ADVERTISEMENT

ವಿಶ್ಲೇಷಣೆ: ಏರ್‌ ಇಂಡಿಯಾ; ಮರಳಿ ಮಾತೃಸಂಸ್ಥೆಗೆ?

ಹೊಸ ಔದ್ಯಮಿಕ ಸಾಹಸಕ್ಕೆ ಅಗತ್ಯವಿರುವ ಅನುಭವ, ತಾಕತ್ತು ‘ಟಾಟಾ’ಗೆ ಇದೆ

ಕ್ಯಾಪ್ಟನ್‍ ಗೋಪಿನಾಥ್‍
Published 21 ಸೆಪ್ಟೆಂಬರ್ 2021, 20:22 IST
Last Updated 21 ಸೆಪ್ಟೆಂಬರ್ 2021, 20:22 IST
   

ಟಾಟಾ ಸಮೂಹವು ಏರ್‌ ಇಂಡಿಯಾ ಕಂಪನಿಯ ಖರೀದಿಗೆ ಬಿಡ್‌ ಸಲ್ಲಿಸಿದೆ ಎಂಬ ಸುದ್ದಿಯು ಸಂತಸ ತರುವಂಥದ್ದು. ಜವಾಹರಲಾಲ್ ನೆಹರೂ ಅವರು ಟಾಟಾ ಸಮೂಹಕ್ಕೆ ನೋಟಿಸ್ ನೀಡದೆ, ಅವರ ಜೊತೆ ಮಾತುಕತೆಯನ್ನೂ ನಡೆಸದೆ, ಅವರ ಒಡೆತನದಲ್ಲಿದ್ದ ವಿಮಾನಯಾನ ಕಂಪನಿಯನ್ನು ರಾಷ್ಟ್ರೀಕರಣಗೊಳಿಸಿದರು. ಚೆನ್ನಾಗಿ ನಡೆಯುತ್ತಿದ್ದ ಖಾಸಗಿ ಕಂಪನಿಯೊಂದನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡು, ಅದನ್ನು ಹಳ್ಳಕ್ಕೆ ತಳ್ಳಿದ್ದು ಏಕೆ ಎಂಬುದು ಚಕಿತಗೊಳಿಸುವ ಪ್ರಶ್ನೆ.

ಉದ್ಯಮಿ ಜೆ.ಆರ್.ಡಿ. ಟಾಟಾ ಅವರಿಗೆ ಆ ಸಮಯದಲ್ಲಿ ಬಹಳ ನೋವಾಗಿತ್ತು. ಕೇಂದ್ರ ಸರ್ಕಾರವು ವಿಮಾನಯಾನ ಕಂಪನಿಯನ್ನು ಹಿಂಬಾಗಿಲ ಮೂಲಕ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಜೆ.ಆರ್‌.ಡಿ. ಅವರು ತೀವ್ರ ವಿಷಾದದಿಂದ ಹೇಳಿದ್ದರು. ಸರ್ಕಾರವು ರಾಷ್ಟ್ರೀಕರಣಗೊಳಿಸಿದ್ದರೂ 1978ರವರೆಗೆ ಜೆ.ಆರ್.ಡಿ. ಅವರೇ ಏರ್‌ ಇಂಡಿಯಾದ ಅಧ್ಯಕ್ಷರಾಗಿದ್ದರು, ಆ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದರು.

ಸಿಂಗಪುರ ಏರ್‌ಲೈನ್ಸ್‌ ಕಂಪನಿಯನ್ನು ಜಗತ್ತಿನ ಅತ್ಯುತ್ತಮ ವಿಮಾನಯಾನ ಕಂಪನಿ ಎಂದು ಪರಿಗಣಿಸಲಾಗಿದೆ. ಈ ಕಂಪನಿಯನ್ನು ಕಟ್ಟುವಲ್ಲಿ ಸಹಾಯ ಮಾಡಿದ್ದು ಏರ್‌ ಇಂಡಿಯಾ ಎಂದರೆ ನಂಬುತ್ತೀರಾ?! (ಸಹಾಯ ಬೇಕು ಎಂದು ಸಿಂಗಪುರ ಸರ್ಕಾರ ಮನವಿ ಮಾಡಿತ್ತು.) ಏರ್‌ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಿ ನೆಹರೂ ತಪ್ಪು ಮಾಡಿದರೂ, ಅವರು ಮತ್ತು ಅವರಉತ್ತರಾಧಿಕಾರಿಗಳು ಜೆ.ಆರ್.ಡಿ. ಅವರಿಗೆ ಏರ್‌ ಇಂಡಿಯಾ ಮುನ್ನಡೆಸುವ ವಿಚಾರದಲ್ಲಿ ಸ್ವಾಯತ್ತೆ ನೀಡಿದ್ದರು. ಆದರೆ, ಜೆ.ಆರ್‌.ಡಿ. ನಂತರದಲ್ಲಿ ಏರ್‌ ಇಂಡಿಯಾದ ಕುಸಿತ ಶುರುವಾಯಿತು. ಸರ್ಕಾರಗಳು ಏರ್‌ ಇಂಡಿಯಾ ಕಂಪನಿಯನ್ನು ತಮ್ಮ ಖಾಸಗಿ ಪ್ರಯಾಣ ಸಂಸ್ಥೆಯಂತೆ ಕಂಡವು. ಉತ್ತರದಾಯಿತ್ವ ಇಲ್ಲದ ರಾಜಕೀಯ ಹಾಗೂ ಅಧಿಕಾರಶಾಹಿ ಹಸ್ತಕ್ಷೇಪಗಳು ಈ ಕಂಪನಿಯು ನಷ್ಟ ಅನುಭವಿಸುವಂತೆ ಮಾಡಿದವು. ಖಾಸಗಿ ವಲಯದ ಕಂಪನಿಗಳಿಂದ ಎದುರಾದ ಬಿರುಸಿನ ಸ್ಪರ್ಧೆಯು ಈ ಕಂಪನಿಯನ್ನು ಅಪ್ರಸ್ತುತಗೊಳಿಸಿತು.

ADVERTISEMENT

ಈಗ ಕಂಪನಿಯ ಮೇಲಿರುವ ಸಾಲ ಹಾಗೂ ನಷ್ಟದ ಮೊತ್ತವು ₹ 1 ಲಕ್ಷ ಕೋಟಿ. ಇಲ್ಲಿ ಇನ್ನೊಂದು ಪ್ರಶ್ನೆ ಮೂಡುತ್ತದೆ. ಏರ್‌ ಇಂಡಿಯಾ ಕಂಪನಿಯನ್ನು ಉಳಿಸಬಹುದು ಎಂದಾದರೆ, ₹ 6 ಸಾವಿರ ಕೋಟಿ ಸಾಲ ಇದ್ದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಹಾಗೂ ₹ 8 ಸಾವಿರ ಕೋಟಿ ಸಾಲ ಇದ್ದ ಜೆಟ್‌ ಏರ್‌ವೇಸ್‌ ಕಂಪನಿಯನ್ನು ಉಳಿಸದಿದ್ದುದು ಏಕೆ? ಈ ಎರಡು ಕಂಪನಿಗಳ ಸಾಲವು ಏರ್‌ ಇಂಡಿಯಾ ಸಾಲಕ್ಕೆ ಹೋಲಿಸಿದರೆ ತೀರಾ ಕಡಿಮೆ. ಈ ಕಂಪನಿಗಳ ಪ್ರವರ್ತಕರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಿತ್ತು. ಆದರೆ, ಪ್ರವರ್ತಕರ ತಪ್ಪಿಗೆ ವಿಮಾನಯಾನ ಕಂಪನಿ ಹಾಗೂ ಅವುಗಳಲ್ಲಿನ ಸಿಬ್ಬಂದಿಯನ್ನು ಶಿಕ್ಷಿಸಿದ್ದೇಕೆ? ಈ ಕಂಪನಿಗಳು ಖಾಸಗಿಯಾಗಿದ್ದರೂ, ಅವುಗಳ ಆಸ್ತಿಯು ರಾಷ್ಟ್ರದ ಆಸ್ತಿ. ಖಾಸಗಿ ಉದ್ಯಮಗಳಲ್ಲಿ ಕೆಲಸ ಮಾಡುವವರ ಮೈಯಲ್ಲಿ ಹರಿಯುವ ರಕ್ತವೇನೂ ಬೇರೆ ಅಲ್ಲ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರ ಮೈಯಲ್ಲಿ ಹರಿಯುವ ರಕ್ತದಂತೆಯೇ, ಇವರ ಮೈಯಲ್ಲಿ ಹರಿಯುವ ರಕ್ತದ ಬಣ್ಣ ಕೂಡ ಕೆಂಪು.

ಏರ್‌ ಇಂಡಿಯಾ ಕಂಪನಿಯು ತನಗೆ ಜನ್ಮ ನೀಡಿದ, ತನ್ನನ್ನು ಬೆಳೆಸಿದ ಸಮೂಹದ ತೆಕ್ಕೆಯನ್ನು ಮತ್ತೆ ಸೇರಿಕೊಳ್ಳುವುದು ಸೂಕ್ತ. ಹಾಗಂತ, ಸರ್ಕಾರವು ಏರ್‌ ಇಂಡಿಯಾವನ್ನು ಏಕಪಕ್ಷೀಯವಾಗಿ ಹಸ್ತಾಂತರ ಮಾಡಲು ಅವಕಾಶ ಇಲ್ಲ. ತಮ್ಮಿಂದ ಪಡೆದುಕೊಂಡಿದ್ದ ಕಂಪನಿಯನ್ನು ಮತ್ತೆ ತಾವೇ ಪಡೆದುಕೊಳ್ಳಲು ಟಾಟಾ ಸಮೂಹವು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಬೇಕು. ಇದೊಂದು ಕ್ರೂರ ವ್ಯಂಗ್ಯ.

ಜೆ.ಆರ್.ಡಿ ಅವರು ದೂರದೃಷ್ಟಿಯುಳ್ಳ ವ್ಯಕ್ತಿ ಎಂದು ಗೌರವ ಸಂಪಾದಿಸಿದ್ದರು. ಟಾಟಾ ಟ್ರಸ್ಟ್‌ಗಳ ಮೂಲಕ ಮಾಡುವ ಸಾಮಾಜಿಕ ಕೆಲಸಗಳ ಕಾರಣದಿಂದಾಗಿ ಅಪಾರ ಗೌರವ ಸಂಪಾದಿಸಿದ್ದರು.ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜಾಲವನ್ನು ಹೊಂದಿದ್ದ ಮಹಾನ್ ವಿಮಾನಯಾನ ಸಂಸ್ಥೆಯೊಂದನ್ನು ಸ್ಥಾಪಿಸಿದ ಹಿರಿಮೆಯೂ ಅವರಿಗಿದೆ. ಭಾರತದಲ್ಲಿನ ಮೊದಲ ಪರವಾನಗಿ ಹೊಂದಿದ ಪೈಲಟ್ ಟಾಟಾ ಅವರೇ. ದೇಶದಲ್ಲಿ ವಾಣಿಜ್ಯ ಉದ್ದೇಶದ ಮೊದಲ ವಿಮಾನವನ್ನು ಕರಾಚಿಯಿಂದ ಬಳ್ಳಾರಿ ಮಾರ್ಗವಾಗಿ ಮದ್ರಾಸ್‌ಗೆ 1932ರಲ್ಲಿ ಚಾಲನೆ ಮಾಡಿದವರೂ ಅವರೆ. ಇದು ಟಾಟಾ ಏರ್‌ಲೈನ್ಸ್‌ನ ಆರಂಭದ ದಿನಗಳಾಗಿದ್ದವು. 1946ರಲ್ಲಿ ಇದು ಏರ್‌ ಇಂಡಿಯಾ ಎಂಬ ಹೆಸರು ಪಡೆದುಕೊಂಡಿತು. ತುಸು ಮಾಸಿದ್ದರೂ ಏರ್‌ ಇಂಡಿಯಾ ಇಂದಿಗೂ ಒಂದು ರತ್ನವೇ ಸರಿ.

ಬೇರೆಯವರು ಅಸೂಯೆಪಟ್ಟುಕೊಳ್ಳಬಹುದಾದಂತಹ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಾಯುಮಾರ್ಗ ಜಾಲವು ಏರ್‌ ಇಂಡಿಯಾ ಬಳಿ ಇದೆ. ದೇಶದ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಇದು ಹೊಂದಿದೆ. ಬೇರೆ ದೇಶಗಳ ರಾಜಧಾನಿಗಳು, ಪ್ರಪಂಚದ ಇತರ ಪ್ರಮುಖ ನಗರಗಳು, ವಾಣಿಜ್ಯ ನಗರಗಳಲ್ಲಿನ ವಿಮಾನ ನಿಲ್ದಾಣಗಳಲ್ಲಿಯೂ ಇದು ಮೂಲಸೌಕರ್ಯವನ್ನು ಹೊಂದಿದೆ. ಕೆಲಸ ಮಾಡದ ವ್ಯಕ್ತಿಗಳು ಹಲವರು ಏರ್‌ ಇಂಡಿಯಾದಲ್ಲಿ ಇದ್ದಾರಾದರೂ ಬಹಳ ಅನುಭವ, ಅರ್ಹತೆ ಹೊಂದಿರುವ ಪೈಲಟ್‌ಗಳು, ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಕೂಡ ಈ ಕಂಪನಿಯಲ್ಲಿದ್ದಾರೆ. ಕೆಲಸ ಮಾಡದ ಸಿಬ್ಬಂದಿಯ ಸಮಸ್ಯೆಯನ್ನು ಸರ್ಕಾರದ ನೆರವಿನೊಂದಿಗೆ ಪರಿಹರಿಸಬಹುದು.

ಏರ್‌ ಇಂಡಿಯಾ ಕಂಪನಿಯ ಸ್ವಾಧೀನವು ಹಲವು ಸವಾಲುಗಳನ್ನು ಕೂಡ ತರುತ್ತದೆ. ಟಾಟಾ ಸಮೂಹವು ಈಗಾಗಲೇ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ. ಏರ್‌ ಏಷ್ಯಾ ಮತ್ತು ವಿಸ್ತಾರಾ ಆ ಎರಡು ಕಂಪನಿಗಳು. ಇವು ಲಾಭ ಗಳಿಸುತ್ತಿಲ್ಲ. ಈ ಎರಡು ಕಂಪನಿಗಳ ಪಾಲುದಾರಿಕೆಯಲ್ಲಿ ಕೆಲವು ಸಮಸ್ಯೆಗಳು ಇವೆ. ಆದರೆ, ಮೂರೂ ವಿಮಾನಯಾನ ಕಂಪನಿಗಳನ್ನು ಒಂದೇ ಆಗಿಸಿದಲ್ಲಿ ಟಾಟಾ ಸಮೂಹವು ಯಶಸ್ಸು ಕಾಣಬಹುದು. ಮೂರನ್ನೂ ವಿಲೀನಗೊಳಿಸಿದ ನಂತರ ರಚನೆಯಾಗುವ ಕಂಪನಿಗೆ ಹೊಸ ನಾಯಕತ್ವ ಹಾಗೂ ಹೊಸ ದೃಷ್ಟಿಕೋನ ಬೇಕು. ಆಡಳಿತದ ಅನುಭವ, ಕೌಶಲ ಟಾಟಾ ಸಮೂಹಕ್ಕೆ ಇದೆ. ಅಲ್ಲದೆ, ಎಮಿರೇಟ್ಸ್‌, ಸಿಂಗಪುರ ಏರ್‌ಲೈನ್ಸ್‌, ಬ್ರಿಟಿಷ್ ಏರ್‌ವೇಸ್, ಏರ್‌ ಫ್ರಾನ್ಸ್‌, ಲುಫ್ತಾನ್ಸಾ ಮತ್ತು ಇತರ ಅಂತರರಾಷ್ಟ್ರೀಯ ವಿಮಾನಯಾನ ಕಂಪನಿಗಳ ಜೊತೆ ಸ್ಪರ್ಧಿಸಲು ಅಗತ್ಯವಿರುವ ಬಂಡವಾಳವನ್ನು ತರುವ ಶಕ್ತಿ ಕೂಡ ಟಾಟಾ ಸಮೂಹಕ್ಕೆ ಇದೆ.

ಈ ಒಂದು ಔದ್ಯಮಿಕ ಸಾಹಸಕ್ಕೆ ಅಗತ್ಯವಿರುವ ಜಾಗತಿಕ ಮಟ್ಟದ ಅನುಭವ ಮತ್ತು ತಾಕತ್ತು ಟಾಟಾ ಸಮೂಹದಲ್ಲಿ ಇದೆ. ರತನ್ ಟಾಟಾ ಅವರು ವಿಮಾನಯಾನದ ಬಗ್ಗೆ ಬಹಳ ಪ್ರೀತಿ ಹೊಂದಿರುವ ವ್ಯಕ್ತಿ. ಅವರು ಸಮೂಹದಲ್ಲಿ ಸಕ್ರಿಯರಾಗಿ ಇದ್ದಾರೆ. ಸಮೂಹದ ನೇತೃತ್ವವನ್ನೂ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಏರ್‌ ಇಂಡಿಯಾ ಕಂಪನಿಯು ತನ್ನ ಕುಟುಂಬಕ್ಕೆ ಮರಳಲು ಕಾಲ ಕೂಡಿಬಂದಿದೆ ಎಂದು ಅನಿಸುತ್ತಿದೆ. ಈ ಸ್ವಾಧೀನವು ಬಹಳ ಸವಾಲಿನದ್ದಾಗಿರಲಿದೆ; ಆದರೆ, ಒಂದು ಒಳ್ಳೆಯ ಪ್ರಯತ್ನ ಕೂಡ ಆಗಿರಲಿದೆ. ಏರ್‌ ಇಂಡಿಯಾ ಕಂಪನಿಗೆ, ಅದರಲ್ಲಿನ ನೌಕರರಿಗೆ, ಈ ವಿಮಾನಯಾನ ಕಂಪನಿಯ ಗ್ರಾಹಕರಿಗೆ ಒಳ್ಳೆಯದಾಗುತ್ತದೆ.ಜೆ.ಆರ್‌.ಡಿ. ಅವರಿಗೆ ಸಲ್ಲಿಸುವ ಸೂಕ್ತ ಗೌರವ ಕೂಡ ಆಗುತ್ತದೆ ಅದು.

ಕ್ಯಾಪ್ಟನ್ ಜಿ.ಆರ್.ಗೋಪಿನಾಥ್

ಲೇಖಕ: ಏರ್‌ ಡೆಕ್ಕನ್ ಕಂಪನಿಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.