ADVERTISEMENT

ನಿದ್ರೆಯ ಬಗ್ಗೆ ನಿರ್ಲಕ್ಷ್ಯ ಸಲ್ಲದು!

ಡಾ.ಕಿರಣ್ ವಿ.ಎಸ್.
Published 13 ಸೆಪ್ಟೆಂಬರ್ 2021, 19:30 IST
Last Updated 13 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಿದ್ರೆಯ ಪ್ರಮಾಣ ಕಡಿಮೆಯಾದರೆ ಮೆದುಳಿನ ಚೇತರಿಕೆ ಪೂರ್ಣವಾಗುವುದಿಲ್ಲ; ಅದರ ಕಾರ್ಯಕ್ಷಮತೆ ಕುಂಠಿತವಾಗುತ್ತದೆ; ನೆನಪುಗಳ ಮರುಕಳಿಕೆ ಕ್ಷೀಣಿಸುತ್ತದೆ.

ಆಯಸ್ಸಿನ ಸರಿಸುಮಾರು ಮೂರನೆಯ ಒಂದು ಭಾಗವನ್ನು ನಾವು ಕಳೆಯುವುದು ನಿದ್ರೆಯಲ್ಲಿ. ನಮ್ಮ ಜೀವನದ ಬೇರೆ ಯಾವುದೇ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಿದ್ರೆ ಆವರಿಸುತ್ತದೆ. ಬಹಳ ಕಾಲದವರೆಗೆ ನಿದ್ರೆಯನ್ನು ‘ಬದುಕಿನ ವಿರಾಮದ ವೇಳೆ’ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು. ದೇಹದ ಮತ್ತು ಮನಸ್ಸಿನ ಆರೋಗ್ಯ ನಿದ್ರೆಯ ಸೌಖ್ಯದ ಮೇಲೆ ಅವಲಂಬಿತವಾಗಿವೆ; ನಿದ್ರೆ ಕಡಿಮೆಯಾದಾಗ ಇಡೀ ದಿನ ಕಿರಿಕಿರಿಯ ಮನಃಸ್ಥಿತಿ ಇರುವುದು ಅನುಭವಕ್ಕೆ ಬಂದಿರುತ್ತದೆ. ‘ಹೀಗೇಕೆ’ ಎನ್ನುವ ಪ್ರಶ್ನೆಯನ್ನು ಬೆಂಬತ್ತಿದಾಗ ನಿದ್ರೆಯ ವಿವಿಧ ಆಯಾಮಗಳು ಬೆಳಕಿಗೆ ಬಂದವು. ವೈದ್ಯಕೀಯ ವಿಜ್ಞಾನ ಬೆಳೆದಂತೆ ನಿದ್ರೆಯನ್ನೂ ಆರೋಗ್ಯದ ದಾಯರೆಗೆ ತರಲಾಯಿತು; ನಿದ್ರೆಯ ಕುರಿತಾದ ಅಧ್ಯಯನಗಳು ಮೊದಲಾದವು. ಪ್ರಸ್ತುತ ನಿದ್ರೆಯ ಕುರಿತಾದ ಪರೀಕ್ಷೆಗಳು, ಚಿಂತನೆಗಳು, ಸಲಹೆಗಳು, ಚಿಕಿತ್ಸೆಗಳು ಲಭ್ಯವಿದೆ.

ನಿದ್ರೆಯ ವೇಳೆ ಮೆದುಳಿನ ವರ್ತನೆಯನ್ನು ವಿಜ್ಞಾನಿಗಳು ಅಳೆದಿದ್ದಾರೆ. ನಿದ್ರೆಯಲ್ಲಿ ಎರಡು ಪ್ರಕಾರಗಳಿವೆ: ಆಳವಾದ ನಿದ್ರೆ ಮತ್ತು ಕನಸುಗಳ ನಿದ್ರೆ. ನಿದ್ರೆಯ ಬಹುಭಾಗ ಆಳವಾದ ನಿದ್ರೆಯದ್ದು. ಈ ವೇಳೆ ಮೆದುಳಿನಲ್ಲಿ ದೊಡ್ಡಗಾತ್ರದ, ನಿಧಾನಗತಿಯ ತರಂಗಗಳು ಕಾಣುತ್ತವೆ; ಸ್ನಾಯುಗಳು ಸಡಿಲವಾಗುತ್ತವೆ; ಉಸಿರಾಟ ಆಳವಾಗಿ, ನಿಧಾನವಾಗಿ ಆಗುತ್ತದೆ; ದಿನವಿಡೀ ದಣಿದಿರುವ ದೇಹ ಮತ್ತು ಮಿದುಳಿಗೆ ಚೈತನ್ಯ ದೊರೆಯುತ್ತದೆ. ಕನಸುಗಳ ನಿದ್ರೆ ಇದಕ್ಕಿಂತ ಭಿನ್ನ. ಇದರಲ್ಲಿ ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ; ಸ್ನಾಯುಗಳು ನಿಶ್ಚೇಷ್ಟವಾಗುತ್ತವೆ; ಉಸಿರಾಟ ಮತ್ತು ಎದೆಬಡಿತದಲ್ಲಿ ಏರುಪೇರಾಗುತ್ತದೆ. ಕನಸುಗಳ ನಿದ್ರೆಯ ಮೂಲೋದ್ದೇಶ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಆದರೆ, ಆ ವೇಳೆ ಆಗುವ ಶಾರೀರಿಕ ವ್ಯತ್ಯಾಸಗಳ ಅಧ್ಯಯನ ಸಾಕಷ್ಟು ಆಗಿದೆ. ಒಂದು ರಾತ್ರಿಯಲ್ಲಿ ಆಳನಿದ್ರೆ ಮತ್ತು ಕನಸುಗಳ ನಿದ್ರೆಗಳ ನಾಲ್ಕೈದು ಆವರ್ತನಗಳು ಜರುಗುತ್ತವೆ. ನಿದ್ರೆಯಿಂದ ಮೆದುಳಿನ ಕೋಶಗಳ ಕಶ್ಮಲಗಳು, ‘ಜೇಡರಬಲೆ’ಗಳು ತೊಳೆದುಹೋಗುತ್ತವೆ. ನಿದ್ರೆಯ ಪ್ರಮಾಣ ಕಡಿಮೆಯಾದರೆ ಮೆದುಳಿನ ಚೇತರಿಕೆ ಪೂರ್ಣವಾಗುವುದಿಲ್ಲ; ಅದರ ಕಾರ್ಯಕ್ಷಮತೆ ಕುಂಠಿತವಾಗುತ್ತದೆ; ನೆನಪುಗಳ ಮರುಕಳಿಕೆ ಕ್ಷೀಣಿಸುತ್ತದೆ. ಮನಸ್ಸಿನ ವ್ಯಾಪಾರಗಳು ತಹಬಂದಿಗೆ ಬರಲು ನಿದ್ರೆಯಿಂದ ಅನಾನುಕೂಲವಾಗುತ್ತದೆ. ಈ ಕಾರಣಕ್ಕೇ ಪರೀಕ್ಷೆಯಂತಹ ಮುಖ್ಯವಾದ ಕೆಲಸಗಳ ಹಿಂದಿನ ದಿನ ನಿದ್ರೆಗೆಡೆವುದು ಸೂಕ್ತವಲ್ಲ. ಕೆಲಸಗಳಲ್ಲಿ ಮುಳುಗಿ, ಕಡಿಮೆ ನಿದ್ರೆ ಮಾಡುವವರಿಗೆ ಇಳಿವಯಸ್ಸಿನಲ್ಲಿ ತೀವ್ರ ಮರೆವಿನಂತಹ ಮೆದುಳಿನ ಸಮಸ್ಯೆಗಳು ಕಾಣುತ್ತವೆ.

ADVERTISEMENT

ನಮ್ಮ ಮೆದುಳಿನಲ್ಲಿ ಜೈವಿಕ ಗಡಿಯಾರವಿದೆ. ಬೆಳಕಿನ ಪ್ರಮಾಣ ಮತ್ತು ಮೆದುಳಿನ ಪೀನಿಯಲ್ ಗ್ರಂಥಿಯಲ್ಲಿ ಸ್ರವಿಸುವ ಮೆಲಟೋನಿನ್ ಎಂಬ ಚೋದಕದ ಪ್ರಭಾವದಲ್ಲಿ ಚಲಿಸುವ ಈ ಜೈವಿಕ ಗಡಿಯಾರ, ನಿದ್ರೆಯ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದಲ್ಲದೆ, ಶರೀರಕ್ಕೆ ಹಸಿವಿನಂತೆ ನಿದ್ರೆಯ ಸಹಜ ಅವಶ್ಯಕತೆಯೂ ಇರುತ್ತದೆ; ಈ ಅಗತ್ಯ ಒಂದು ಹಂತ ತಲುಪಿದಾಗ ನಿದ್ರೆ ಒತ್ತರಿಸಿಕೊಂಡು ಬರುತ್ತದೆ. ಆ ಸಮಯದಲ್ಲಿ ವಾಹನಚಾಲನೆ, ಯಂತ್ರಚಾಲನೆಯಂತಹ ಜವಾಬ್ದಾರಿಯುತ ಕೆಲಸಗಳನ್ನು ಮಾಡುವುದು ಅಪಾಯಕಾರಿ. ಆಗ ಬೇರೆಲ್ಲಾ ಕೆಲಸಗಳನ್ನೂ ಬದಿಗಿಟ್ಟು ತೆಗೆಯುವ ಒಂದು ಸಣ್ಣನಿದ್ರೆ ಒತ್ತರಿಕೆಯನ್ನು ದೂರಮಾಡುತ್ತದೆ.

ಖಿನ್ನತೆ ಉಳ್ಳವರಲ್ಲಿ ಅತಿನಿದ್ರೆ ಇಲ್ಲವೇ ನಿದ್ರಾಹೀನತೆ ಕಾಣಬಹುದು. ಮೈಗ್ರೆನ್ ತಲೆನೋವು, ಅಧಿಕ ರಕ್ತದೊತ್ತಡ, ಅಪಸ್ಮಾರ, ಮಧುಮೇಹ ಮುಂತಾದ ಸಮಸ್ಯೆಗಳು ನಿದ್ರಾಹೀನತೆಯಿಂದ ಹೆಚ್ಚಾಗುತ್ತವೆ. ಶರೀರದ ರಕ್ಷಕ ವ್ಯವಸ್ಥೆಯ ಸಾಮರ್ಥ್ಯ ಕುಸಿದು, ಸೋಂಕುಗಳು ಸಂಭವಿಸಬಹುದು. ಇಂತಹ ಸಮಸ್ಯೆಗಳು ಉಳ್ಳವರು ಚೆನ್ನಾಗಿ ನಿದ್ರೆ ಮಾಡಬೇಕು. ಯಾವುದೇ ಕಾರಣಕ್ಕೂ ಒಂದು ದಿನವೂ ನಿದ್ರೆಯಿಂದ ವಂಚಿತರಾಗಬಾರದು.

ನಿದ್ರಾಹೀನತೆಯಿಂದ ಮೆದುಳಿನ ಕೆಲವು ಭಾಗಗಳಿಗೆ ಹೆಚ್ಚು ತೊಂದರೆಯಾಗುತ್ತದೆ. ಭಾಷೆಯ ಬಳಕೆಯನ್ನು ನಿಯಂತ್ರಿಸುವ ಭಾಗಕ್ಕೆ ಅಧಿಕವಾಗಿ ಸಮಸ್ಯೆ ಆಗುತ್ತದೆ; ಮಾತು ತೊದಲುತ್ತದೆ. ವಸ್ತುಗಳ ಬಿಂಬಗಳನ್ನು ಗ್ರಹಿಸುವ ಭಾಗಕ್ಕೆ ಧಕ್ಕೆಯಾಗುತ್ತದೆ; ನೋಟದ ಸ್ಥಿರತೆ ಕುಗ್ಗಿ, ವಸ್ತುಗಳ ಗಾತ್ರ ಬದಲಾದಂತೆ ಕಾಣುತ್ತದೆ. ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಕಡಿಮೆಯಾಗುತ್ತದೆ. ಹೀಗಾಗಿ, ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಇರುವವರು ನಿದ್ರೆಗೆಡುವುದು ಸೂಕ್ತವಲ್ಲ.

ಉಸಿರಾಟದ ಸಮಸ್ಯೆಗಳು; ದೀರ್ಘಕಾಲಿಕ ರಾತ್ರಿ-ಪಾಳಿ ಕೆಲಸ; ರಾತ್ರಿಯಿಡೀ ಮೋಜು ಮಾಡಿ, ಹಗಲಿನಲ್ಲಿ ಕೆಲಗಂಟೆಗಳ ಕಾಲ ಮಾತ್ರ ಮಲಗುವುದು; ರಾತ್ರಿ ನಿದ್ರೆಯ ವೇಳೆ ಆಗಾಗ ಎಚ್ಚರಾಗಬೇಕಾದ ಉದ್ಯೋಗ; ಯಾವುದೋ ಕೆಲಸ ಇಲ್ಲವೇ ಹವ್ಯಾಸಕ್ಕೆ ಸಿಲುಕಿ, ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುವುದು – ಇವೆಲ್ಲವೂ ನಿದ್ರಾಹೀನತೆಯಿಂದ ಉಂಟಾಗುವ ಪರಿಣಾಮಗಳನ್ನೇ ತೋರುತ್ತವೆ. ಕಾರಣಗಳ ಹೊರತಾಗಿಯೂ ನಿದ್ರಾಹೀನತೆಯಿಂದ ಬಳಲುವವರು, ಎಷ್ಟೋ ಪ್ರಯತ್ನ ಮಾಡಿದರೂ ನಿದ್ರೆ ಬಾರದವರಿದ್ದಾರೆ. ಇಂತಹವರು ಒಂದು ನಿಶ್ಚಿತ ಸಮಯಕ್ಕೆ ಮಲಗುವ ಮತ್ತು ಏಳುವ ಪದ್ಧತಿ ಮಾಡಿಕೊಳ್ಳಬೇಕು; ವಾರಾಂತ್ಯಕ್ಕಾಗಲೀ, ಬೇರೆ ನೆಪಗಳಿಗಾಗಲೀ ಇದನ್ನು ಬದಲಾಯಿಸಬಾರದು. ನಿದ್ರೆಯ ಸಮಯಕ್ಕೆ ಒಂದು ತಾಸು ಮುನ್ನ ತುಸುವೇ ಬೆಳಕಿನಲ್ಲಿ ಕಾಲ ಕಳೆಯಬೇಕು. ಈ ಸಮಯದಲ್ಲಿ ದೂರದರ್ಶನ, ಕಂಪ್ಯೂಟರ್, ಮೊಬೈಲ್ ನೋಡಬಾರದು. ಮನಸ್ಸಿಗೆ ಆಪ್ತವಾದ ಪುಸ್ತಕವನ್ನು ಓದುವುದು ಒಳಿತು. ನಿದ್ರೆಯ ಸಮಯದಲ್ಲಿ ಸಾಮಾನ್ಯ ಆಹಾರಸೇವನೆ ಸೂಕ್ತ; ಭೂರಿಭೋಜನ, ಮದ್ಯಪಾನ, ಧೂಮಪಾನ, ಕಾಫಿ-ಟೀಗಳನ್ನು ದೂರವಿಡಬೇಕು. ಎಚ್ಚರದ ಸಮಯದಲ್ಲಿ ಭೌತಿಕ ಚಟುವಟಿಕೆ ಇರಬೇಕು. ಸ್ವಲ್ಪ ವ್ಯಾಯಾಮ, ತೋಟದ ಕೆಲಸ, ನಡಿಗೆ ಒಳ್ಳೆಯದು. ನಿದ್ರೆಯ ಕೋಣೆ ತಂಪಾಗಿ, ನಿಶ್ಶಬ್ದವಾಗಿ, ಮಂದಬೆಳಕಿನಿಂದಿರುವುದು ಅಗತ್ಯ. ನಿದ್ರೆಗೆ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ, ಧ್ಯಾನ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಹಗಲುವೇಳೆಯಲ್ಲಿ ಮಲಗುವುದು ಕೂಡ ರಾತ್ರಿ ನಿದ್ರೆ ಬಾರದಿರುವುದಕ್ಕೆ ಕಾರಣ.

ನಿದ್ರೆ ಆರೋಗ್ಯದ ಭಾಗ; ಈ ಬಗ್ಗೆ ಯಾವುದೇ ಸಮಸ್ಯೆ ಇದ್ದರೂ ನಿಮ್ಮ ವೈದ್ಯರು ನೆರವಾಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.