ADVERTISEMENT

ನಟಿ ಪ್ರತಿಮಾ ದೇವಿ ನಿಧನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:44 IST
Last Updated 6 ಏಪ್ರಿಲ್ 2021, 14:44 IST
ಪ್ರತಿಮಾ ದೇವಿ
ಪ್ರತಿಮಾ ದೇವಿ   

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಖ್ಯಾತ ನಿರ್ದೇಶಕ, ನಿರ್ಮಾಪಕ ದಿವಂಗತ ಶಂಕರ್‌ ಸಿಂಗ್‌ ಅವರ ಪತ್ನಿ ಪ್ರತಿಮಾ ದೇವಿ ಅವರು ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಖ್ಯಾತ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ಸಂಗ್ರಾಮ್‌ ಸಿಂಗ್‌, ಜಯರಾಜ್‌ ಸಿಂಗ್‌ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಇವರ ಮಕ್ಕಳು.

‘ಮಧ್ಯಾಹ್ನ ಊಟಕ್ಕೆ ಮೊದಲು ಕೆಲ ಕಾಲ ನಿದ್ದೆ ಮಾಡುವ ಅಭ್ಯಾಸ ಅಮ್ಮನಿಗಿತ್ತು. ಮಂಗಳವಾರ ಮಧ್ಯಾಹ್ನ ನಿದ್ದೆ ಮಾಡಿದ್ದರು. ಊಟಕ್ಕೆ ಕರೆಯಲು ಹೋದಾಗ ಎದ್ದೇಳಲಿಲ್ಲ. ವಯೋಸಹಜ ಸಾವು ಇದು. ಪ್ರಜ್ಞೆತಪ್ಪಿರಬಹುದೆಂದು ಆಸ್ಪತ್ರೆಗೂ ಕರೆದೊಯ್ದಿದ್ದೆವು. ಆದರೆ ನಿದ್ದೆ ಮಾಡುತ್ತಿರುವ ವೇಳೆಯೇ ಅವರು ಪ್ರಾಣಬಿಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು’ ಎಂದು ಮಗಳ ವಿಜಯಲಕ್ಷ್ಮಿ ಸಿಂಗ್‌ ಹೇಳಿದರು.

ADVERTISEMENT

ಉಡುಪಿ ಮೂಲದ ಪ್ರತಿಮಾ ದೇವಿ ಸಣ್ಣಪ್ರಾಯದಲ್ಲೇ ರಂಗಭೂಮಿಗೆ ಹೆಜ್ಜೆ ಇಟ್ಟಿದ್ದರು. ಇವರ ಮೂಲ ಹೆಸರು ಮೋಹಿನಿ. 1947ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಕೃಷ್ಣಲೀಲಾ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಜಗನ್ಮೋಹಿನಿ ಚಿತ್ರದ ಮುಖಾಂತರ ನಾಯಕಿಯಾಗಿ ಅವರು ಮಿಂಚಿದ್ದರು. ಕನ್ನಡ ಚಿತ್ರರಂಗದಲ್ಲಿ 25 ವಾರ ಯಶಸ್ವಿ ಪ್ರದರ್ಶನಗೊಂಡ ಮೊದಲ ಸಿನಿಮಾ ಇದಾಗಿತ್ತು.

‘ದಾವಣಗೆರೆ, ವಿಜಯಪುರದಲ್ಲಿ ಜನ ಹುಚ್ಚೆದ್ದು ಈ ಸಿನಿಮಾ ನೋಡಲು ಹೋಗಿದ್ದರು. ವಿಜಯಪುರದಲ್ಲಿ ಜಿಲ್ಲಾಧಿಕಾರಿಯವರು ಸಿನಿಮಾದ ಲೈಸೆನ್ಸ್‌ ರದ್ದುಗೊಳಿಸಿದ್ದರು. ದಾವಣಗೆರೆಯಲ್ಲಿ ಎಮ್ಮೆ ಮುಂತಾದ ವಸ್ತುಗಳನ್ನು ಮಾರಿ ಜನ ಚಿತ್ರ ನೋಡಲು ಹೋಗಿದ್ದರು. ಭಕ್ತಚೇತದಲ್ಲಿ ನಾನು, ನನ್ನ ಮಗ ಅಭಿನಯಿಸಿದ್ದು ಇದೊಂದು ಸೌಭಾಗ್ಯ’ ಎಂದಿದ್ದರು ಪ್ರತಿಮಾ ದೇವಿ.

ಚಂಚಲ ಕುಮಾರಿ, ನಾಗಕನ್ಯಾ, ದಲ್ಲಾಳಿ, ಧರ್ಮಸ್ಥಳ ಮಹಾತ್ಮೆ, ವರದಕ್ಷಿಣೆ, ಮುಟ್ಟಿದ್ದೆಲ್ಲಾ ಚಿನ್ನ, ರಾಜ್‌ಕುಮಾರ್‌ ಅವರ ಜೊತೆಗೆ ಭಕ್ತಚೇತ ಹೀಗೆ ಒಟ್ಟು 60 ಚಿತ್ರಗಳಲ್ಲಿ ಅವರು ಮುಖ್ಯಭೂಮಿಕೆಯಲ್ಲಿ ಬಣ್ಣಹಚ್ಚಿದ್ದರು. ಇವುಗಳಲ್ಲಿ ಹೆಚ್ಚಿನ ಚಿತ್ರಗಳು ಶಂಕರ್‌ ಸಿಂಗ್‌ ಅವರ ಮಹಾತ್ಮ ಪಿಕ್ಚರ್ಸ್‌ನಡಿಯೇ ತೆರೆ ಮೇಲೆ ಬಂದಿದ್ದವು. ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಅವರು ನಿಭಾಯಿಸಿದ್ದರು.

ಮೈಸೂರಿನಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಯಲಕ್ಷ್ಮಿ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.