ADVERTISEMENT

ಪ್ರಥಮ ಪಿಯು ತರಗತಿ ಆರಂಭ, ತೀರ್ಮಾನ ಶೀಘ್ರ: ಎಸ್. ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 19:30 IST
Last Updated 15 ಜನವರಿ 2021, 19:30 IST
ಸುರೇಶ್‌ ಕುಮಾರ್
ಸುರೇಶ್‌ ಕುಮಾರ್   

ಬೆಂಗಳೂರು: ‘ಪ್ರಥಮ ಪಿಯು ತರಗತಿಗಳನ್ನು ಆರಂಭಿಸುವಂತೆ ಕಾಲೇಜುಗಳ ಪ್ರಾಂಶುಪಾಲರು, ಪೋಷಕರು ಒತ್ತಾಯಿಸುತ್ತಿದ್ದು ಈ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯ ನಂತರ ಮಾತನಾಡಿದ ಅವರು, ‘ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಈಗಾಗಲೇ ಪದವಿ ತರಗತಿಗಳು ಪೂರ್ಣವಾಗಿ ಆರಂಭವಾಗಿವೆ. ಶಾಲೆಗಳ ವಾತಾವರಣ ಮತ್ತು ಸುರಕ್ಷತೆ ಕುರಿತು ಪೋಷಕರು, ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿರುವುದರಿಂದ ಪ್ರಥಮ ಪಿಯು ಮತ್ತು ಎಂಟು ಹಾಗೂ 9ನೇ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ’ ಎಂದರು.

ADVERTISEMENT

‘ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಎದುರಿಸುವ ಮಕ್ಕಳು ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ಒಟ್ಟಾರೆ ಪಠ್ಯಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿರುವುದರಿಂದ ಪಿಯು ತರಗತಿಗಳು ಮುಖ್ಯವಾಗಿದೆ’ ಎಂದೂ ಹೇಳಿದರು.

ಉಪನ್ಯಾಸಕರ ಕೊರತೆ: ‘ಪರೀಕ್ಷಾವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಸೇವೆಯಿಂದ ನಿವೃತ್ತರಾಗಿರುವ ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉಚಿತವಾಗಿ ಪಾಠ ಮಾಡಲು ಇಚ್ಛಿಸಿದಲ್ಲಿ ಅವರಿಗೆ ಸಮೀಪ ದಲ್ಲಿರುವ ಕಾಲೇಜುಗಳಲ್ಲಿ ಅವಕಾಶ ನೀಡಲಾಗುತ್ತದೆ’ ಎಂದೂ ತಿಳಿಸಿದರು.

ಸಂಚಿತ ನಿಧಿ ಬಳಸಿ: ‘ಶಾಲಾ ಕಾಲೇಜುಗಳ ಸ್ಯಾನಿಟೈಜೇಷನ್ ಮತ್ತು ಶೌಚಾಲಯ ಸ್ವಚ್ಛತೆಯನ್ನು ಸರ್ಕಾರ ಪ್ರಸ್ತುತ ಸಂದರ್ಭದಲ್ಲಿ ಆಯಾ ಮಟ್ಟದ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ. ಅಗತ್ಯ ಬಿದ್ದರೆ ಶೌಚಾಲಯ ಸ್ವಚ್ಛತೆ ಹಾಗೂ ಗ್ರೂಪ್ ಡಿ ನೌಕರರ ನೇಮಕಕ್ಕೆ ಕಾಲೇಜು ಖಾತೆಯಲ್ಲಿರುವ ಸಂಚಿತ ನಿಧಿ ಹಣವನ್ನು ಬಳಸಿಕೊಳ್ಳಬಹುದಾಗಿದೆ’ ಎಂದೂ ಸುರೇಶ್‌ಕುಮಾರ್ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.