ADVERTISEMENT

ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ: ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರ

ಪಿಟಿಐ
Published 19 ಸೆಪ್ಟೆಂಬರ್ 2021, 14:22 IST
Last Updated 19 ಸೆಪ್ಟೆಂಬರ್ 2021, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ 68 ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರನ್ನು ನೇಮಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳಬೇಕಾಗಿದೆ.

12 ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು ಕೊಲಿಜಿಯಂ ವಿವಿಧ ಹಂತದ ಪ್ರಕ್ರಿಯೆಗಳನ್ನು ಕೈಗೊಂಡಿತ್ತು.

ಕಳೆದ ಆಗಸ್ಟ್‌ 8 ಮತ್ತು ಸೆಪ್ಟೆಂಬರ್‌ 1ರ ನಡುವಣ ಅವಧಿಯಲ್ಲಿ ವಿವಿಧ ಹೈಕೋರ್ಟ್‌ಗಳು ಶಿಫಾರಸು ಮಾಡಿದ್ದ 100 ಮಂದಿಯ ಹೆಸರುಗಳನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪರಿಶೀಲಿಸಿ, 68 ಮಂದಿಯ ಹೆಸರುಗಳನ್ನು ಅಂತಿಮಗೊಳಿಸಿತ್ತು.

ADVERTISEMENT

68 ಹೆಸರುಗಳಲ್ಲಿ ಕರ್ನಾಟಕದ ಇಬ್ಬರು ಹಾಗೂ ಜಮ್ಮು ಮತ್ತು ಕಾಶ್ಮೀರದ ಒಬ್ಬರ ಹೆಸರನ್ನು ಮೂರನೇ ಬಾರಿ ಕಳುಹಿಸಲಾಗಿತ್ತು. ಇತರ 10 ಮಂದಿಯ ಹೆಸರನ್ನು ಎರಡನೇ ಬಾರಿ ಶಿಫಾರಸು ಮಾಡಲಾಗಿತ್ತು. ಉಳಿದವರ ಹೆಸರುಗಳನ್ನು ಮೊದಲ ಬಾರಿ ಶಿಫಾರಸು ಮಾಡಲಾಗಿತ್ತು.

ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಸೇರಿದಂತೆ ಎಂಟು ನ್ಯಾಯಮೂರ್ತಿಗಳ ಹೆಸರುಗಳನ್ನು ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶುಕ್ರವಾರ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.