ADVERTISEMENT

ಎನ್‌ಡಿಎ: ಮಹಿಳೆಯರ ಪ್ರವೇಶಕ್ಕೆ ಮೇನಲ್ಲಿ ಅಧಿಸೂಚನೆ

ಸುಪ್ರೀಂ ಕೋರ್ಟ್‌ಗೆ ರಕ್ಷಣಾ ಸಚಿವಾಲಯ ಮಾಹಿತಿ

ಪಿಟಿಐ
Published 21 ಸೆಪ್ಟೆಂಬರ್ 2021, 22:58 IST
Last Updated 21 ಸೆಪ್ಟೆಂಬರ್ 2021, 22:58 IST

ನವದೆಹಲಿ: ‌ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್‌ಡಿಎ) ಮಹಿಳಾ ಅಭ್ಯರ್ಥಿಗಳ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಮುಂದಿನ ಮೇ ತಿಂಗಳಿನಲ್ಲಿ ಹೊರಡಿಸಲಾಗುತ್ತದೆ. ಮಹಿಳಾ ಅಭ್ಯರ್ಥಿಗಳ ಪ್ರವೇಶಕ್ಕೂ ಮುನ್ನ ಹಲವು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಸಮಯಾವಕಾಶ ಬೇಕು ಎಂದು ರಕ್ಷಣಾ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಎನ್‌ಡಿಎ ಪ್ರವೇಶ ಮತ್ತು ತರಬೇತಿಯಿಂದ ಮಹಿಳೆಯರನ್ನು ಹೊರಗಿಟ್ಟಿರುವುದು ಲಿಂಗ ತಾರತಮ್ಯ ಮತ್ತು ಸಂವಿಧಾನದ ಉಲ್ಲಂಘನೆ ಎಂದು ವಕೀಲೆ ಖುಷ್ ಕಾರ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಈ ಮಾಹಿತಿ ನೀಡಿದೆ. ಎನ್‌ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡುವುದಾಗಿ ಸರ್ಕಾರ ಈಚೆಗಷ್ಟೇ ಹೇಳಿತ್ತು.

ಎನ್‌ಡಿಎ ಮುಖಾಂತರ ಸೇನೆಯ ಮೂರೂ ಪಡೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡುವ ಮಾತಿಗೆ ಸರ್ಕಾರವು ಬದ್ಧವಾಗಿದೆ. ಮಹಿಳೆಯರಿಗೆ ಎನ್‌ಡಿಎಯಲ್ಲಿ ಪ್ರವೇಶ ನೀಡುವುದಕ್ಕೂ ಮುನ್ನ ಪಠ್ಯಕ್ರಮ, ತರಬೇತಿ ವಿಧಾನ, ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ ಎಂದು ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ADVERTISEMENT

ಪ್ರವೇಶ ಪರೀಕ್ಷೆಗೆ ಹಾಜರಾಗಲು ಮಹಿಳಾ ಅಭ್ಯರ್ಥಿಗಳು ಅಗತ್ಯ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಎತ್ತರ ಮತ್ತು ತೂಕಕ್ಕೆ ಸಂಬಂಧಿಸಿದಂತೆ ಪುರುಷ ಅಭ್ಯರ್ಥಿಗಳಿಗೆ ಈಗಾಗಲೇ ಅರ್ಹತೆಯನ್ನು ಗುರುತಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಇದನ್ನು ಇನ್ನಷ್ಟೇ ನಿಗದಿ ಮಾಡಬೇಕಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ನಿರ್ದೇಶನಾಲಯವು ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಅರ್ಹತೆಯನ್ನು ನಿಗದಿ ಮಾಡಿದ ನಂತರವಷ್ಟೇ ಪ್ರವೇಶ ನೀಡಲು ಸಾಧ್ಯ ಎಂದು ಸಚಿವಾಲಯವು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.