ADVERTISEMENT

ಲೀಡ್‌ ಪಯಣದಲ್ಲಿ ‘ಇಕೊ ಫ್ರಿಜ್‌‘ ತಾಜಾತನ

ಪರಿಸರಸ್ನೇಹಿ ಫ್ರಿಜ್‌ಗೆ ಮಡಕೆ, ಮರಳು, ಟಬ್‌ ಇಷ್ಟೇ ಸಾಕು

ಕೃಷ್ಣಿ ಶಿರೂರ
Published 19 ಜನವರಿ 2021, 6:41 IST
Last Updated 19 ಜನವರಿ 2021, 6:41 IST
ಲೀಡ್‌ ತಂಡದ ವಿದ್ಯಾರ್ಥಿನಿ ಸಿದ್ಧಪಡಿಸಿದ ಇಕೊ ಫ್ರಿಜ್‌
ಲೀಡ್‌ ತಂಡದ ವಿದ್ಯಾರ್ಥಿನಿ ಸಿದ್ಧಪಡಿಸಿದ ಇಕೊ ಫ್ರಿಜ್‌   

ಈಗೆಲ್ಲ ಮನೆಯಲ್ಲಿ ರೆಫ್ರಿಜರೇಟರ್‌ ಅನ್ನೋದು ಅತಿ ಅವಶ್ಯ ಸಾಮಗ್ರಿಗಳಲ್ಲೊಂದೆನಿಸಿದೆ. ಫ್ರಿಜ್‌ ಇಲ್ಲದ ಮನೆಗಳಿಲ್ಲ. ಕನಿಷ್ಠ ₹10ಸಾವಿರ ಕೊಟ್ಟಾದರೂ ಮನೆಗೊಂದು ಫ್ರಿಜ್‌ ಬೇಕೆಬೇಕು ಎನ್ನುವ ಕಾಲವಿದು. ಇಂಥ ಕಾಲಘಟ್ಟದಲ್ಲೇ ದೇಶಪಾಂಡೆ ಫೌಂಡೇಷನ್‌ನ ಲೀಡ್‌ ತಂಡದ ವಿದ್ಯಾರ್ಥಿಗಳು ಅತ್ಯಂತ ವೆಚ್ಚದಲ್ಲಿ ಪರಿಸರಸ್ನೇಹಿ ಮಡಕೆ ಫ್ರಿಜ್‌ ತಯಾರಿಸಿ, ಅದನ್ನು ಬಳಸುವಂತೆ ಜನಜಾಗೃತಿ ಮಾಡುತ್ತಿದ್ದಾರೆ.

12 ವರ್ಷಗಳ ಹಿಂದೆ ಆರಂಭಗೊಂಡು ಪ್ರತಿವರ್ಷ ಒಂದಿಲ್ಲೊಂದು ವಿನೂತನ ರೀತಿಯಲ್ಲಿ ತನ್ನ ಪಯಣವನ್ನು ನಡೆಸುವ ಲೀಡ್‌ ತಂಡ, ಈ ವರ್ಷ ಆಯ್ದುಕೊಂಡಿದ್ದು ಪರಿಸರ ಅನ್ನೋ ವಿಷಯ. ಪ್ರಕೃತಿಗಾಗಿ ತಮ್ಮಿಂದ ಏನಾದರೂ ಸಹಾಯವಾಗಬೇಕು ಎಂಬ ಉದ್ದೇಶದಿಂದ ರೂಪಿಸಲಾದ ಯೋಜನೆಯ ಲೀಡ್‌ ಟೀಮ್‌ನಲ್ಲಿ ಈ ವರ್ಷ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರ, ವಿಜಯಪುರ, ಬೆಳಗಾವಿ, ಧಾರವಾಡ ಹಾಗೂ ತೆಲಂಗಾಣದಿಂದ ವಿದ್ಯಾರ್ಥಿಗಳು ಒಟ್ಟು 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಇವರೆಲ್ಲರಿಗೂ ಧಾರವಾಡದ ನೇಚರ್‌ ಫಸ್ಟ್‌ ಇಕೊ ವಿಲೇಜ್‌ನಲ್ಲಿ ಒಟ್ಟು 16 ಬಗೆಯ ಪರಿಸರ ಸ್ನೇಹಿ ಮಾದರಿಗಳ ತಯಾರಿಸುವ ಕುರಿತು ತರಬೇತಿ ನೀಡಲಾಯಿತು. ಒಂದು ವಾರದ ತರಬೇತಿಯಲ್ಲಿ ವಿದ್ಯಾರ್ಥಿಗಳು ತಾವು ಪಡೆದ ಕೌಶಲವನ್ನು ಜನರಿಗೆ ತಲುಪಿಸಲು ಆಯ್ದುಕೊಂಡಿದ್ದು ಮಾತ್ರ ಕಡಿಮೆ ವೆಚ್ಚದ ಇಕೊ ಫ್ರಿಜ್‌ (ಪರಿಸರಸ್ನೇಹಿ ಫ್ರಿಜ್‌)ಅನ್ನು.

ಮಡಕೆ, ಮರಳು, ಟಬ್‌ ಅಥವಾ ಬಿದಿರಿನ ಬುಟ್ಟಿ ಇವೇ ಮೂರು ಇಕೊ ಫ್ರಿಜ್‌ ತಯಾರಿಸಲು ಬೇಕಾದ ಅಗತ್ಯ ವಸ್ತುಗಳು. ಟಬ್‌ ಅಥವಾ ಬಿದಿರಿನ ಬುಟ್ಟಿಯಲ್ಲಿ ತುಸು ದೊಡ್ಡ ಗಾತ್ರದ ಮಡಕೆಯನ್ನಿಟ್ಟು, ಅದರ ಸುತ್ತಲೂ ಮರಳನ್ನು ತುಂಬಿ, ಆ ಮರಳು ಒದ್ದೆಯಾಗಿರುವಂತೆ ನೋಡಿಕೊಳ್ಳಬೇಕು. ಇಷ್ಟು ಮಾಡಿದರೆ ಇಕೊ ಫ್ರಿಜ್‌ ಬಳಕೆಗೆ ಸಿದ್ಧ. ಮಡಕೆಯೊಳಗೆ ತರಕಾರಿ, ಸೊಪ್ಪು, ಹಣ್ಣುಗಳನ್ನು ಇಟ್ಟರೆ ಅವು ವಾರದವರೆಗೂ ತಾಜಾತನದಿಂದ ಇರಲು ಸಾಧ್ಯ. ಇದಕ್ಕೆ ತಗಲುವ ಕನಿಷ್ಠ ವೆಚ್ಚ ₹100; ಗರಿಷ್ಠ ₹500.

ADVERTISEMENT

ತರಬೇತಿ ಪಡೆದ 60 ವಿದ್ಯಾರ್ಥಿಗಳಲ್ಲಿ ಈಗಾಗಲೇ 47 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಇಕೊ ಫ್ರಿಜ್‌ ತಯಾರಿಸಿ ಅವುಗಳ ಬಳಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಪರಿಸರಸ್ನೇಹಿ ಫ್ರಿಜ್‌ ಬಳಕೆಗೆ ಪ್ರೇರೇಪಿಸುತ್ತ, ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ನೆರೆ ಹೊರೆಯ ಮನೆಗಳಲ್ಲಿ ಇಕೊ ಫ್ರಿಜ್‌ ಬಳಸುವಂತೆ ಮನವೊಲಿಸಿ ತರಬೇತಿ ನೀಡುತ್ತಿದ್ದಾರೆ. ಕೆಲವರು ಮಡಕೆಗಳ ಮೇಲೆ ಚಿತ್ತಾರ ಬಿಡಿಸಿ, ಆಕರ್ಷಿಸುವಂತೆ ಮಾಡಿದ್ದಾರೆ.

ಲೀಡ್‌ ತಂಡದ ವಿದ್ಯಾರ್ಥಿಗಳಿಂದ ಇಕೊ ಫ್ರಿಜ್‌ ಜಾಗೃತಿ

ಕಡಿಮೆ ಎಂದರೂ ₹10ಸಾವಿರ ಕೊಟ್ಟು ತರುವ ಫ್ರಿಜ್‌ಗೆ 1–2 ವಾಟ್‌ ವಿದ್ಯುತ್‌ ಬೇಕು. ಆ ವಿದ್ಯುತ್‌ಗೆ ಬಿಲ್‌ಗೆ ಹೆಚ್ಚುವರಿ ಹಣ ನೀಡಬೇಕು. ಫ್ರಿಜ್‌ನಿಂದ ಬಿಡುಗಡೆಯಾಗುವ ಕ್ಲೋರೊಫ್ಲೂರೊ ಕಾರ್ಬನ್‌ (CFC) ವಾಯುಮಾಲಿನ್ಯಕ್ಕೆ ದಾರಿಯಾಗಲಿದೆ. ಪರಿಸರಕ್ಕೂ ಹಾನಿ. ವಾಯುಮಾಲಿನ್ಯದಿಂದ ಭಾರತದಲ್ಲಿ ಕಳೆದ ವರ್ಷ 17 ಲಕ್ಷ ಜನರು ಮೃತಪಟ್ಟಿರುವುದು ಇತ್ತೀಚೆಗೆ ಲ್ಯಾನ್ಸೆಟ್‌ಪ್ಲಾನೆಟರಿ ಹೆಲ್ತ್‌ ನಿಯತಕಾಲಿಕದಲ್ಲಿ ಪ್ರಕಟವಾಗ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರಿಜ್‌ನಲ್ಲಿ ಇಟ್ಟು ಬಳಸುವ ತರಕಾರಿ, ಸೊಪ್ಪು, ಹಣ್ಣುಗಳು ಅನಾರೋಗ್ಯಕ್ಕೂ ದಾರಿಯಾಗಲಿವೆ ಎಂಬ ಅಧ್ಯಯನ ವರದಿಗಳೂ ಆಗಾಗ ನಮ್ಮ ಗಮನ ಸೆಳೆಯುತ್ತಿವೆ. ಆದರೆ ಇಕೊ ಫ್ರಿಜ್‌ನಲ್ಲಿ ಇಡುವ ತರಕಾರಿ, ಸೊಪ್ಪು, ಹಣ್ಣುಗಳ ಬಳಕೆಯಿಂದ ಆರೋಗ್ಯ ಕೆಡದು ಎಂಬುದನ್ನು ಲೀಡ್‌ ತಂಡದ ಹಿರಿಯ ವ್ಯವಸ್ಥಾಪಕ ಅಭಿನಂದನ ಕವಳೆ ಪ್ರತಿಪಾದಿಸುತ್ತಾರೆ.

‘ನಾರ್ಮಲ್‌ ಫ್ರಿಜ್‌ಗೆ ಹೋಲಿಸಿದರೆ ಇಕೊ ಫ್ರಿಜ್‌ ತೀರಾ ಕಡಿಮೆ ವೆಚ್ಚದಾಯಕ. ವಿದ್ಯುತ್‌ನ ಅಗತ್ಯವೂ ಇಲ್ಲದ್ದರಿಂದ ಪ್ರತಿ ತಿಂಗಳೂ ಫ್ರಿಜ್‌ಗಾಗಿ ಹೆಚ್ಚುವರಿ ವಿದ್ಯುತ್‌ ಬಿಲ್‌ ಭರಿಸುವ ಅಗತ್ಯವಿಲ್ಲ. ಪರಿಸರಕ್ಕೆ ಹಾನಿಯಾಗುವ ಚಿಂತೆಯೂ ಇರದು’ ಎನ್ನುತ್ತಾರೆ ಲೀಡ್‌ ತಂಡದ ಹಿರಿಯ ವ್ಯವಸ್ಥಾಪಕ ಅಭಿನಂದನ ಕವಳೆ ಅವರು.

‘ಇಕೊ ಫ್ರಿಜ್‌ಅನ್ನು ಸಿದ್ಧಪಡಿಸಿ ಮನೆಯಲ್ಲಿ ಬಳಕೆ ಮಾಡುತ್ತಿರುವುದರ ಜೊತೆಗೆ ನನ್ನ ಹಳ್ಳಿಯಲ್ಲಿ ಅದರ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಈಗಾಗಲೇ 6 ಮಂದಿ ಮನೆಯಲ್ಲಿ ಪರಿಸರ ಸ್ನೇಹಿ ಫ್ರಿಜ್‌ ತಯಾರಿಸಿ, ಬಳಸುತ್ತಿದ್ದಾರೆ. ನಾವೀಗ ಫ್ರಿಜ್‌ಗೆ ಅಡಿಕ್ಟ್‌ ಆಗಿದ್ದೇವೆ. ಆದರೆ ಪ್ರಕೃತಿಗಾಗಿ, ನಮಗಾಗಿ ನಾವು ತ್ಯಾಗಮನೋಭಾವ ಹೊಂದುವುದು ಅನಿವಾರ್ಯ. ನಾರ್ಮಲ್‌ ಫ್ರಿಜ್‌ಗೆ ಪರ್ಯಾಯವಾಗಿ ಮಡಕೆ ಫ್ರಿಜ್‌ ಬಳಸಿದಲ್ಲಿ ಪರಿಸರ ರಕ್ಷಣೆಯಲ್ಲಿ ನಮ್ಮದೊಂದು ಅಳಿಲುಸೇವೆಯಾಗಲಿದೆ’ ಎನ್ನುತ್ತಾರೆ ದಾವಣಗೆರೆಯಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿರುವ ಜೀವಿತಾ ತಕ್ಕನಹಳ್ಳಿ.

ಚಿತ್ರದರ್ಗ ಜಿಲ್ಲೆ ಮೊಳಕಾಲ್ಮುರಿನ ಬಿಕಾಂ ಓದುತ್ತಿರುವ ವಂದನಾ ಕೆ, ಮಡಕೆ ಫ್ರಿಜ್‌ ವಿಚಾರದಲ್ಲಿ ಫುಲ್‌ಫೀದಾ ಆಗಿದ್ದಾರೆ. ಮನೆಯಲ್ಲೇ ಇಕೊ ಫ್ರಿಜ್‌ ಸಿದ್ಧಪಡಿಸಿ ಬಳಸುತ್ತಿದ್ದು, ನಾಲ್ಕು ದಿನ ತರಕಾರಿ, ಸೊಪ್ಪು ತಾಜಾತನದಿಂದ ಉಳಿಯಲಿದೆ ಎನ್ನುತ್ತಾರೆ. ನಾರ್ಮಲ್‌ ಫ್ರಿಜ್‌ನಲ್ಲಿ ಇಟ್ಟ ತರಕಾರಿ, ಹಣ್ಣುಗಳ ಸತ್ವ ಕಳೆದು ಹೋಗಲಿದೆ. ಆದರೆ ಮಡಕೆ ಫ್ರಿಜ್‌ನಲ್ಲಿ ಇಡುವ ತರಕಾರಿಗಳಲ್ಲಿ ಸತ್ವಗಳು ಹಾಗೇ ಉಳಿದು ಆರೋಗ್ಯ ನೀಡಲಿದೆ ಎನ್ನುತ್ತಾರೆ ವಂದನಾ.

ಇಕೊ ಫ್ರಿಡ್‌ನಲ್ಲಿ ಇಟ್ಟ ತರಕಾರಿ ತಾಜಾತನ ಉಳಿಸಿಕೊಂಡಿರುವುದು

ಲೀಡ್‌ ಪಯಣದಲ್ಲಿ ಹೆಜ್ಜೆ ಇಡಬೇಕೆಂಬ ಬಯಕೆಯುಳ್ಳ ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳು www.leadcampus.org ಇಲ್ಲಿಗೆ ಲಾಗಿನ್ ಆಗಬಹುದು.

* ಮಡಕೆ ಫ್ರಿಜ್‌ನಲ್ಲಿ ಹಾಲು, ಮೊಸರು, ತರಕಾರಿ,ಹಣ್ಣುಗಳನ್ನು ‌ನಾಲ್ಕೈದು ದಿನಗಳವರೆಗೆ ಇಟ್ಟು ಸಂರಕ್ಷಿಸಬಹುದು. ನಿರುದ್ಯೋಗಿಗಳು ಪರಿಸರ ಪೂರಕ ಯೋಜನೆಗಳನ್ನು ಅಳವಡಿಸಿಕೊಳ್ಳಲು ಮುಂದಾದರೆ ನೇಚರ್‌ ಫಸ್ಟ್‌ ಇಕೊ ವಿಲೇಜ್‌ ಉಚಿತವಾಗಿ ಅಗತ್ಯ ತರಬೇತಿಯನ್ನು ನೀಡಲಿದೆ.

- ಪಿ.ವಿ.ಹಿರೇಮಠ ಸಂಸ್ಥಾಪಕ, ನೇಚರ್‌ ಫಸ್ಟ್‌ ಇಕೊ ವಿಲೇಜ್‌ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.