧಿಸಿರುವಿರಿ, ಸಮಯ ನಿರ್ವಹಣೆ ಆಗುತ್ತಿದೆಯೋ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ. ಅಣಕು ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬಂದರೆ ಹತಾಶರಾಗುವ ಅಗತ್ಯವಿಲ್ಲ. ಯಾವ ಪ್ರಶ್ನೆಗಳಿಗೆ ಉತ್ತರ ತಪ್ಪಾಗಿದೆಯೋ ಅವುಗಳ ಸರಿ ಉತ್ತರ ತಿಳಿದುಕೊಂಡು ಅಧ್ಯಯನ ಮುಂದುವರಿಸಬೇಕು. ಅಂಕಗಳು ಎಷ್ಟೇ ಬರಲಿ, ಧೃತಿಗೆಡದೆ ನಿರಂತರವಾಗಿ ಅಣಕು ಪರೀಕ್ಷೆಗಳನ್ನು ಎದುರಿಸುವುದನ್ನು ಬಿಡಬಾರದು. ಇದರಿಂದ ಸಿಇಟಿ ಎದುರಿಸಲು ಅಗತ್ಯ ಆತ್ಮವಿಶ್ವಾಸ ದೊರೆಯುತ್ತದೆ.

6. ಸಮಯ ನಿರ್ವಹಣೆ ಮತ್ತು ಪುನರಾವರ್ತನೆ: ಅಧ್ಯಯನ ವೇಳಾಪಟ್ಟಿ ರಚಿಸಿಕೊಂಡು ವಿಷಯವಾರು ಸಮಯ ಹಂಚಿಕೆ ಮಾಡಿಕೊಳ್ಳಿ. ಆ ನಿರ್ದಿಷ್ಟ ಸಮಯದಲ್ಲಿ ಅದೇ ವಿಷಯದ ಅಧ್ಯಯನ ಮಾಡಿ. ಪ್ರತಿ ಪಾಠದ ಅಧ್ಯಯನದ ನಂತರ ಆ ಪಾಠಕ್ಕೆ ಸಂಬಂಧಿಸಿದ ಅಣಕು ಪರೀಕ್ಷೆ ಎದುರಿಸಿ. ಪ್ರತಿಯೊಂದು ಪ್ರಶ್ನೆಗೂ ಒಂದು ನಿಮಿಷದ ಸಮಯ ಮಿತಿಯೊಳಗೆ ಉತ್ತರಿಸಲು ಪ್ರಯತ್ನಿಸಿ.

ಸಾಧ್ಯವಾದಷ್ಟು ಗರಿಷ್ಠ ಪುನರಾವರ್ತನೆ ಮಾಡಿ. ಪುನರಾವರ್ತಿಸುವುದರಿಂದ ನಿಮ್ಮ ವಿಷಯ ಜ್ಞಾನ ಪರಿಪೂರ್ಣವಾಗುತ್ತದೆ.

ಯೂಟ್ಯೂಬ್ ಚಾನೆಲ್‌

ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು ಎಸ್‌ಸಿಎಚ್ ಫೌಂಡೇಷನ್ ಸಹಯೋಗದೊಂದಿಗೆ ಯೂಟ್ಯೂಬ್‌ನಲ್ಲಿ 38 ದಿನಗಳ ಸಿಇಟಿ ತರಬೇತಿಯನ್ನು ಆರಂಭಿಸಿದೆ. ಪ್ರಸ್ತುತ ತರಗತಿಗಳು ಮತ್ತು ಈವರೆಗೂ ನಡೆದ ತರಗತಿಗಳು ಲಭ್ಯವಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಹುತೇಕ ತರಗತಿಗಳನ್ನು ನಡೆಸಲಾಗಿದೆ. ಸದ್ಯದಲ್ಲೇ ಮಾದರಿ ಪ್ರಶ್ನೆಪತ್ರಿಕೆಗಳ ಕುರಿತ ತರಬೇತಿ ನಡೆಯಲಿದೆ. ಎಸ್‌ಸಿಎಚ್ ಫೌಂಡೇಷನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಎಲ್ಲ ತರಗತಿಗಳೂ ಲಭ್ಯ.

ಗೆಟ್‌ಸೆಟ್‌ಗೊ

ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಮತ್ತು ಜೆಇಇ ಪರೀಕ್ಷೆಗಳ ಸಿದ್ಧತೆಗೆ ಸಹಾಯವಾಗುವ ನಿಟ್ಟಿನಲ್ಲಿ GetCetGo App ಬಿಡುಗಡೆ ಮಾಡಿದೆ. ಇದರಲ್ಲಿ ಪುನರಾವರ್ತನೆ ವಿಡಿಯೊಗಳು, ವಿಷಯವಾರು ಸಾರಾಂಶ, ಅಭ್ಯಾಸ ಪ್ರಶ್ನೆಪತ್ರಿಕೆಗಳು, ಅಣಕು ಪರೀಕ್ಷೆಗಳು ಇದ್ದು, ನೋಂದಾಯಿತ ವಿದ್ಯಾರ್ಥಿಯ ವಿಶ್ಲೇಷಣಾ ವರದಿಯು ಸಹ ಲಭ್ಯ. ಇದನ್ನು ನಿಮ್ಮ ಸಿದ್ಧತೆಗೆ ಬಳಸಿಕೊಳ್ಳಬಹುದು. ಡೌನ್‌ಲೋಡ್ ಮಾಡಿಕೊಳ್ಳಲು https://play.google.com/store/apps/details?id=com.digilearn.karnatakacet.android ಲಿಂಕ್ ಬಳಸಿ.

ದೀಕ್ಷಾ

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ದೀಕ್ಷಾ ಆ್ಯಪ್ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಸಹ ಪಡೆಯಬಹುದು. ಇದರಲ್ಲಿಯೂ ಸಿಇಟಿ ಸಿದ್ಧತೆಗೆ ಬೇಕಾದ ಎಲ್ಲ ಸಂಪನ್ಮೂಲಗಳು ಲಭ್ಯ. https://play.google.com/store/apps/details?id=in.gov.diksha.app ಲಿಂಕ್ ಬಳಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದು.

(ಲೇಖಕ: ರಸಾಯನಶಾಸ್ತ್ರ ಉಪನ್ಯಾಸಕ,ಪ್ರಾರ್ಥನ ಪದವಿಪೂರ್ವ ಕಾಲೇಜು, ವಿಜಯಪುರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.