ADVERTISEMENT

PV Web Exclusive | 'ಆರೋಗ್ಯ ಮಾಫಿಯಾ’ದಲ್ಲಿ ನೀವೂ ಇದ್ದೀರಿ!

ನೀಳಾ ಎಂ.ಎಚ್
Published 7 ಸೆಪ್ಟೆಂಬರ್ 2020, 6:51 IST
Last Updated 7 ಸೆಪ್ಟೆಂಬರ್ 2020, 6:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಧುನಿಕ ಶಿಕ್ಷಣದ ಜೊತೆಗೆ ಸಾಂಪ್ರದಾಯಿಕ ಶಿಕ್ಷಣಕ್ಕೂ ಒತ್ತು ನೀಡುವ ಶಾಲೆಯೊಂದರ ಪೋಷಕರ ಸಭೆಯಲ್ಲಿ ಪಾಲ್ಗೊಂಡಿದ್ದೆ. ಮಕ್ಕಳ ಊಟದ ಡಬ್ಬಿ ಏನೇನನ್ನು ಒಳಗೊಂಡಿರಬೇಕೆಂಬ ಬಗ್ಗೆ ಮುಖ್ಯೋಪಾಧ್ಯಾಯಿನಿ ಒಂದು ಪುಟ್ಟ ಭಾಷಣವನ್ನೇ ಮಾಡಿದರು. ‘ಈರುಳ್ಳಿ, ಬೆಳ್ಳುಳ್ಳಿ ಇಲ್ಲದಂತಹ ಸಾತ್ವಿಕ ಆಹಾರವನ್ನಷ್ಟೇ ಕಳಿಸಬೇಕು’ ಎಂಬುದು ಅವರ ಮುಖ್ಯ ತಾಕೀತಾಗಿತ್ತು. ಅದಾದ ಕೆಲ ದಿನಗಳ ಬಳಿಕ, ಮಗುವಿನ ಶೈಕ್ಷಣಿಕ ಪ್ರಗತಿಯ ವಿವರ ಪಡೆಯಲು ಮತ್ತೊಮ್ಮೆ ಶಾಲೆಗೆ ತೆರಳಿದ್ದಾಗ, ‘ಮಾರ್ನಿಂಗ್‌ ಬ್ರೇಕ್‌’ನಲ್ಲಿ ಮಕ್ಕಳು ಆವರಣದಲ್ಲಿ ಬುತ್ತಿ ಬಿಚ್ಚಿ ತಿಂಡಿ ತಿನ್ನಲು ಅಣಿಯಾಗತೊಡಗಿದ್ದರು. ನಿರಾಯಾಸವಾಗಿ ಕಣ್ಣಿಗೆ ಬಿದ್ದ ಅವರ ತಿಂಡಿಯ ಡಬ್ಬಿ ನೋಡಿ ಅತೀವ ಅಚ್ಚರಿಯಾಯಿತು. 8– 10 ಮಕ್ಕಳ ಆ ಗುಂಪಿನಲ್ಲಿ ಹೆಚ್ಚಿನವರು ತಂದಿದ್ದುದು ಬ್ರೆಡ್‌, ಬನ್‌, ಚಿಪ್ಸ್‌, ಪಫ್‌, ದಿಲ್‌ಪಸಂದ್‌ನಂತಹ ಸ್ನ್ಯಾಕ್ಸ್‌!

‘ಸತ್ವ’ ಎಂಬ ಸಂಸ್ಕೃತ ಪದದಿಂದ ಬಂದಿರುವ, ‘ಸತ್ವಯುತವಾದ ಆಹಾರ’ ಎಂಬರ್ಥ ನೀಡುವ ಸಾತ್ವಿಕ ಆಹಾರದ ಪಟ್ಟಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸ್ಥಾನ ಪಡೆಯದೇ ಇರುವುದಕ್ಕೆ ಬೇರೆಯದೇ ಕಾರಣವಿದೆ. ತನ್ನದೇ ಆದ ಸಾಮಾಜಿಕ ಆಯಾಮವಿದೆ. ಅವುಗಳಿಲ್ಲದೆ ಅಡುಗೆ ನಿಷಿದ್ಧ ಎನ್ನುವವರು ಇರುವಂತೆಯೇ, ಒಮ್ಮೆಯೂ ಈ ಪದಾರ್ಥಗಳ ಮುಖವನ್ನೇ ಕಾಣದಿರುವ ಕಟ್ಟಾ ಸಂಪ್ರದಾಯಸ್ಥರ ಅಡುಗೆಕೋಣೆಗಳೂ ನಮ್ಮಲ್ಲಿ ಇವೆ. ಭಿನ್ನ ಸಂಸ್ಕೃತಿಯ ನಾಡಿನಲ್ಲಿ ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ವಿಮರ್ಶಿಸುವ ಅಗತ್ಯವಿಲ್ಲ.

ಯಾವುದೇ ಒಂದು ಕುಟುಂಬ ಅಥವಾ ಸಮುದಾಯದ ಆಹಾರ ಪದ್ಧತಿಗೆ ಪೀಳಿಗೆಯ ನಂಟಿರುತ್ತದೆ. ಹೀಗಾಗಿ, ಅವುಗಳ ಒಳಿತು– ಕೆಡುಕುಗಳ ಬಗ್ಗೆ ಸಾರಾಸಗಟಾಗಿ ತೀರ್ಮಾನಕ್ಕೆ ಬರುವುದು ಸಾಧುವೂ ಅಲ್ಲ; ‘ಊಟ ತನ್ನಿಚ್ಛೆ...’ ಎಂಬ ಪರಿಕಲ್ಪನೆಯ ಆಧಾರದಲ್ಲಿ ನೋಡುವುದಾದರೆ, ಅನ್ಯರ ಆಹಾರ ಕ್ರಮದ ಬಗ್ಗೆ ಅಂತಹದ್ದೊಂದು ಷರಾ ಬರೆಯುವ ಅಗತ್ಯವೂ ಇಲ್ಲ. ಆದರೆ ಇಲ್ಲಿ ಅಚ್ಚರಿ ಹುಟ್ಟಿಸುವುದೆಂದರೆ, ನೈಸರ್ಗಿಕವಾಗಿ ಬೆಳೆಯುವ ಆಹಾರ ಪದಾರ್ಥಗಳನ್ನು ಸಾಮಾಜಿಕ ಕಾರಣಕ್ಕಾಗಿ ವರ್ಜಿಸಲು ನೀಡುವ ಒತ್ತನ್ನು, ಆರೋಗ್ಯಕ್ಕೆ ಹಾನಿ ಎಂದು ಪರಿಗಣಿಸುವ ಸಂಸ್ಕರಿತ ಆಹಾರ ಅಥವಾ ಜಂಕ್‌ಫುಡ್‌ ಬಳಕೆಗೆ ಕೊಡದಿರುವುದು.

ADVERTISEMENT

ಕೋವಿಡ್‌ ಕಾಲಿಡುತ್ತಿದ್ದಂತೆಯೇ ಆಹಾರ ಸೇವನೆಯ ವಿಚಾರದಲ್ಲಿ ನಿದ್ದೆಯ ಮಂಪರಿನಿಂದ ಧಿಗ್ಗನೆದ್ದು ಕುಳಿತಂತೆ ವರ್ತಿಸುತ್ತಿರುವ ನಮ್ಮೆಲ್ಲರ ಮನದಲ್ಲಿ, ಆರೋಗ್ಯ ಕಾಯ್ದುಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಎಂದಿನಿಂದಲೂ ಗುಂಯ್‌ಗುಡುವ ಗೊಂದಲಗಳಿಗೆ ಮೇಲಿನದು ಒಂದು ಸಣ್ಣ ನಿದರ್ಶನವಷ್ಟೆ.

ಮೊಬೈಲ್‌ನಲ್ಲಿ ಯುಟ್ಯೂಬ್‌ ಚಾನೆಲ್‌ನತ್ತ ಇಣುಕಿದಾಗ ಕಾಣುವ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ಸುದ್ದಿ ಅಥವಾ ವಿಡಿಯೊ ಮೇಲೆ ಕುತೂಹಲಕ್ಕಾಗಿಯಾದರೂ ಒಮ್ಮೆ ಕ್ಲಿಕ್‌ ಮಾಡಿ ನೋಡಿ. ಮರುಕ್ಷಣದಿಂದಲೇ ನಿಮ್ಮ ಗೂಗಲ್‌ ಅಕೌಂಟ್‌ನಿಂದ ಹಿಡಿದು ಫೇಸ್‌ಬುಕ್‌ ಪುಟದವರೆಗೆ ನಿಮಗೆ ರೇಜಿಗೆ ಹುಟ್ಟಿಸುವಷ್ಟರ ಮಟ್ಟಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶಗಳು ಓತಪ್ರೋತವಾಗಿ ಹರಿಯತೊಡಗುತ್ತವೆ. ಇವುಗಳಲ್ಲಿ ಯಾವುದನ್ನು ಪಾಲಿಸುವುದು ಯಾವುದನ್ನು ಬಿಡುವುದು ಎಂಬ ಹೊಯ್ದಾಟದಲ್ಲಿ, ಆ ಸಂದೇಶಗಳ ಹಿಂದಿನ ಅಸಲಿಯತ್ತು ತಕ್ಷಣಕ್ಕೆ ನಮಗೆ ಅರ್ಥವಾಗುವುದೇ ಇಲ್ಲ.

ನಾಡಿನಲ್ಲಿ ಈಗ ಸದ್ದು ಮಾಡುತ್ತಿರುವ ಮಾದಕ ದ್ರವ್ಯದ ಮಾಫಿಯಾಗಿಂತಲೂ ಬಲು ದೊಡ್ಡದು ‘ಆರೋಗ್ಯ ಮಾಫಿಯಾ’. ನಿಷಿದ್ಧ ಮಾದಕ ದ್ರವ್ಯಗಳ ಬಗ್ಗೆಯಾದರೂ ನೀವು ಸೊಲ್ಲೆತ್ತಬಹುದು. ಕದ್ದು ಮುಚ್ಚಿ ಮಾರುತ್ತಿದ್ದವರ ಗುಟ್ಟು ರಟ್ಟಾದಾಗ ಅವರು ಕಾನೂನಿನ ಕುಣಿಕೆಗೆ ಸಿಲುಕುವುದನ್ನು ನೋಡುತ್ತಾ ನಿರಾಳರಾಗಬಹುದು. ಆರೋಗ್ಯವನ್ನು ಪಣಕ್ಕಿಟ್ಟು ಈ ಚಟ ಹತ್ತಿಸಿಕೊಂಡವರ ಬಗ್ಗೆ ಅನುಕಂಪದ ದೃಷ್ಟಿ ಹರಿಸಲೂಬಹುದು. ಆದರೆ ಆರೋಗ್ಯ ಮಾಫಿಯಾ? ಇಲ್ಲಿ ಗುಟ್ಟೆಂಬುದೇ ಇಲ್ಲ, ಎಲ್ಲವೂ ಖುಲ್ಲಂಖುಲ್ಲಾ.

ಪ್ರೋಟೀನ್‌, ವಿಟಮಿನ್‌, ಇಮ್ಯುನಿಟಿ ಬೂಸ್ಟರ್‌, ರೆಸಿಸ್ಟೆನ್ಸ್‌ ಪವರ್‌, ಆ್ಯಂಟಿ ಆಕ್ಸಿಡೆಂಟ್‌... ಎಂಬೆಲ್ಲಾ ಹೆಸರುಗಳಲ್ಲಿ ಬಿಕರಿಯಾಗುವ ವಸ್ತುಗಳಿಗೆ ಕೊನೆ ಮೊದಲಿಲ್ಲ. ಅದರಲ್ಲೂ, ಸಣ್ಣಗಾಗಬಹುದು, ದಪ್ಪಗಾಗಬಹುದು ಎಂದೆಲ್ಲ ಆಮಿಷವೊಡ್ಡಿ ಕೈಗಿಡುವ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’. ಯಾಕೆಂದರೆ, ನಿಮ್ಮ ಹೊಟ್ಟೆ ಸೇರುತ್ತಿರುವ ಆ ಪದಾರ್ಥವನ್ನು ಖುದ್ದಾಗಿ ನೀವೇ ಕೊಂಡು ತಂದಿರುತ್ತೀರಿ. ಅದರೊಳಗೆ ಏನೇನೆಲ್ಲಾ ಪದಾರ್ಥಗಳಿವೆ, ಎಷ್ಟೆಷ್ಟು ಪ್ರಮಾಣದಲ್ಲಿವೆ ಎಂಬುದೆಲ್ಲ ನಿಮ್ಮ ಅಂಗೈಯಲ್ಲಿರುವ ಆ ಪ್ಯಾಕೆಟ್‌ ಮೇಲೆಯೇ ರಾರಾಜಿಸುತ್ತಿರುತ್ತದೆ. ಆದರೆ ಅಂತಿಮವಾಗಿ ನೀವು ಮಾತ್ರ ಬೇಸ್ತು ಬಿದ್ದಿರುತ್ತೀರಿ! ಏಕೆಂದರೆ ನೀವು ಅದನ್ನೆಲ್ಲ ಗಮನಿಸುವ ಗೋಜಿಗೇ ಹೋಗಿರುವುದಿಲ್ಲ. ನಿಮ್ಮ ಗಮನವೇನಿದ್ದರೂ ಅಂದದ ಪ್ಯಾಕೆಟ್‌ನ ಮುಂಭಾಗದ ಮೇಲೆ ನೆಟ್ಟಿರುತ್ತದೆ ಹೊರತು ಸಣ್ಣಸಣ್ಣ ಅಕ್ಷರಗಳಲ್ಲಿ ಹಿಂಭಾಗದಲ್ಲಿ ಅಡಗಿ ಕುಳಿತ ವಿವರದ ಮೇಲಲ್ಲ.

ಕನಿಷ್ಠ ತಾವು ಕೊಳ್ಳುವ ವಸ್ತುವಿನ ತೀರುವಳಿ ದಿನಾಂಕವನ್ನಾದರೂ (ಎಕ್ಸ್‌ಪೈರಿ ಡೇಟ್‌) ನೋಡುವ ವ್ಯವಧಾನ ಸಹ ಹೆಚ್ಚಿನವರಿಗೆ ಇಲ್ಲದೇ ಹೋದಾಗ, ಉದ್ದೇಶಪೂರ್ವಕವಾಗಿಯೇ ಸಣ್ಣದಾಗಿ ಕೊರೆದಿಟ್ಟ ಆ ಅಕ್ಷರಗಳು ಸೂಚ್ಯವಾಗಿ ಕೊಡುವ ಎಚ್ಚರಿಕೆಯನ್ನು ಗ್ರಹಿಸುವುದು ಸಾಧ್ಯವೇ? ಹೋಗಲಿ, ಯಾವ ಕಾರಣಕ್ಕಾಗಿ ನಾವು ಅದನ್ನು ಕೊಂಡು ತಂದೆವೋ ಆ ಉದ್ದೇಶವಾದರೂ ಈಡೇರಿದೆಯೇ ಎಂದುಕೊಂಡರೆ, ಅಲ್ಲಿ ನಿರಾಶೆಯೇ ಕಟ್ಟಿಟ್ಟಬುತ್ತಿ. ಹಾಗೆಂದು ಆ ಪದಾರ್ಥಗಳಿಂದ ಏನೂ ಪ್ರಯೋಜನವೇ ಆಗದು ಎಂದಲ್ಲ. ಆದರೆ ಮುಖ್ಯವಾದ ಗುರಿ ಸಾಧನೆ ಆಗಿರುವುದಿಲ್ಲ ಎಂಬುದಂತೂ ನಿಜ.

ಬೊಜ್ಜು ಕರಗಿಸಲು ಕೊಟ್ಟ ಪುಡಿಯನ್ನು ತಿಂಗಳುಗಟ್ಟಲೆ ಸೇವಿಸುತ್ತೇವೆ. ಮೈ ಕರಗಿತೇ? ಇಲ್ಲಿ ಕರಗುವುದು ನಮ್ಮ ಜೇಬೇ ಹೊರತು ಬೊಜ್ಜಲ್ಲ. ಹೆಚ್ಚು ಕೊಬ್ಬಿನಾಂಶವಿಲ್ಲದ ಆಹಾರ ಪದಾರ್ಥ ಸೇವನೆ, ಮೈ ಬೆವರಿಳಿಸುವ ದೃಢಸಂಕಲ್ಪ ದಿನನಿತ್ಯದ ಮಂತ್ರವಾಗದೆ ಕಾಯ ಕರಗದು ಎಂಬಂತಹ ಸಾಮಾನ್ಯ ಜ್ಞಾನವನ್ನೂ ಮರೆಮಾಚಿಸುವಷ್ಟರ ಮಟ್ಟಿಗೆ ಜಾಗತಿಕ ಆರೋಗ್ಯ ಮಾರುಕಟ್ಟೆ ನಮ್ಮನ್ನಿಂದು ಆವರಿಸಿದೆ. ಆಧುನಿಕ ಜೀವನಶೈಲಿಯಿಂದ ಹೆಚ್ಚುತ್ತಿರುವ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ಕಾಯಿಲೆಗಳಂತೂ ಈ ಮಾರುಕಟ್ಟೆಯ ಬಹುಮುಖ್ಯವಾದ ಬಂಡವಾಳವೇ ಆಗಿಹೋಗಿವೆ. ಇದರಿಂದ, ನಮ್ಮ ಊಹೆಗೂ ನಿಲುಕದಷ್ಟು ವ್ಯಾಪಕವಾಗಿ ಈ ಮಾರುಕಟ್ಟೆ ಬೆಳೆಯುತ್ತಿದೆ. ಜಾಗತಿಕ ಆರ್ಥಿಕತೆಯಲ್ಲಿ ಗ್ಲೋಬಲ್‌ ಹೆಲ್ತ್‌ ಅಂಡ್‌ ವೆಲ್‌ನೆಸ್‌ ಮಾರ್ಕೆಟ್‌ನ ಪಾಲು ಶೇ 5.3ರಷ್ಟು ಎಂಬ ‘ಗ್ಲೋಬಲ್‌ ವೆಲ್‌ನೆಸ್‌ ಇನ್‌ಸ್ಟಿಟ್ಯೂಟ್‌’ನ ಮಾಹಿತಿಯಿಂದ, ಈ ಮಾರುಕಟ್ಟೆಯ ಅಗಾಧ ವ್ಯಾಪ್ತಿಯ ಅರಿವು ನಮಗಾದೀತು.

‘ಗ್ರೀನ್‌ ಟೀ ಕುಡಿಯಿರಿ, ನಿರೋಗಿಯಾಗಿರಿ’ ಎಂದು ಹೇಳುತ್ತಾ, ಮಧುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನೂ ಗುಣಪಡಿಸುವ ಶಕ್ತಿ ತನಗಿದೆ ಎಂದು ಎಗ್ಗಿಲ್ಲದೇ ಹೇಳಿಕೊಳ್ಳುತ್ತದೆ ಈ ಚಹಾ ಮಾರುಕಟ್ಟೆ. ಗಂಭೀರ ಕಾಯಿಲೆಗಳಿಗೆ ರಾಮಬಾಣವಾಗಬಲ್ಲ ಯಾವುದೇ ಅಂಶ ವೈಜ್ಞಾನಿಕವಾಗಿ ದೃಢಪಡದಿದ್ದರೂ ಕೊರೊನಾದಿಂದ ಗ್ರೀನ್‌ ಟೀ ಮಾರುಕಟ್ಟೆಗೆ ಶುಕ್ರದೆಸೆಯೇ ಶುರುವಾಗಿದೆ. ಹೆಚ್ಚೆಂದರೆ ನಮ್ಮಲ್ಲೊಂದು ತಾಜಾತನ ಉಕ್ಕಿಸಬಲ್ಲ, ಇತರ ಚಹಾ ಸೇವನೆಯಿಂದ ಆಗುವುದಕ್ಕಿಂತ ಹೆಚ್ಚಿನ ಲಾಭವೇನೂ ಆಗದ, ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಗ್ರೀನ್‌ ಟೀ ಈಗ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಿಕರಿಯಾಗುತ್ತಿರುವ ವೆಲ್‌ನೆಸ್‌ ಪ್ರಾಡಕ್ಟ್‌ಗಳಲ್ಲಿ ಒಂದು. ಅದು ಒಂದು ಬಗೆಯ ಪೇಯವಾಗಿಯಷ್ಟೇ ಮಾರಾಟವಾದರೆ ತಕರಾರಿಲ್ಲ. ಆದರೆ ಗಂಭೀರ ಕಾಯಿಲೆಗಳಿಗೆ ಮದ್ದು ಎಂಬ ಪ್ರಚಾರ ಪಡೆದಾಗ ಆ ಪದಾರ್ಥದ ಮಾರುಕಟ್ಟೆಯ ದಿಕ್ಕೇ ಬದಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ನೈಸರ್ಗಿಕ ಆಹಾರ ಪದ್ಧತಿಗೆ ಹೊರತಾಗಿ ರಾಸಾಯನಿಕಗಳು, ಕೃತಕ ಬಣ್ಣಗಳು, ಅತಿಯಾದ ಸಕ್ಕರೆ, ಉಪ್ಪಿನ ಅಂಶಗಳಿಂದ ಮಿಶ್ರಿತವಾದ ಪದಾರ್ಥಗಳು ಆರೋಗ್ಯದ ಹೆಸರಿನಲ್ಲಿ ದಂಡಿಯಾಗಿ ನಮ್ಮ ದೇಹವನ್ನು ಸೇರುತ್ತಿವೆ. ಎಂದಿನಿಂದ ತಿನ್ನುತ್ತಾ ಬಂದ, ನಮ್ಮ ದೇಹಕ್ಕೆ ಸುಲಭವಾಗಿ ಒಗ್ಗುವ ನೈಸರ್ಗಿಕ ಆಹಾರ ಪದಾರ್ಥಗಳ ಜಾಗವನ್ನು ನಮ್ಮದಲ್ಲದ, ಹೆಚ್ಚು ಸಂಸ್ಕರಿತಗೊಂಡ ಪದಾರ್ಥಗಳು ಆಕ್ರಮಿಸಿಕೊಳ್ಳುತ್ತಿವೆ. ಇನ್ನು ಮಕ್ಕಳನ್ನು ಮೋಡಿ ಮಾಡಿ ಜೇಬು ತುಂಬಿಸಿಕೊಳ್ಳುವ ವಿಚಾರದಲ್ಲಂತೂ ಈ ಮಾರುಕಟ್ಟೆ ಇನ್ನೂ ಒಂದು ಹೆಜ್ಜೆ ಮುಂದೆಯೇ. ಮಕ್ಕಳು ಟಿ.ವಿ ಮುಂದೆ ಕೂರುವ ಸಮಯದಲ್ಲಿ ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಪೋಷಕರ ಕಿಸೆಗೆ ಕನ್ನ ಹಾಕುವ ಹುನ್ನಾರಕ್ಕೆ ಎಂದೆಂದಿಗೂ ಅಪಜಯವಾಗಿದ್ದೇ ಇಲ್ಲ.

ಸದ್ದಿಲ್ಲದೇ ಇಂತಹ ಆಮಿಷಗಳಿಗೆ ಮರುಳಾಗುವ ನಾವು, ನಮಗೇ ಅರಿವಿಲ್ಲದೆ ನಿಧಾನವಿಷ ಉಣ್ಣುತ್ತಿದ್ದೇವೆ. ಕೆಲವೊಮ್ಮೆ ಇದು ಮಿತಿಮೀರಿದಾಗ ಕಡಿವಾಣ ಹಾಕುವ ಪ್ರಯತ್ನಗಳು ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುತ್ತವಾದರೂ ಅವು ಹೆಚ್ಚು ಸುದ್ದಿಯಾಗುವುದೇ ಇಲ್ಲ. ವೈಜ್ಞಾನಿಕವಾಗಿ ದೃಢಪಡದಿದ್ದರೂ, ಅಕ್ಕಿಯಿಂದ ಮಾಡಿದ ಕುರುಕಲು ಉಪಾಹಾರವೊಂದು ಮಕ್ಕಳ ಇಮ್ಯೂನಿಟಿ ಹೆಚ್ಚಿಸುತ್ತದೆ ಎಂದು ಸುಳ್ಳು ಪ್ರಚಾರ ನೀಡಿದ್ದಕ್ಕಾಗಿ, ಬ್ರಿಟನ್‌ನ ಪ್ರತಿಷ್ಠಿತ ಕಂಪನಿಯೊಂದು ಕೋಟ್ಯಂತರ ರೂಪಾಯಿ ದಂಡ ತೆರುವಂತೆ ಮಾಡಿತ್ತು ಕ್ಯಾಲಿಫೋರ್ನಿಯಾದ ಕೋರ್ಟ್‌. ಚೀನಾದಲ್ಲಿ ಕೆಲ ವರ್ಷಗಳ ಹಿಂದೆ ಪ್ರೋಟೀನ್‌ಯುಕ್ತ ಹಾಲಿನಪುಡಿಯಲ್ಲಿ ಬಳಸಿದ ರಾಸಾಯನಿಕದ ಪ್ರಮಾಣ ಮಿತಿಮೀರಿ, ಸಾವಿರಾರು ಮಕ್ಕಳು ಆಸ್ಪತ್ರೆ ಸೇರಿದ್ದರು. ಕೆಲವು ಹಸುಳೆಗಳು ಅಸುನೀಗಿದ್ದವು. ಇದಕ್ಕಾಗಿ ಒಂದಿಬ್ಬರಿಗೆ ಗಲ್ಲುಶಿಕ್ಷೆಯಾಗಿ, ಒಂದಷ್ಟು ಮಂದಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಯಿತು. ಅಷ್ಟಾದರೂ ಹೊಸ ಹೊಸ ಉತ್ಪನ್ನಗಳ ಹೆಸರಿನಲ್ಲಿ ಜಗತ್ತಿನಾದ್ಯಂತ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ನಿರಂತರವಾಗಿ ಸಾಗುತ್ತಾ ಬಂದಿದೆ. ಅದಕ್ಕೆ ಭಾರತವೂ ಹೊರತಲ್ಲ.

ಖ್ಯಾತ ಕಂಪನಿಯೊಂದರ ನೂಡಲ್ಸ್‌ನಲ್ಲಿ ಹಾನಿಕಾರಕ ರಾಸಾಯನಿಕ ಅಂಶ ನಿಗದಿತ ಮಾನದಂಡಕ್ಕಿಂತ ಹೆಚ್ಚಾಗಿದೆ ಎಂಬ ಆರೋಪ ನಾಲ್ಕೈದು ವರ್ಷಗಳ ಹಿಂದೆ ನಮ್ಮಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಕಡೆಗದು ಏನಾಯಿತು, ಅಂತಹ ಆರೋಪಕ್ಕೊಂದು ತಾರ್ಕಿತ ಅಂತ್ಯವೇನಾದರೂ ಸಿಕ್ಕಿತೇ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವ ಮೊದಲೇ ಆ ಉತ್ಪನ್ನವು ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ಕುದುರಿಸಿಕೊಂಡಿತು. ನಮ್ಮ ಬದುಕಿನ ಭಾಗವೇ ಆಗಿಹೋಗಿರುವ ಸಂಸ್ಕರಿತ ಆಹಾರ ಪದಾರ್ಥಗಳನ್ನು ನಿವಾರಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದಕ್ಕೆ ಇದಕ್ಕಿಂತ ಅನ್ಯ ನಿದರ್ಶನ ಬೇಕಿಲ್ಲ.

ಹಾಗಿದ್ದರೆ ಈ ವಿಷವರ್ತುಲದಿಂದ ಹೊರಬರುವ ದಾರಿಯೇ ಇಲ್ಲವೇ? ಅಷ್ಟೊಂದು ನಿರಾಶೆಗೆ ಎಡೆಗೊಡದಂತೆ, ಗ್ರಾಹಕರ ಹಿತರಕ್ಷಣೆಯ ಪರವಾದ ಕಾಯ್ದೆಗೆ ಇತ್ತೀಚೆಗಷ್ಟೇ ತಿದ್ದುಪಡಿಯ ಮೂಲಕ ಹೆಚ್ಚಿನ ಬಲ ತುಂಬಲಾಗಿದೆ. ಗ್ರಾಹಕರ ಹಕ್ಕುಗಳ ಉಲ್ಲಂಘನೆ, ಅನುಚಿತ ವ್ಯಾಪಾರ ಪದ್ಧತಿ ಮತ್ತು ಹಾದಿ ತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸಿ, ಕಾರಣಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅವಕಾಶವನ್ನು ಈ ಕಾಯ್ದೆ ನಮಗೆ ಒದಗಿಸುತ್ತದೆ. ಆದರೆ ಜನಜಾಗೃತಿ ಮೂಡದ ಹೊರತು, ನಮ್ಮ ಆಹಾರ ಕ್ರಮ, ಜೀವನಶೈಲಿಯ ವ್ಯಾಖ್ಯಾನಗಳು ಬದಲಾಗದ ಹೊರತು ಇಂತಹ ಯಾವುದೇ ಕಾಯ್ದೆಗಳಿಗೆ ಯಾವುದೇ ಅರ್ಥವೂ ಇರದು. ಕಾಣದ ಬಾವಿಗೆ ಬೀಳಲು ಮುಂದಾಗುವವರನ್ನು ತಡೆದು ನಿಲ್ಲಿಸಬಹುದು; ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೊರಟವರನ್ನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.