ADVERTISEMENT

ನಂದಿಬೆಟ್ಟದಲ್ಲಿ ಪ್ರವಾಸಿಗರ ಪರದಾಟ

5 ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ ಬ್ಯಾಟರಿ ಚಾಲಿತ ವಾಹನಗಳು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 20:26 IST
Last Updated 7 ಫೆಬ್ರುವರಿ 2021, 20:26 IST
ನಂದಿಬೆಟ್ಟದಲ್ಲಿ ಪ್ರವಾಸಿಗರು -ಸಾಂದರ್ಭಿಕ ಚಿತ್ರ
ನಂದಿಬೆಟ್ಟದಲ್ಲಿ ಪ್ರವಾಸಿಗರು -ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಬ್ಯಾಟರಿ ಚಾಲಿತ ವಾಹನ ಗಳು 5 ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ್ದು ಬೆಟ್ಟದಲ್ಲಿ ಪ್ರವಾಸಿಗರು ಪರದಾಡುವಂತೆ ಮಾಡಿದೆ.

ನಂದಿಬೆಟ್ಟದ ಪರಿಸರದಲ್ಲಿ ಪ್ರವಾಸಿ ಗರಿಗೆ ಮೂಲಸೌಕರ್ಯದ ಜತೆಗೆ ಪರಿಸರ ಸ್ನೇಹಿ ವಾತಾವರಣ ರೂಪಿಸುವ ಉದ್ದೇಶಕ್ಕೆ 2018ರ ಡಿಸೆಂಬರ್‌ನಲ್ಲಿ ಬೆಟ್ಟದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಮೂರು ಬ್ಯಾಟರಿ ಚಾಲಿತ ವಾಹನಗಳಿಗೆ ಚಾಲನೆ ನೀಡಲಾಗಿತ್ತು.

ವಾಹನಗಳಿಗೆ ಚಾಲನೆ ನೀಡಿದ್ದ ಅಂದಿನ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು, ‘ಬೆಟ್ಟದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಮತ್ತು ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುತ್ತೇವೆ. ಬೆಟ್ಟದಲ್ಲಿ ವಾಹನಗಳ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಪ್ರವಾಸಿ ವಾಹನಗಳ ಸೇವೆ ಆರಂಭಿಸಿದ್ದೇವೆ’ ಎಂದಿದ್ದರು.

ADVERTISEMENT

ಆದರೆ ಅದಾಗಿ ಒಂದೂವರೆ ವರ್ಷ ಕಳೆಯುವಷ್ಟರಲ್ಲಿ ಬ್ಯಾಟರಿ ಚಾಲಿತ ವಾಹನಗಳ ಸೇವೆ ನೀಡುತ್ತಿದ್ದ ಬೆಂಗಳೂರು ಮೂಲದ ಖಾಸಗಿ ಕಂಪೆನಿ ಕೋವಿಡ್‌ ಸಂದರ್ಭದಲ್ಲಿ ವಾಹನಗಳ ಸೇವೆ ಸ್ಥಗಿತಗೊಳಿಸಿದೆ. ಪರಿಣಾಮ, ಸದ್ಯ ದ್ವಿಚಕ್ರ ವಾಹನಗಳು ಮತ್ತು ಬಸ್‌ಗಳಲ್ಲಿ ಬರುವ ಪ್ರವಾಸಿಗರು ಬೆಟ್ಟ ಸುತ್ತಲೂ ವಾಹನವಿಲ್ಲದೆ ಪರದಾಡಬೇಕಿದೆ.

ಸಾಮಾನ್ಯ ದಿನಗಳಲ್ಲಿ ನಂದಿಬೆಟ್ಟ ನೋಡಲು ಪರಸ್ಥಳಗಳಿಂದ ಮೂರು ಸಾವಿರಕ್ಕೂ ಅಧಿಕ ಪ್ರವಾಸಿಗರು ಬರುತ್ತಾರೆ. ವಾರಾಂತ್ಯದಲ್ಲಿ ಒಮ್ಮೊಮ್ಮೆ ಈ ಸಂಖ್ಯೆ 10 ಸಾವಿರ ಗಡಿ ಸಮೀಪಿಸುತ್ತದೆ. ಈ ಪೈಕಿ ಬಹುಪಾಲು ಪ್ರವಾಸಿಗರು ಬೆಟ್ಟದ ತುದಿವರೆಗೆ ಹೋಗಲು ಬೇರೆ ವಾಹನಗಳ ಅವಲಂಬಿರಾಗಿರುತ್ತಾರೆ. ಪ್ರವಾಸಿಗರ ಈ ಕಷ್ಟವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸ್ಥಳೀಯ ಆಟೊ ಚಾಲಕರು ಪ್ರವಾಸಿಗರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ. ಹಿಂದೆಲ್ಲ ಬ್ಯಾಟರಿ ಚಾಲಿತ ವಾಹನಗಳಿದ್ದಾಗ ಬರೀ ₹50 ನೀಡಿ ಬೆಟ್ಟದ ಸೌಂದರ್ಯ ಸವಿದು ಬರುತ್ತಿದ್ದ ಪ್ರವಾಸಿಗರಿಗೆ ಈಗ ಅದು ದುಬಾರಿಯಾಗಿ ಪರಿಣಮಿಸಿದೆ ಎನ್ನಲಾಗಿದೆ. ‘ಬೆಂಗಳೂರಿಗೆ ಮಗನ ಮನೆಗೆ ಬಂದಿದ್ದೆ. ಆತ ಸಮೀಪದಲ್ಲಿರುವ ನಂದಿಬೆಟ್ಟ ನೋಡಲು ಕರೆದುಕೊಂಡು ಬಂದಿದ್ದ. ಆದರೆ, ವಯಸ್ಸಿನ ಕಾರಣಕ್ಕೆ ಬೆಟ್ಟ ಏರಿ ಸುತ್ತಾಡಲಾಗದೆ ಸುಸ್ತಾಗಿ ಹೋದೆ. ವಯಸ್ಸಾದವರಿಗೆ, ಮಕ್ಕಳಿಹರ ವಾಹನ ವ್ಯವಸ್ಥೆ ಮಾಡಿದರೆ ಅನುಕೂಲ’ ಎಂದು ಬಾಗಲಕೋಟೆಯ ಅಶೋಕ್‌ ತಿಳಿಸಿದರು.

ಈ ಕುರಿತು ನಂದಿಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್‌ ಅವರನ್ನು ವಿಚಾರಿಸಿದರೆ, ‘ಈ ಹಿಂದೆ ಬ್ಯಾಟರಿ ಚಾಲಿತ ಸೇವೆ ಒದಗಿಸುತ್ತಿದ್ದ ಕಂಪೆನಿಯ ಒಪ್ಪಂದ ಮುಗಿದ ಕಾರಣಕ್ಕೆ ಅವರು ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಹೊಸದಾಗಿ ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದು, ಎರಡು ಕಂಪೆನಿಗಳು ಮುಂದೆ ಬಂದಿವೆ. ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಮುಗಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.