ADVERTISEMENT

ಪಾನೀಯ: ಕುಡಿಯುವ ಮೊದಲು ಯೋಚಿಸಿ

ಡಾ.ವಿಜಯಲಕ್ಷ್ಮಿ ಪಿ.
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಕೋ ಅರುಕ್, ಕೋ ಅರುಕ್, ಕೋ ಅರುಕ್’ ಎಂದು ಪಕ್ಷಿರೂಪದಲ್ಲಿ ಬಂದು ಕೇಳಿದ ಧನ್ವಂತರಿಗೆ ‘ಹಿತ ಭುಕ್, ಮಿತ ಭುಕ್, ಋತು ಭುಕ್’ ಎಂಬುದು ವಾಗ್ಭಟಾಚಾರ್ಯರ ಉತ್ತರವಾಗಿತ್ತು. ಯಾರು ನಿರೋಗಿಯಾಗಿರುತ್ತಾರೆ ಎಂದರೆ – ಯಾರು ಹಿತವಾಗಿ, ಮಿತವಾಗಿ, ಋತುವಿಗೆ ಅನುಗುಣವಾಗಿ ಆಹಾರ ಸೇವಿಸುತ್ತಾರೋ ಅವರು ನಿರೋಗಿಯಾಗಿರುತ್ತಾರೆ ಎಂದು.

ಯಾವುದೇ ಆಹಾರವಾದರೂ ಹಿತವಾಗಿ ಮಿತವಾಗಿ ಸೇವಿಸಿದರೆ ಆರೋಗ್ಯ ಉತ್ಪತ್ತಿ ಮಾಡಬಹುದು, ಹಾಗೆಯೇ ಪಾನೀಯಗಳೂ ಸಹ. ಅದು ಕಾಫಿ, ಟೀಗಳೇ ಇರಬಹುದು ಅಥವಾ ಯಾವುದೇ ಹಣ್ಣಿನ ರಸ, ಸೊಪ್ಪಿನ ರಸಗಳೇ ಇರಬಹುದು. ಅತಿಯಾದರೆ ಅಮೃತವೂ ವಿಷವೇ ಆಗುತ್ತದೆ.

ಈಗಿನ ಕೋವಿಡ್ ಸಂದರ್ಭದಲ್ಲಿ ಅನೇಕರು ಅನೇಕ ರೀತಿಯ ಕಷಾಯಗಳನ್ನು ಮೆಣಸು, ಶುಂಠಿ, ದನಿಯಾ, ಮೆಣಸು, ಬೆಳ್ಳುಳ್ಳಿ ಇತ್ಯಾದಿ ಅನೇಕ ಮಸಾಲೆ ಪದಾರ್ಥಗಳನ್ನು ಹಾಕಿ ಕಷಾಯ ಮಾಡಿ ನಿತ್ಯ ಸೇವಿಸುವವರಿದ್ದಾರೆ. ಇದು ಉಷ್ಣವೋ ಶೀತವೋ ಒಳಿತೋ ಕೆಡಕೋ ಎಂದು ಯೋಚಿಸದೆ ಸೇವಿಸುವುದರಿಂದ ಅಮ್ಲಪಿತ್ತ, ಮಲಬದ್ದತೆ, ರಕ್ತಯುಕ್ತ ಮಲಪ್ರವೃತ್ತಿ, ಮೂತ್ರವಿಕೃತಿಗಳು ಹೆಚ್ಚಾಗುತ್ತಿವೆ. ಆದ್ದರಿಂದ ಯಾವುದೇ ಕಷಾಯ ಉಪಯೋಗಿಸುವಾಗ ಇದು ನಮ್ಮ ದೇಹದ ಮೇಲೆ ಯಾವ ಪರಿಣಾಮ ಬೀರುತ್ತಿದೆ, ಎನ್ನುವುದನ್ನು ಗಮನಿಸಿ ಹಿತವಾಗುತ್ತಿದ್ದರೆ ಮಾತ್ರ ಸೇವಿಸಬಹುದು. ಹಿತವಾಗುತ್ತಿದ್ದರೂ ಮಿತವಾಗಿ ಸೇವಿಸುವುದು ಒಳ್ಳೆಯದು.

ADVERTISEMENT

ಇನ್ನು ಕೆಲವರು ಆರೋಗ್ಯಕ್ಕೆ ಒಳ್ಳೆಯದು ಎಂದು ದಿನಕ್ಕೊಂದು ಸೊಪ್ಪಿನ ರಸವನ್ನು ಅಥವಾ ದಿನವೂ ಎರಡು ಅಥವಾ ಮೂರು ಸೊಪ್ಪುಗಳ ಮಿಶ್ರಣದಿಂದ ತಯಾರಾಗುವ ರಸಗಳನ್ನು ಸೇವಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇದೂ ಸಹ ವೈದ್ಯರ ಸಲಹೆಯ ಮೇರೆಗೆ ಕೆಲವು ದಿನಗಳ ಉಪಯೋಗ ಸ್ವಾಸ್ಥ್ಯಕಾರಕವಾಗುತ್ತದೆ. ಯಾವುದೇ ವಿಧಿನಿಯಮಗಳನ್ನು ಪಾಲಿಸದೆ ಇಡೀ ವರ್ಷವೂ ಯಾರೋ ತಂದು ಮಾರಾಟಮಾಡುವ ಸೊಪ್ಪಿನ ರಸಗಳನ್ನು ಆರೋಗ್ಯಕರವೆಂದು ಸೇವಿಸುವುದು, ಅಥವಾ ತಾವೇ ತಯಾರಿಸಿ ಅಗತ್ಯಕ್ಕಿಂತ ಹೆಚ್ಚುದಿನ ಸೇವಿಸುವುದು ಒಂದು ರೋಗವನ್ನು ಗುಣಪಡಿಸಿದರೂ ಇನ್ನೊಂದು ರೋಗಕ್ಕೆ ಕಾರಣವಾಗುತ್ತದೆ.

ಹಾಗೆಯೇ ತಂಪಾಗಿರುವ ಕಾರ್ಬೋನೇಟೆಡ್ ಪಾನೀಯಗಳ ಸೇವನೆ, ಆರೋಗ್ಯವಂತರಿಗೆ ಎಲ್ಲ ಸಂದರ್ಭಗಳಲ್ಲೂ ಮೂತ್ರ ಮತ್ತು ಮೂತ್ರವಹ ಸ್ರೋತಸ್ಸಿನ ರೋಗೋತ್ಪತ್ತಿಗೆ ಕಾರಣವಾಗುತ್ತದೆ. ಹಾಗೆಯೇ ಅತಿ ತಂಪಾದ ಹಣ್ಣಿನ ರಸಸೇವನೆಯೂ ಸಹ ಬೇಸಗೆಯಲ್ಲಿ ಅಥವಾ ಬಿಸಿಲಿರುವ ಸಂದರ್ಭಗಳನ್ನು ಹೊರತುಪಡಿಸಿ ಬೇರೆಲ್ಲಾ ಸಂದರ್ಭದಲ್ಲಿ ಒಳ್ಳೆಯದಲ್ಲ. ಇನ್ನು ಹೃದಯ ಸಂಬಂಧಿ ರೋಗಗಳು, ರಕ್ತ ಕಡಿಮೆ ಇರುವ ರೋಗಗಳಲ್ಲಿ ಬೀಜ ಇರುವ ಕಪ್ಪುದ್ರಾಕ್ಷಿ, ಅಥವಾ ದಾಳಿಂಬೆ ಹಣ್ಣನ್ನು ನುಣ್ಣಗೆ ರುಬ್ಬಿ ಸ್ವಲ್ಪ ನೀರು ಸೇರಿಸಿ ಕುದಿಸಿ ತಣಿದ ನಂತರ ಶೋಧಿಸಿ ಅವಶ್ಯಕತೆ ಇದ್ದಲ್ಲಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುಡಿಯುವುದು ಸೂಕ್ತ. ಹಾಗೆಯೇ ಪಾನೀಯ ತಯಾರಿಸುವಾಗ ಭತ್ತದ ಅರಳು ಮತ್ತು ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕಡೆದು, ಜೇನು, ಸಕ್ಕರೆ ಅಥವಾ ಬೆಲ್ಲ ಮತ್ತು ಏಲಕ್ಕಿ, ಚಿಟಿಕೆಯಷ್ಟು ಅಲ್ಪ ಪ್ರಮಾಣದಲ್ಲಿ ಮೆಣಸನ್ನು ಸೇರಿಸಿ ಸೇವಿಸುವ ಮಂಥ ಎಲ್ಲಾ ವಯಸ್ಸಿನವರೂ ಎಲ್ಲಾ ಕಾಲದಲ್ಲೂ ಸೇವಿಸಬಹುದಾದ ಪಾನೀಯ.

ಬೇಸಗೆಯಲ್ಲಿ ನೀರಿನ ಬದಲು ನೀರುಮಜ್ಜಿಗೆಯನ್ನು ಸೇವಿಸುವುದು, ಅಥವಾ ಎಳೆನೀರು ಸೇವಿಸುವುದು ಜೀರ್ಣಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕೊಡುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರಿನ ಸೇವನೆಯೂ ಅನಾರೋಗ್ಯಕಾರಕವೇ. ದೇಹ ಬಯಸುವಷ್ಟು ನೀರನ್ನು ಸೇವಿಸಿದರೆ ನೀರು ಆರೋಗ್ಯವನ್ನು ವರ್ಧಿಸುತ್ತದೆ. ಇಷ್ಟೇ ಲೀಟರ್ ನೀರು ಕುಡಿಯಬೇಕೆಂದು ಊಟಕ್ಕಿಂತ ಹೆಚ್ಚು ಉಪ್ಪಿನಕಾಯಿ ಎಂಬಂತೆ ನೀರಿನ ಸೇವನೆ ಪೋಷಕಾಂಶಗಳ ಕೊರತೆಯನ್ನೇ ಉತ್ಪತ್ತಿ ಮಾಡುತ್ತದೆ. ಊಟದ ಜೊತೆಜೊತೆಯಲ್ಲಿ, ಬಿಸಿಲಿನಿಂದ, ಆಯಾಸದಿಂದ ಬಳಲಿದಾಗ, ಬಾಯಾರಿಕೆಯಾದಾಗ ನೀರನ್ನು ಸೇವಿಸುವುದು ಒಳ್ಳೆಯದು. ಊಟಕ್ಕೆ ಮೊದಲು ನೀರನ್ನು ಕುಡಿಯುವುದು ಪೊಷಕಾಂಶಗಳ ಕೊರತೆಯನ್ನು ಉತ್ಪತ್ತಿ ಮಾಡಿದರೆ. ಊಟದ ನಂತರ ಹೆಚ್ಚು ನೀರು ಕುಡಿಯುವುದು ಅಜೀರ್ಣಕ್ಕೆ ಕಾರಣವಾಗುತ್ತದೆ. ಊಟದ ಜೊತೆಯಲ್ಲಿ ಕುಡಿಯುವ ನೀರು ಆಹಾರ ಜೀರ್ಣವಾಗಲು ಪೋಷಕಾಂಶಗಳು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೇರಲು ಸಹಕಾರಿಯಾಗುತ್ತದೆ.

ಯಾವುದೇ ರೋಗಬಾರದಂತೆ ತಡೆಗಟ್ಟಲು ಮೊದಲು ದೇಹದಲ್ಲಿಅಜೀರ್ಣ ಇರದಂತೆ ನೋಡಿಕೊಳ್ಳಬೇಕು.ಇದಕ್ಕೆ ಸರಿಯಾದ ಉಪಾಯ ಅಹಾರದೊಡನೆ ಬಿಸಿನೀರನ್ನು ಸೇವಿಸುವುದು. ಬಿಸಿನೀರು ಎಂದಾಗ ಕುದಿಸಿ ತಣಿಯುತ್ತಿರುವ ನೀರೇ ಹೊರತು ಕೇವಲ ಬಿಸಿ ಮಾಡಿದ ನೀರಲ್ಲ. ಇನ್ನೂ ಹೆಚ್ಚು ಉಪಕಾರವಾಗಲು ಬೇಸಿಗೆಯಲ್ಲಿ ಶ್ರೀಗಂಧ, ಲಾವಂಚ, ಏಲಕ್ಕಿ, ಮಳೆಗಾಲದಲ್ಲಿ ಕೊನ್ನಾರಿ ಗಡ್ಡೆ, ಜೀರಿಗೆ, ಕಾಚು, ಖದಿರ, ಚಳಿಗಾಲದಲ್ಲಿ ಶುಂಠಿ, ಮೆಣಸು, ಹಿಪ್ಪಲಿ ಇತ್ಯಾದಿಗಳನ್ನು ಚಿಟಿಕೆಯಷ್ಟು ಅಲ್ಪ ಪ್ರಮಾಣದಲ್ಲಿ ನೀರಿಗೆ ಹಾಕಿ ಕುದಿಸಿ ಬಿಸಿ ಇರುವಾಗ ಅಥವಾ ತಣ್ಣಗಾದ ನಂತರ ಕುಡಿಯುವುದು ಆರೋಗ್ಯಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.