ADVERTISEMENT

ಸುಶಾಂತ್ ಪ್ರಕರಣ: ಸಿಬಿಐ ತನಿಖೆಯ ಪ್ರಗತಿ ಪ್ರಶ್ನಿಸಿದ ಮಹಾರಾಷ್ಟ್ರ ಕಾಂಗ್ರೆಸ್‌

ಪಿಟಿಐ
Published 5 ಆಗಸ್ಟ್ 2021, 8:16 IST
Last Updated 5 ಆಗಸ್ಟ್ 2021, 8:16 IST
ಸುಶಾಂತ್ ಸಿಂಗ್‌ ರಜಪೂತ್‌
ಸುಶಾಂತ್ ಸಿಂಗ್‌ ರಜಪೂತ್‌   

ಮುಂಬೈ:‌ ಕೇಂದ್ರೀಯ ತನಿಖಾ ದಳ (ಸಿಬಿಐ), ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆ ವಹಿಸಿಕೊಂಡು ಒಂದು ವರ್ಷವಾದರೂ ಯಾವುದೇ ಪ್ರಗತಿ ಸಾಧಿಸಿಲ್ಲ‘ ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ಘಟಕ ಆರೋಪಿಸಿದೆ.

ಪ್ರಕರಣದ ಬಗೆಗಿನ ಸಿಬಿಐನ ಮೌನವನ್ನು ಮಹಾರಾಷ್ಟ್ರ ಕಾಂಗ್ರೆಸ್‌ನ ವಕ್ತಾರ ಸಚಿನ್‌ ಸಾವಂತ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ‘ಕೇಂದ್ರ ಸರ್ಕಾರ, ಎಲ್ಲ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಕಾರ್ಯಸೂಚಿಗಾಗಿ ಬಳಸಿಕೊಳ್ಳುತ್ತಿದೆ‘ ಎಂದು ಆರೋಪಿಸಿದ್ದಾರೆ.

‘ಸುಶಾಂತ್‌ ಸಿಂಗ್‌ ರಜಪೂತ್‌ (34) 2020ರ ಜೂನ್ 14ರಂದು ಮುಂಬೈನ ಬಾಂದ್ರಾ ಪ್ರದೇಶದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ದೂರು ದಾಖಲಾಗಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆವಹಿಸಲಾಗಿತ್ತು. ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ನಡೆಸುತ್ತಿದ್ದ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ತೃಪ್ತಿ ವ್ಯಕ್ತಪಡಿಸಿತ್ತು' ಎಂದು ಸಾವಂತ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಈ ಪ್ರಕರಣದ ತನಿಖೆ ವಿಷಯದಲ್ಲಿ ಸಿಬಿಐ ಉದ್ದೇಶಪೂರ್ವಕವಾಗಿ ಮೌನವನ್ನು ಕಾಪಾಡಿಕೊಂಡಿದೆ. ಇದು, ಮೋದಿ ಸರ್ಕಾರ ಹೇಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ತಮ್ಮ ರಾಜಕೀಯ ಕಾರ್ಯಸೂಚಿಗೆ ಹೇಗೆ ಬಳಸುತ್ತಿದೆ ಎಂಬುದಕ್ಕೆ ಸೂಕ್ತ ಉದಾಹರಣೆಯಾಗಿದೆ‘ ಎಂದು ಸಾವಂತ್ ಆರೋಪಿಸಿದ್ದಾರೆ.

ಸಾವಂತ್ ಅವರು ಇನ್ನೊಂದು ಟ್ವೀಟ್‌ನಲ್ಲಿ, ‘ಗುಪ್ತೇಶ್ವರ್ ಪಾಂಡೆ (ಬಿಹಾರದ ಮಾಜಿ ಡಿಜಿಪಿ) ಅವರನ್ನು ಬಿಜೆಪಿಯ ಮುಂದಿನ ರಾಜಕೀಯ ಕಾರ್ಯಸೂಚಿಗೆ ಬಳಸಿಕೊಂಡು, ದುರುದ್ದೇಶಪೂರ್ವಕವಾಗಿ ಮುಂಬೈ ಪೊಲೀಸರ ಮೇಲೆ ತಪ್ಪು ಹೊರಿಸಿ, ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ‘ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.