ADVERTISEMENT

ಎಲ್ಲರಿಗಾಗಿ ‘ಒಬ್ಬಳು’

ಅಕ್ಷತಾ ಪಾಂಡವಪುರ
Published 8 ಮಾರ್ಚ್ 2018, 4:08 IST
Last Updated 8 ಮಾರ್ಚ್ 2018, 4:08 IST
ಅಕ್ಷತಾ ಪಾಂಡವಪುರ
ಅಕ್ಷತಾ ಪಾಂಡವಪುರ   

ಮಹಿಳಾ ಸಬಲೀಕರಣ ಅಂದಕೂಡಲೇ ಏಕರೂಪಿಯಾದ ಸಿದ್ಧಮಾದರಿಯ ಉತ್ತರ, ದೃಷ್ಟಿ, ಬಿಟ್ಟ ಸ್ಥಳ ತುಂಬಿ ಎನ್ನುವಂತಹ ಮಾತುಗಳು ಕೇಳುತ್ತವೆ. ನನ್ನ ದೃಷ್ಟಿಯಲ್ಲಿ ಒಬ್ಬ ಮಹಿಳೆ ತನ್ನ ಆಲೋಚನೆಗಳಲ್ಲಿ ರಾಜಿ ಮಾಡಿಕೊಳ್ಳದೆ, ಆಮಿಷಗಳಿಗೆ ಮತ್ತು ಘರ್ಷಣೆಗೆ ಒಳಗಾಗದೆ ನೇರವಾಗಿ ಕಾರ್ಯರೂಪಕ್ಕೆ ತರುವುದೇ ಮಹಿಳಾ ಸಬಲೀಕರಣ. ಇಲ್ಲಿ ರಾಜಿ ಅಂದರೆ ‘ಸ್ಯಾಂಡಲ್‌ವುಡ್ ಕಾಂಪ್ರಮೈಸ್’ ಅಲ್ಲ.

ಆಚಾರ–ವಿಚಾರಗಳಿಗೆ, ನಿಯಮ, ನೀತಿ–ನಿಬಂಧನೆಗಳ ಒತ್ತಡಕ್ಕೆ ಒಳಗಾಗದೆ ಮಹಿಳೆ ಕೆಲಸ ಮಾಡಬೇಕು. ಒಂದು ವೇಳೆ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು ಎಂದು ಆಕೆಗೆ ಅನ್ನಿಸಿದರೆ ಮಾಡಲಿ. ಆದರೆ ಅಲ್ಲಿ ಅವಳ ಆಲೋಚನೆಗಳ ಮೇಲೆ ನಿಯಂತ್ರಣಗಳು ಇರಬಾರದು. ಮುಕ್ತ ಅಭಿವ್ಯಕ್ತಿಗೆ ಅವಕಾಶ ಇರಬೇಕು.

ರಂಗಭೂಮಿಯಲ್ಲಿ ಮಹಿಳಾ ಸಬಲೀಕರಣ ನಿಧಾನವಾಗಿ ಆಗುತ್ತಿದೆ. ರಂಗಭೂಮಿ ನಿರ್ದೇಶಕನ ಮಾಧ್ಯಮ ಎನ್ನುವರು. ಆ ದೃಷ್ಟಿಯಲ್ಲಿ ಇದು ಪುರುಷ ಪ್ರಧಾನವಾದುದು ಎನ್ನಿಸುತ್ತದೆ. ಹೆಣ್ಣುಮಕ್ಕಳು ಇಲ್ಲಿ ಸುಸ್ಥಿರವಾಗಿ ಉಳಿಯುವುದು ಕಷ್ಟ. ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ರಂಗಭೂಮಿಯಲ್ಲಿ ಉಳಿದು ಬೆಳೆದಿದ್ದನ್ನು ಕಾಣುತ್ತೇವೆ, ಅಷ್ಟೇ.

ADVERTISEMENT

ನಾನು ‘ಒಬ್ಬಳು’ ಹೆಸರಿನ ನಾಟಕ ಪ್ರಯೋಗಿಸುತ್ತಿದ್ದೇನೆ. ಬಂದಿಯಾಗಿರುವ ಗೃಹಿಣಿಯೊಬ್ಬಳ ಮನಸ್ಸಿನ ತಾಕಲಾಟಗಳನ್ನು ಈ ನಾಟಕದ ಮೂಲಕ ಮಾನವೀಯವಾಗಿ ಹೇಳುತ್ತಿದ್ದೇನೆ. ಈ ಪ್ರಯೋಗ ಪುರುಷರಿಗೆ ಹೆಚ್ಚು ತಲುಪಿದೆ. ಅವರಿಂದಲೇ ಪ್ರತಿಕ್ರಿಯೆಗಳು ಹೆಚ್ಚು ಬಂದಿವೆ. ಯಾವಾಗ ಇಂತಹ ಒಂದು ನಾಟಕ ಪುರುಷರಿಗೆ ಹೆಚ್ಚು ತಲುಪುತ್ತದೆಯೋ ಆಗ ಅವರಲ್ಲಿ ಅರಿವು ಮೂಡುತ್ತದೆ. ನಮ್ಮ ನೀತಿ ನಿಬಂಧನೆಗಳೇ ಮಹಿಳೆಯರ ಬೆಳವಣಿಗೆಯನ್ನು ತಡೆದಿವೆ ಎಂದು ಅವರಿಗನ್ನಿಸಿ, ಚೌಕಟ್ಟುಗಳನ್ನು ತೆರೆಯುವ ಸಾಧ್ಯತೆಯಿದೆ. ಇಂತಹ ಪ್ರಕ್ರಿಯೆಗಳು ಜರುಗಿದಾಗ ಮಹಿಳಾ ಸಬಲೀಕರಣಕ್ಕೆ ಅರ್ಥ ಸಿಗುತ್ತದೆ. ‘ಒಬ್ಬಳು’ ಮೂಲಕ ಇಂತಹ ಕೆಲಸ ಆಗುತ್ತಿದೆ.

2010ರಲ್ಲಿ ಪಾಂಡವಪುರ ತಾಲ್ಲೂಕಿನ ಉಂಡಬತ್ತಿಯ ಕೆರೆಗೆ ಮದುವೆ ದಿಬ್ಬಣದ ಬಸ್ ಬಿದ್ದು 31 ಜನರು ಮೃತಪಟ್ಟರು. ನಾನು ರಾಷ್ಟ್ರೀಯ ನಾಟಕ ಶಾಲೆ (ಎಸ್‌ಎಸ್‌ಡಿ)ಯಿಂದ ಆಗ ತಾನೇ ಹೊರಬಂದಿದ್ದೆ. ಈ ವಿಷಯವನ್ನು ಆಧರಿಸಿ ‘ಶುಭವಿವಾಹ’ ನಾಟಕ ಪ್ರದರ್ಶಿಸಿದೆ. ಮದುವೆಯಾದ ದಿನವೇ ತಾಯಿ, ಚಿಕ್ಕಮ್ಮ ಸೇರಿದಂತೆ ಬಂಧುಬಳಗವನ್ನು ವಧು ಕಳೆದುಕೊಳ್ಳುವಳು. ಹಳ್ಳಿಗಾಡಿನಲ್ಲಿ ಇಂತಹ ಘಟನೆ ನಡೆದರೆ ವಧುವಿನ ಜಾತಕ ಸರಿ ಇಲ್ಲ ಎನ್ನುವರು.

ಹೆಚ್ಚು ಜನರು ಬಸ್‌ನಲ್ಲಿ ಇದ್ದಿದ್ದಕ್ಕೆ ಆ ದುರಂತ ನಡೆಯಿತು ಎನ್ನುವ ವಿಚಾರಗಳನ್ನು ಇಟ್ಟುಕೊಂಡು ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ ‘ಶುಭವಿವಾಹ’ ಪ್ರದರ್ಶಿಸಿದೆ. ಆದರೆ ಕರ್ನಾಟಕದಲ್ಲಿ ನಾಟಕ ಪ್ರದರ್ಶಿಸಲು ಆ ವಧು ಒಪ್ಪಿಗೆ ನೀಡಲಿಲ್ಲ. ಈಗ ‘ಮೈ ಡೆತ್ ಇನ್‌ವೆಸ್ಟಿಗೇಷನ್’ ಎಂಬ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. ಇಲ್ಲಿ ಗೌರಿ ಲಂಕೇಶ್, ದಾನಮ್ಮ, ನಟಿ ಶ್ರೀದೇವಿ ಅವರ ಸಾವಿನ ವಿಚಾರಗಳು ಬರುತ್ತವೆ.

ತನ್ನ ಆಲೋಚನೆಗಳಿಗೆ ತಕ್ಕಂತೆಯೇ ಕೆಲಸ ಮಾಡಿದರೆ ಮಹಿಳೆ ಹೆಚ್ಚಿನದನ್ನು ಖಂಡಿತ ಸಾಧಿಸುವಳು.

–ನಿರೂಪಣೆ: ಡಿ.ಎಂ. ಕುರ್ಕೆ ಪ್ರಶಾಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.