ADVERTISEMENT

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 7:14 IST
Last Updated 28 ಏಪ್ರಿಲ್ 2021, 7:14 IST
 ರಾಮು ಕಣಗಾಲ್‌
ರಾಮು ಕಣಗಾಲ್‌   

ಬೆಂಗಳೂರು: ಹಿರಿಯ ಚಿತ್ರ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್‌ ಅವರ ಪುತ್ರ, ನೃತ್ಯ ನಿರ್ದೇಶಕ ರಾಮು (53) ಬುಧವಾರ ಕೋವಿಡ್‌ನಿಂದಾಗಿ ನಿಧನರಾದರು. ಸೋಂಕಿಗೆ ತುತ್ತಾಗಿದ್ದ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಆರೋಗ್ಯ ಕಳೆದ ಐದು ದಿನಗಳಿಂದ ಗಂಭೀರವಾಗಿತ್ತು.

ಕೋವಿಡ್‌ ಪೀಡಿತರಾಗಿದ್ದ ಅವರಿಗೆ ಸಕಾಲದಲ್ಲಿ ಆಕ್ಸಿಜನ್‌ ವ್ಯವಸ್ಥೆ ಇರುವ ಬೆಡ್‌ ಸಿಕ್ಕಿರಲಿಲ್ಲ. ಅವರನ್ನು ಚಿಕಿತ್ಸೆಗೆ ಒಯ್ಯುತ್ತಿದ್ದ ಅಂಬುಲೆನ್ಸ್‌ 24 ತಾಸು ನಗರದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿತ್ತು. ಆದರೆ ಚಿಕಿತ್ಸೆಗೆ ದಾಖಲಾದ ವೇಳೆ ಸೋಂಕು ಅವರ ಶ್ವಾಸಕೋಶವನ್ನು ಆವರಿಸಿತ್ತು ಎಂದು ಅವರ ಆಪ್ತರು ಮಾಹಿತಿ ನೀಡಿದರು.

ಅವರು ಓದಿದ್ದು ಚೆನ್ನೈನಲ್ಲಿ. ನಗರದಲ್ಲಿ ಅವರು ಕಣಗಾಲ್‌ ನೃತ್ಯಾಲಯ ಹೆಸರಿನ ನಾಟ್ಯ ಶಾಲೆ ನಡೆಸುತ್ತಿದ್ದರು. ಅಪಾರ ಶಿಷ್ಯ ಬಳಗವನ್ನು ಹೊಂದಿದ್ದ ಅವರು, ಸಾಕಷ್ಟು ಕಲಾವಿದರನ್ನು ಅವರು ಚಲನಚಿತ್ರ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನೀಡಿದ್ದರು.

ADVERTISEMENT

ತಂದೆಯ ಶಿಸ್ತನ್ನೇ ತಮ್ಮ ಬದುಕಿನಲ್ಲೂ ಅವರು ಮೈಗೂಡಿಸಿಕೊಂಡಿದ್ದರು. ‘ಜನ ತಂದೆಯವರನ್ನು ನನ್ನಲ್ಲಿ ಕಾಣುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಅವರು, ‘ಪುಟ್ಟಣ್ಣ ಕಣಗಾಲ್‌ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರ ಕುಟುಂಬದವರನ್ನು ಸೌಜನ್ಯಕ್ಕೂ ಆಹ್ವಾನಿಸುವುದಿಲ್ಲ’ ಎಂದೂ ಹಿಂದೊಮ್ಮೆ ಬೇಸರ ತೋಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.