ADVERTISEMENT

ಯುನಿಸೆಫ್ 70ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 19:31 IST
Last Updated 24 ಡಿಸೆಂಬರ್ 2019, 19:31 IST
ಮಕ್ಕಳೊಂದಿಗೆ ರಿಕಿಕೇಜ್‌
ಮಕ್ಕಳೊಂದಿಗೆ ರಿಕಿಕೇಜ್‌   

ಮಕ್ಕಳ ರಕ್ಷಣೆಗಾಗಿ ಭಾರತದಲ್ಲಿ ಕಾರ್ಯಕ್ರಮ ಜಾರಿಗೆ ತಂದ 70ನೇ ವರ್ಷದ ನೆನಪಿಗಾಗಿ ಯುನಿಸೆಫ್ ನಗರದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿತು. ‘ಯುನಿಸೆಫ್‌@70#ಫಾರ್‌ ಎವೆರಿ ಚೈಲ್ಡ್‌’ ಎಂಬ ಕಾರ್ಯಕ್ರಮದ ಅಂಗವಾಗಿ ಯುನಿಸೆಫ್ ಪ್ರೋತ್ಸಾಹಿಸುತ್ತಿರುವ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ರಿಕಿ ಕೇಜ್ ಅವರು ಮಕ್ಕಳ ರಕ್ಷಣೆ ಕುರಿತು ಯುನಿಸೆಫ್‌ನ 70ನೇ ವಾರ್ಷಿಕೋತ್ಸವಕ್ಕೆಂದೇ ದೇಶಾದ್ಯಂತ ಮಕ್ಕಳೊಂದಿಗೆ ನಿರ್ಮಾಣ ಮಾಡಿರುವ ‘ವೇಕ್ ಅಪ್’ ಎಂಬ ವಿಡಿಯೋವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ‘ಸರಿಗಮಪ ಲಿಟ್ಲ್‌ ಚಾಂಪ್ಸ್‌’ ವಿಜೇತ ಎಂ.ಜ್ಞಾನೇಶ್ವರ್ ಈ ಹಾಡನ್ನು ಹಾಡಿ ರಂಜಿಸಿದರು. ಇದರ ಜೊತೆಗೆ ಗಂಗಾ ನದಿ, ಕಾವೇರಿ ನದಿ(ಅಮ್ಮಾ ಕಾವೇರಿ), ದಕ್ಷಿಣ ಪೆಸಿಫಿಕ್‌ ರಾಷ್ಟ್ರದ ಕಿರಿಬಾಸ್‌ ಊರು, ವಾಯು ಮಾಲಿನ್ಯ, ಮಕ್ಕಳ ಕುರಿತಾದ ಹಾಡು ಸೇರಿದಂತೆ ವಿವಿಧ ವಿಷಯದ ಬಗ್ಗೆ ರಿಕಿ ಕೇಜ್‌ ತಂಡ ಹಾಡಿನ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.

‘ಕಳೆದ 70 ವರ್ಷಗಳಿಂದ ಯುನಿಸೆಫ್ಗೆ ಭಾರತದಲ್ಲಿ ಹಲವಾರು ದಾನಿಗಳು ಬೆಂಬಲವಾಗಿ ನಿಂತಿದ್ದಾರೆ. ಮಕ್ಕಳ ರಕ್ಷಣೆ ಮತ್ತು ಅವರ ಜೀವನ ಮಟ್ಟ ಸುಧಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ’ ಎಂದುಯುನಿಸೆಫ್ನ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯದ ಮುಖ್ಯಸ್ಥೆ ಮೈಟಲ್ ರಸ್ದಿಯಾ ಹೇಳುತ್ತಾರೆ.

ADVERTISEMENT
ರಿಕಿಕೇಜ್‌ ಸಂಗೀತ ಕಾರ್ಯಕ್ರಮ

ಮಕ್ಕಳನ್ನು ಆಧರಿಸಿದ ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ಡಿಜಿಗಳು) ಕುರಿತ ಹಾಡುಗಳನ್ನು ರಿಕಿಕೇಜ್ ಮತ್ತು ‘ಮೈ ಅರ್ತ್ ಬ್ಯಾಂಡ್’ ಕಲಾವಿದರು ಹಾಡಿದರು. ಕಲಾವಿದರು, ಮಕ್ಕಳು ಮತ್ತು ಯುನಿಸೆಫ್ ಬೆಂಬಲಿಗರು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಬಂದ ಮಕ್ಕಳು ರಿಕಿ ಕೇಜ್‌ಗೆ ತಾವು ತಯಾರಿಸಿದ ಕಲಾಚಿತ್ರವನ್ನು ಉಡುಗೊರೆಯಾಗಿ ನೀಡಿದರು.

ಮಕ್ಕಳು, ಪರಿಸರದ ಬಗ್ಗೆ ರಿಕಿ ಮಾತು

‘ಯುನಿಸೆಫ್‌ ಕೇವಲ ಮಕ್ಕಳ ಶಿಕ್ಷಣ ಮಾತ್ರವಲ್ಲದೇ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಿದೆ.ಹಳ್ಳಿ–ಹಳ್ಳಿಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತದೆ. ಎಂತಹ ಪರಿಸ್ಥಿತಿ ಬಂದರೂ, ಮಕ್ಕಳ ಕೈ ಬಿಡುವುದಿಲ್ಲ ಎಂಬ ಪಣವನ್ನು ಯುನಿಸೆಫ್‌ ತೊಟ್ಟಿದೆ. ಈ ವಿಷಯ ನಿಜಕ್ಕೂ ನನಗೆ ಖುಷಿಯನ್ನು ತಂದುಕೊಂಡುತ್ತಿದೆ. ಯುನಿಸೆಫ್‌ನ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ.

ನಗರಗಳು ಬೆಳೆಯುತ್ತಿದ್ದಂತೆ ಚಿಕಿತ್ಸೆಗಳು, ಸಲಕರಣೆಗಳು ದುಬಾರಿ ಆಗುತ್ತಿವೆ. ಬಡವರಿಗೆ ಎಲ್ಲ ಸೌಲಭ್ಯಗಳು ಪೂರೈಕೆ ಆಗುತ್ತಿಲ್ಲ. ಆದರೆ ಇಂತಹ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಯುನಿಸೆಫ್‌ ಹೆಚ್ಚಿನ ಕ್ರಮಕೈಗೊಳುತ್ತಿದೆ. ಭಾರತ ಸರ್ಕಾರದ ಜೊತೆ ಸೇರಿ, ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ.

ಗ್ರ್ಯಾಮಿ ಪ್ರಶಸ್ತಿ ಪಡೆದ ಬಳಿಕ ನನ್ನ ಜೀವನವನ್ನು ನಾನು ಪರಿಸರ, ಮಕ್ಕಳಿಗಾಗಿ ಮುಡಿಪಾಗಿಟ್ಟೆ. ಮಕ್ಕಳು ಮತ್ತು ಪರಿಸರವೇ ನನ್ನ ಕೆಲಸಗಳಿಗೆ ಸ್ಫೂರ್ತಿ. ಮಕ್ಕಳ ಸಬಲೀಕರಣವಾಗಬೇಕು. ಸ್ವಚ್ಛಂದ ಪರಿಸರದಲ್ಲಿ ಅವರು ಹಾರಾಡಬೇಕು ಎಂಬುದೇ ನನ್ನ ಆಶಯ. ನನ್ನ ಎಲ್ಲಾ ಹಾಡುಗಳು ಜನರಿಂದಲೇ ಬಂದ ವಿಷಯಗಳ ಮೇಲೆ ಆಧಾರಿತವಾಗಿವೆ. ನಾನು ಸಿನಿಮಾಗಳಿಗೆ ಸಂಗೀತ ಬರೆಯಲ್ಲ. ನಾನು ಹಾಡಿನ ಮೂಲಕ ಜನರಲ್ಲಿ ಸಮಾಜದ ಬಗ್ಗೆ ಜಾಗೃತಿ ಮೂಡಿಸಲು ಇಚ್ಛಿಸುತ್ತೇನೆ.

ನಾವು ಪರಿಸರವನ್ನು ಹಾಳುಗೆಡವಿ ಬಹುದೊಡ್ಡ ತಪ್ಪು ಮಾಡಿದ್ದೇವೆ. ನಮ್ಮ ತಪ್ಪುಗಳು ಮುಂದಿನ ಪೀಳಿಗೆಗೆ ಮಾರಕವಾಗಿ ಪರಿಣಮಿಸಲಿದೆ.ಇದನ್ನು ನಾವು ಮೊದಲು ಸರಿಪಡಿಸಬೇಕು.ಜೊತೆಗೆ ಪರಿಸರ ರಕ್ಷಣೆ ಹಾಗೂ ಪರಿಸರ ಸ್ನೇಹಿ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಕಲಿಸಿಕೊಡಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.