ADVERTISEMENT

ಆಳ-ಅಗಲ: ಉಗ್ರರ ನಿಲುಕಿನಲ್ಲಿ ಅಫ್ಗನ್‌ ಶಸ್ತ್ರಕೋಠಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:45 IST
Last Updated 29 ಆಗಸ್ಟ್ 2021, 19:45 IST
ಅಫ್ಗನ್‌ ಸೈನಿಕರಿಗೆ ಅಮೆರಿಕ ಸೇನಿಯು ನೀಡಿದ್ದ ಸಮವಸ್ತ್ರವನ್ನು ಧರಿಸಿರುವ ತಾಲಿಬಾನ್ ಸೈನಿಕರು
ಅಫ್ಗನ್‌ ಸೈನಿಕರಿಗೆ ಅಮೆರಿಕ ಸೇನಿಯು ನೀಡಿದ್ದ ಸಮವಸ್ತ್ರವನ್ನು ಧರಿಸಿರುವ ತಾಲಿಬಾನ್ ಸೈನಿಕರು   

ತಾಲಿಬಾನಿಗಳು ಎಂದರೆ ಸಲ್ವಾರ್-ಕಮೀಜ್ ಧರಿಸಿ, ರಷ್ಯಾದ ಎಕೆ-47 ಮತ್ತು ಎಕೆ-56 ರೈಫಲ್ ಹೊತ್ತ ಉಗ್ರರು ಎಂಬ ಭಾವನೆ ಇತ್ತು. ಆದರೆ ಆಗಸ್ಟ್ 14ರ ನಂತರ ತಾಲಿಬಾನಿಗಳು ತಮ್ಮ ಟ್ವಿಟರ್, ಫೇಸ್‌ಬುಕ್‌ ಖಾತೆಗಳಲ್ಲಿ ಹಾಕುತ್ತಿರುವ ಚಿತ್ರಗಳು ಬೇರೆಯದ್ದೇ ಚಿತ್ರಣ ನೀಡುತ್ತವೆ. ಈ ರೀತಿ ಪ್ರಕಟಿಸಿದ ಮೊದಲ ಚಿತ್ರದಲ್ಲಿ ರಷ್ಯಾ ನಿರ್ಮಿತ ಎಂಐ-24ವಿ ಕದನ ಹೆಲಿಕಾಪ್ಟರ್‌ ಜತೆ ತಾಲಿಬಾನ್ ಉಗ್ರರು ನಿಂತಿದ್ದರು. ಅದು ಅಫ್ಗಾನಿಸ್ತಾನ ಸೇನೆಗೆ 2019ರಲ್ಲಿ ಭಾರತವು ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್ ಆಗಿತ್ತು. ಭಾರತವು ಹೀಗೆ ಅಫ್ಗನ್ ಸೇನೆಗೆ ನೀಡಿದ್ದ 5 ಹೆಲಿಕಾಪ್ಟರ್‌ಗಳು ಈಗ ತಾಲಿಬಾನ್ ವಶವಾಗಿವೆ.

ನಂತರದ ವಾರದಲ್ಲಿ ಇಂತಹ ಹಲವು ಚಿತ್ರಗಳು ವೈರಲ್ ಆದವು. ಅಫ್ಗನ್ ಸೇನೆಗೆ 20 ವರ್ಷಗಳಲ್ಲಿ ಅಮೆರಿಕವು ಉಡುಗೊರೆಯಾಗಿ ನೀಡಿದ್ದ ಕದನ ಹೆಲಿಕಾಪ್ಟರ್‌ಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸೇನಾ ಸಲಕರಣೆಗಳು, ವಿಶೇಷ ಸೇನಾ ವಾಹನಗಳಾದ ಹಮ್ವೀಗಳ ಜತೆಗೆ ತಾಲಿಬಾನಿಗಳು ಚಿತ್ರ ತೆಗೆಸಿಕೊಂಡು ಸಂಭ್ರಮಿಸಿದ್ದರು. ಅಮೆರಿಕ ಸೈನಿಕರ ಸೇನಾ ಉಡುಪುಗಳನ್ನೂ ಧರಿಸಿ ಚಿತ್ರ ತೆಗೆಸಿಕೊಂಡಿದ್ದರು. ಆ ಚಿತ್ರ ಸಹ ವೈರಲ್ ಆಗಿತ್ತು.

20 ವರ್ಷಗಳಲ್ಲಿ ಅಮೆರಿಕವು ಅಫ್ಗನ್ ಸೈನಕ್ಕೆ ನೀಡಿದ್ದ ಶಸ್ತ್ರಾಸ್ತ್ರಗಳು, ವಾಹನಗಳು, ಹೆಲಿಕಾಪ್ಟರ್‌ಗಳು ಈಗ ತಾಲಿಬಾನಿಗಳ ವಶವಾಗಿವೆ. ಅಪಾರ ಪ್ರಮಾಣದ ಅತ್ಯಾಧುನಿಕ ಬಂದೂಕುಗಳು, ರಾಕೆಟ್ ಮತ್ತು ಗ್ರನೇಡ್ ಲಾಂಚರ್‌ಗಳು, ನೈಟ್‌ವಿಷನ್ ಬೈನಾಕ್ಯುಲರ್‌ಗಳು ಈಗ ತಾಲಿಬಾನಿಗಳ ಕೈಸೇರಿವೆ.

ADVERTISEMENT

ಉಗ್ರರ ನಿಕಟ ಒಡನಾಟ
ಅಫ್ಗಾನಿಸ್ತಾನದಲ್ಲಿ ಅಮೆರಿಕ ಇಷ್ಟು ವರ್ಷ ದಾಸ್ತಾನು ಮಾಡಿದ್ದ ಅತ್ಯಾಧುನಿಕ ಶಸ್ತ್ರಾಗಾರ ತಾಲಿಬಾನ್ ಕೈಗೆ ಸಿಕ್ಕಿದೆ. ತಾಲಿಬಾನ್‌ನ ಭಾಗವೇ ಆಗಿರುವ ಹಖ್ಖಾನಿ ಉಗ್ರ ಸಂಘಟನೆ, ಅಲ್ ಕೈದಾ ಹಾಗೂ ಸ್ಥಳೀಯ ಭಯೋತ್ಪಾದಕ ಸಂಘಟನೆಗಳು ಮತ್ತು ವಿರೋಧಿ ಪಾಳಯವಾದ ಖೊರಾಸನ್ ಸಂಘಟನೆಯ ನಡುವೆ ಶಸ್ತ್ರಾಸ್ತ್ರಕ್ಕೆ ಪೈಪೋಟಿ ಏರ್ಪಟ್ಟರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಾಲಿಬಾನ್ ಮತ್ತು ಹಖ್ಖಾನಿ ಸಂಬಂಧ: ಹಖ್ಖಾನಿ ಗುಂಪನ್ನು ಅತ್ಯಂತ ಮಾರಕ ಮತ್ತು ಅತ್ಯಾಧುನಿಕ ಭಯೋತ್ಪಾದಕ ಗುಂಪು ಎಂದು ಅಮೆರಿಕ ಪರಿಗಣಿಸಿದೆ. ಅಮೆರಿಕ ಸೇನೆ ಮೇಲೆ ಎಸಗಿದ ದಾಳಿ, ಅಫ್ಗನ್ ದಂಗೆ, ಅಲ್‌ ಕೈದಾ ಜತೆಗಿನ ಒಡನಾಟದಿಂದ ಈ ಗುಂಪನ್ನು ಉಗ್ರ ಸಂಘಟನೆ ಎಂದು ಪರಿಗಣಿಸಲಾಗಿದೆ.

ಹಖ್ಖಾನಿ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಅಮೆರಿಕ 2012ರಲ್ಲೇ ಘೋಷಿಸಿತ್ತು. ಗುಂಪಿನ ನಾಯಕ ಖಲೀಲ್ಹಖ್ಖಾನಿ ತಲೆಗೆ 10 ವರ್ಷಗಳ ಹಿಂದೆಯೇ 50 ಲಕ್ಷ ಡಾಲರ್ (ಸುಮಾರು ₹32.5 ಕೋಟಿ) ಬಹುಮಾನವನ್ನೂ ಘೋಷಿಸಿತ್ತು. ಈತ ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿಗೆ ನಿತ್ಯ ಹೋಗಿ ಬರುವ ಉಗ್ರ. ಈಗ ಅವನು ಅಫ್ಗಾನಿಸ್ತಾನದ ಹೊಸ ಸರ್ಕಾರದ ಭಾಗವೇ ಆಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಅಲ್ ಕೈದಾಕ್ಕೆ ತಾಲಿಬಾನ್‌ನ ರಾಯಭಾರಿ ಎಂದು ಕರೆಯಲಾಗುವ ಖಲೀಲ್, ಕಳೆದ ವಾರ ಕಾಬೂಲ್‌ನಲ್ಲಿ ಹೊಸ ಭದ್ರತಾ ಮುಖ್ಯಸ್ಥನಾಗಿ ಕಾಣಿಸಿಕೊಂಡಿದ್ದಾನೆ. ಹಖ್ಖಾನಿ ಸಂಘಟನೆಯ ಸದಸ್ಯರು ತಾಲಿಬಾನ್ ಒಳಗೆ ಪ್ರಮುಖ ಸ್ಥಾನ ಹೊಂದಿದ್ದಾರೆ. ಮಿಗಿಲಾಗಿ, ಅಫ್ಗಾನಿಸ್ತಾನದಲ್ಲಿ ತಾಲಿಬಾನ್,ಹಖ್ಖಾನಿ ಜಾಲ ಮತ್ತು ಅಲ್ ಖೈದಾ ಆಳವಾಗಿ ಬೆಸೆದುಕೊಂಡಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ತಾಲಿಬಾನ್, ತನ್ನ ಕಮಾಂಡ್ ಸಂರಚನೆಯಲ್ಲಿ ಹಖ್ಖಾನಿ ನಾಯಕರು ಮತ್ತು ಅಲ್ ಕೈದಾ ಸದಸ್ಯರನ್ನೂ ಸೇರಿಸಿಕೊಂಡಿದೆ.

ಐಎಸ್‌–ತಾಲಿಬಾನ್ ಸಂಘರ್ಷ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ಹೊಣೆ ಹೊತ್ತುಕೊಂಡಿರುವ ಐಎಸ್‌ನ ಅಫ್ಗನ್ ಘಟಕ ಖೊರಾಸನ್ ಅಥವಾ ಐಎಸ್‌–ಕೆ ಸಂಘಟನೆಯು ತಾಲಿಬಾನ್‌ನ ವಿರೋಧಿ. ಇದು ಅಲ್ ಕೈದಾ ಜೊತೆಗೂ ದೀರ್ಘಕಾಲದಿಂದ ಸಂಘರ್ಷ ನಡೆಸುತ್ತಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಕಾನೂನುಬಾಹಿರ ಎಂದು ಖೊರಾಸನ್ ಪ್ರತಿಪಾದಿಸುತ್ತದೆ.

ತಾಲಿಬಾನ್ ಹಾಗೂ ಖೊರಾಸನ್‌ – ಎರಡೂ ಸುನ್ನಿ ಪಂಗಡಕ್ಕೆ ಸೇರಿದ ಉಗ್ರಗಾಮಿ ಸಂಘಟನೆಗಳು. ಆದರೆ ಇವುಗಳ ನಡುವೆ ಗಂಭೀರವಾದ ಭಿನ್ನಾಭಿಪ್ರಾಯಗಳಿವೆ. ನಿಜವಾದ ಜಿಹಾದ್‌ನ ಧ್ವಜಧಾರಿಗಳು ತಾವು ಎಂದು ಎರಡೂ ಕಡೆಯವರು ಹೇಳಿಕೊಳ್ಳುತ್ತಾರೆ. ಎರಡೂ ಸಂಘಟನೆಗಳ ನಡುವೆ ಭಾರಿ ಸಂಘರ್ಷ ಇದೆ.

ಅಮೆರಿಕ ಮತ್ತು ತಾಲಿಬಾನ್ ನಡುವೆ ಏರ್ಪಟ್ಟ ಒಪ್ಪಂದವನ್ನು ಖೊರಾಸನ್ ಕಟುವಾಗಿ ಟೀಕಿಸಿತ್ತು. ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ಗೆ ವಿಶ್ವದಾದ್ಯಂತ ಇರುವ ಉಗ್ರ ಸಂಘಟನೆಗಳು ಶುಭ ಕೋರಿದ್ದರೂ, ಖೊರಾಸನ್‌ ಹಾಗೆ ಮಾಡಲಿಲ್ಲ. ಆತ್ಮಾಹುತಿ ದಾಳಿ ಮೂಲಕ ತಾಲಿಬಾನ್‌ಗೆ ಖೊರಾಸನ್ ತನ್ನ ಸಾಮರ್ಥ್ಯ ತೋರಿಸಿತು. ಸುಧಾರಣಾವಾದಿ ಸರ್ಕಾರ ರಚಿಸುವ ಭರವಸೆ ನೀಡಿರುವ ತಾಲಿಬಾನ್‌ಗೆ ಖೊರಾಸನ್ ಮಗ್ಗುಲ ಮುಳ್ಳಾಗಿದ್ದು, ಬಹುದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿವೆ.

ಪಾಕ್‌ ಉಗ್ರರಿಗೆ ತಾಲಿಬಾನ್‌ ಬಲ
ಅಫ್ಗಾನಿಸ್ತಾನವನ್ನು ತಾಲಿಬಾನ್‌ ಕೈವಶ ಮಾಡಿಕೊಂಡಿರುವ ವಿದ್ಯಮಾನವು ಜಗತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಪ್ರಾಬಲ್ಯವು ಭಾರತಕ್ಕೆ ಹಲವು ರೀತಿಯಲ್ಲಿ ಸಮಸ್ಯೆ ಒಡ್ಡಬಹುದು ಎಂದು ಭದ್ರತಾ ಪರಿಣತರು ವಿಶ್ಲೇಷಿಸಿದ್ದಾರೆ.

ತಾಲಿಬಾನ್‌, ಜಾಗತಿಕ ರೀತಿ ರಿವಾಜುಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ಸಂಘಟನೆಯೇನೂ ಅಲ್ಲ. ಅದು ಶಿಸ್ತುಬದ್ಧವಾದ ಸೇನೆಯೂ ಅಲ್ಲ. ತಾಲಿಬಾನ್‌ನಲ್ಲಿ ಇರುವವರೆಲ್ಲರೂ ಷರೀಯತ್‌ ನಿಯಮ ಪ್ರಕಾರ ನಡೆದುಕೊಳ್ಳುವ ಪಣ ತೊಟ್ಟವರು. ತಮ್ಮ ಗುರಿ ಸಾಧನೆಗಾಗಿ ಅವರು ಯಾವುದೇ ಮಾರ್ಗವನ್ನಾದರೂ ಅನುಸರಿಸಬಹುದು. ವಿಸ್ತರಣೆಯ ಗುರಿಯನ್ನೂ ಅವರು ಹೊಂದಿರುವುದು ಭಾರತದಂತಹ ದೇಶಕ್ಕೆ ಮಾರಕವಾಗಿ ಪರಿಣಮಿಸಬಹುದು.

ಉಗ್ರಗಾಮಿ ಸಂಘಟನೆಗಳು ಎಂದು ಜಾಗತಿಕವಾಗಿ ಘೋಷಿತವಾಗಿರುವ ತೆಹ್ರಿಕ್‌ ಎ ತಾಲಿಬಾನ್‌, ಜೈಷ್‌ ಎ ಮೊಹಮ್ಮದ್‌ನ ಮೂಲ ಪಾಕಿಸ್ತಾನ. ಈ ಎರಡೂ ಸಂಘಟನೆಗಳು ಭಾರತ ವಿರೋಧಿ ಕಾರ್ಯಸೂಚಿಯನ್ನು ಹೊಂದಿವೆ. ಈ ಸಂಘಟನೆಗಳ ಜತೆಗೆ ತಾಲಿಬಾನ್‌ಗೆ ನಂಟು ಇದೆ. ಜೈಷ್‌ ಎ ಮೊಹಮ್ಮದ್‌ ಮತ್ತು ಲಷ್ಕರ್ ಎ ತಯಬಾ ಸಂಘಟನೆಯ ಉಗ್ರರು ತಾಲಿಬಾನ್‌ನ ವಿಜಯೋತ್ಸವವನ್ನುಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಚರಿಸಿದ್ದಾರೆ.

ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ತಟಸ್ಥ ನಿಲುವು ತಳೆಯುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ, ‘ಅಫ್ಗಾನಿಸ್ತಾನವು ಸಂಕೋಲೆಗಳಿಂದ ಕಳಚಿಕೊಂಡಿತು’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದರು. ತಾಲಿಬಾನ್‌ಗೆ ಮಾನ್ಯತೆ ದೊರಕಿಸಿಕೊಡುವ ವಿಚಾರದಲ್ಲಿಯೂ ಆ ದೇಶವು ಮುಂಚೂಣಿಯಲ್ಲಿದೆ. ತಾಲಿಬಾನ್‌ ನಾಯಕ ಮುಲ್ಲಾ ಬರದರ್‌ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮುಖ್ಯಸ್ಥ ಫೈಝ್‌ ಹಮೀದ್‌ ಅವರು ಜತೆಯಾಗಿ ನಮಾಜ್‌ ಮಾಡುತ್ತಿದ್ದ ಫೋಟೊ ಇತ್ತೀಚೆಗೆ ಪ್ರಕಟವಾಗಿದೆ. ಅಫ್ಗಾನಿಸ್ತಾನವನ್ನು ಪಾಕಿಸ್ತಾನ ಸರ್ಕಾರ ಮತ್ತು ಅಲ್ಲಿನ ಉಗ್ರಗಾಮಿ ಸಂಘಟನೆಗಳು ಭಾರತದ ವಿರುದ್ಧ ಬಳಸಿಕೊಳ್ಳಬಹುದು ಎಂಬುದಕ್ಕೆ ಇವೆಲ್ಲ ಪುಷ್ಟಿ ನೀಡುತ್ತವೆ.

ಉಗ್ರಗಾಮಿ ಸಂಘಟನೆಗಳ ಜತೆಗೆ ತಾಲಿಬಾನ್‌ ಹೊಂದಿರುವ ಗಾಢ ಸಂಬಂಧವು ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆಯಾಗಿ ಪರಿವರ್ತನೆ ಆಗಬಹುದು. ಈವರೆಗೆ ಸಾಂಪ್ರದಾಯಿಕ ಅಸ್ತ್ರಗಳನ್ನಷ್ಟೇ ಹೊಂದಿದ್ದ ಉಗ್ರರ ಕೈಯಲ್ಲಿ ಅತ್ಯಾಧುನಿಕ ಆಯುಧಗಳು ಕಾಣಿಸಿಕೊಳ್ಳಬಹುದು ಎಂದು ಪರಿಣತರು ಅಂದಾಜಿಸಿದ್ದಾರೆ. ಎಕೆ–47 ಬಂದೂಕು ಬದಲು ಎಂ–4 ಮತ್ತು ಎಂ–16 ಬಂದೂಕುಗಳು ಉಗ್ರರಿಗೆ ಸಿಗಬಹುದು.

ಭಾರತದ ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರ ನೇತೃತ್ವದಲ್ಲಿ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥರು ಈ ವಾರ ಸಭೆ ಸೇರಿ ಅಫ್ಗಾನಿಸ್ತಾನ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ. ಭಯೋತ್ಪಾದಕ ಗುಂಪುಗಳು ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದು ಗಂಭೀರವಾಗಿ ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ.

ತಾಲಿಬಾನ್ ಉಗ್ರರು ಬಿಡುಗಡೆ ಮಾಡಿರುವ ಚಿತ್ರ. ಎಂಐ-24ವಿ ಹೆಲಿಕಾಪ್ಟರ್‌ನ ರೋಟರ್‌ಗಳನ್ನು ಬಿಚ್ಚಿಟ್ಟಿರುವುದು ಈ ಚಿತ್ರದಲ್ಲಿ ಕಾಣುತ್ತದೆ. ಜೋಸೆಫ್ ಡೆಂಪ್ಸಿ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ

‘ಹೆಲಿಕಾಪ್ಟರ್‌ಗಳಿಂದ ತಕ್ಷಣಕ್ಕೆ ಅಪಾಯವಿಲ್ಲ’
ಅಮೆರಿಕ ಮತ್ತು ಭಾರತದ ಕದನ ಹೆಲಿಕಾಪ್ಟರ್‌ಗಳು ತಾಲಿಬಾನಿಗಳ ಕೈವಶವಾಗಿದ್ದರೂ, ಅವರು ಅವನ್ನು ತಕ್ಷಣಕ್ಕೆ ಬಳಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಹೆಲಿಕಾಪ್ಟರ್‌ಗಳ ಹಾರಾಟ ನಡೆಸುವಷ್ಟು ನೈಪುಣ್ಯ ತಾಲಿಬಾನಿಗಳಲ್ಲಿ ಇಲ್ಲ. ಹೀಗಾಗಿ ಅವರು ಅವನ್ನು ತಕ್ಷಣವೇ ಬಳಸುವುದಿಲ್ಲ. ಅವುಗಳ ಜತೆ ಚಿತ್ರ ತೆಗೆಸಿಕೊಂಡು ಸಂಭ್ರಮಿಸಬಹುದು ಅಷ್ಟೆ ಎಂದು ಕೆಲವು ತಜ್ಞರು ಹೇಳಿದ್ದಾರೆ.

ಆದರೆ, ಈ ಹೆಲಿಕಾಪ್ಟರ್‌ಗಳನ್ನು ಬಳಸಲು ಅಮೆರಿಕವು ಅಫ್ಗನ್ ಸೈನಿಕರಿಗೆ ತರಬೇತಿ ನೀಡಿದೆ. ಅವರಲ್ಲಿ ಹಲವರು ಈಗ ನಿವೃತ್ತರಾಗಿದ್ದಾರೆ. ಹಲವರು ಈಗ ತಾಲಿಬಾನಿಗಳಿಗೆ ಶರಣಾಗಿದ್ದಾರೆ. ಹೆಲಿಕಾಪ್ಟರ್‌ಗಳನ್ನು ಹಾರಾಟ ನಡೆಸುವಂತೆ ತಾಲಿಬಾನಿಗಳು, ಅಫ್ಗನ್ ಸೈನಿಕರಿಗೆ ಒತ್ತಡ ಅಥವಾ ಬೆದರಿಕೆ ಒಡ್ಡುವ ಅಪಾಯವಿದೆ ಎಂದು ಕೆಲವು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಅಪಾಯಗಳು

* ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಾಲಿಬಾನಿಗಳು ತಮ್ಮ ವೈರಿಗಳು ಮತ್ತು ತಮ್ಮ ವಿರುದ್ಧ ಹೋರಾಡಲು ಅಮೆರಿಕಕ್ಕೆ ನೆರವು ನೀಡಿದ್ದವರನ್ನು ಕೊಲ್ಲಲು ಬಳಸಬಹುದು

* ಐಎಸ್‌-ಖೊರಾಸನ್ ಉಗ್ರರು ಈ ಶಸ್ತ್ರಾಸ್ತ್ರಗಳನ್ನು ಪಡೆಯಲು ತಾಲಿಬಾನಿಗಳ ವಿರುದ್ಧ ಸೆಣಸಬಹುದು. ಈ ಶಸ್ತ್ರಾಸ್ತ್ರಗಳು ಐಎಸ್‌ ಉಗ್ರರ ಕೈವಶವಾದರೆ, ಅವರು ಅದನ್ನು ಭಾರತದ ವಿರುದ್ಧವೂ ಬಳಸಬಹುದು

*ತಾಲಿಬಾನಿಗಳು ಈ ಶಸ್ತ್ರಾಸ್ತ್ರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಹುದು.

ಶಸ್ತ್ರಾಸ್ತ್ರ ಭಂಡಾರ

* 3.58 ಲಕ್ಷ ವಿವಿಧ ರೈಫಲ್‌ಗಳು

* 25,357 ಗ್ರನೇಡ್ ಲಾಂಚರ್‌ಗಳು

* 64,000 ಸ್ವಯಂಚಾಲಿತ ಬಂದೂಕುಗಳು

* 22,174 ಹಮ್ವೀ ಸೇನಾ ವಾಹನಗಳು

* 167 ಹೆಲಿಕಾಪ್ಟರ್‌ ಮತ್ತು ಡ್ರೋನ್‌ಗಳು

* ಇವುಗಳಲ್ಲಿ ತಾಲಿಬಾನಿಗಳ ವಶವಾಗಿರುವ ಸಲಕರಣೆಗಳ ನಿಖರ ಸಂಖ್ಯೆಯ ಮಾಹಿತಿ ಲಭ್ಯವಿಲ್ಲ. ಅಮೆರಿಕ ಮತ್ತು ಅಫ್ಗನ್ ಸೇನೆ ಸಹ ಈ ಮಾಹಿತಿಯನ್ನು ಬಹಿರಂಗಪಡಿಸಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.