ADVERTISEMENT

ಖರ್ಗೆ ಅಭಿನಂದನಾ ಸಮಾರಂಭಕ್ಕೆ 3 ಲಕ್ಷ ಜನ : ಈಶ್ವರ ಖಂಡ್ರೆ

ಕಲಬುರಗಿಯ ಎನ್‌.ವಿ. ಮೈದಾನದಲ್ಲಿ ಕಾಂಗ್ರೆಸ್‌ನಿಂದ ನಾಳೆ ಕಲ್ಯಾಣ ಕ್ರಾಂತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 4:21 IST
Last Updated 9 ಡಿಸೆಂಬರ್ 2022, 4:21 IST
ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ನಡೆಯಲಿರುವ ಕಲಬುರಗಿಯ ಎನ್.ವಿ. ಮೈದಾನವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಶಾಸಕರಾದ ಡಾ. ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ ಗುರುವಾರ ಪರಿಶೀಲಿಸಿದರು
ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ನಡೆಯಲಿರುವ ಕಲಬುರಗಿಯ ಎನ್.ವಿ. ಮೈದಾನವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಶಾಸಕರಾದ ಡಾ. ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ ಗುರುವಾರ ಪರಿಶೀಲಿಸಿದರು   

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ತವರು ಜಿಲ್ಲೆಗೆ ಡಿಸೆಂಬರ್ 10ರಂದು ಬರುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದ್ಧೂರಿ ಅಭಿನಂದನಾ ಸಮಾರಂಭ ಹಾಗೂ ಕಲ್ಯಾಣ ಕ್ರಾಂತಿ ಸಮಾವೇಶವನ್ನು ಆಯೋಜಿಸಲಾಗಿದೆ. 3 ಲಕ್ಷ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಎನ್‌.ವಿ. ಮೈದಾನದಲ್ಲಿ ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ 41 ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ವಿವಿಧ ಜಿಲ್ಲೆಗಳ ಉಸ್ತುವಾರಿಗಳು, ಜಿಲ್ಲಾ ಅಧ್ಯಕ್ಷರು ಸೇರಿದಂತೆ ಪಕ್ಷದ ತಳಹಂತದ ಕಾರ್ಯಕರ್ತರು ಅಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

‘ಬೆಳಿಗ್ಗೆ 10.40ಕ್ಕೆ ವಿಶೇಷ ವಿಮಾನದ ಮೂಲಕ ಖರ್ಗೆ ಅವರು ಕಲಬುರಗಿಗೆ ಬರಲಿದ್ದು, 11ಕ್ಕೆ ಗಂಜ್‌ನಲ್ಲಿರುವ ನಗರೇಶ್ವರ ಶಾಲೆಯಿಂದ ಸುಮಾರು 4 ಕಿ.ಮೀ. ವರೆಗೆ ಮೆರವಣಿಗೆಯ ಮೂಲಕ ಅವರನ್ನು ಕರೆತರಲಾಗುವುದು. ಮಧ್ಯಾಹ್ನ 1ಕ್ಕೆ ಬಹಿರಂಗ ಸಮಾವೇಶ ನಡೆಯಲಿದೆ’ ಎಂದು ಹೇಳಿದರು.

ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದೂಳಿಪಟ: ಕಲ್ಯಾಣ ಕರ್ನಾಟಕದ ಎಲ್ಲ 41 ಕ್ಷೇತ್ರಗಳಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು ರಾಜ್ಯದಲ್ಲಿ ಈ ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ.‌ ದಿನಬಳಕೆ‌ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಸಂಕಟ ಹೇಳದಾಗಿದೆ. ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು 371 (ಜೆ) ಅಡಿ ವಿಶೇಷ ಸ್ಥಾನಮಾನವನ್ನು ಪಡೆಯಲಾಗಿತ್ತು. ಅದನ್ನು ಬಳಸಿಕೊಂಡು ಸಾವಿರಾರು ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿದ್ದೆವು. ಆದರೆ ಬಿಜೆಪಿ ಸರ್ಕಾರ ನೇಮಕಾತಿ ಮಾಡಿಕೊಳ್ಳದೆ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದೆ’ ಎಂದು ಆಪಾದಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘ಜನರಿಂದ ಚುನಾಯಿತವಾಗಿ ಅಧಿಕಾರ ನಡೆಸುತ್ತಿದ್ದ ಇತರ ಪಕ್ಷಗಳ ಏಳು ಸರ್ಕಾರಗಳನ್ನು ಬಿಜೆಪಿಯವರು ಉರುಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಬಂಡವಾಳಶಾಹಿ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಶಾಸಕರಾದ ಎಂ.ವೈ.ಪಾಟೀಲ, ಪ್ರಿಯಾಂಕ್ ಖರ್ಗೆ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶರಣಪ್ಪ ಮಟ್ಟೂರು, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಬಸರೆಡ್ಡಿ ಪಾಟೀಲ ಅನಪೂರ, ಶಿವಾನಂದ ಪಾಟೀಲ ಇದ್ದರು.

ನಿರೀಕ್ಷೆಯಂತೆ ಸ್ಥಾನಗಳು ಬಂದಿಲ್ಲ: ಪ್ರಿಯಾಂಕ್ ಖರ್ಗೆ

‘ಗುಜರಾತ್‌ನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು’ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

‘ನಮಗೆ ಗುಜರಾತ್‌ನಲ್ಲಿ 80ರಿಂದ 95 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಯಂತೆ ಗೆಲ್ಲಲು ಆಗಲಿಲ್ಲ. ಅಲ್ಲಿ ಮೂರು ಅಂಶಗಳು ಚೆನ್ನಾಗಿ ಕೆಲಸ ಮಾಡಿವೆ. ಅವುಗಳಿಂದಲೇ ಬಿಜೆಪಿ ಗೆಲುವು ಸಾಧಿಸಿದೆ. ಮೋದಿ, ಮನಿ ಹಾಗೂ ಮಸಲ್ ಪವರ್‌ಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ’ ಎಂದರು.

‘ಗುಜರಾತ್‌ನಲ್ಲಿ ನಮ್ಮ ಹಲವು ಮುಖಂಡರ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಬಿಜೆಪಿ ಸಿಬಿಐ, ಐಟಿ ಹಾಗೂ ಇಡಿಗಳ ಬೆಂಬಲ ಪಡೆದುಕೊಂಡಿದೆ. ಮೋದಿ ಈ ಸಲದ ಚುನಾವಣೆ ಪ್ರಚಾರವನ್ನು ಸ್ಥಳೀಯ ಸಂಸ್ಥೆಯ ಚುನಾವಣೆಗಳ ರೀತಿ ನಡೆಸಿದ್ದಾರೆ’ ಎಂದು ಟೀಕಿಸಿದರು.

‘ಕರ್ನಾಟಕ ಪ್ರಗತಿಪರ ಚಿಂತನೆಯ ರಾಜ್ಯ. ಇಲ್ಲಿ‌ ಅವರ ಆಟ ನಡೆಯುವುದಿಲ್ಲ. ಅವರ ಆಟ ನಡೆಯುವುದಿಲ್ಲ ಎಂದು ಗೊತ್ತಾಗಿದ್ದರಿಂದಲೇ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ತರಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.