ADVERTISEMENT

‘ನಾ ಸತ್ತಿಲ್ಲ, ನನ್ನ ನಂಬಿ...’: ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 10:06 IST
Last Updated 28 ಮಾರ್ಚ್ 2021, 10:06 IST
ಹೊಸಪೇಟೆಯಲ್ಲಿ ಶನಿವಾರ ರಾತ್ರಿ ಪ್ರದರ್ಶನ ಕಂಡ ‘ನಾ ಸತ್ತಿಲ್ಲ’ ನಾಟಕದ ದೃಶ್ಯ
ಹೊಸಪೇಟೆಯಲ್ಲಿ ಶನಿವಾರ ರಾತ್ರಿ ಪ್ರದರ್ಶನ ಕಂಡ ‘ನಾ ಸತ್ತಿಲ್ಲ’ ನಾಟಕದ ದೃಶ್ಯ   

ಹೊಸಪೇಟೆ (ವಿಜಯನಗರ): ಆಸ್ತಿ ಲಪಟಾಯಿಸಲು ಅಣ್ಣ ಸತ್ತು ಹೋಗಿದ್ದಾನೆ ಎಂದು ರುಜುವಾತು ಮಾಡುವ ಸಹೋದರ. ‘ಇನ್ನೂ ನಾನು ಸತ್ತಿಲ್ಲ. ಆ ಆಸ್ತಿಯ ಒಡೆಯ ಈಗಲೂ ನಾನೇ’ ಎಂದು ಸಾಬೀತುಪಡಿಸಲು ಹಿರಿಯ ಸಹೋದರನ ಹೆಣಗಾಟ. ‘ನಾ ಸತ್ತಿಲ್ಲ. ನನ್ನ ನಂಬಿ’ ಎಂದು ಪದೇ ಪದೇ ನ್ಯಾಯಾಲಯದಲ್ಲಿ ಹೇಳಿಕೊಂಡರೂ ಬೇಗ ಸಿಗದ ನ್ಯಾಯದಾನ.

ಇದು ಶ್ರೀಕೃಷ್ಣ ನಿರ್ದೇಶನದ ‘ನಾ ಸತ್ತಿಲ್ಲ’ ನಾಟಕದ ಸನ್ನಿವೇಶಗಳು. ಶನಿವಾರ ರಾತ್ರಿ ನಗರದ ಥಿಯೋಸಫಿಕಲ್‌ ಕಾಲೇಜಿನ ಆವರಣದಲ್ಲಿ ಪ್ರಯೋಗ ಕಂಡ ಈ ನಾಟಕ ನಮ್ಮ ನ್ಯಾಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿತು.

ಆಸ್ತಿ ಎದುರು ಯಾವ ಮಾನವೀಯ ಮೌಲ್ಯಗಳು, ಸಂಬಂಧಗಳು ಮಹತ್ವದ್ದಲ್ಲ. ಕಣ್ಣೆದುರಿಗಿನ ವಾಸ್ತವ ನಂಬದ ನ್ಯಾಯ ವ್ಯವಸ್ಥೆಯಿಂದ ಅಮಾಯಕರು, ಪ್ರಾಮಾಣಿಕರು ಎಷ್ಟೆಲ್ಲ ಕಷ್ಟ–ಕೋಟಲೆಗಳನ್ನು ಎದುರಿಸಬೇಕಾಗುತ್ತದೆ. ಅಂತಿಮವಾಗಿ ನ್ಯಾಯ ಪಡೆಯಲು ಎಷ್ಟೆಲ್ಲ ನೋವು, ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ನಾಟಕ ಸಾರಿತು.

ADVERTISEMENT

ಚಿಕ್ಕ ವೇದಿಕೆಯ ಮೇಲೆ ಮೂಡಿ ಬಂದ ರಂಗಪ್ರಯೋಗ ಅಕ್ಷರಶಃ ನ್ಯಾಯಾಲಯದ ದೈನಂದಿನ ಕಾರ್ಯ ಕಲಾಪಗಳ ಪರಿಚಯ ಮಾಡಿಸಿತು. ನ್ಯಾಯಾಧೀಶರು, ವಕೀಲರು, ಸಾಕ್ಷಿಗಳ ವಿಚಾರಣೆ, ವಾದ–ಪ್ರತಿವಾದದ ಸನ್ನಿವೇಶಗಳು ನೋಡುಗರ ಗಮನ ಸೆಳೆದವು.

ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಟಿ.ಬಿ ಡ್ಯಾಂ ಕನ್ನಡ ಕಲಾ ಸಂಘದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರಂಗಪ್ರಯೋಗಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಿತು. ನಾಟಕದ ರಚನೆಕಾರ ವಿಜಯಪುರದ ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ‘ಪ್ರಸ್ತುತ ಸಮಾಜದಲ್ಲಿ ಸತ್ಯವೆಂಬುದು ಸತ್ತಿದೆ. ಇಂದಿನ ಸಮಾಜದ ತಳಹದಿಯ ಮೇಲೆಯೇ ನಾಟಕವನ್ನು ರಚಿಸಿದ್ದೇನೆ’ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಶೋಕ ಜೀರೆ ಮಾತನಾಡಿ, ‘ಕನ್ನಡ ಕಲಾಸಂಘದ ವತಿಯಿಂದ ಇಂತಹ ನಾಟಕ ಪ್ರದರ್ಶನ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ. ನಗರದಲ್ಲಿ ಇಂತಹ ಹಲವು ಸಾಂಸ್ಕೃತಿಕ ಕಾರ್ಯಗಳು ನಡೆಯಬೇಕು. ರಂಗಭೂಮಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎನ್.ಎಸ್.ರೇವಣಸಿದ್ಧಪ್ಪ, ಪ್ರಾಂಶುಪಾಲೆ ಸಂಗೀತ ಗಾಂವ್ಕರ್, ಕನ್ನಡ ಕಲಾಸಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.