ADVERTISEMENT

ಪ್ರವಾಸ: ತಾಜ್‌ ಮಹಲ್‌ ಅಲ್ಲ!

ಶ್ರೀರಂಜನ್
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಬೀಬಿ ಕಾ ಮಕ್ಬರಾ
ಬೀಬಿ ಕಾ ಮಕ್ಬರಾ   

ಜಗತ್ಪ್ರಸಿದ್ಧ ತಾಜ್ ಮಹಲ್ ಇದಲ್ಲ. ನಕಲಿ ಎನ್ನುವುದಕ್ಕಿಂತ ಸಣ್ಣ ತಾಜ್ ಮಹಲ್ ಎನ್ನುವ (ಗಾತ್ರದಲ್ಲಿ ತಾಜ್ ಮಹಲ್‌ನ ಅರ್ಧದಷ್ಟಿದೆ). ಆಗ್ರಾದಿಂದ ಬಹಳ ದೂರ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಇದನ್ನು ಬೀಬಿ ಕಾ ಮಕ್ಬರಾ ಎನ್ನುತ್ತಾರೆ (ದಖ್ಖನ್‌ನ ತಾಜ್ ಎಂದೂ ಕರೆಯುವುದುಂಟು). ತಾಜ್ ಮಹಲ್‌ನೊಂದಿಗಿರುವ ಹೋಲಿಕೆ ಮತ್ತು ವ್ಯತ್ಯಾಸದಿಂದಾಗಿ ಕಣ್ಣಿಗೆ ರಾಚುತ್ತದೆ.

ಔರಂಗಜೇಬ್ 1660ರಲ್ಲಿ ತನ್ನ ಮೊದಲ ಹಾಗೂ ಮುದ್ದಿನ ಮಡದಿ ದಿಲ್ರಸ್ ಬಾನು ಬೇಗಮ್‌ಳ ನೆನಪಿಗಾಗಿ ಈ ಮಹಲ್‌ ಕಟ್ಟಿದ. ದಿಲ್ರಸ್ ಬಾನು ಕೂಡ ತನ್ನ ಅತ್ತೆ ಮುಮ್ತಾಜ್‌ಳಂತೆ ತನ್ನ ಮಗುವಿನ (ಐದನೆಯ) ಜನನದಲ್ಲಿ ತೀರಿಕೊಂಡಳು. ಬೀಬಿ ಕಾ ಮಕ್ಬರಾವನ್ನು ಕಟ್ಟಿದ ಮುಖ್ಯ ಶಿಲ್ಪಿ ಅತಾ-ಉಲ್ಲಾ, ತಾಜ್ ಮಹಲ್ ಕಟ್ಟಿದ ಉಸ್ತಾದ್ ಅಹ್ಮದ್ ಲಾಹೋರಿಯ ಮಗನಾಗಿದ್ದ. ಶಹಜಹಾನನಂತೆ ಔರಂಗಜೇಬನಿಗೆ ಇಂತಹ ಯಾವುದೇ ಕೆಲಸಗಳಲ್ಲಿ ಆಸಕ್ತಿಯಿರಲಿಲ್ಲ. ಒಟ್ಟಿನಲ್ಲಿ ಹಣಕಾಸಿನ ಮತ್ತು ಮಹತ್ವಾಕಾಂಕ್ಷೆಯ ಕೊರತೆಯಿಂದಾಗಿ ಬೀಬಿ ಕಾ ಮಕ್ಬರಾ, ತಾಜ್ ಮಹಲ್‌ನ ಭವ್ಯತೆಯಿಂದ ದೂರ ಉಳಿಯಿತು. ಈ ಸ್ಮಾರಕದ ನಿರ್ಮಾಣಕ್ಕೆ ಒಟ್ಟು ಖರ್ಚಾಗಿದ್ದು 6,68,203 ರೂಪಾಯಿ ಹಾಗೂ ಏಳು ಆಣೆ! ಕಟ್ಟಡಕ್ಕೆ ಅಗತ್ಯವಾದ ನುಣುಪಾದ ಕಲ್ಲುಗಳನ್ನು 300 ಬಂಡಿಗಳಲ್ಲಿ ತರಿಸಲಾಯಿತಂತೆ.


ಇರಾನ್‌ನ ಸಫಾವಿದ್‌ ರಾಜ್ಯದ ರಾಜಕುಮಾರಿಯಾಗಿದ್ದ ದಿಲ್ರಸ್‌ ಬಾನು, ಗುಜರಾತ್‌ಗೆ ವೈಸ್‌ರಾಯ್‌ ಆಗಿ ನೇಮಕಗೊಂಡಿದ್ದ ತಂದೆ ಮಿರ್ಜಾ ಬಡಿ ಉಲ್‌ ಜಮನ್‌ ಸಫವಿ ಜತೆ ಭಾರತಕ್ಕೆ ಬಂದಳು. ಔರಂಗಜೇಬ್‌ನ ಕೈಹಿಡಿದಿದ್ದಳು.

ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಬೀಬಿ ಕಾ ಮಕ್ಬರಾಕ್ಕೆ ಒಬ್ಬ ಸಾಮಾನ್ಯ ನೋಡುಗನನ್ನೂ ಬೆರಗುಗೊಳಿಸುವ ಸಾಮರ್ಥ್ಯವಿದೆ. ಹರಿಯುತ್ತಿದ್ದ ಸಮಯದ ಝರಿಯೊಂದು ಕಲ್ಲುಗೋಡೆಗಳಲ್ಲಿ ಸ್ತಬ್ಧವಾಗಿ ಮೆಲುಗುಡುತ್ತಿರುವುದು ಆ ಸಮಾಧಿಯೊಳಗಿನ ಮೌನದಲ್ಲಿ ನಿಮಗೆ ಕೇಳಿಸಿದರೂ ಕೇಳಿಸೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT