ADVERTISEMENT

ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಭೌತಿಕ ತರಗತಿ ಆರಂಭ

‘ಕೋವಿಡ್‌–19 ಗ್ಲೋಬಲ್ ಎಜುಕೇಷನ್ ರಿಕವರಿ ಟ್ರ್ಯಾಕರ್‌’ನ ಮಾಹಿತಿ

ಪಿಟಿಐ
Published 10 ಅಕ್ಟೋಬರ್ 2021, 8:20 IST
Last Updated 10 ಅಕ್ಟೋಬರ್ 2021, 8:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪಿಡುಗು ಕಾಣಿಸಿಕೊಂಡ ಒಂದೂವರೆ ವರ್ಷದ ನಂತರ ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಮಾತ್ರ ಭೌತಿಕವಾಗಿ ಕಲಿಕೆ–ಬೋಧನಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಶೇ 34ರಷ್ಟು ಶಾಲೆಗಳು ಈಗಲೂ ‘ಹೈಬ್ರಿಡ್‌ ವಿಧಾನ’ದ (ಆಫ್‌ಲೈನ್‌ ಹಾಗೂ ಭೌತಿಕ ತರಗತಿ) ಕಲಿಕೆ–ಬೋಧನಾ ಪ್ರಕ್ರಿಯೆಯ ಮೊರೆ ಹೋಗಿವೆ ಎಂದು ‘ಕೋವಿಡ್‌–19 ಗ್ಲೋಬಲ್ ಎಜುಕೇಷನ್ ರಿಕವರಿ ಟ್ರ್ಯಾಕರ್‌’ನ ಅಂಕಿ–ಅಂಶಗಳು ಹೇಳುತ್ತವೆ.

ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ, ವಿಶ್ವ ಬ್ಯಾಂಕ್‌ ಹಾಗೂ ಯುನಿಸೆಫ್‌ ಜಂಟಿಯಾಗಿ ಈ ‘ಟ್ರ್ಯಾಕರ್‌’ ಆರಂಭಿಸಿವೆ.

ADVERTISEMENT

ಕೋವಿಡ್‌–19 ಪ್ರಕರಣಗಳು ಕಡಿಮೆಯಾದ ನಂತರ ಯೋಜನೆಗಳನ್ನು ರೂಪಿಸಲು, ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ನಿರ್ಧಾರ ಕೈಗೊಳ್ಳುವುದಕ್ಕೆ ಅನುಕೂಲವಾಗಲು ವಿವಿಧ ಆಯಾಮಗಳ ಅಂಕಿ–ಅಂಶಗಳನ್ನು ಸಂಗ್ರಹಿಸಿ, ಕ್ರೋಡೀಕರಿಸಲು ಈ ‘ಟ್ರ್ಯಾಕರ್‌’ ರೂಪಿಸಲಾಗಿದೆ. ಸದ್ಯ, 200ಕ್ಕೂ ಅಧಿಕ ರಾಷ್ಟ್ರಗಳು ಈ ‘ಟ್ರ್ಯಾಕರ್‌’ನ ನೆರವು ಪಡೆಯುತ್ತಿವೆ.

ಶೇ 53ರಷ್ಟು ದೇಶಗಳು ಶಿಕ್ಷಕರಿಗೆ ಕೋವಿಡ್‌ ಲಸಿಕೆ ನೀಡಲು ಆದ್ಯತೆ ನೀಡಿರುವುದು ಈ ‘ಟ್ರ್ಯಾಕರ್‌’ನ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.

‘ಪುನರಾರಂಭಗೊಂಡಿರುವ ಶಾಲೆಗಳು ತಮ್ಮ ಪರಿಸರದಲ್ಲಿ ಕೊರೊನಾ ಸೋಂಕು ಪ್ರಸರಣ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ. ಮಾಸ್ಕ್‌ ಧಾರಣೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ವಾತಾಯನ ವ್ಯವಸ್ಥೆಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.