ADVERTISEMENT

ವರ್ಕ್‌ ಫ್ರಮ್ ಹೋಮ್‌ನಿಂದ ಉದಯಿಸಿದ ಕಲಾವಿದರು

ಕೊರೊನಾ ಸಂಕಷ್ಟದ ಮಧ್ಯೆ ಅರಳಿದ ಕಲಾಕುಸುಮಗಳು, ರಂಗ ತರಬೇತಿ ಪಡೆದ ಉದ್ಯೋಗಸ್ಥರು

ಕೆ.ಎಸ್.ಗಿರೀಶ್
Published 15 ಜನವರಿ 2021, 1:39 IST
Last Updated 15 ಜನವರಿ 2021, 1:39 IST
ರಮ್ಯಾ
ರಮ್ಯಾ   

ಮೈಸೂರು: ಕೊರೊನಾ ಲಾಕ್‌ಡೌನ್‌ ನಂತರ ಬಂದ ‘ವರ್ಕ್‌ ಫ್ರಮ್ ಹೋಮ್’ ವ್ಯವಸ್ಥೆಯು ಸಾಫ್ಟ್‌ವೇರ್ ಎಂಜಿನಿಯರ್‌ಗಳಲ್ಲಿ ಸುಪ್ತ ವಾಗಿ ಹುದುಗಿದ್ದ ಪ್ರತಿಭೆಯನ್ನು ಹೊರ ಹಾಕುವಂತೆ ಮಾಡಿದೆ. ರಂಗ ತರಬೇತಿ ಪಡೆ ಯಲು ಸಮಯ ನೀಡಿತಲ್ಲದೇ ಕಲಾವಿದ ರಾಗಿ ಹೊರಹೊಮ್ಮಲು ಅವಕಾಶ ನೀಡಿದೆ.

ಇಲ್ಲಿನ ರಂಗಾಯಣವು ಕೊರೊನಾ ಬಂದ ನಂತರ ಮೊದಲ ಬಾರಿಗೆ ಆಯೋಜಿಸಿದ ಸುಬ್ಬಯ್ಯ ನಾಯ್ಡು ಅಭಿನಯ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ 26 ಮಂದಿಯಲ್ಲಿ 9 ಮಂದಿ ಉದ್ಯೋಗಸ್ಥರು. ‘ವರ್ಕ್‌ ಫ್ರಮ್ ಹೋಮ್’ ವ್ಯವಸ್ಥೆ ಜಾರಿಯಾಗಿದ್ದರಿಂದ ಮೈಸೂರಿಗೆ ವಾಪಸ್ಸಾದ ಇವರು ತಮ್ಮ ಬಿಡುವಿನ ಸಮಯದಲ್ಲಿ ರಂಗ ತರಬೇತಿ ಶಿಬಿರ ಸೇರಿ ಇದೇ ಮೊದಲ ಬಾರಿಗೆ ವೇದಿಕೆಯನ್ನೇರಿ ‘ಸೀತಾ ಸ್ವಯಂವರ’ ನಾಟಕವನ್ನು ಗುರುವಾರ ಪ್ರದರ್ಶಿಸಿದ್ದಾರೆ.

ನಾಟಕದ ಕಲಾವಿದರಾದ ರಮ್ಯಾ ಅವರನ್ನು ‘ಪ‍್ರಜಾವಾಣಿ’ ಮಾತನಾಡಿಸಿದಾಗ ಅವರು ಸಂತಸದಿಂದಲೇ ‘ವರ್ಕ್‌ ಫ್ರಮ್‌ ಹೋಮ್‌’ನಿಂದ ತಮಗೆ ಒದಗಿ ಬಂದ ಅವಕಾಶದ ಕುರಿತು ಹೇಳಿದರು.

ADVERTISEMENT

‘ಪತಿಗೂ ‘ವರ್ಕ್‌ ಫ್ರಮ್‌ ಹೋಮ್‌’ ಇದ್ದುದ್ದರಿಂದ ಮಗುವನ್ನು ಅವರು ನೋಡಿಕೊಂಡರು. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಸಂಜೆಯ ನಂತರ ನಾನು ತರಬೇತಿ ಶಿಬಿರಕ್ಕೆ ಬಂದೆ. ಈಗ ಚೊಚ್ಚಲ ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ’ ಎಂದು ತಿಳಿಸಿದರು.

ಬೆಂಗಳೂರಿನ ರಾಬರ್ಟ್ ಭಾಷ್ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿಶ್ವಾಸ್ ಪ್ರತಿಕ್ರಿಯಿಸಿ, ‘ಮನೆಯಿಂದಲೇ ಕೆಲಸ ಮಾಡುವಂತಹ ಅವಕಾಶ ಸಿಕ್ಕಿದ ಮೇಲೆ ಮನೆಯಲ್ಲಿದ್ದು ಸಾಕಾಯಿತು. ರಂಗಾಯಣ ಶಿಬಿರದ ಮಾಹಿತಿ ತಿಳಿದು ಬೆಂಗಳೂರಿನಿಂದ ಇಲ್ಲಿಗೆ ಬಂದು ತಂದೆ, ತಾಯಿ ಜತೆ ನೆಲೆಸಿದೆ. ಬೆಳಿಗ್ಗೆ ಹೊತ್ತು ಕೆಲಸ ಮಾಡಿ ಸಂಜೆ ವೇಳೆಗೆ ತರಬೇತಿ ಪಡೆದೆ. ನಿಜಕ್ಕೂ ವರ್ಕ್‌ ಫ್ರಮ್‌ ಹೋಮ್ ಇರದೇ ಹೋಗಿದ್ದರೆ ಈ ಅವಕಾಶ ಸಿಕ್ಕುತ್ತಿರಲಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.