ADVERTISEMENT

ಕ್ರಮಬದ್ಧ ಜೀವನಶೈಲಿಯಿಂದ ಆರೋಗ್ಯಯುತ ತ್ವಚೆ: ಡಾ. ರಾಘವೇಂದ್ರ ಜಿಗಳಿಕೊಪ್ಪ ಅಭಿಮತ

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಚರ್ಮರೋಗ ತಜ್ಞ

ಪ್ರಜಾವಾಣಿ ವಿಶೇಷ
Published 1 ಜುಲೈ 2021, 3:09 IST
Last Updated 1 ಜುಲೈ 2021, 3:09 IST
ಡಾ.ರಾಘವೇಂದ್ರ ಜಿಗಳಿಕೊಪ್ಪ, ಚರ್ಮರೋಗ ತಜ್ಞ 
ಡಾ.ರಾಘವೇಂದ್ರ ಜಿಗಳಿಕೊಪ್ಪ, ಚರ್ಮರೋಗ ತಜ್ಞ    

ಹಾವೇರಿ: ‘ಸುಂದರ ತ್ವಚೆ ಹಾಗೂ ಹೊಳೆಯುವ ಮೈಕಾಂತಿ ಸೌಂದರ್ಯದ ಪ್ರತೀಕ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ. ಚರ್ಮದ ಕಾಂತಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸೂಚಕವೂ ಹೌದು. ಅತಿಯಾದ ಸೌಂದರ್ಯವರ್ಧಕ ಬಳಕೆಯಿಂದ ಉತ್ತಮ ಮೈಕಾಂತಿ ಪಡೆಯಲು ಸಾಧ್ಯವಿಲ್ಲ. ಪೌಷ್ಟಿಕ ಆಹಾರ ಮತ್ತು ಕ್ರಮಬದ್ಧ ಜೀವನಶೈಲಿಯಿಂದ ತ್ಚಚೆಯ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಬಹುದು’ ಎನ್ನುತ್ತಾರೆ ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕೊಪ್ಪ.

ಎಣ್ಣೆಯಲ್ಲಿ ಖರೀದ ಪದಾರ್ಥ, ಸಿಹಿ ತಿಂಡಿಗಳು, ಜಂಕ್‌ ಫುಡ್‌ ಮುಂತಾದವುಗಳ ಸೇವನೆಯಿಂದ ಆದಷ್ಟೂ ದೂರವಿರಬೇಕು. ವಿಟಮಿನ್‌ ‘ಸಿ’ ಇರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು, ನಿತ್ಯ 3 ಲೀಟರ್‌ ನೀರಿನ ಜತೆಗೆ ಹಣ್ಣು ಮತ್ತು ತರಕಾರಿಗಳ ಜ್ಯೂಸ್‌ ಬಳಸುವುದು, ಕ್ರಮಬದ್ಧ ನಿದ್ರೆ, ನಿತ್ಯ ಸ್ನಾನ, ನಿಯಮಿತ ವ್ಯಾಯಾಮ, ಶುಭ್ರ ಬಟ್ಟೆ ಧರಿಸುವುದು ಸೇರಿದಂತೆ ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಚರ್ಮದ ತಾಜಾತನ ಕಾಪಾಡಿಕೊಳ್ಳಬಹುದು ಎಂಬುದು ಅವರ ಸಲಹೆ.

*ಮೀನಾಕ್ಷಿ ಬಾಗಲಕೋಟೆ, ಗಣೇಶ ಗದಗ

ADVERTISEMENT

ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ತಿಳಿಸಿ

- ಅನುವಂಶೀಯತೆ, ಹಾರ್ಮೋನುಗಳ ವ್ಯತ್ಯಯ, ಅಪೌಷ್ಟಿಕತೆ ಮುಂತಾದ ಕಾರಣಗಳಿಂದ ಕೂದಲು ಉದುರುವಿಕೆ ಸಮಸ್ಯೆ ಕಂಡು ಬರುತ್ತದೆ. ತಲೆಯ ಹೊಟ್ಟು ನಿಯಂತ್ರಿಸುವ ಆ್ಯಂಟಿ ಡ್ಯಾಂಡ್ರಫ್‌ ಶಾಂಪೂ ಬಳಸಿ. ಒಮ್ಮೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.ಪಿಆರ್‌ಪಿ ಚಿಕಿತ್ಸೆ, ಲೋಷನ್ ಮತ್ತು ಮಾತ್ರೆ ಸೇವನೆಯಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ. ಹೊಸ ಕೂದಲು ಕೂಡ ಬೆಳೆಯುತ್ತದೆ.

*ಚಂದ್ರು, ರಾಯಚೂರು

ನನ್ನ ಸಹೋದರಿಗೆ ಎರಡು ವರ್ಷಗಳಿಂದ ಮುಖದಲ್ಲಿ ‘ಬಂಗು’ ಸಮಸ್ಯೆ ಕಾಣಿಸಿಕೊಂಡಿದೆ, ಪರಿಹಾರ ತಿಳಿಸಿ.

–ಅನುವಂಶೀಯವಾಗಿ ಬಂಗು ಬರುವ ಸಾಧ್ಯತೆ ಇರುತ್ತದೆ. ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಮತ್ತು ಮುಖಕ್ಕೆ ಹೆಚ್ಚು ಸೌಂದರ್ಯವರ್ಧಕ ಬಳಸುವವರಿಗೂ ಬರುತ್ತದೆ. 6 ತಿಂಗಳು ಚಿಕಿತ್ಸೆ ಪಡೆದರೆ ನಿವಾರಣೆಯಾಗುತ್ತದೆ. ಕೆಲವರಿಗೆ 2 ತಿಂಗಳ ಕಾಲ ಕ್ರೀಮ್‌ ಮತ್ತು ಮಾತ್ರೆ ಬಳಸಿದರೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಕೆಮಿಕಲ್‌ ಪೀಲಿಂಗ್‌ ಅಥವಾ ಲೇಸರ್‌ ಚಿಕಿತ್ಸೆ ಕೊಡಬೇಕು.

* ಪರಸನಗೌಡ ಪಾಟೀಲ, ಸವಣೂರು

7 ವರ್ಷಗಳಿಂದ ಸಹೋದರ ಸೋರಿಯಾಸಿಸ್ ಸಮಸ್ಯೆ ಎದುರಿಸುತ್ತಿದ್ದಾರೆ, ಪರಿಹಾರ ತಿಳಿಸಿ.

- ಸೋರಿಯಾಸಿಸ್ ಕಾಯಿಲೆಯಲ್ಲ, ಅದು ಚರ್ಮದ ಅಲರ್ಜಿ. ಸಾಮಾನ್ಯ ಜನರಿಗೆ 40 ದಿನಕ್ಕೆ ಒಮ್ಮೆ ಹೊಸ ಚರ್ಮ ಬಂದರೆ, ಸೋರಿಯಾಸಿಸ್ ಇದ್ದವರಿಗೆ 4 ದಿನಕ್ಕೊಮ್ಮೆ ಹೊಸ ಚರ್ಮ ಬರುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಸೋರಿಯಾಸಿಸ್‌ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಶಾಶ್ವತ ಪರಿಹಾರ ಎಂಬುದಿಲ್ಲ. ಇದು ಸೀಸನ್ ಸಮಸ್ಯೆ. ಇಮ್ಯುನಿಟಿ ಹೆಚ್ಚಿಸುವ ಮಾತ್ರೆ ಕೊಡುತ್ತೇವೆ. ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದರೆ ಗುಣವಾಗುತ್ತದೆ.

* ದಿವ್ಯಶ್ರೀ, ಬೆಂಗಳೂರು

3 ವರ್ಷಗಳಿಂದ ಮುಖದ ಮೇಲೆ ಮೊಡವೆಗಳಾಗಿದ್ದು, ಕಿರಿಕಿರಿ ಅನುಭವಿಸುತ್ತಿದ್ದೇನೆ. ಪರಿಹಾರ ತಿಳಿಸಿ.

- ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮೊಡವೆ ಸಮಸ್ಯೆ ಇದ್ದರೆ ಅನುವಂಶಿಕವಾಗಿ ಬರುತ್ತದೆ. 16ರಿಂದ 25 ವರ್ಷದೊಳಗೆ ಈ ಸಮಸ್ಯೆ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಎರಡು ತಿಂಗಳ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲಿ ಗುಳಿಗೆ, ಲೋಷನ್ ಕೊಡುತ್ತೇವೆ. ಗುಣವಾಗದಿದ್ದರೆ ಕೆಮಿಕಲ್ ಪೀಲ್ಸ್‌ ಮತ್ತು ಲೇಸರ್ ಚಿಕಿತ್ಸೆಯಿಂದ ಗುಣಪಡಿಸಬಹುದು.

ಮರುಕಳುಹಿಸುವ ಸಾಧ್ಯತೆ ಇರುವುದರಿಂದ ಹಾಲಿನ ಉತ್ಪನ್ನ ಹಾಗೂ ಎಣ್ಣೆ ಮತ್ತು ಸಿಹಿ ಪದಾರ್ಥ ಕಡಿಮೆ ಮಾಡಬೇಕು. ನಿತ್ಯ 45 ನಿಮಿಷ ವ್ಯಾಯಾಮ ಮಾಡಬೇಕು.

* ಕುಮಾರಸ್ವಾಮಿ, ರಟ್ಟೀಹಳ್ಳಿ

ಫಂಗಸ್ ಸಮಸ್ಯೆ ನಿವಾರಣೆ ಬಗೆ ಹೇಗೆ?

– ಫಂಗಸ್‌ ಸಮಸ್ಯೆಗೆ ನಾಲ್ಕು ಕಾರಣಗಳಿವೆ. ಒಬ್ಬರಿಂದ ಒಬ್ಬರಿಗೆ ಹರಡುವ ಅಂಟು ರೋಗ. ಬಿಗಿಯಾದ ಉಡುಪು, ಹಸಿಯಾದ ಬಟ್ಟೆ ಧರಿಸುವುದರಿಂದಲೂ ಬರುತ್ತದೆ. ತುಂಬಾ ಬೆವರು ಇರುವವರಿಗೂ ಈ ಸಮಸ್ಯೆ ಇರುತ್ತದೆ. ನಿಮ್ಮ ಕುಟುಂಬದಲ್ಲಿ ಇತರರಿಗೂ ಇರುವುದರಿಂದ ನಿಮಗೂ ಹರಡಿದೆ.

ಇದರ ನಿವಾರಣೆಗೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ಒಣಗಿದ ಮತ್ತು ಸಡಿಲವಾದ ಬಟ್ಟೆ ಧರಿಸಿ. ಎಲ್ಲರ ಬಟ್ಟೆಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಯಾವ ರೀತಿಯ ಫಂಗಸ್‌ ಎಂಬುದನ್ನು ತಪಾಸಣೆ ಮಾಡಿ, ಗುಳಿಗೆ ನೀಡುತ್ತೇವೆ.

* ಸಂದೀಪ್ ಹುಬ್ಬಳ್ಳಿ, ಹನುಮಂತಪ್ಪ ಹುಬ್ಬಳ್ಳಿ

ಕಾಲುಬೆರಳು ಮತ್ತು ಕೈಬೆರಳುಗಳಲ್ಲಿ ಚರ್ಮ ಸುಲಿಯುತ್ತಿದೆ. ಬಿಸಿಲು ಬಿದ್ದರೆ ತುರಿಕೆಯಾಗುತ್ತದೆ. ಏನು ಮಾಡಬೇಕು?

- ನೀರಿನಲ್ಲಿ ಸದಾ ಕೆಲಸ ಮಾಡುವವರಿಗೆ, ಹೆಚ್ಚು ಬೆವರು ಬರುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆರಳುಗಳ ಮಧ್ಯೆ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ.ನಿತ್ಯ ಸ್ನಾನ ಮಾಡುವುದು, ಶುಭ್ರ, ಒಣ ಬಟ್ಟೆ ಧರಿಸುವುದು ಹಾಗೂ ಸ್ವಚ್ಛತೆ ಕಾಪಾಡಿಕೊಂಡರೆ ಕ್ರಮೇಣ ಕಡಿಮೆಯಾಗುತ್ತದೆ. ತುರಿಕೆ ಸಮಸ್ಯೆ ತೀವ್ರವಾಗಿದ್ದರೆ, ವೈದ್ಯರ ಸಲಹೆ ಪಡೆಯಿರಿ. ಆಯುರ್ವೇದಿಕ್‌ ಸೋಪ್, ಕಡಲೆಹಿಟ್ಟು ಲೇಪಿಸಿಕೊಂಡು ಸ್ನಾನ ಮಾಡಿದರೆ ಅಲರ್ಜಿ ಕಡಿಮೆಯಾಗುತ್ತದೆ.

* ಸಜ್ಜನ, ಗದಗ

ನನಗೆ 18 ವರ್ಷ, ಬಿಳಿ ಕೂದಲು ಸಮಸ್ಯೆ ಎದುರಿಸುತ್ತಿದ್ದೇನೆ. ಪರಿಹಾರವೇನು?

- ದೇಹದಲ್ಲಿ ವಿಟಮಿನ್‌ಗಳಕೊರತೆ ಹಾಗೂ ಅನುವಂಶೀಯತೆಯಿಂದ ಕೂದಲು ಬಿಳಿಯಾಗುತ್ತವೆ. ವಿಟಮಿನ್‌ಯುಕ್ತ ಆಹಾರದಿಂದ ಹೊಸ ಕಪ್ಪು ಕೂದಲು ಬೆಳೆಯುತ್ತವೆ. ಪೌಷ್ಟಿಕ ಆಹಾರಕ್ಕೆ ಒತ್ತು ನೀಡಿ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

* ಕಲಾವತಿ, ರಾಣೆಬೆನ್ನೂರು

ನಮ್ಮ ತಾಯಿಗೆ ಕೋವಿಡ್ ಮೊದಲ ಲಸಿಕೆ ಪಡೆದ ನಂತರ ತೀವ್ರ ಸುಸ್ತು ಕಾಣಿಸಿಕೊಂಡಿದೆ. ಏನು ಮಾಡಬೇಕು?

- ಕೊರೊನಾ ಸೋಂಕು ಬಂದಾಗ ಸಹಜವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂಥ ಸಂದರ್ಭದಲ್ಲಿ ಚರ್ಮದ ಕಾಯಿಲೆ ಸೇರಿದಂತೆ ಸುಸ್ತು, ಬಳಲಿಕೆ ಕಾಣಿಸಿಕೊಳ್ಳುತ್ತದೆ.ನಿತ್ಯ ಬೆಚ್ಚಗಿನ ನೀರಿನಲ್ಲಿ ಎಣ್ಣೆ ಸ್ನಾನ ಮಾಡಿಸಿ, ಪೌಷ್ಟಿಕ ಆಹಾರ ಕೊಡಿ. ವಿಟಮಿನ್ ಸಿ ಕೊರತೆಯಿಂದ ಹೆಚ್ಚಾಗಿ ಮಹಿಳೆಯರಲ್ಲಿ ಸುಸ್ತು ಕಂಡು ಬರುತ್ತದೆ.

* ಬಸವರಾಜ, ಗದಗ

ತಲೆ ಹೊಟ್ಟು ಮತ್ತು ಮುಖದಲ್ಲಿ ಮೊಡವೆ ಸಮಸ್ಯೆ ಇದೆ.

ಬಿಸಿಲು, ದೂಳಿನಿಂದ ತಲೆಯಲ್ಲಿ ಹೊಟ್ಟಾಗುತ್ತದೆ.ವಾರದಲ್ಲಿ ಕನಿಷ್ಠ ಮೂರು ಬಾರಿ ತಲೆಸ್ನಾನ ಮಾಡಬೇಕು. ಸಿಹಿ ಪದಾರ್ಥ ಮತ್ತು ಹಾಲಿನ ಉತ್ಪನ್ನ ಬಳಕೆ ಕಡಿಮೆ ಮಾಡಿ. ವೈದ್ಯರು ಸೂಚಿಸುವ ಶ್ಯಾಂಪು ಬಳಸಿ.

ಕೊರೊನಾ ಸಮಯದಲ್ಲಿ ಚರ್ಮದ ಆರೈಕೆ ಅಗತ್ಯ

ಕೊರೊನಾ ಸೋಂಕಿನ ಸಮಯದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಕಪ್ಪು ಬಣ್ಣ, ನೀಲಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಮಧುಮೇಹ ಇರುವವರಿಗೆ ಗ್ಯಾಂಗ್ರಿನ್‌ ಆಗುವ ಸಾಧ್ಯತೆಯೂ ಉಂಟು.

ದೇಹದಲ್ಲಿ ರೋಗನಿರೋಧಕ ಶಕ್ತಿಕುಂದುವುದರಿಂದ ಸೋರಿಯಾಸಿಸ್‌, ಮೈ ಕಡಿತ, ಇಸುಬು ಮುಂತಾದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೋವಿಡ್‌ಗೆ ಚಿಕಿತ್ಸೆ ಪಡೆಯುವ ಸಂದರ್ಭ, ಚರ್ಮ ರೋಗಕ್ಕೆ ಗುಳಿಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ವೈದ್ಯರ ಸಲಹೆ ಮೇರೆಗೆ ಕ್ರೀಮ್‌ ಬಳಸಬಹುದು.

ಅತಿಯಾದ ಸ್ಯಾನಿಟೈಸರ್‌ ಬಳಕೆ ಸಲ್ಲ

ಸ್ಯಾನಿಟೈಸರ್‌ಗಳ ಅತಿಯಾದ ಬಳಕೆಯಿಂದ ಕೈಗಳಲ್ಲಿ ‘ಹಸಿ ಇಸುಬು’ ತಲೆದೋರುತ್ತಿದೆ. ಸ್ಯಾನಿಟೈಸರ್‌ಗಿಂತ ಸಾಬೂನು ಉತ್ತಮ. ಸ್ಯಾನಿಟೈಸರ್‌ ಬಳಸಿದ ನಂತರ ದಿನಕ್ಕೆ ನಾಲ್ಕೈದು ಬಾರಿ ನೀರಿನಲ್ಲಿ ಕೈ ತೊಳೆದುಕೊಳ್ಳುವುದನ್ನು ಮರೆಯಬಾರದು. ಸ್ಯಾನಿಟೈಸರ್‌ ಕೇವಲ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಮಾತ್ರ ಕೊಲ್ಲುತ್ತದೆ. ಕೈಯಲ್ಲಿರುವ ದೂಳನ್ನು ತೆಗೆಯುವುದಿಲ್ಲ. ಹೀಗಾಗಿ ಸ್ಯಾನಿಟೈಸರ್‌ ಬಳಸಿದ ತಕ್ಷಣ ಕೈ ತೊಳೆಯದೇ ಊಟ ಮಾಡಿದರೆ, ‘ಫುಡ್‌ ಪಾಯಿಸನ್‌’ ಆಗುವ ಸಾಧ್ಯತೆಯೂ ಉಂಟು.

ಕಣ್ಣಿನ ಸುತ್ತ ಕಪ್ಪುಕಲೆ ನಿವಾರಣೆ ಸಾಧ್ಯ

ರಕ್ತಹೀನತೆ, ಅತಿಯಾಗಿ ಮೊಬೈಲ್‌ ಬಳಕೆ ಮತ್ತು ಕಂಪ್ಯೂಟರ್‌ ಸ್ಕ್ರೀನ್‌ ನೋಡುವುದು, ಮಾನಸಿಕ ಒತ್ತಡ, ಸೌಂದರ್ಯ ವರ್ಧಕಗಳ ಅತಿಯಾದ ಬಳಕೆಯಿಂದ ಕಣ್ಣಿನ ಸುತ್ತ ಕಪ್ಪು ಕಲೆ (ಡಾರ್ಕ್‌ ಸರ್ಕಲ್‌) ಉಂಟಾಗುತ್ತದೆ. ಯಾವುದರಿಂದ ಸಮಸ್ಯೆಯಾಗಿದೆ ಎಂಬುದನ್ನು ಮೊದಲು ಪತ್ತೆ ಹೆಚ್ಚಬೇಕು.

ನಿತ್ಯ ವ್ಯಾಯಾಮ, ಮಾನಸಿಕ ಒತ್ತಡ ನಿವಾರಿಸಿಕೊಳ್ಳುವುದು, ಕಂಪ್ಯೂಟರ್‌ ಕೆಲಸ ಮಾಡುವಾಗ ಆಗಾಗ್ಗೆ ಮುಖಕ್ಕೆ ನೀರು ಹಾಕಿಕೊಳ್ಳುವುದರಿಂದ ಕಣ್ಣಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಕಣ್ಣಿನ ಸುತ್ತ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಕ್ರಮೇಣ ಕಪ್ಪು ಕಲೆ ನಿವಾರಣೆಯಾಗುತ್ತದೆ.

ಚರ್ಮದ ಆರೋಗ್ಯಕ್ಕೆ ಉಪಯುಕ್ತ ಸಲಹೆಗಳು

* ದಿನಕ್ಕೆ 7 ಗಂಟೆ ಕ್ರಮಬದ್ಧ ನಿದ್ರೆ, ಪೌಷ್ಟಿಕ ಆಹಾರ, 45 ನಿಮಿಷದ ವ್ಯಾಯಾಮ ಅಗತ್ಯ

* ನಿತ್ಯ 3 ಲೀಟರ್‌ ನೀರಿನ ಜತೆಗೆ ತಾಜಾ ಹಣ್ಣು ಮತ್ತು ತರಕಾರಿ ಜ್ಯೂಸ್‌ ಸೇವಿಸಿ

* ವಿಟಮಿನ್‌ ‘ಸಿ’ ಇರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ, ಚರ್ಮದ ಕಾಂತಿ ಕಾಪಾಡಿಕೊಳ್ಳಿ

* ಸಿಹಿ ಪದಾರ್ಥ ಮತ್ತು ಎಣ್ಣೆ ಪದಾರ್ಥಗಳನ್ನು ಕಡಿಮೆ ತಿನ್ನಿ, ಚರ್ಮದ ಆರೋಗ್ಯ ಹೆಚ್ಚಿಸಿ

* ಶಿಲೀಂಧ್ರ ಸೋಂಕು ತಡೆಗಟ್ಟಲು ಬಿಗಿ ಮತ್ತು ಒದ್ದೆ ಬಟ್ಟೆ ಬದಲಿಗೆ, ಸಡಿಲ ಮತ್ತು ಒಣಗಿದ ಬಟ್ಟೆ ಬಳಸಿ

* ಸೂಕ್ಷ್ಮ ಚರ್ಮ ಹೊಂದಿರುವವರು ಬಿಸಿಲಿಗೆ ಹೋಗುವಾಗ ಸನ್‌ ಸ್ಕ್ರೀನ್ ಲೋಷನ್‌‌ ಬಳಸಿ.

* ‘ಹೇರ್‌ ಡೈ’ ಬಳಸುವವರುಅಮೋನಿಯಾ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಿ

* ತುಂಬ ಆಮ್ಲದ ಅಂಶವಿರುವ ಅಂದರೆ 6 ಪಿ.ಎಚ್‌.ಗಿಂತ ಮೇಲ್ಪಟ್ಟ ಸಾಬೂನುಗಳನ್ನು ಬಳಸಬೇಡಿ.

(ಹೆಚ್ಚಿನ ಮಾಹಿತಿಗೆ ರಕ್ಷಾ ಹೆಲ್ತ್‌ ಕೇರ್‌, ಮುನ್ಸಿಪಲ್‌ ಹೈಸ್ಕೂಲ್‌ ರಸ್ತೆ, ಹಾವೇರಿ. ಮೊ: 73491 56276 ಸಂಪರ್ಕಿಸಿ)

*********

ಫೋನ್‌ ಇನ್‌ ನಿರ್ವಹಣೆ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ ಶಿಗ್ಗಾವಿ, ಗಣೇಶಗೌಡ ಎಂ.ಪಾಟೀಲ ಸವಣೂರು

ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.