ADVERTISEMENT

ಮನಸಿನ ಮರೆಯಲಿ: ಮನಸ್ಸು ತಟ್ಟದ ಪ್ರೇಮ ಕಥನ

ಕೆ.ಎಚ್.ಓಬಳೇಶ್
Published 9 ನವೆಂಬರ್ 2018, 11:05 IST
Last Updated 9 ನವೆಂಬರ್ 2018, 11:05 IST
‘ಮನಸಿನ ಮರೆಯಲಿ’ ಚಿತ್ರದಲ್ಲಿ ಕಿಶೋರ್‌ ಯಾದವ್‌ ಮತ್ತು ದಿವ್ಯಾ ಗೌಡ
‘ಮನಸಿನ ಮರೆಯಲಿ’ ಚಿತ್ರದಲ್ಲಿ ಕಿಶೋರ್‌ ಯಾದವ್‌ ಮತ್ತು ದಿವ್ಯಾ ಗೌಡ   

ಚಿತ್ರ: ಮನಸಿನ ಮರೆಯಲಿ

ನಿರ್ಮಾಪಕರು: ಲಿಂಗರಾಜು, ಶಬೀನಾ ಅರ

ನಿರ್ದೇಶನ: ಆಸ್ಕರ್‌ ಕೃಷ್ಣ

ADVERTISEMENT

ತಾರಾಗಣ: ಕಿಶೋರ್‌ ಯಾದವ್, ದಿವ್ಯಾ ಗೌಡ, ಗುರುರಾಜ್‌ ಬೂಪಾಲ್, ರಾಜ್‌, ಪುಷ್ಪಾ, ವರ್ಧನ್‌ ತೀರ್ಥಹಳ್ಳಿ

ಸಿನಿಮಾದಲ್ಲಿ ಪ್ರೇಮ ಕಥನಗಳ ಏಕತಾನತೆ ಮೀರುವುದು ಸುಲಭವಲ್ಲ. ಪ್ರೀತಿಯ ಜೊತೆಗೆ ಸೆಂಟಿಮೆಂಟನ್ನು ಹದವಾಗಿ ಬೆರೆಸಿ ಚಿತ್ರಕಥೆ ಹೆಣೆದರಷ್ಟೇ ಲವ್‌ಸ್ಟೋರಿಗಳು ಪ್ರೇಕ್ಷಕರ ಹೃದಯ ತಟ್ಟುತ್ತವೆ. ಈ ಸಿದ್ಧಸೂತ್ರದಲ್ಲಿ ಕೊಂಚ ವ್ಯತ್ಯಾಸವಾದರೂ ನಿರ್ದೇಶಕ ಜನರ ಅವಕೃಪೆಗೆ ತುತ್ತಾಗುವುದು ನಿಶ್ಚಿತ. ‘ಮನಸಿನ ಮರೆಯಲಿ’ ಚಿತ್ರದಲ್ಲಿ ಪ್ರೀತಿ ಮತ್ತು ಸೆಂಟಿಮೆಂಟನ್ನು ಹದವಾಗಿ ಬೆರೆಸಿ ನಿರೂಪಿಸುವಲ್ಲಿ ನಿರ್ದೇಶಕ ಆಸ್ಕರ್‌ ಕೃಷ್ಣ ಎಡವಿದ್ದಾರೆ.

ಪ್ರೇಮ ಕಥನಗಳು ಚಿತ್ರರಂಗಕ್ಕೆ ಹೊಸದೇನಲ್ಲ. ಈ ಹಳೆಯ ವ್ಯಾಪಾರಿ ಸೂತ್ರದ ತಳಹದಿ ಮೇಲೆಯೇ ಭಿನ್ನವಾಗಿ ಕಥೆ ಹೇಳುವ ಮೂಲಕ ಗೆದ್ದಿರುವ ಸಿನಿಮಾಗಳೂ ಸಾಕಷ್ಟಿವೆ. ಪ್ರೀತಿಯ ವಿಷಯವನ್ನು ದ್ವಂದಾರ್ಥದ ಸಂಭಾಷಣೆ, ಲಘು ಹಾಸ್ಯದ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ ಎಂದು ಚಿತ್ರ ನೋಡಿದ ಪ್ರೇಕ್ಷಕರು ಕಷ್ಟಪಟ್ಟು ಊಹಿಸಿಕೊಳ್ಳಬೇಕಿದೆ. ಈಗಾಗಲೇ, ಪ್ರೀತಿಯೇ ಪ್ರಧಾನವಾಗಿರುವ ಚಿತ್ರಗಳಲ್ಲಿ ಬಂದಿರುವ ದೃಶ್ಯಾವಳಿಗಳೇ ಈ ಸಿನಿಮಾದಲ್ಲೂ ಸುರುಳಿ ಸುತ್ತುತ್ತವೆ. ಇನ್ನೊಂದೆಡೆ ಕಥೆಯ ನಿರೂಪಣೆಯಲ್ಲಿ ಲವಲವಿಕೆ ಕಾಣುವುದಿಲ್ಲ.

ನಾಯಕ ಕಿಶೋರ್‌ ನಿರುದ್ಯೋಗಿ. ಆತ ಒಂದರ್ಥದಲ್ಲಿ ಮನೆಗೆ ಮಾರಿ; ಪರರಿಗೆ ಉಪಕಾರಿ ಇದ್ದಂತೆ. ತಮಟೆ ಸದ್ದು ಕೇಳಿದಾಕ್ಷಣ ಮೈ ಮರೆತು ಕುಣಿಯುತ್ತಾನೆ. ಬೆಂಗಳೂರಿಗೆ ಬರುವ ದಿವ್ಯಾ ಮತ್ತು ಅವನ ನಡುವೆ ಅಚಾನಕ್‌ ಆಗಿ ಭೇಟಿಯಾಗುತ್ತದೆ. ಇದು ಪ್ರೀತಿಗೂ ತಿರುಗುತ್ತದೆ. ಆಕೆ ಪ್ರೀತಿ ವ್ಯಕ್ತಪಡಿಸಿದಾಗ ಈತ ನಿರ್ಲಕ್ಷ್ಯ ತೋರುತ್ತಾನೆ. ಬೇರೊಬ್ಬ ಹುಡುಗನೊಂದಿಗೆ ದಿವ್ಯಾಳ ಮದುವೆ ನಿಶ್ಚಯವಾದಾಗ ಆಕೆಯ ಪ್ರೀತಿಗಾಗಿ ಹಂಬಲಿಸುತ್ತಾನೆ. ಕೊನೆಗೆ, ಆಕೆಯ ಪ್ರೀತಿಯನ್ನು ಹೇಗೆ ಪಡೆಯುತ್ತಾನೆ ಎನ್ನುವುದರೊಂದಿಗೆ ಸಿನಿಮಾ ಮುಗಿದುಹೋಗುತ್ತದೆ.

ಪ್ರೀತಿ ಪಡೆಯಲು ಪ್ರಿಯತಮೆಯ ಮನೆಯಲ್ಲಿ ನಾಯಕ ಕಾರಿನ ಚಾಲಕನಾಗಿ ದುಡಿಯುವುದು, ಅಲ್ಲಿ ಆತ ತೋರುವ ವರ್ತನೆ, ಕೊರಿಯರ್ ಬಾಯ್‌ ಆಗಿ ಕೆಲಸ ಮಾಡುವ ದೃಶ್ಯಗಳಲ್ಲಿ ಸಹಜತೆ ಇಲ್ಲ. ತಮಟೆ ಸದ್ದಿಗೆ ನಾಯಕ ಕುಣಿಯುವುದು ಪ್ರೇಕ್ಷಕರಿಗೆ ವಿಚಿತ್ರವಾಗಿ ಕಾಣುತ್ತದೆ. ನಾಯಕನಿಗೆ ಬೆಂಬಲವಾಗಿ ನಿಲ್ಲುವ ಸ್ನೇಹಿತರ ನಟನೆಯಲ್ಲೂ ಸಹಜತೆ ಕಾಣುವುದಿಲ್ಲ.

ಕಿಶೋರ್‌ ಮತ್ತು ದಿವ್ಯಾ ನಟನೆಯಲ್ಲಿ ಇನ್ನೂ ಪಳಗಬೇಕಿದೆ. ತ್ಯಾಗರಾಜ್‌ ಸಂಗೀತ ಸಂಯೋಜನೆಯ ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ. ಪವನ್‌ಕುಮಾರ್‌ ಅವರ ಛಾಯಾಗ್ರಹಣ ಚಿತ್ರಕ್ಕೆ ಹೊಸದೇನನ್ನೂ ಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.