ADVERTISEMENT

'ಹರ್‌ಶೇ' ಭೂವಿ ಮೇಲಿನ ಸಿಹಿ ತಾಣ

ವಾರಿಜಾ ಜಗದೀಶ್
Published 24 ಅಕ್ಟೋಬರ್ 2019, 6:36 IST
Last Updated 24 ಅಕ್ಟೋಬರ್ 2019, 6:36 IST
   

ಅಮೆರಿಕದ ಪೆನ್ಸಿಲ್ವೇನಿಯಾದ ಕೃಷಿ ಜಮೀನಿನ ನಡುವೆ ಹರ್‌ಶೇ ಎಂಬ ಸ್ಥಳದಲ್ಲಿ ಚಾಕೊಲೇಟ್‌ ಕಾರ್ಖಾನೆ ಇದೆ. ಆ ಫ್ಯಾಕ್ಟರಿಗೆ ಹೋಗುವಾಗ ದಾರಿ ಉದ್ದಕ್ಕೂ ಅಲ್ಲಲ್ಲೇ ‘ಭೂಮಿಯ ಮೇಲಿನ ಅತ್ಯಂತ ಸಿಹಿಯಾದ ಸ್ಥಳ (ಸ್ವೀಟೆಸ್ಟ್‌ ಪ್ಲೇಸ್ ಆನ್ ಅರ್ತ)’ ಎಂಬ ಬರಹವುಳ್ಳ ಫಲಕ ಕಾಣುತ್ತದೆ.

ಆ ದಾರಿಯಲ್ಲಿ ಚಾಕೊಲೇಟ್‌ ಫ್ಯಾಕ್ಟರಿ ತಲುಪಿ, ಒಳಹೊಕ್ಕಾಗ ದೊಡ್ಡ ದೊಡ್ಡ ಗಾತ್ರದ ಹರ್ಶಿಸ್‌ ಚಾಕೋಲೇಟ್ ಮಾದರಿಗಳು ಕಂಡವು. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು, ಆ ಮಾದರಿಗಳ ನಡುವೆ ನಿಂತು ಫೋಟೊ ತೆಗೆಸಿಕೊಳ್ಳುತ್ತಾರೆ. ಚಾಕೋಲೇಟ್ ಫ್ಯಾಕ್ಟರಿಯವರೇ ಫೋಟೊ ತೆಗೆದು ಅಚ್ಚುಕಟ್ಟಾಗಿ ಪ್ರೇಮ್ ಹಾಕಿಯೂ ಕೊಡುತ್ತಾರೆ. ಆದರೆ, ಅದಕ್ಕೆ ಚಾರ್ಜ್‌ ಮಾಡುತ್ತಾರೆ.

ಇಡೀ ಫ್ಯಾಕ್ಟರಿಯಲ್ಲಿ ನಡೆಯುವ ಚಾಕೊಲೇಟ್‌ ತಯಾರಿಕೆ ಪ್ರಕ್ರಿಯೆಯನ್ನು ನೋಡಲು ‘ಫ್ಯಾಕ್ಟರಿ ಟೂರ್‌’ ಮಾಡಬಹುದು. ನಾವು ಟೂರ್‌ಗೆ ಮುಂದಾದಾಗ, ನಮ್ಮನ್ನು ಟ್ರಾಲಿಯಲ್ಲಿ ಕೂರಿಸಿಕೊಂಡು ಫ್ಯಾಕ್ಟರಿಯ ಒಳಗೆ ಕರೆದೊಯ್ದರು.

ADVERTISEMENT

ಟ್ರಾಲಿಯಲ್ಲಿ ಹೋಗುತ್ತಿದ್ದಾಗ ಆಕಳ ಗೊಂಬೆಗಳು, ಆಕಳಿಂದ ಹಾಲು ಕರೆಯುವ ರೀತಿ, ಕೋಕೊ ಬೀಜವನ್ನು ಸಂಸ್ಕರಿಸುವ ಬಗೆ, ಉತ್ತಮ ಗುಣಮಟ್ಟದ ಸಕ್ಕರೆಯನ್ನು ಬಳಸಿ ತರಹೇವಾರಿ ಚಾಕೊಲೇಟ್‌ ತಯಾರಿಸುವ ಬಗೆಯನ್ನು ಅತ್ಯಂತ ಆಕರ್ಷಕವಾಗಿ ವಿವರಿಸಿದರು ಕಾರ್ಖಾನೆಯವರು. ಈ ಸುತ್ತಾಟದಲ್ಲಿ ವಿಧ ವಿಧದ ಚಾಕೊಲೇಟ್‍ಗಳು ಬಗೆಬಗೆಯ ಆಕಾರದಲ್ಲಿ ಬಣ್ಣ ಬಣ್ಣದ ಕಾಗದಗಳನ್ನು ಸುತ್ತಿಕೊಂಡು ಹೊರಬರುವುದು ಕಂಡು ಖುಷಿಯಾಯಿತು. ಚಾಕೊಲೇಟ್ ತಿನ್ನದವರಿಗೂ ಅಲ್ಲಿ, ತಿನ್ನುವ ಆಸೆ ಮೂಡುವುದಂತೂ ಸತ್ಯ. ಈ ಉಚಿತ ಫ್ಯಾಕ್ಟರಿ ಟೂರ್ ಆದ ಮೇಲೆ ಅಲ್ಲಿ, ಉಚಿತವಾಗಿ ಚಾಕೊಲೇಟ್‌ ತಿನ್ನಲು ಕೊಡುತ್ತಾರೆ.

ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರ ಮನರಂಜನೆಯ ಅವಶ್ಯಕತೆಯನ್ನು ಮನಗಂಡು ಫ್ಯಾಕ್ಟರಿಯ ಪಕ್ಕದಲ್ಲಿಯೇ ಹರ್ಶಿಸ್‌ ಅಮ್ಯೂಸ್‍ಮೆಂಟ್ ಪಾರ್ಕ್‌ ತೆರೆದಿದ್ದಾರೆ.

ಇಂತಹ ಅತ್ಯಾಧುನಿಕವಾಗಿರುವ ಈ ಫ್ಯಾಕ್ಟರಿಯನ್ನು ಸ್ಥಾಪಿಸಿದವರು ಮಿಲ್ಟನ್ ಎಸ್. ಹರ್‌ಶೇ.

ಈ ಫ್ಯಾಕ್ಟರಿಯಲ್ಲಿ ಪ್ರತಿ ದಿನ 10 ಲಕ್ಷದಷ್ಟು ಹರ್ಶಿಸ್‌ ಕಿಸ್‍ಸ್ ಎಂಬ ಹೆಸರಿನ ಚಾಕೊಲೇಟ್ ತಯಾರಾಗುತ್ತದೆಯಂತೆ.

ಇದಲ್ಲದೇ ರೀಸೀಸ್, ಕಿಟ್‌ಕ್ಯಾಟ್, ಮಿಲ್ಕ್ ಚಾಕೊಲೇಟ್, ಕ್ಯಾಂಡಿಗಳು, ಜಾರ್‌ನಲ್ಲಿ ಚಾಕೊಲೇಟ್ ಸಿರಪ್‍ಗಳು ತಯಾರಾಗುತ್ತವೆ.

ನೂರಾ ಇಪ್ಪತ್ತೈದು ವರ್ಷಗಳ ಇತಿಹಾಸವಿರುವ ಈ ಚಾಕೊಲೇಟ್‌ ಪ್ರಪಂಚಕ್ಕೆ ಭೇಟಿನೀಡಿ, ಚಾಕೊಲೇಟ್‌ ರ‍್ಯಾಪರ್‌ ಮೇಲೆ ನಮ್ಮ ಫೋಟೊ ಹಾಕಿಸಿಕೊಂಡೆವು. ಜತೆಗೆ, ಪ್ರೀತಿ ಪಾತ್ರರಿಗಾಗಿ ಚಾಕೊಲೇಟ್‌ ಖರೀದಿಸಿ ಹೊರಬಿದ್ದಾಗ ಮೈಮನಗಳೂ ಸಹ ಖುಷಿಯಿಂದ ಸಿಹಿಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.