ADVERTISEMENT

ಪ್ಲಾಸ್ಟಿಕ್‌ ಚೀಲದಲ್ಲೊಂದು ಪ್ರಯೋಗ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:30 IST
Last Updated 25 ಜನವರಿ 2020, 19:30 IST
ಪ್ಲಾಸ್ಟಿಕ್ ಚೀಲ
ಪ್ಲಾಸ್ಟಿಕ್ ಚೀಲ   

ಜಿಪ್ ಹಾಕಿ ಸೀಲ್ ಮಾಡಬಹುದಾದ ಪ್ಲಾಸ್ಟಿಕ್‌ ಚೀಲ ಬಳಸಿ, ಅದು ಡಬ್ ಎಂದು ಸಿಡಿಯುವಂತೆ ಮಾಡಬಹುದು ಎಂಬುದು ಗೊತ್ತಿದೆಯೇ? ಇದು ಬಹಳ ಸುಲಭ.

ಬೇಕಿರುವುದು ಏನು?

ಒಂದಿಷ್ಟು ಬೇಕಿಂಗ್ ಸೋಡಾ, ಬೆಚ್ಚಗಿನ ನೀರು, ವಿನೆಗರ್, ಜಿಪ್ ಹಾಕಿ ಮುಚ್ಚಬಹುದಾದ ಪ್ಲಾಸ್ಟಿಕ್ ಚೀಲ (ಅಥವಾ ಸೀಲ್ ಮಾಡಬಹುದಾದ ಪ್ಲಾಸ್ಟಿಕ್ ಚೀಲ).

ADVERTISEMENT

ಏನು ಮಾಡಬೇಕು?

1) ಕೈ ತೊಳೆಯುವ ಅಥವಾ ಪಾತ್ರೆಗಳನ್ನು ತೊಳೆಯುವ ಸಿಂಕ್‌ನಲ್ಲಿ ನೀವು ಈ ಪ್ರಯೋಗ ಮಾಡಬೇಕು. ಅವು ಇಲ್ಲದಿದ್ದರೆ, ಸ್ವಚ್ಛಗೊಳಿಸಲು ಸುಲಭವಾದ ಯಾವುದಾದರೂ ಜಾಗದಲ್ಲಿ ಇದನ್ನು ಮಾಡಬಹುದು. ಮೊದಲಿಗೆ ಪ್ಲಾಸ್ಟಿಕ್ ಚೀಲದಲ್ಲಿ ಕಾಲು ಕಪ್ ಬೆಚ್ಚಗಿನ ನೀರು ಹಾಕಿ.

2) ಇದಕ್ಕೆ ಅರ್ಧ ಕಪ್ ವಿನೆಗರ್ ಹಾಕಿ. ಚೀಲದ ಬಾಯಿಯನ್ನು ಜಿಪ್‌ ಹಾಕಿ ಅರ್ಧದಷ್ಟು ಮುಚ್ಚಿ.

3) ಮೂರು ಚಮಚ ಬೇಕಿಂಗ್ ಸೋಡಾ ತೆಗೆದುಕೊಂಡು, ಅವಷ್ಟನ್ನೂ ಒಂದೇ ಬಾರಿಗೆ ಪ್ಲಾಸ್ಟಿಕ್ ಚೀಲದೊಳಕ್ಕೆ ಸುರಿಯಿರಿ. ಈಗ ತಕ್ಷಣಕ್ಕೆ ಆ ಚೀಲದ ಬಾಯಿ ಮುಚ್ಚಬೇಕು. ಒಂದೆರಡು ಹೆಜ್ಜೆ ಹಿಂದೆ ಬಂದು ಆ ಚೀಲವನ್ನು ಗಮನಿಸಿ.

4) ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಬೇಕಿಂಗ್ ಸೋಡಾ ಮತ್ತು ವಿನೆಗರ್ ಹಾಕಿ ಈ ಪ್ರಯೋಗ ಮಾಡಿ ನೋಡಬಹುದು.

ಏನಾಗುತ್ತದೆ?

ಪ್ಲಾಸ್ಟಿಕ್ ಚೀಲ ಉಬ್ಬಿಕೊಳ್ಳಲು ಆರಂಭಿಸುತ್ತದೆ. ನಂತರ, ಫಟ್ ಅಂತ ಒಡೆಯುತ್ತದೆ!

ಏಕೆ ಗೊತ್ತೇ?

ಇದೊಂದು ಸರಳ ರಾಸಾಯನಿಕ ಪ್ರಕ್ರಿಯೆ. ಬೇಕಿಂಗ್ ಸೋಡಾದ ರಾಸಾಯನಿಕ ಹೆಸರು ಸೋಡಿಯಂ ಬೈಕಾರ್ಬೊನೇಟ್. ವಿನೆಗರ್ ಮತ್ತು ಬೇಕಿಂಗ್ ಸೋಡಾ ಬೆರೆತಾಗ, ಇಂಗಾಲದ ಡೈ ಆಕ್ಸೈಡ್‌ ಉತ್ಪಾದನೆ ಆಗುತ್ತದೆ.

ಹಾಗೆ ಉತ್ಪಾದನೆ ಆಗುವ ಇಂಗಾಲದ ಡೈ ಆಕ್ಸೈಡ್‌, ಪ್ಲಾಸ್ಟಿಕ್ ಚೀಲವನ್ನು ಆವರಿಸಿಕೊಳ್ಳುತ್ತದೆ. ಚೀಲ ಉಬ್ಬಿಕೊಳ್ಳುತ್ತದೆ. ಚೀಲದ ಸಾಮರ್ಥ್ಯಕ್ಕಿಂತ ಹೆಚ್ಚಿನ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆ ಆದಾಗ, ಚೀಲವು ಫಟ್ ಎಂದು ಒಡೆಯುತ್ತದೆ.

ಇದು ಪಿಕೊ!

ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನೆಲೆ ಹೊಂದಿರುವ ಕಂಪನಿಯೊಂದು ವಿಶ್ವದ ಅತ್ಯಂತ ಚಿಕ್ಕ, ಗಾಳಿಯ ಗುಣಮಟ್ಟ ಪರೀಕ್ಷಿಸುವ ಸಾಧನ ಅಭಿವೃದ್ಧಿಪಡಿಸಿದೆ. ಇದಕ್ಕೆ ಅದು ಪಿಕೊ ಎಂದು ಹೆಸರಿಟ್ಟಿದೆ.

48 ಮಿಲಿ ಮೀಟರ್ ಉದ್ದ ಹಾಗೂ ಅಷ್ಟೇ ಅಗಲದ ಈ ಸಾಧನವು, ಸಣ್ಣ ದೂಳಿನ ಕಣಗಳನ್ನು, ಇಂಗಾಲದ ಡೈ ಆಕ್ಸೈಡ್‌ ಮತ್ತಿತರ ಮಾಲಿನ್ಯಕಾರಕಗಳನ್ನು ಪತ್ತೆ ಮಾಡಬಲ್ಲದು. ಈ ಸಾಧನವು ಉಷ್ಣಾಂಶ ಮತ್ತು ವಾತಾವರಣದಲ್ಲಿನ ಆರ್ದ್ರತೆಯನ್ನೂ ಗುರುತಿಸಬಲ್ಲದು.

ನೀವು ಈ ಪಿಕೊ ಸಾಧನವನ್ನು ನಿಮ್ಮ ಸ್ಮಾರ್ಟ್‌ ಫೋನ್‌ ಜೊತೆ ಸಂಪರ್ಕಿಸಿಕೊಂಡರೆ, ನಿಮ್ಮ ಕೋಣೆಯ ಗಾಳಿಯ ಗುಣಮಟ್ಟವನ್ನು ಇದು ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.