ADVERTISEMENT

ಪಟಾಕಿ ಸಂಭ್ರಮ: ಇರಲಿ ಸಂಯಮ

ಪ್ರಾಣಿಗಳಿಗೂ ಕುತ್ತು ಪಟಾಕಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 19:30 IST
Last Updated 25 ಅಕ್ಟೋಬರ್ 2019, 19:30 IST
   

ಮನುಷ್ಯರಿಗಿಂತ ಹೆಚ್ಚು ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಪ್ರಾಣಿಗಳಿಗಿರುತ್ತದೆ. ಪಟಾಕಿಯ ಶಬ್ದ ಅದಕ್ಕೆ ಕಿರಿಕಿರಿ, ಭಯ, ಆತಂಕ ಮೂಡಿಸುತ್ತದೆ. ಸ್ವರಕ್ಷಣೆಗೆಂದು ಸುರಕ್ಷಿತ ಸ್ಥಳಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆದಾಡುತ್ತಲೇ ಇರುತ್ತವೆ. ಕಾಯಿಲೆಗಳಿಂದ ಬಳಲುವ ನಾಯಿಗಳು ಪಟಾಕಿಯ ಜೋರು ಶಬ್ದದಿಂದ ಹೃದಯಾಘಾತಕ್ಕೊಳಗಾದ ಪ್ರಕರಣಗಳು ನಗರದಲ್ಲಿ ಸಾಕಷ್ಟಿವೆ.

‘ಪಟಾಕಿಯಿಂದ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಅಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳ ಜೀವಕ್ಕೂ ಕುತ್ತು. ಪಟಾಕಿಯ ಜೋರುಸದ್ದಿಗೆ ಭಯಗೊಳ್ಳುವ ನಾಯಿಗಳ ಸ್ವಭಾವವೂ ಬದಲಾಗಬಹುದು. ನಾಯಿ, ಬೆಕ್ಕು ಸ್ವರಕ್ಷಣೆಗೆ ಸ್ಟೇರ್‌ಕೆಸ್‌, ವಾರ್ಡ್‌ರೋಬ್‌ನಂತಹ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ.ಮಂಚದ ಕೆಳಗೆ ಅವಿತುಕೊಳ್ಳುತ್ತವೆ. ಭಯದಿಂದ ಸಾಕು ಪ್ರಾಣಿಗಳ ಮೈಅಕ್ಷರಶಃ ನಡುಗುತ್ತಿರುತ್ತದೆ. 2–3 ದಿನ ಅವು ಊಟವನ್ನೂ ಮಾಡುವುದಿಲ್ಲ. ಹೆಚ್ಚಿನ ಕಿರಿಕಿರಿಯಾದರೆ ಅವು ತಿರುಗಿ ಬೀಳಬಹುದು’ ಎಂದು ಎಚ್ಚರಿಕೆ ನೀಡುತ್ತಾರೆ ಬೆಂಗಳೂರು ಪೆಟಾ ಜನರಲ್‌ ಮ್ಯಾನೇಜರ್‌, ಹಿರಿಯ ಪಶುವೈದ್ಯ ಕರ್ನಲ್‌ ನವಾಜ್ ಷರೀಫ್‌.

ನವಾಜ್‌

ಪಟಾಕಿಗೆ ಹೆದರಿದ ಬೀದಿನಾಯಿಗಳು ತಿರುಗಾಡುವುದನ್ನು ನೋಡಿ ಜನರು ಅದಕ್ಕೆ ಉಪದ್ರ ಮಾಡುತ್ತಾರೆ. ಆದರೆ ಅವುಗಳಿಗೆ ನೀರು ಕೊಟ್ಟು, ಉಪಚರಿಸಿ, ಪ್ರೀತಿಯಿಂದ ಕಾಣುವಂತೆ ಅವರು ಸಲಹೆ ನೀಡುತ್ತಾರೆ.

ADVERTISEMENT

ಕೆಲವು ಬೀದಿನಾಯಿಗಳು ಅಪಾರ್ಟ್‌ಮೆಂಟ್‌, ಕಟ್ಟಡಗಳ ಸ್ಟೇರ್‌ಕೇಸ್‌, ಮೆಟ್ಟಿಲುಗಳ ಕೆಳಗೆ ಅವಿತು ಕೂರುತ್ತವೆ. ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಅದರ ಮೇಲೆ ದೌರ್ಜನ್ಯ ಎಸಗುವಂತಹ ಪ್ರಕರಣಗಳು ಈಗ ಹೆಚ್ಚು ನಡೆಯುತ್ತಿವೆ. ಪಟಾಕಿ ಶಬ್ದ ಕಡಿಮೆಯಾಗುತ್ತಿದ್ದಂತೆ ಅಲ್ಲಿಂದ ತಾವಾಗೇ ಜಾಗ ಖಾಲಿ ಮಾಡುತ್ತವೆ. ಅವುಗಳಿಗೆ ತೊಂದರೆ ಕೊಡಬೇಡಿ. ಸಾಕುಪ್ರಾಣಿಗಳು ಮನೆಯಲ್ಲಿದ್ದಾಗ, ಪಟಾಕಿ ಹೊರಗೆ ಸುಡುವಾಗ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಎನ್ನುವುದು ನವಾಜ್‌ ಸಲಹೆ.

ಪ್ರಸನ್ನ

ಮನೆಯೊಳಗೆ ಜಾಗ್ರತೆ
ಮನೆಯೊಳಗೆ ಸುರ್‌ಸುರ್‌ ಬತ್ತಿ, ದುರ್ಸು, ಹೂಕುಂಡದಂತಹ ಪಟಾಕಿಗಳನ್ನು ಸಿಡಿಸುವಾಗ ಸಾಕು ನಾಯಿ, ಬೆಕ್ಕುಗಳನ್ನು ದೂರವಿರಿಸಬೇಕು. ಪಟಾಕಿಯಲ್ಲಿನ ಸಲ್ಫರ್‌ ರಾಸಾಯನಿಕಗಳು ಅವುಗಳ ಚರ್ಮಕ್ಕೆ ಕಿರಿಕಿರಿ ತರುತ್ತದೆ. ಹೊಗೆಯಿಂದ ಉಸಿರಾಟದ ತೊಂದರೆ, ಕಣ್ಣು ಕೆಂಪಗಾಗುವುದು, ಅಲರ್ಜಿ ಕಾಣಿಸಬಹುದು. ನಾಯಿ, ಬೆಕ್ಕುಗಳಿಗೆ ಉದ್ದ ಕೂದಲಿದ್ದರೆ ಅದಕ್ಕೆ ಬೆಂಕಿ ತಾಗಬಹುದು. ಪಟಾಕಿ ಮನೆಗೆ ತರುವ ಮುಂಚೆ ಪ್ರಾಣಿಗಳ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕು. ಸಾಕುಪ್ರಾಣಿಗಳ ವರ್ತನೆ ಅತಿರೇಕವಾಗಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ನವಾಜ್‌ ಹೇಳುತ್ತಾರೆ.

ಪಕ್ಷಿಗಳಿಗೂ ಅಪಾಯ
ರಾಕೆಟ್‌ಗಳು ಸಿಡಿದು ಅದು ಕೆಳಕ್ಕೆ ಬೀಳುವಾಗ ಮರದಲ್ಲಿನ ಪಕ್ಷಿಗಳು, ಅದರಲ್ಲಿನ ಕೆಲ ಜೀವಿಗಳಿಗೆ ಹಾನಿ ಉಂಟು ಮಾಡುತ್ತದೆ. ಪಟಾಕಿಯ ರಾಸಾಯನಿಕ ಹೊಗೆ ಪಕ್ಷಿ ಸಂಕುಲದ ಜೀವಕ್ಕೆ ಕುತ್ತು ತರುತ್ತದೆ. ಗುಬ್ಬಚ್ಚಿಯಂಥ ಸಣ್ಣ ಹಕ್ಕಿಗಳಿಗೆ ಅದರ ಹೊಗೆ ಬೇಗ ಕೆಟ್ಟ ಪರಿಣಾಮ ಬೀರುತ್ತದೆ.

ಪಟಾಕಿಯ ಜೋರು ಸದ್ದಿಗೆ ಹಕ್ಕಿಗಳು ಗಾಬರಿ ಬೀಳುತ್ತವೆ. ಅವು ವಾಸವಾಗಿರುವ ಮರಗಳ ಸುತ್ತ ಪಟಾಕಿ ಸುಟ್ಟಾಗ ಅವುಗಳ ಆವಾಸಸ್ಥಳಕ್ಕೆ ತೊಂದರೆ ಆಗುವುದರಿಂದ ಗಾಬರಿಯಾಗುತ್ತವೆ ಎನ್ನುತ್ತಾರೆ ಬಿಬಿಎಂಪಿ ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್‌ ಎ.

ಮಾಂಜಾ ದಾರವೂ ಅಪಾಯ
ದೀಪಾವಳಿ ಸಮಯದಲ್ಲಿ ಮಕ್ಕಳು ಗಾಳಿಪಟ ಹಾರಿಸುತ್ತಾರೆ. ಇದಕ್ಕೆ ಬಳಸುವ ಮಾಂಜಾ ದಾರ ಹಕ್ಕಿಗಳ ಜೀವಕ್ಕೆ ಕುತ್ತು ತರುತ್ತದೆ. ಮಾಂಜಾ ದಾರ ಅದರ ಗಂಟಲು, ಕಾಲಿಗೆ ಸಿಕ್ಕಿಕೊಳ್ಳುತ್ತದೆ. ಬೇರೆ ಸಮಯಕ್ಕೆ ಹೋಲಿಸಿದರೆ ದೀಪಾವಳಿ ಸಮಯದಲ್ಲೇ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡಕ್ಕೆ ಹೆಚ್ಚು ಕರೆಗಳು ಬರುತ್ತವೆ ಎನ್ನುತ್ತಾರೆ ಪ್ರಸನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.