ADVERTISEMENT

ಬನ್ನೇರುಘಟ್ಟ: ಬೋನಿಗೆ ಬಿದ್ದ ಕಿಲಾಡಿ ಕರಡಿ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 5:18 IST
Last Updated 10 ಏಪ್ರಿಲ್ 2021, 5:18 IST
ಬೋನಿಗೆ ಬಿದ್ದಿರುವ ಕರಡಿ
ಬೋನಿಗೆ ಬಿದ್ದಿರುವ ಕರಡಿ   

ಆನೇಕಲ್: ತಾಲ್ಲೂಕಿನಬನ್ನೇರುಘಟ್ಟ ಪ್ರಾಣಿ ಸಂರಕ್ಷಣಾ ಕೇಂದ್ರದ ಬಳಿ ಶುಕ್ರವಾರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿಯೊಂದು ಸೆರೆ ಸಿಕ್ಕಿದ್ದು,ಇದು ಹತ್ತು ದಿನಗಳ ಹಿಂದೆ ಪರಾರಿಯಾಗಿದ್ದ ಕರಡಿಯೇ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತುಮಕೂರಿನಿಂದ ಕರಡಿ ಸಂರಕ್ಷಿಸಿ ತಂದಿದ್ದ ತಂಡವನ್ನು ಸ್ಥಳಕ್ಕೆ ಕರೆಯಿಸಲಾಗಿದೆ.

‘ಕರಡಿಯನ್ನು ಆರೈಕೆ ಮಾಡಲಾಗುತ್ತಿದೆ. ತುಮಕೂರಿನಿಂದ ಕರಡಿ ಸಂರಕ್ಷಿಸಿ ತರಲಾಗಿದ್ದ ತಂಡವನ್ನೂ ಬನ್ನೇರುಘಟ್ಟಕ್ಕೆ ಕರೆಯಿಸಲಾಗಿದ್ದು, ಅವರು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತುಮಕೂರಿನ ಕರಡಿಯ ಹೋಲಿಕೆಗಳನ್ನು ಭಾವಚಿತ್ರಗಳ ಮೂಲಕ ಹೋಲಿಕೆ ಮಾಡುತ್ತಿದ್ದಾರೆ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಸಿಬ್ಬಂದಿ ಕಾರ್ಯಾಚರಣೆ: ಕರಡಿಯು ಪ್ರಾಣಿ ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಬೋನಿನಿಂದ ತಪ್ಪಿಸಿಕೊಂಡಿತ್ತು. ನಂತರ ಆನೇಕಲ್‌ ಸಮೀಪದ ಶೆಟ್ಟಿಹಳ್ಳಿ, ತಟ್ನಹಳ್ಳಿ ಗ್ರಾಮಗಳಲ್ಲಿ ಎಂಟಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿತ್ತು. ಬಳಿಕ ಬೇಗೂರು ಬಳಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಇದನ್ನು ಹಿಡಿಯಲು ಹರಸಾಹಸ ಮಾಡಿದ್ದರೂ ಕಿಲಾಡಿ ಕರಡಿ ಕೈಗೆ ಸಿಗದೇ ಆಟವಾಡಿಸುತ್ತಿತ್ತು.

ADVERTISEMENT

ಈ ನಡುವೆಯೇ ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣಿ ಸಂರಕ್ಷಣಾ ಕೇಂದ್ರದ ಬಳಿ ಇಟ್ಟಿದ್ದ ಸಿ.ಸಿ ಟಿವಿಯಲ್ಲಿ ಕರಡಿ ಓಡಾಡಿರುವ ದೃಶ್ಯಗಳು ಪತ್ತೆಯಾಗಿದ್ದವು. ಇದನ್ನು ಅನುಸರಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ಪ್ರಾಣಿ ಪುನರ್‌ವಸತಿ ಕೇಂದ್ರದ ಸಮೀಪ ಬೋನು ಇಟ್ಟಿದ್ದರು.ಗುರುವಾರ ರಾತ್ರಿ 10.30ಗಂಟೆಗೆ ಬೇಗಿಹಳ್ಳಿ ಬಳಿ ಕರಡಿ ಓಡಾಡಿರುವುದನ್ನು ಸ್ಥಳೀಯರು ಗುರುತಿಸಿದ್ದಾಗಿ ತಿಳಿಸಿದ್ದಾರೆ. ಬೋನಿಗೂ, ಬೇಗಿಹಳ್ಳಿಗೂ ಕೇವಲ 2 ಕಿ.ಮೀ ದೂರವಿದೆ. ಹಾಗಾಗಿ, ಪರಾರಿಯಾಗಿದ್ದ ಕರಡಿಯೇ ಬೋನಿಗೆ ಬಿದ್ದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ‘ಪರಾರಿಯಾಗಿದ್ದ ಕರಡಿ ಮತ್ತು ಬೋನಿಗೆ ಸಿಕ್ಕಿಬಿದ್ದಿರುವ ಕರಡಿಯ ಕೂದಲನ್ನೂ ಸಂಗ್ರಹಿಸಲಾಗಿದೆ. ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ. ಕರಡಿಯು ಆರೋಗ್ಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಉದ್ಯಾನದ ವೈದ್ಯ ಡಾ.ಉಮಾಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.