ADVERTISEMENT

ಬಿ. ಗಂಗಾಧರ ಮೂರ್ತಿ ಸ್ಮರಣೆ | ಗಡಿ ಮೀರಿ ಹರಿದ ನದಿ

ಎಚ್.ಎಸ್.ಅನುಪಮಾ
Published 17 ಸೆಪ್ಟೆಂಬರ್ 2022, 19:30 IST
Last Updated 17 ಸೆಪ್ಟೆಂಬರ್ 2022, 19:30 IST
ಬಿ. ಗಂಗಾಧರಮೂರ್ತಿ
ಬಿ. ಗಂಗಾಧರಮೂರ್ತಿ   

ಇಂಗ್ಲಿಷ್‌ ಪ್ರಾಧ್ಯಾಪಕ ವೃತ್ತಿಯ ಜೊತೆ ಜೊತೆಗೇ ರಂಗಭೂಮಿ, ದುಡಿಯುವ ವರ್ಗದ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ, ಜೀತವಿಮುಕ್ತಿ, ದಲಿತರ ಭೂ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಬಿ. ಗಂಗಾಧರ ಮೂರ್ತಿ ಎಂಬ ಜನಶಕ್ತಿ ಇನ್ನು ಬರೀ ನೆನಪು.

***

ದೇಹದ ಕಣಕಣದಲ್ಲಿಯೂ ಪ್ರೀತಿಯನ್ನು ಹೊರಸೂಸುತ್ತಿದ್ದ, ಪ್ರತಿ ಮಾತಿನಲ್ಲೂ ಭರವಸೆಯನ್ನು ತುಳುಕಿಸುತ್ತಿದ್ದ, ಪ್ರತಿ ನಡೆಯಲ್ಲೂ ಜೊತೆಗಾರಿಕೆಯನ್ನೇ ಬಯಸುತ್ತಿದ್ದ ಹಿರಿಯರೊಬ್ಬರನ್ನು ಹತ್ತು ವರ್ಷ ಕೆಳಗೆ ಧಾರವಾಡದ ಮೇ ಸಾಹಿತ್ಯ ಮೇಳದಲ್ಲಿ ಮೊದಲ ಬಾರಿ ಭೇಟಿಯಾದೆ. ನಾನಾಗ ಚೆಗೆವಾರನ ‘ಮೋಟಾರ್ ಸೈಕಲ್ ಡೈರಿ’ ಅನುವಾದಿಸುತ್ತಿದ್ದೆ. ಹತ್ತಾರು ಯೋಜನೆಗಳು ಮೊಳೆತು, ಪುಟಿಯುತ್ತಿದ್ದ ಕಾಲ. ನನ್ನ ಓದು, ಬರವಣಿಗೆ, ಚಟುವಟಿಕೆಗಳ ಬಗೆಗೆ ಸವಿವರವಾಗಿ ಕೇಳಿಕೊಂಡ ಅವರು ಬಲುಬೇಗ ಆಪ್ತರಾದರು. ನಾಲ್ಕು ದಶಕಗಳಿಂದ ಹೋರಾಟದಲ್ಲಿ ಮಾಗಿದ್ದ ಅವರು ಕಿರಿಯಳ ಹಿಂಜರಿಕೆ, ಸಂಕೋಚಗಳನ್ನು ‘ನೋಡ್ ಅನ್ಪಮಾ..’ ಎಂದು ಕರಗಿಸಿಬಿಟ್ಟಿದ್ದರು.

ADVERTISEMENT

ಸಾಹಿತ್ಯ ಮೇಳಕ್ಕೆ ಅತಿಥಿಯಾಗಿ ಬಂದಿದ್ದ ತೆಲುಗು ಕವಿ ನಗ್ನಮುನಿಯವರನ್ನು ಸಂದರ್ಶಿಸಿ, ಅವರ ‘ಕೊಯ್ಯಗುರ್‍ರಂ’ ಅನ್ನು ಅನುವಾದಿಸುವ ಹಂಬಲವನ್ನು ಹಿರಿಯರಲ್ಲಿ ಹೇಳಿದ್ದೇ ತಡ, ದುಭಾಷಿಯಾಗಿ ತೆಲುಗು, ಇಂಗ್ಲಿಷ್, ಕನ್ನಡದ ಗಡಿಗಳನ್ನು ಸುಲಲಿತವಾಗಿ ದಾಟುತ್ತ ನಗ್ನಮುನಿಯವರ ಸಂದರ್ಶನ ಮಾಡಿಸಿ, ‘ಕೊಯ್ಯಗುರ್‍ರಂ’ ಅನ್ನು ಅರ್ಥ ಮಾಡಿಸಿದರು. ‘ಕವಿಯ ಮನಸು, ಕ್ರಾಂತಿಯ ಕನಸು ನಿಂದು. ಬಾಳ ಫಾಸ್ಟ್ ಇದೀಯ. ಬರಿಬರಿ’ ಎಂದು ಬೆನ್ನು ತಟ್ಟಿದ ಹರಸಿದ ಅವರ ಬೇಷರತ್ ಪ್ರೀತಿ, ಭರವಸೆಗಳು ಅಬಾಧಿತವಾಗಿ ಮುಂದುವರಿದುಬಂದವು.

ಅವರು ಗೌರಿಬಿದನೂರಿನ ಪ್ರೊ. ಬಿ. ಗಂಗಾಧರ ಮೂರ್ತಿ. ಸಮಾನಮನಸ್ಕ ಬಳಗದವರ ಬಿಜಿಎಂ. ಇಂಗ್ಲಿಷ್ ಪ್ರಾಧ್ಯಾಪಕ ವೃತ್ತಿಯ ಜೊತೆಜೊತೆಗೇ ರಂಗಭೂಮಿ, ದುಡಿಯುವ ವರ್ಗದ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ, ವಿಚಾರವಾದ, ಜೀತವಿಮುಕ್ತಿ, ದಲಿತರ ಭೂ ಹೋರಾಟಗಳಲ್ಲಿ ಪಾಲ್ಗೊಂಡು ಜನಸ್ನೇಹಿ ಬದುಕು ರೂಪಿಸಿಕೊಂಡ ಒಡನಾಡಿ. 77ನೇ ವರ್ಷದಲ್ಲಿ ಅವರು ಭೌತಿಕವಾಗಿ ನಮ್ಮನ್ನಗಲಿದ್ದಾರೆ. ಕೊನೆಯುಸಿರಿರುವವರೆಗೂ ಕ್ರಿಯಾಶೀಲತೆ, ಬದ್ಧತೆಗಳನ್ನು ಬಿಟ್ಟುಕೊಡದೆ ‘ಶರಣ’ ಗುಣದ ಮಾದರಿಯಾಗಿದ್ದಾರೆ.

ಸಮಸಮಾಜದ ಕನಸು: ಹಾಸನ ಜಿಲ್ಲೆಯ ಹೊಳೆನರಸೀಪುರದ ಬಿಜಿಎಂ ಬಡಕುಟುಂಬದ ಹಿನ್ನೆಲೆಯಿಂದ ಬಂದವರು. ತಂದೆ ಬೋರಯ್ಯನವರ ಸಲೂನಿನ ಆದಾಯವು ಶಾಲಾ ಶುಲ್ಕ ಕಟ್ಟಲು ಸಾಲುತ್ತಿರಲಿಲ್ಲ. ತಂದೆ ತಮ್ಮಲ್ಲಿದ್ದ ಏಕೈಕ ಚಿನ್ನದ ಉಂಗುರ ಅಡವಿಟ್ಟು ಓದಿಸುತ್ತಿದ್ದರು. ಪ್ರೌಢಶಾಲೆಯ ಬಳಿಕ ಶಿವಮೊಗ್ಗಕ್ಕೆ ಹೋಗಿ ನೆಂಟರ ಮನೆಯಲ್ಲಿದ್ದು ಪಿಯುಸಿ ಶಿಕ್ಷಣ ಪಡೆಯುತ್ತಿರುವಾಗ ಹುಡುಗನಿಗೆ ಎಚ್.ಜೆ. ಲಕ್ಕಪ್ಪಗೌಡರ ಪರಿಚಯವಾಯಿತು. ಅವರ ಗ್ರಂಥಾಲಯವು ಓದಿನ ಲೋಕದ ಬಾಗಿಲು ತೆರೆಯಿತು.

ಮುಂದೆ ಓದುವ ಬಯಕೆಯಿದ್ದರೂ ಹಣಕಾಸು ಮುಗ್ಗಟ್ಟಿನಿಂದಾಗಿ ಬಿಜಿಎಂ ರೈಲ್ವೆ ಮೇಲ್ ಸರ್ವೀಸ್ (ಆರ್‍ಎಂಎಸ್) ನೌಕರಿ ಸೇರಿ ಬೆಳಗಾವಿಗೆ ಹೋದರು. ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತ ದೂರಶಿಕ್ಷಣದ ಮೂಲಕ ಬಿಎ ಪದವಿ ಪಡೆದರು. ಅಲ್ಲಿಂದ ಮೈಸೂರಿಗೆ ವರ್ಗವಾದಾಗ ಕನ್ನಡದ ಉದಯೋನ್ಮುಖ ಸಾಹಿತಿ-ಆ್ಯಕ್ಟಿವಿಸ್ಟ್‌ಗಳ ಪರಿಚಯವಾಯಿತು. ಬರವಣಿಗೆ, ಚಿಂತನೆ, ಸಂಘಟನೆ, ಹೋರಾಟದ ಒಡನಾಡಿಗಳು ದೊರೆತರು.

ಉತ್ಸಾಹಿ ಬಳಗದ ಚಿಂತನೆಗಳಲ್ಲೇ ‘ಸಮುದಾಯ’ ಹುಟ್ಟಿತು. ‘ಒಡನಾಡಿ’ ಪತ್ರಿಕೆ ಆರಂಭವಾಯಿತು. ಮಾರ್ಕ್ಸ್‌ವಾದದ ಪರಿಚಯವಾಯಿತು. ಮಾರ್ಕ್ಸ್‌ವಾದಿ ಗ್ರಂಥಾಲಯ ಮೈದಳೆಯಿತು. ಆರ್‍ಎಂಎಸ್ ಕಾರ್ಮಿಕ ಸಂಘಟನೆಯನ್ನು ಮುನ್ನಡೆಸಿದ ಬಿಜಿಎಂ, ಅನಂತಮೂರ್ತಿಯವರ ಸಲಹೆಯಂತೆ ಇಂಗ್ಲಿಷ್ ಎಂಎ ಮಾಡಿದರು. ಸುತ್ತೂರು ಮಠದ ಕಾಲೇಜಿನಲ್ಲಿ ಬೋಧಕರಾಗಿ ವೃತ್ತಿಬದುಕು ಆರಂಭಿಸಿದರು. ಅನಂತರ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು.

ಒಂದು ಸರ್ಕಾರಿ ನೌಕರಿ ಸಿಕ್ಕಿದ್ದೇ ತಡ, ವೇತನ, ಬಡ್ತಿ, ಭತ್ಯೆ, ರಜೆ, ವರ್ಗಾವಣೆಗಳ ಲೋಕದಲ್ಲಿ ಮುಳುಗಿ ಸಾಮಾಜಿಕ ಜವಾಬ್ದಾರಿಯನ್ನು ಮರೆತುಬಿಡುವವರ ನಡುವೆ ಬಿಜಿಎಂ ಭಿನ್ನರಾಗಿದ್ದರು. ತೆಲುಗುಸೀಮೆಯ ಗಡಿಭಾಗ ಗೌರಿಬಿದನೂರಿನ ಊಳಿಗಮಾನ್ಯ ಸಮಾಜ ಅವರನ್ನು ಬಡಿದೆಬ್ಬಿಸಿತು. ಸ್ವಾತಂತ್ರ್ಯ ಬಂದು ದಶಕಗಟ್ಟಲೆ ಕಳೆದರೂ ಅಸಮವಾಗಿರುವ ನೆಲವನ್ನು ಸಮಸಮಾಜದ ಬಯಲಾಗಿಸುವುದು ಹೇಗೆಂದು ಹಗಲಿರುಳು ಚಿಂತಿಸಿದರು. ಸಂಘಟಿತ ಪ್ರಯತ್ನ ಆರಂಭಿಸಿದರು.

ಪಿನಾಕಿನಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಕಂಡು ಸುಮ್ಮನಿರಲಾರದ ಮೇಷ್ಟರು ಶಿಷ್ಯಗಣದೊಡನೆ ಸಾಕ್ಷ್ಯ ಕಲೆ ಹಾಕಿ ಪತ್ರಿಕೆಯಲ್ಲಿ ಬರೆದರು. ಗೂಂಡಾಗಳಿಂದ ಹಲ್ಲೆಯಾಗಿ ತಲೆಗೆ ಪೆಟ್ಟಾಯಿತು. ರಾಜ್ಯದಾದ್ಯಂತ ಪ್ರಕರಣ ಸದ್ದು ಮಾಡಿತು. ನಾಗಸಂದ್ರವೆಂಬ ಹಳ್ಳಿಯಲ್ಲಿ ಮೂರ್ನಾಲ್ಕು ತಲೆಮಾರುಗಳಿಂದ ಜೀತಕ್ಕೆ ಸಿಲುಕಿಕೊಂಡಿದ್ದ ದಲಿತ ಕುಟುಂಬಗಳಿರುವುದು ಗೊತ್ತಾದದ್ದೇ ಬಳಗದೊಡನೆ ಅಲ್ಲಿಗೆ ಹೊರಟರು. ಭೂಹೀನರಾಗಿದ್ದ ದಲಿತ ಜೀತದಾಳುಗಳಿಗಾಗಿ ಸಂಘಟಿಸಿದ ಹೋರಾಟವು ಅವರ ಚಿಂತನೆಯ ದಿಕ್ಕನ್ನೇ ಬದಲಾಯಿಸಿತು. ಅಂಬೇಡ್ಕರರ ಹೋರಾಟ, ಚಿಂತನೆಗಳ ಪ್ರಾಮುಖ್ಯದ ಅರಿವಾಗಿ ವರ್ಗದೊಡನೆ ಜಾತಿಯೂ ಶೋಷಣೆಯ ನೆಲೆಯೆಂದು ಗುರುತಿಸಲು ಸಾಧ್ಯ ಮಾಡಿತು. ಆ ಭಾಗದಲ್ಲಿ ತೀವ್ರಗೊಳ್ಳುತ್ತಿದ್ದ ದಲಿತ ಚಳವಳಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಬಿಜಿಎಂ ಕೋಲಾರದ ಉದ್ದಗಲ ಓಡಾಡಿದರು.

ಸರ್ಕಾರಿ ಕೆಲಸದ ಜೊತೆಜೊತೆಗೇ ಬರಹ, ಓದು, ಸಂಘಟನೆ, ಹೋರಾಟಗಳನ್ನೂ ಬಿಜಿಎಂ ನಿಭಾಯಿಸಿದರೆಂಬುದನ್ನು ಗಮನಿಸಬೇಕು. ರಜೆಯ ದಿನಗಳಲ್ಲಿ ಹಳ್ಳಿಗೆ ಹೋಗುತ್ತಿದ್ದರು. ಮೌಢ್ಯವಿರೋಧಿ ಹೋರಾಟ ಮುನ್ನಡೆಸಿದರು. ಹೊಸತಲೆಮಾರಿನ ಜೊತೆ ಸದಾ ಒಡನಾಡುತ್ತ, ಮಾರ್ಗದರ್ಶನ ಮಾಡುತ್ತ, ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳಿಗೆ ತನುಮನಧನದಿಂದ ಸಹಾಯ ನೀಡಿದರು. ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಒಮ್ಮೆ ಸರ್ಕಾರಿ ಕೆಲಸ ಬಿಟ್ಟರೂ, ಸೋಲಿನ ಬಳಿಕ ಮತ್ತೆ ಬೋಧನೆಯ ಕೆಲಸಕ್ಕೆ ಮರಳಿದರು. ಸೇವಾವಧಿ ನಷ್ಟವಾಯಿತು. ಕೆಲಸ ಸಿಗುವುದು ಕಷ್ಟವಾಯಿತು. ಕಷ್ಟನಷ್ಟಗಳಿಗೆಲ್ಲ ಕ್ಯಾರೇ ಎನ್ನದೆ ಒಂದೇಸಮ ಚಟುವಟಿಕೆಗಳನ್ನು ಮುಂದುವರೆಸಿದರು.

‘ಟೀಚರ್’ ಮಾಸಪತ್ರಿಕೆಗೆ ಹತ್ತುವರ್ಷಕ್ಕೂ ಮೀರಿ ಸಂಪಾದಕರಾಗಿ ಕೆಲಸ ನಿರ್ವಹಿಸಿದ ಅವರು ಅಂದಂದಿನ ಅಗತ್ಯಕ್ಕೆ ತಕ್ಕಂತೆ ಬರಹ, ಅನುವಾದಗಳನ್ನೂ ಮಾಡಿದರು. ವೈಚಾರಿಕತೆಯನ್ನು ಪ್ರಚೋದಿಸುವಂತಹ ಒಟ್ಟು 26 ಪುಸ್ತಕಗಳನ್ನು ಪ್ರಕಟಿಸಿದರು. ಬಾಬಾಸಾಹೇಬ್ ಅಂಬೇಡ್ಕರ್, ವಿ.ಆರ್. ನಾರ್ಲಾ, ಆನಂದ್ ತೇಲ್ತುಂಬ್ಡೆ, ಬ್ರಜೇಶ್ ಮಿಶ್ರಾ, ಅರುಂಧತಿ ರಾಯ್, ಸೂಫಿ ಕತೆಗಳನ್ನು ಕನ್ನಡಕ್ಕೆ ತಂದರು. ಎರಡು ಕನ್ನಡ ಕೃತಿಗಳನ್ನು ಇಂಗ್ಲಿಷಿಗೂ ಒಯ್ದರು.

2003ರಲ್ಲಿ ನಿವೃತ್ತರಾದ ಬಳಿಕ ಕರ್ನಾಟಕದ ಜಲಿಯನ್‌ ವಾಲಾಬಾಗ್ ಎಂದೇ ಖ್ಯಾತವಾದ ವಿದುರಾಶ್ವತ್ಥದ ‘ವೀರಸೌಧ’ ಸ್ಮಾರಕದಲ್ಲಿ ‘ಸ್ವಾತಂತ್ರ್ಯ ಹೋರಾಟದ ವಿರಾಟ್ ಚಿತ್ರ-ಇತಿಹಾಸ’ದ ಪರಿಕಲ್ಪನೆ ಮತ್ತು ಸಂಯೋಜನೆಯ ಜವಾಬ್ದಾರಿ ನಿರ್ವಹಿಸಿದರು. ಗೌರಿಬಿದನೂರಿನಲ್ಲಿ ಅಂಬೇಡ್ಕರ್ ಸ್ಮಾರಕ ‘ಸಮಾನತಾ ಸೌಧ’ ರೂಪಿಸುವಲ್ಲಿಯೂ ಅವರ ಪಾತ್ರ ಹಿರಿದು.

ನಿಸ್ವಾರ್ಥ, ಲೋಕಹಿತದ ಕೆಲಸ ಎಲ್ಲೇ ನಡೆಯುತ್ತಿದ್ದರೂ ಅದನ್ನು ಗುರುತಿಸಿ ತನುಮನಧನ ಬೆಂಬಲ ನೀಡುತ್ತಿದ್ದ ಬಿಜಿಎಂ ತಮ್ಮೊಡನೆ ಬಳಗವನ್ನು ಕರೆದೊಯ್ಯುತ್ತಿದ್ದರು. ಶೋಷಕರ ಮನವೊಲಿಸಿ ಶೋಷಿತರ ಹೋರಾಟದಲ್ಲಿ ಅವರನ್ನೂ ತೊಡಗಿಸಬೇಕೆಂಬ ಪರಿವರ್ತನಾ ಅಧ್ಯಾತ್ಮ ನಂಬಿ ತಾವು ಯಾರ ವಿರುದ್ಧ ಭೂ ಹೋರಾಟ ಮಾಡಿದ್ದರೋ ಆ ವ್ಯಕ್ತಿಯ ಮಗನೊಡನೆ ನಿರಂತರ ಒಡನಾಡಿದರು. ಆತನ ಯೋಚನಾ ವಿಧಾನವನ್ನು ಪ್ರಭಾವಿಸಿ, ತನ್ನ ಜಾತಿ-ವರ್ಗ ಚಹರೆಯಾಚೆಗೆ ನಡೆದು ಬರಲು, ಜನಪ್ರಿಯ ರಾಜಕಾರಣಿಯಾಗಲು ಸ್ಫೂರ್ತಿಯಾದರು.

ನದಿತನ: ಬಿಜಿಎಂ ಗಡಿಭಾಗದ ನದಿಯಂತೆ ಇದ್ದವರು. ಅವರ ನದಿತನ ಭಾಷಿಕ ಗಡಿಯನ್ನಷ್ಟೇ ಅಲ್ಲ, ಸೈದ್ಧಾಂತಿಕ ಗಡಿ ಮೀರಲೂ ಕಾರಣವಾಯಿತು. ಮೊದಲು ಮಾರ್ಕ್ಸ್‌ವಾದಿಯಾಗಿದ್ದವರು ಬರಬರುತ್ತ ಅಂಬೇಡ್ಕರ್‌ವಾದಿಯಾದರು. ಬಳಿಕ ಗಾಂಧಿಯನ್ನು ಹೊರಗಿಟ್ಟು ಭಾರತೀಯ ಸಮಾಜವನ್ನು ಕಟ್ಟಲು ಸಾಧ್ಯವೇ ಇಲ್ಲವೆಂದು ಗಾಢವಾಗಿ ನಂಬಿದರು. ಜನಹಿತ ಬಯಸುವ ಎಲ್ಲ ಚಿಂತನಾಧಾರೆಗಳೂ ಒಗ್ಗೂಡುವುದು ಅಗತ್ಯವೆಂದು ಅನುಭವದಿಂದ ಅರಿತರು.

ಆದರೆ ಇತ್ತೀಚಿನ ಸಾಮಾಜಿಕ ಪರಿಸ್ಥಿತಿ ಅವರನ್ನು ಕಳವಳಕ್ಕೆ ಈಡುಮಾಡುತ್ತಿತ್ತು. ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುತ್ತಿರುವ ಪ್ರಭುತ್ವ, ತಮ್ಮ ಹಿತೈಷಿಗಳಾರೆಂಬುದನ್ನೇ ಗುರುತಿಸಲಾಗದ ಜನತೆ, ಕೇಡು ತಂದುತಂದು ಸುರಿಯುವ ಕೋಮುವಾದಿ ದುಷ್ಟನಡೆಗಳು ಅವರನ್ನು ಚುಚ್ಚುತ್ತಿದ್ದವು. ವೀರಸೌಧದ ಕೆಲವು ಚಿತ್ರಪಟಗಳ ಔಚಿತ್ಯ ಪ್ರಶ್ನಿಸಿ ಬಲಪಂಥೀಯ ಸಂಘಟನೆಗಳು ವಿದುರಾಶ್ವತ್ಥದಲ್ಲಿ ದಾಂದಲೆಯೆಬ್ಬಿಸಿದಾಗ ವಿಚಲಿತಗೊಂಡಿದ್ದರು. ಆದರೆ ಸ್ಮಾರಕದ ಉಳಿವಿಗೆ ಬಂಡೆಕಲ್ಲಿನಂತೆ ಎದೆಕೊಟ್ಟು ನಿಂತರು. ಇತಿಹಾಸ ತಿರುಚುವ ಪ್ರಯತ್ನಗಳನ್ನು ತಡೆಗಟ್ಟಬೇಕೆಂದು ಹೊಸತಲೆಮಾರನ್ನು ಎಚ್ಚರಿಸಿದರು. ಹೊಸಪ್ರಯತ್ನಗಳೊಂದಿಗೆ ತಮ್ಮನ್ನು ಸದಾ ಗುರುತಿಸಿಕೊಳ್ಳುತ್ತಿದ್ದ ಅವರು ಹತಾಶೆಗೊಳಗಾದದ್ದಿಲ್ಲ. ಲೋಕಹಿತವಾದಿ ಬಳಗವನ್ನು ಕಂಡು, ‘ನಿಮ್ಮನ್ನೆಲ್ಲ ನೋಡಿ ನಂಗೆ ಸಮಾಧಾನ ಅನಿಸ್ತಿದೆ, ನೆಮ್ಮದಿಯಿಂದ ಸಾಯ್ಬೋದು ಅನಿಸ್ತಿದೆ’ ಎಂದೇ ಹೇಳುತ್ತಿದ್ದರು.

ಇದೇ ಸೆ. 4ರಂದು ಬೆಂಗಳೂರಿನಲ್ಲಿ ಅವರನ್ನು ಭೇಟಿಯಾದೆ. ‘ನಾಯೇನು ಇನ್ನು ಹೆಚ್ಚು ದಿವ್ಸ ಇರಲ್ಲ ಅನ್ಸುತ್ತೆ ಕಣಮ್ಮಾ, ಒಂದ್ಸಲ ಬಾಮ್ಮಾ ಗೌರಿಬಿದನೂರಿಗೆ. ಈ ಸರ್ತಿ ಮಾತ್ರ ತುಂಬಾ ಸುಸ್ತಾಗ್ಬಿಟ್ಟಿದಿನಿ, ಜಾಸ್ತಿ ದಿವ್ಸ ಇಲ್ಲ’ ಎಂದು ದಿಟ್ಟಿಸಿದ್ದರು. ಅವರನ್ನು ಉತ್ತೇಜಿಸಲು, ‘ಆತ್ಮಕತೆ ಬರೀರಿ ಸರ್’ ಅಂದಾಗ, ‘ಅದೆಲ್ಲ ಟೈಂ ವೇಸ್ಟು, ಮಾಡಕ್ಕೆ ತುಂಬ ಕೆಲ್ಸ ಇದೆ. ಬೇಕಾದ್ರೆ ನೀ ಬಾಮ್ಮಾ, ಹೇಳ್ತಿನಿ, ಬರ್ಕೋಳಿಯಂತೆ’ ಎಂದಿದ್ದರು. ದಣಿದ ಅವರ ಕಣ್ಣುಗಳಲ್ಲಿ ಕಂಡ ಒಂದುಗೆರೆ ನೀರು ನನ್ನೊಳಗನ್ನು ಕಲಕಿಹಾಕಿತ್ತು.

‘ಜಾಸ್ತಿ ದಿವ್ಸ ಇಲ್ಲ’ವೆಂಬ ಅವರ ಊಹೆ ಸೆ.10ರಂದು ನಿಜವಾಯಿತು. ಕರಾವಳಿಯ ಸಣ್ಣ ಊರಿನಲ್ಲಿ ವೃತ್ತಿ, ಪ್ರವೃತ್ತಿ, ಸಂಸಾರ ನಿಭಾವಣೆಯು ಸೃಷ್ಟಿಸಿದ ಸಮಯದ ಅಭಾವದಿಂದ ಗೌರಿಬಿದನೂರಿಗೆ ಹೋಗಿ ಅವರೊಡನೆ ಕೆಲಕಾಲ ಕಳೆಯುವ ನನ್ನ ಕನಸು ಕರಗೇ ಹೋಯಿತು.

ಪ್ರಿಯ ಸರ್, ನಿಮ್ಮೊಡನಾಟಕ್ಕೆ ಸಮಯ ಹೊಂದಿಸಿಕೊಳ್ಳದ ಬಡವಿ ನಾನು. ಆದರೆ ವಿದುರಾಶ್ವತ್ಥ, ಗೌರಿಬಿದನೂರು, ಪಿನಾಕಿನಿ ನದಿ, ನಂದಿಬೆಟ್ಟ ಇರುವತನಕ ನೀವು ನಮ್ಮೊಡನಿದ್ದೇ ಇರುವಿರಿ. ಸಿಗುತ್ತಾ ಇರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.