ADVERTISEMENT

ವಿಶ್ಲೇಷಣೆ: ಪ್ರಜಾತಂತ್ರ ಮತ್ತು ಚುನಾವಣೆ

ಪಕ್ಷಗಳ ನಡುವೆ ವಿಮರ್ಶಾತ್ಮಕ ನೋಟವಿಟ್ಟು ನಾವು ಮಾಡುವ ಆಯ್ಕೆ ಬಹು ಮಹತ್ವದ್ದು

ಪ್ರಜಾವಾಣಿ ವಿಶೇಷ
Published 30 ಮಾರ್ಚ್ 2023, 19:53 IST
Last Updated 30 ಮಾರ್ಚ್ 2023, 19:53 IST
.
.   

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪ್ರಜಾತಂತ್ರದ ಒಂದು ಭಾಗವಾಗಿರುವ ಚುನಾವಣಾ ರಾಜಕೀಯದ ಪ್ರಕ್ರಿಯೆಯನ್ನು ರಣರಂಗವೆಂದೂ ಚುನಾವಣೆಯ ಗೆಲುವಿಗಾಗಿ ರಾಜಕೀಯ ಧುರೀಣರು ಹೆಣೆಯುವ ಯೋಜನೆಯನ್ನು ರಣತಂತ್ರವೆಂದೂ ನಮ್ಮ ಕೆಲವು ಮಾಧ್ಯಮಗಳು ಬಣ್ಣಿಸುತ್ತಿವೆ. ರಾಜಕೀಯ ಪಕ್ಷಗಳು ಚುನಾವಣಾ ರಾಜಕಾರಣದ ಮೂಲಕ ಅಧಿಕಾರ ರಾಜಕಾರಣದ ಪಡಸಾಲೆಗೆ ಕಾಲಿಡುವುದಕ್ಕಾಗಿ ನಡೆಸುವ ರಣತಂತ್ರ- ಪ್ರತಿತಂತ್ರಗಳ ಮಧ್ಯೆ ಪ್ರಜಾತಂತ್ರದ ಕಥೆಯೇನು ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.

ಪ್ರಜಾತಂತ್ರದ ಕುರಿತು ಇಂದು ನಡೆಯುತ್ತಿರುವ ಚರ್ಚೆಯಲ್ಲಿ, ಅದರ ಸ್ವರೂಪಕ್ಕೆ ಸಂಬಂಧಿಸಿದಂತೆ ಮಹತ್ವದ ವ್ಯತ್ಯಾಸವೊಂದಿದೆ. ಅದೇನೆಂದರೆ, ಒಂದು ತಾತ್ವಿಕ ಚಿಂತನೆಯಾಗಿ ಪ್ರಜಾತಂತ್ರ ಪ್ರತಿನಿಧಿಸುವ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಅಹಿಂಸೆ, ಬಹುತ್ವದಂತಹ ಮೌಲ್ಯಗಳನ್ನು ಪ್ರಜಾತಂತ್ರದ ತಿರುಳು, ಸಾರಸತ್ವ ಎಂದು ಗುರುತಿಸಲಾಗುತ್ತದೆ. ಹಾಗೆಯೇ ಚುನಾವಣೆ- ರಾಜಕೀಯ ಪಕ್ಷಗಳು, ಶಾಸನಸಭೆಯಂತಹ ದಶಮುಖಗಳನ್ನು ಒಳಗೊಂಡ ಅದರ ರಾಜಕೀಯ ರಚನೆಯನ್ನು ಪ್ರಜಾತಂತ್ರದ ಕ್ರಿಯಾಚರಣೆಯ ಭಾಗ ಎಂದು ಪರಿಗಣಿಸಲಾಗುತ್ತದೆ. ಪ್ರಜಾತಂತ್ರದ ಅಂತರಂಗದ ಈ ಮೌಲ್ಯಾತ್ಮಕ ತಿರುಳು ಮತ್ತು ಬಹಿರಂಗದ ಅದರ ಕ್ರಿಯಾಶೀಲ ಅಂಗೋಪಾಂಗಗಳ ನಡುವಿನ ಅರ್ಥಪೂರ್ಣ ಸಮನ್ವಯದಲ್ಲಿ ಪ್ರಜಾತಂತ್ರದ ವಿಶ್ವರೂಪ ದರ್ಶನವಾಗುತ್ತದೆ. ಸುದೀರ್ಘವಾದ, ಸಂಕೀರ್ಣವಾದ ಹಾಗೂ ಅತ್ಯಂತ ಪ್ರಯಾಸದ ಸ್ವಾತಂತ್ರ್ಯ ಹೋರಾಟದ ಮೂಲಕ ನಾವು, ಇಷ್ಟು ಉನ್ನತವಾದ ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯನ್ನು ನಮ್ಮದನ್ನಾಗಿಸಿಕೊಂಡಿದ್ದೇವೆ.

ಪ್ರಜಾತಂತ್ರದ ಕುರಿತು ಚಿಂತನೆ ನಡೆಸಿದ ಪ್ರಮುಖ ಚಿಂತಕರು, ಪ್ರಜಾತಾಂತ್ರಿಕ ರಾಜಕಾರಣದಲ್ಲಿ ಮೂಲಭೂತ ಪರಿವರ್ತನೆಯನ್ನು ಸಾಧಿಸಬಯಸಿದ ಧೀಮಂತ ನೇತಾರರು ಪ್ರಜಾತಂತ್ರ ಪ್ರತಿನಿಧಿಸುವ ತಾತ್ವಿಕತೆ ಮತ್ತು ಈ ತಾತ್ವಿಕತೆಯನ್ನು ಜಾರಿಗೊಳಿಸುವ ಸಂಘ ಸಂಸ್ಥೆಗಳ ನಡುವೆ ಸಾಮರಸ್ಯ ಬೇಕು ಎಂಬುದನ್ನು ಪ್ರತಿಪಾದಿಸಿದ್ದರು. ಇವುಗಳ ನಡುವೆ ಅಸಮತೋಲನವಾದರೆ ಪ್ರಜಾತಂತ್ರ ಉಳಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಹಾಗಾಗಿ ಪ್ರಜಾತಂತ್ರದ ತಾತ್ವಿಕ ಆಶಯಗಳ ಕುರಿತು ಎಚ್ಚರ ಮತ್ತು ಪ್ರಜಾತಂತ್ರದಕ್ರಿಯಾಚರಣೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆ ಇದ್ದಾಗ ಮಾತ್ರ ನಮ್ಮದು ಅರ್ಥಪೂರ್ಣ ಪ್ರಜಾಸತ್ತಾತ್ಮಕ ಸಮಾಜ ಆಗುತ್ತದೆ. ಪ್ರಜಾತಂತ್ರದ ಯಶಸ್ಸಿಗೆ ಒಂದು ‘ವಿಚಾರಶೀಲ ಸಾರ್ವಜನಿಕ ವಲಯ’ ಇರಲೇಬೇಕು ಎಂಬುದನ್ನು ಪ್ರಜಾತಂತ್ರದ ಸಂಕಥನದಲ್ಲಿ ಮತ್ತೆಮತ್ತೆ ಪ್ರತಿಪಾದಿಸಲಾಗಿದೆ. ಈ ವಿಚಾರಶೀಲ ಸಾರ್ವಜನಿಕ ವಲಯ, ಜನಸಮುದಾಯಗಳಲ್ಲಿ ಹಕ್ಕು ಹಾಗೂ ಕರ್ತವ್ಯಗಳ ಕುರಿತು ಸಂವೇದನಾಶೀಲತೆಯನ್ನು ಉದ್ದೀಪಿಸುತ್ತದೆ. ಹಾಗೆಯೇ ಜನಸಮುದಾಯಗಳಲ್ಲಿ ಪ್ರಜಾತಂತ್ರ ಪ್ರತಿನಿಧಿಸುವ ಮೌಲ್ಯಗಳನ್ನು ಬಿತ್ತುವ ಹಾಗೂ ಪ್ರಜಾತಾಂತ್ರಿಕ ಕ್ರಿಯಾಚರಣೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಜವಾ
ಬ್ದಾರಿಯನ್ನೂ ನಿರ್ವಹಿಸುತ್ತದೆ. ಚಿಂತನಶೀಲ ಸಾರ್ವ ಜನಿಕ ವಲಯ ಎಲ್ಲಿ ಗೈರುಹಾಜರಾಗಿರುತ್ತದೋ ಅಲ್ಲಿ ಪ್ರಜಾತಂತ್ರದ ಆಶಯಗಳಿಗೆ ಧಕ್ಕೆ ಬರುತ್ತದೆ. ಹಾಗೆಯೇ ಪ್ರಜಾತಂತ್ರದ ತತ್ವ ಮತ್ತು ಸತ್ವದ ಅರಿವಿಲ್ಲದೆ ನಡೆಯುವ ಪ್ರಜಾತಾಂತ್ರಿಕ ಕ್ರಿಯಾಚರಣೆಗಳಾದ ಚುನಾವಣೆಗಳು, ರಾಜಕೀಯ ಪಕ್ಷಗಳ ಸೆಣಸಾಟಗಳು, ಶಾಸನಸಭೆ ಕಲಾಪಗಳು ಅಸಂಬದ್ಧ ಪ್ರಲಾಪಗಳಾಗುತ್ತವೆ.

ADVERTISEMENT

ಪ್ರಜಾತಂತ್ರ ಯಾವಾಗ ತನ್ನ ತಿರುಳನ್ನು ಕಳೆದುಕೊಂಡು, ತೊಗಟೆಯನ್ನಷ್ಟೇ ಉಳಿಸಿಕೊಳ್ಳುತ್ತದೋ ಆಗ ಅದು ಅರ್ಥಹೀನ ಕಟ್ಟುಕಟ್ಟಲೆಯಾಗಿರೂಪಾಂತರಗೊಳ್ಳುತ್ತದೆ ಎಂಬ ದುರಂತವನ್ನು ಅನೇಕ ಪ್ರಾಜ್ಞರು ತಮ್ಮ ಮುಂಗಾಣ್ಕೆಯ ಬಲದಿಂದ ಗುರುತಿಸಿದ್ದಾರೆ. ಭಾರತದ ಪ್ರಜಾತಂತ್ರ ‘ಬರೀ ಸಂಸದೀಯತೆ’ಯಾಗಿ ತೆಳುಗೊಳ್ಳುತ್ತಿರುವ ಪರಿಯನ್ನು ನಾವು ಈಗ ಕಾಣುತ್ತಿದ್ದೇವೆ. ಭಾರತೀಯ ಪ್ರಜಾತಂತ್ರ ‘ಬರೀ ಸಂಸದೀಯತೆ’ಯಾಗುವುದರ ಜೊತೆಗೆ ‘ಬಹುಸಂಖ್ಯಾತವಾದ’ವೂ ಆಗಿ ಪರಿವರ್ತನೆಗೊಳ್ಳುತ್ತಿರುವ ವಿಷಮ ಸನ್ನಿವೇಶದಲ್ಲಿದೆ. ಬಹುಸಂಖ್ಯಾತವಾದವು ಪ್ರಜಾತಂತ್ರದ ಬಹುದೊಡ್ಡ ಆಂತರಿಕ ಶತ್ರು. ಈ ಬಹುಸಂಖ್ಯಾತವಾದವೇ ಫ್ಯಾಸೀವಾದವಾಗಿ ಪರಿವರ್ತನೆ ಹೊಂದಿ ಪ್ರಜಾತಂತ್ರದ ಮೌಲಿಕ ತಳಹದಿಯನ್ನು ಧ್ವಂಸಗೊಳಿಸಿದ್ದನ್ನು
ನಾವು ಇತಿಹಾಸದಲ್ಲಿ ಗಮನಿಸಿದ್ದೇವೆ.

ಇದನ್ನು ನಮ್ಮ ಕಾಲದಲ್ಲಿ ಎಲ್ಲರಿಗೂ ಮನಗಾಣಿಸುವ ಪ್ರಯತ್ನವನ್ನು ಮಾಡಿದವರು ರಾಹುಲ್ ಗಾಂಧಿ. ಅವರು ತಮ್ಮ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಜನಸಾಮಾನ್ಯರು ಮಾತನಾಡುವುದನ್ನು ಆಲಿಸುವ ಮೂಲಕ, ಜನಸಮುದಾಯಗಳ ಭಿನ್ನಭಿನ್ನ ಗುಂಪುಗಳ ಜೊತೆಗೆ ಚರ್ಚಿಸುವ ಮೂಲಕ ಪ್ರಜಾತಂತ್ರದ ತಿರುಳಿಗೆ ಕಸುವು ತುಂಬುವ ಪ್ರಯತ್ನವನ್ನು ಮಾಡಿದರು. ಭಾರತದ ರಾಜಕಾರಣದಲ್ಲಿ ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ತಲೆಮಾರು ಈ ಬಗೆಯಲ್ಲಿ ‘ಕೇಳುವುದನ್ನು ಕಲಿಯುವ’ (ಲರ್ನಿಂಗ್ ಟು ಲಿಸನ್) ಪ್ರಕ್ರಿಯೆಯಲ್ಲಿ ತೊಡಗಿರುವುದು ಭಾರತದ ಪ್ರಜಾತಂತ್ರಕ್ಕೆ ಮತ್ತು ಚುನಾವಣಾ ರಾಜಕಾರಣಕ್ಕೆ ಹೊಸ ದಿಕ್ಕು-ದೆಸೆ ನೀಡಬಹುದು.

ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ನಿರಾಕರಿಸಲಾಗದ ರಾಜಕೀಯ ಕ್ರಿಯಾಚರಣೆ. ಚುನಾವಣೆಗಳ ಮೂಲಕವೇ ಜನಪ್ರತಿನಿಧಿಗಳನ್ನು ಆರಿಸಬೇಕಾಗಿದೆ ಮತ್ತು ಈ ಪ್ರತಿನಿಧಿಗಳು ಜನರ ಹೆಸರಿನಲ್ಲಿ ಆಡಳಿತ ನಡೆಸುತ್ತಾರೆ. ಪ್ರಜಾತಂತ್ರದಲ್ಲಿ
ಕಾಲಕಾಲಕ್ಕೆ ನಡೆಯುವ ಚುನಾವಣೆಯ ಮೂಲಕ ಸಂಭವಿಸುವ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯೇ ರಾಜಕೀಯ ಪರಿವರ್ತನೆಯ ಮೂಲ ಸೆಲೆ.

ಚುನಾವಣೆಗಳು, ಅಧಿಕಾರ ಪಲ್ಲಟದ ಯಾಂತ್ರಿಕ ಚಟುವಟಿಕೆಯಾಗದೆ ಮೂಲಭೂತ ರಾಜಕೀಯ ಪರಿವರ್ತನೆಯ ಪ್ರಕ್ರಿಯೆಯಾಗಬೇಕಾದರೆ ಮತದಾರ ತನ್ನ ಹಕ್ಕು ಹಾಗೂ ಬಾಧ್ಯತೆಗಳನ್ನು ಎಚ್ಚರದಿಂದ ನಿರ್ವಹಿಸಬೇಕು. ಬರೀ ಮತ ಚಲಾವಣೆಗಷ್ಟೇ ಅವನ ಕ್ರಿಯೆ ಸೀಮಿತವಾಗದೆ ತಾನು ಯಾರಿಗೆ ಮತ್ತು ಯಾಕೆ ಮತ ನೀಡುತ್ತಿದ್ದೇನೆ ಎನ್ನುವ ಕುರಿತು ಚಿಂತನೆ ನಡೆಸಬೇಕು. ಇಲ್ಲವಾದರೆ ‘ರಾಜಕಾರಣ’ ಎಂದು ಕರೆಯಲಾಗುವ ದಂಧೆಯ ರಿಜಿಸ್ಟರ್ಡ್ ಕಂಪನಿಗಳಾಗಿರುವ ನಮ್ಮ ರಾಜಕೀಯ ಪಕ್ಷಗಳು ಅಧಿಕಾರ
ಗ್ರಹಣ ಮಾಡುವುದಕ್ಕಾಗಿ ಚುನಾವಣೆ ಎನ್ನುವ ವ್ಯಾಪಾರದಲ್ಲಿ ತೊಡಗುವುದಕ್ಕೂ ಪ್ರಜಾತಂತ್ರ ಎಂದು ನಾವು ಆರಾಧಿಸುವ ಜೀವನಧರ್ಮಕ್ಕೂ ಅರ್ಥಾರ್ಥ ಸಂಬಂಧವೇ ಇಲ್ಲದಂತೆ ಆಗುತ್ತದೆ.

ಸದ್ಯದ ನಮ್ಮ ದೇಶ ಮತ್ತು ಪ್ರದೇಶದ ಸಮಸ್ಯೆ, ಸವಾಲುಗಳ ಬಗೆಗಿನ ವಿಮರ್ಶಾತ್ಮಕ ನೋಟದಲ್ಲಿ ನಾವು ಪಕ್ಷಗಳ ನಡುವೆ ಮಾಡುವ ಆಯ್ಕೆ ಬಹು ಮಹತ್ವದ್ದಾಗಿರುತ್ತದೆ. ಸ್ವಾತಂತ್ರ್ಯ ಹೋರಾಟದ ಮೂಲಕ ಕಷ್ಟಪಟ್ಟು ಗಳಿಸಿಕೊಂಡ ಪ್ರಜಾತಂತ್ರವನ್ನು ಉಳಿಸಿಕೊಳ್ಳುವ ಅಥವಾ ಕಳೆದುಕೊಳ್ಳುವ ನಮ್ಮ ಆಯ್ಕೆಯಾಗಿಯೇ ಇನ್ನು ಮುಂದಿನ ಚುನಾವಣೆಗಳಲ್ಲಿ ನಾವು ಮತ ಚಲಾಯಿಸಬೇಕಾಗಿದೆ. ಯಾವ ಪಕ್ಷದ ಸರ್ಕಾರ ಬೇಕು ಎನ್ನುವುದಕ್ಕಿಂತಲೂ ನಮ್ಮ ಸಮಾಜವು ಪ್ರಜಾಸತ್ತಾತ್ಮಕ ಸಮಾಜವಾಗಿ ಉಳಿಯಬೇಕೇ ಅಥವಾ ಹಿಂಸೆ, ಅಸಹನೆ, ಮತೀಯ ಕ್ರೌರ್ಯಗಳ ಬರ್ಬರ ರಣಭೂಮಿಯಾಗಿ ಉಳಿಯಬೇಕೇ ಎಂಬ ನೇರ ಆಯ್ಕೆಯನ್ನು ಬರಲಿರುವ ಚುನಾವಣೆಗಳು ಜನರಿಗೆ ನೀಡಲಿವೆ.

ಚುನಾವಣೆಯ ಸಂದರ್ಭದಲ್ಲಿ ನಡೆಯುವ ಲೇವಾದೇವಿಗಳು ಎಷ್ಟೇ ಕಲುಷಿತವಾಗಿದ್ದರೂ ಪ್ರಜಾತಾಂತ್ರಿಕ ಸಮಾಜದ ಜವಾಬ್ದಾರಿಯುತ ಸದಸ್ಯರಾಗಿ ನಾವು ನಮ್ಮ ಮತವನ್ನು ಅತ್ಯಂತ ವಿವೇಚನೆಯಿಂದ ಚಲಾಯಿಸಬೇಕಾಗಿದೆ. ಇದರ ಜೊತೆಗೆ, ಮತ ಯಾಚನೆಗಾಗಿ ಬರುವ ಕಾರ್ಯಕರ್ತರಿಗೆ, ಅಭ್ಯರ್ಥಿಗಳಿಗೆ ಮತ್ತು ನೇತಾರರಿಗೆ ಇಂದು ನಮ್ಮೀ ನಾಡು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಅವುಗಳಿಗೆ ಅವರು ನೀಡಬಹುದಾದ ಉತ್ತರಗಳನ್ನು, ಸಮಜಾಯಿಷಿಗಳನ್ನು ಎಚ್ಚರದಿಂದ ಪರಿಶೀಲಿಸಬೇಕಾಗಿದೆ. ಭಾರತೀಯ ಮತದಾರ ಸಿರಿವಂತ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರಕ್ಕೆ ತಲೆದೂಗುವ ಮತಿಹೀನನಲ್ಲ. ಆತ ತನ್ನ ಕ್ಷೇತ್ರ, ಪ್ರದೇಶ, ದೇಶ, ವಿಶ್ವದ ಬಗ್ಗೆ ಅರಿವು ಹಾಗೂ ಕಾಳಜಿಯನ್ನು ಇರಿಸಿಕೊಂಡ ಸಂವೇದನಾಶೀಲ ಪೌರ ಎನ್ನುವ ಅಂಶವನ್ನು ರಾಜಕಾರಣ ನಡೆಸುವವರಿಗೆ ಇನ್ನಾದರೂ ನಾವು ಮನದಟ್ಟು ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.