ADVERTISEMENT

ಬಡವರಿಗೆ ನೆರವು ನೀಡಿದರೆ ನಿಮ್ಮ ಗಂಟು ಹೋಗುತ್ತದೆಯೇ?: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 19:40 IST
Last Updated 16 ಜೂನ್ 2021, 19:40 IST
ಆಹಾರ ಪದಾರ್ಥಗಳ ಕಿಟ್ ಪಡೆಯಲು ಅಂತರ ಕಾಪಾಡಿಕೊಂಡು ಸಾಲಾಗಿ ಕುಳಿತಿರುವ ಕೊರೊನಾ ಸೇನಾನಿಗಳು, ಪೌರ ಕಾರ್ಮಿಕರು ಪ್ರಜಾವಾಣಿ ಚಿತ್ರ
ಆಹಾರ ಪದಾರ್ಥಗಳ ಕಿಟ್ ಪಡೆಯಲು ಅಂತರ ಕಾಪಾಡಿಕೊಂಡು ಸಾಲಾಗಿ ಕುಳಿತಿರುವ ಕೊರೊನಾ ಸೇನಾನಿಗಳು, ಪೌರ ಕಾರ್ಮಿಕರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ನಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ಪಕ್ಷದ (ಕಾಂಗ್ರೆಸ್‌) ಸರ್ಕಾರ ಇದ್ದಿದ್ದರೆ ಬಡವರಿಗೆ 10 ಕಿಲೋ ಅಕ್ಕಿ ಮತ್ತು ₹ 10 ಸಾವಿರ ಪರಿಹಾರ ಕೊಡುತ್ತಿದ್ದೆವು. ಬಡವರಿಗೆ ನೆರವು ನೀಡಿದರೆ ಇವರ ಮನೆಯ ಗಂಟು ಹೋಗುತ್ತದೆಯೇ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.

ಜಯನಗರ ವಿಧಾನಸಭೆ ಕ್ಷೇತ್ರದ ಶಾಲಿನಿ ಆಟದ ಮೈದಾನದಲ್ಲಿ ಕೊರೊನಾ ಯೋಧರು, ಪೌರ ಕಾರ್ಮಿಕ
ರಿಗೆ ಸ್ಥಳೀಯ ಶಾಸಕಿ ಸೌಮ್ಯಾ ರೆಡ್ಡಿ ಆಯೋಜಿಸಿದ್ದ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಪ್ಯಾಕೇಜ್‌ನಲ್ಲಿ ಕೆಲವರಿಗೆ ಪುಡಿಗಾಸು ಘೋಷಿಸಿದೆ. ಅದು ಯಾರಿಗೆ ಸಿಗುವುದೊ ಯಾರಿಗೆ ಸಿಗುವುದಿಲ್ಲವೊ ಗೊತ್ತಿಲ್ಲ. ಈ ಹಿಂದೆ ಘೋಷಿಸಿದ ಪ್ಯಾಕೇಜ್‌ನಿಂದಲೂ ಯಾರಿಗೂ ಅನುಕೂಲ ಆಗಲಿಲ್ಲ. ಕೋವಿಡ್‌ನಿಂದ ಬಿಪಿಎಲ್‌ ಕುಟುಂಬದ ವ್ಯಕ್ತಿ ಮೃತರಾದರೆ, ಆ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅದನ್ನು ₹ 5 ಲಕ್ಷಕ್ಕೆ ಹೆಚ್ಚಿಸಬೇಕು. ಆಸ್ಪತ್ರೆಯಲ್ಲಿ ಒಬ್ಬರಿಗೆ ಮಾತ್ರ ಹಣ ಪಡೆಯುತ್ತಾರೆಯೇ’ ಎಂದು ಪ್ರಶ್ನಿಸಿದ ಅವರು, ‘ಕೋವಿಡ್‌ನಿಂದ 32 ಸಾವಿರ ಜನ ಸತ್ತಿದ್ದಾರೆ. ಅದರಲ್ಲಿ ಬಿಪಿಎಲ್ ಕಾರ್ಡ್‌ನವರು 25 ಸಾವಿರ ಇರಬಹುದು. ಅಷ್ಟೂ ಮಂದಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನ ತಮ್ಮ ಹಣ ತೆಗೆದುಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ, ಆಮ್ಲಜನಕ, ಔಷಧ ಪಡೆಯಲು ಮಾತ್ರವಲ್ಲದೆ, ಕೊನೆಗೆ ಶವಸಂಸ್ಕಾರಕ್ಕೂ ಸರದಿಯಲ್ಲಿ ನಿಲ್ಲುವಂಥ ದುಸ್ಥಿತಿ ನಿರ್ಮಾಣವಾಯಿತು. ಈ ಸಮಸ್ಯೆಗಳಿಂದ ಮುಕ್ತಿ ಸಿಗಬೇಕಾದರೆ ಈ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಶಾಸಕ ಜಮೀರ್ ಅಹಮದ್ ಖಾನ್, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಎಚ್.ಎಂ. ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.