ADVERTISEMENT

ಲಖಿಂಪುರ ಹಿಂಸಾಚಾರ: ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದ ಜೆ.ಪಿ.ನಡ್ಡಾ

ಪಿಟಿಐ
Published 9 ಅಕ್ಟೋಬರ್ 2021, 2:32 IST
Last Updated 9 ಅಕ್ಟೋಬರ್ 2021, 2:32 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ   

ನವದೆಹಲಿ: ಉತ್ತರಪ್ರದೇಶದ ಲಖಿಂಪುರ-ಖೇರಿ ಹಿಂಸಾಚಾರದ ಬಗ್ಗೆ 'ವೃತ್ತಿಪರ ಮತ್ತು ವೈಜ್ಞಾನಿಕ' ತನಿಖೆ ನಡೆಸಲಾಗುವುದು ಮತ್ತು ಘಟನೆಯಲ್ಲಿ ಭಾಗಿಯಾದವರು ಯಾರೇ ಆದರೂ 'ಕಾನೂನಿಗಿಂತ ದೊಡ್ಡವರು ಯಾರು ಇಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಪ್ರತಿಪಾದಿಸಿದ್ದಾರೆ.

ಇಂಡಿಯಾ ಟುಡೇ ಕಾನ್‌ಕ್ಲೇವ್‌ 2021 ರಲ್ಲಿ ಮಾತನಾಡಿದ ಅವರು, 'ಎಲ್ಲರಿಗೂ ನ್ಯಾಯ ಸಿಗುತ್ತದೆ. ಇದೊಂದು ದುಃಖಕರ ಘಟನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಎಸ್ಐಟಿಯನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತದೆ. ಘಟನೆಗೆ ಸಂಬಂಧಿಸಿದವರನ್ನು ಬಂಧಿಸಲಾಗುತ್ತದೆ. ಹಿಂಸಾಚಾರದ ಘಟನೆಯನ್ನು ಚುನಾವಣೆ ದೃಷ್ಟಿಯಿಂದ ನೋಡದೆ ಮಾನವೀಯತೆಯಿಂದ ನೋಡಬೇಕು' ಎಂದು ಹೇಳಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ನಡ್ಡಾ, 'ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಚಟುವಟಿಕೆಯನ್ನು ಅಥವಾ ಯಾರನ್ನೂ ಬಿಜೆಪಿಯಾಗಲಿ ಹಾಗೂ ಅದರ ಸರ್ಕಾರವಾಗಲಿ ಬೆಂಬಲಿಸುವುದಿಲ್ಲ' ಎಂದು ಹೇಳಿದರು.

ADVERTISEMENT

'ಪಕ್ಷ ಅಥವಾ ಸರ್ಕಾರದ ಪರವಾಗಿ, ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಚಟುವಟಿಕೆಯನ್ನು ನಾವು ಬೆಂಬಲಿಸುವುದಿಲ್ಲ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನಾದರೂ ತೆಗೆದುಕೊಳ್ಳಲಾಗುವುದು. ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ' ಎಂದು ಅವರು ಹೇಳಿದರು.

'ಪ್ರತಿಭಟನೆಯ ಹೊಸ ಪ್ರವೃತ್ತಿ ಶುರುವಾಗಿರುವುದು ಕಳವಳಕಾರಿ ಸಂಗತಿ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ. ಹಲವಾರು ಘಟನೆಗಳು ನಡೆಯುತ್ತಿವೆ. ನಾನು ಈ ಘಟನೆಯ (ಲಖಿಂಪುರ ಖೇರಿ ಹಿಂಸಾಚಾರ) ಬಗ್ಗೆ ಮಾತನಾಡುತ್ತಿಲ್ಲ. ಸಾಮಾನ್ಯವಾಗಿ ನಡೆಯುವುದರ ಬಗ್ಗೆ ಹೇಳುತ್ತಿದ್ದೇನೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ನಾವು ಈ ವ್ಯವಸ್ಥೆಯಿಂದ ಎಷ್ಟು ದೂರ ಸರಿದಿದ್ದೇವೆ ಎಂಬುದರ ಬಗ್ಗೆ ಸ್ವಲ್ಪ ಯೋಚಿಸಬೇಕು' ಎಂದು ಅವರು ಹೇಳಿದರು.

ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ನಡ್ಡಾ, ಸರ್ಕಾರವು ರೈತ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ ಮತ್ತು ಮುಂದಿನ ಮಾತುಕತೆಗೆ ಬಾಗಿಲು ತೆರೆದಿದೆ. ಆದರೆ ಏನೂ ಆಗಿಲ್ಲ. ಕೃಷಿ ಕಾನೂನುಗಳ ಅನುಷ್ಠಾನವನ್ನು 18 ತಿಂಗಳು ಸ್ಥಗಿತಗೊಳಿಸಲಾಗಿದೆ ಮತ್ತು ನಾವು ಮಾತುಕತೆ ನಡೆಸಲು ಸಿದ್ಧವಾಗಿರುವಾಗ ಈ ಪ್ರತಿಭಟನೆ ಯಾವುದಕ್ಕಾಗಿ? ನೀವು ಕುದುರೆಗಳನ್ನು ನೀರಿನ ಬಳಿ ಕರೆತರಬಹುದು ಆದರೆ ನೀವು ಕುಡಿಯಲು ಒತ್ತಾಯಿಸಲು ಸಾಧ್ಯವಿಲ್ಲ' ಎಂದರು.

'ಕಿಸಾನ್ ಸಮ್ಮಾನ್ ನಿಧಿ ಯೋಜನೆ', 'ಕಿಸಾನ್ ಫಸಲ್ ಬಿಮಾ ಯೋಜನೆ' ಮತ್ತು ರೈತರ ಪಿಂಚಣಿ ಯೋಜನೆ ಸೇರಿದಂತೆ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರಿಗಾಗಿ ಮಾಡಿದ್ದಷ್ಟನ್ನು ಬೇರೆ ಯಾರೂ ಮಾಡಿಲ್ಲ. ಸದುದ್ದೇಶವುಳ್ಳವರಾದರೆ (ರೈತರು) ನಾವು ಅವರನ್ನು ನೋಡಿಕೊಳ್ಳುತ್ತೇವೆ. ಈ ವಿಚಾರದಲ್ಲಿ ರಾಜಕೀಯ ಮಾಡುವವರೆಲ್ಲರಿಗೂ ಜನರು ತಕ್ಕ ಉತ್ತರ ನೀಡುತ್ತಾರೆ. ಇದಕ್ಕಾಗಿ ನಾವು ತಯಾರಿ ನಡೆಸುತ್ತಿದ್ದೇವೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.